ಬೆಂಗಳೂರಿಗೆ ತಪ್ಪಿದ ಐಪಿಎಲ್ ಫೈನಲ್ ಭಾಗ್ಯ: ಅಹಮದಾಬಾದ್ ಪಾಲಾಯ್ತು ಪ್ರತಿಷ್ಠಿತ ಕಾದಾಟ.
ಬೆಂಗಳೂರು: ಸಿಲಿಕಾನ್ ಸಿಟಿಯ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ತಣ್ಣೀರೆರಚಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಮೇ 31 ರಂದು ನಡೆಯಲಿರುವ ಐಪಿಎಲ್ 2026ರ ಮಹತ್ವದ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿದೆ. “ಕಾರ್ಯಾಚರಣೆ ಮತ್ತು ಲಾಜಿಸ್ಟಿಕ್ ಕಾರಣಗಳಿಗಾಗಿ” ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ.

ವಿಐಪಿ ಟಿಕೆಟ್ ವಿವಾದವೇ ಮುಳುವಾಯಿತೇ?
ಕಳೆದ ಕೆಲವು ದಿನಗಳಿಂದ ಕರ್ನಾಟಕದ ಶಾಸಕರು ಮತ್ತು ಜನಪ್ರತಿನಿಧಿಗಳಿಗಾಗಿ ಉಚಿತ ವಿಐಪಿ ಟಿಕೆಟ್ ನೀಡುವಂತೆ ಒತ್ತಡ ಕೇಳಿಬಂದಿತ್ತು. ಪ್ರತಿ ಶಾಸಕರಿಗೆ ಕನಿಷ್ಠ ಮೂರು ಟಿಕೆಟ್‌ಗಳನ್ನು ನೀಡುವ ಬಗ್ಗೆ ಚರ್ಚೆಗಳು ನಡೆದಿದ್ದವು. ಈ ‘ವಿಐಪಿ ಟಿಕೆಟ್ ಸಂಸ್ಕೃತಿ’ ಮತ್ತು ಭದ್ರತಾ ಸವಾಲುಗಳ ಹಿನ್ನೆಲೆಯಲ್ಲಿ ಬಿಸಿಸಿಐ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಬಿಸಿಸಿಐನ ನಿಯಮಾವಳಿಗಳಿಗೆ ಮೀರಿ ಸ್ಥಳೀಯ ಸಂಸ್ಥೆಗಳು ಬೇಡಿಕೆ ಇಟ್ಟಿದ್ದೇ ಈ ಬದಲಾವಣೆಗೆ ಮುಖ್ಯ ಕಾರಣ ಎಂದು ಮೂಲಗಳು ತಿಳಿಸಿವೆ.
ಪ್ಲೇ-ಆಫ್ ಪಂದ್ಯಗಳು ಎಲ್ಲಿ?
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕೇವಲ ಫೈನಲ್ ಮಾತ್ರವಲ್ಲದೆ, ಇತರೆ ಪ್ಲೇ-ಆಫ್ ಪಂದ್ಯಗಳಿಗೂ ಹೊಸ ಸ್ಥಳಗಳನ್ನು ನಿಗದಿಪಡಿಸಲಾಗಿದೆ:
- ಕ್ವಾಲಿಫೈಯರ್ 1: ಧರ್ಮಶಾಲಾ (ಮೇ 26)
- ಎಲಿಮಿನೇಟರ್: ಹೊಸ ಚಂಡೀಗಢ (ಮೇ 27)
- ಕ್ವಾಲಿಫೈಯರ್ 2: ಹೊಸ ಚಂಡೀಗಢ (ಮೇ 29)
- ಫೈನಲ್: ಅಹಮದಾಬಾದ್ (ಮೇ 31)
ಕೆಎಸ್‍ಸಿಎ (KSCA) ತೀವ್ರ ನಿರಾಶೆ
ಬೆಂಗಳೂರು ಹಾಲಿ ಚಾಂಪಿಯನ್ ತಂಡದ ತವರು ನೆಲವಾಗಿರುವುದರಿಂದ, ಸಂಪ್ರದಾಯದಂತೆ ಇಲ್ಲಿಯೇ ಫೈನಲ್ ನಡೆಯಬೇಕಿತ್ತು. ಇದಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಬಿಸಿಸಿಐನ ಈ ಅನಿರೀಕ್ಷಿತ ನಿರ್ಧಾರದಿಂದ ಕೆಎಸ್‍ಸಿಎ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾವು ಪಂದ್ಯ ಆಯೋಜಿಸಲು ಸಂಪೂರ್ಣ ಸಿದ್ಧರಿದ್ದೆವು, ಆದರೆ ಬಿಸಿಸಿಐ ನಿರ್ಧಾರವನ್ನು ಗೌರವಿಸಲೇಬೇಕಿದೆ” ಎಂದು ಕೆಎಸ್‍ಸಿಎ ವಕ್ತಾರರು ತಿಳಿಸಿದ್ದಾರೆ.
ಈ ಬೆಳವಣಿಗೆಯಿಂದಾಗಿ ಆರ್‌ಸಿಬಿ (RCB) ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ತವರು ನೆಲದಲ್ಲಿ ಫೈನಲ್ ಆಡುವುದನ್ನು ನೋಡುವ ಅವಕಾಶ ಕಳೆದುಕೊಂಡಂತಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
https://eekshana.com/ips-ramachandra-rao-reinstated-karnataka-police-manual-news