ರಾಷ್ಟ್ರ ರಾಜಕೀಯ

ಕರ್ನಾಟಕದ 4 ಕ್ಷೇತ್ರಗಳು ಸೇರಿ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ.

ದೇಶದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಬಲ್ಲ ಮತ್ತೊಂದು ಮಹತ್ವದ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ದೇಶದ ಹತ್ತು ರಾಜ್ಯಗಳಲ್ಲಿ ಖಾಲಿ ಇರುವ 24 ರಾಜ್ಯಸಭಾ ಸ್ಥಾನಗಳನ್ನು ಭರ್ತಿ ಮಾಡಲು ಜೂನ್ 18, 2026 ರಂದು ದ್ವೈವಾರ್ಷಿಕ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಅಧಿಕೃತ ವೇಳಾಪಟ್ಟಿ ಪ್ರಕಟಿಸಿದೆ.

ಕರ್ನಾಟಕದ ಹಿರಿಯ ರಾಜಕಾರಣಿಗಳಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೊಳಗೊಂಡಂತೆ ಹಲವು ಪ್ರಭಾವಿ ನಾಯಕರ ಅಧಿಕಾರಾವಧಿ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಈ ಬಾರಿಯ ಮೇಲ್ಮನೆ ಜಿದ್ದಾಜಿದ್ದಿ ತೀವ್ರ ಕುತೂಹಲ ಕೆರಳಿಸಿದೆ.

ಒಂದೇ ದಿನ ಮತದಾನ ಹಾಗೂ ಫಲಿತಾಂಶ!

ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಜೂನ್ 18ರ ಬುಧವಾರದಂದು ಬೆಳಗ್ಗೆ 9:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಶಾಸಕರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ. ಅಂದು ಸಂಜೆ 5:00 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅದೇ ದಿನ ರಾತ್ರಿಯೊಳಗೆ ಫಲಿತಾಂಶ ಹೊರಬೀಳಲಿದೆ. 24 ಸ್ಥಾನಗಳ ಪೈಕಿ ಕರ್ನಾಟಕದ 4 ಮಹತ್ವದ ಸ್ಥಾನಗಳೂ ಸೇವಿವೆ.

ಕರ್ನಾಟಕದ ಯಾವೆಲ್ಲಾ ನಾಯಕರ ಅವಧಿ ಮುಕ್ತಾಯ?

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ನಾಲ್ವರು ಪ್ರಮುಖ ಸಂಸದರ ಅಧಿಕಾರಾವಧಿಯು ಮುಂಬರುವ ಜೂನ್ 25ಕ್ಕೆ ಕೊನೆಗೊಳ್ಳಲಿದೆ. ನಿವೃತ್ತಿ ಹೊಂದಲಿರುವ ರಾಜ್ಯದ ಗಣ್ಯರ ಪಟ್ಟಿ ಇಲ್ಲಿದೆ:

  • ಮಲ್ಲಿಕಾರ್ಜುನ ಖರ್ಗೆ (ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕರು)
  • ಎಚ್.ಡಿ. ದೇವೇಗೌಡ (ಮಾಜಿ ಪ್ರಧಾನ ಮಂತ್ರಿಗಳು ಹಾಗೂ ಜೆಡಿಎಸ್ ವರಿಷ್ಠರು)
  • ಇರಣ್ಣ ಕಡಾಡಿ (ಬಿಜೆಪಿ ಸಂಸದರು)
  • ನಾರಾಯಣ ಕೊರಗಪ್ಪ (ಬಿಜೆಪಿ ಸಂಸದರು)

ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿಯಲ್ಲಿರುವ ಖರ್ಗೆ ಹಾಗೂ ದೇವೇಗೌಡರ ನಿವೃತ್ತಿಯಿಂದ ತೆರವಾಗುತ್ತಿರುವ ಈ ಸ್ಥಾನಗಳನ್ನು ವಶಪಡಿಸಿಕೊಳ್ಳಲು ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಈಗಾಗಲೇ ತೆರೆಮರೆಯ ಕಸರತ್ತು ಆರಂಭಿಸಿವೆ. ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಈ ಬಾರಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರಗಳು ಬಿರುಸುಗೊಂಡಿವೆ.

10 ರಾಜ್ಯಗಳಲ್ಲಿ ಹಂಚಿಹೋಗಿರುವ 24 ಸೀಟುಗಳು

ಜೂನ್ ಮತ್ತು ಜುಲೈ ತಿಂಗಳ ಅವಧಿಯಲ್ಲಿ ನಿವೃತ್ತಿ ಹೊಂದಲಿರುವ ಸದಸ್ಯರ ಸ್ಥಾನಗಳಿಗಾಗಿ ಈ ಜಿದ್ದಾಜಿದ್ದಿ ನಡೆಯುತ್ತಿದ್ದು, ಒಟ್ಟು 10 ರಾಜ್ಯಗಳಲ್ಲಿ ಚುನಾವಣೆ ಪ್ರಕ್ರಿಯೆ ಜರುಗಲಿದೆ. ಕರ್ನಾಟಕ (4), ಆಂಧ್ರಪ್ರದೇಶ (4), ಗುಜರಾತ್ (4), ರಾಜಸ್ಥಾನ (3), ಮಧ್ಯಪ್ರದೇಶ (3), ಜಾರ್ಖಂಡ್ (2) ಹಾಗೂ ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ, ಮಿಜೋರಾಂ ರಾಜ್ಯಗಳ ತಲಾ 1 ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ.

ರಾಜ್ಯ ವಿಧಾನಸಭೆಗಳ ಬಲಾಬಲದ ಆಧಾರದ ಮೇಲೆ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲಾಗುವುದರಿಂದ, ದೇಶದ ಪ್ರಮುಖ ರಾಜ್ಯಗಳಲ್ಲಿನ ಮೈತ್ರಿ ಮತ್ತು ರಾಜಕೀಯ ಸಮೀಕರಣಗಳು ಈ ಮೇಲ್ಮನೆ ಚುನಾವಣೆಯ ಮೂಲಕ ಮತ್ತೊಮ್ಮೆ ಸಾಬೀತಾಗಲಿವೆ. ಜೂನ್ 18 ರಂದು ನಡೆಯುವ ಈ ಮತದಾನ ಪ್ರಕ್ರಿಯೆಯು ದೆಹಲಿಯ ರಾಜಕೀಯ ಸಮೀಕರಣವನ್ನು ಹೇಗೆ ಬದಲಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

ಬೆಂಗಳೂರಿನಲ್ಲಿ ಮಹಿಳೆಯರು, ತೃತೀಯ ಲಿಂಗಿಗಳಿಗೆ ‘ಇ-ಆಟೋ’ ಕೊಟ್ಟ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ.

Hemanth Rajashekar

Hemanth – Senior Photojournalist: He is an accomplished photojournalist with over 10 years of experience at a state-leading newspaper, known for delivering credible, impactful, and people-centric journalism. With a strong foundation in print media, he has consistently covered a wide spectrum of beats including politics, public affairs, social issues, crime, culture, and breaking news. As a photojournalist, Hemanth brings stories to life through compelling visuals, capturing decisive moments that add depth and authenticity to news reporting. His photographs reflect a keen eye for detail, strong composition, and an ability to narrate powerful stories through images. Respected for his ethical reporting, ground-level insight, and accuracy, Hemanth has built a reputation as a dependable voice in journalism.

Leave a Reply

Your email address will not be published. Required fields are marked *