ಕ್ರೈಂ

ಬೆಂಗಳೂರಿನಲ್ಲಿ ₹17 ಕೋಟಿ ಮೌಲ್ಯದ 17.5 ಕೆಜಿ ಎಂಡಿಎಂಎ ಜಪ್ತಿ, ಮೂವರು ವಿದೇಶಿಯರು ಸೇರಿ 8 ಮಂದಿ ಅರೆಸ್ಟ್!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಬೃಹತ್ ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೆಸೆಯುವಲ್ಲಿ ಬೆಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಾರ್ಯಾಚರಣೆಗಳಲ್ಲೊಂದನ್ನು ನಡೆಸಿರುವ ಹೆಬ್ಬಾಳ ಠಾಣೆ ಪೊಲೀಸರು, ಬರೋಬ್ಬರಿ 17.5 ಕೆಜಿ ತೂಕದ ನಿಷೇಧಿತ ಎಂಡಿಎಂಎ (MDMA) ಸಿಂಥೆಟಿಕ್ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 17 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಎಂದು ಅಂದಾಜಿಸಲಾಗಿದೆ.

ಈ ದಂಧೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 8 ಜನರನ್ನು ಬಂಧಿಸಿದ್ದು, ಮಾದಕ ದ್ರವ್ಯದ ದಂಧೆಯ ಹಿಂದಿರುವ ಅಂತರರಾಜ್ಯ ನೆಟ್‌ವರ್ಕ್ ಅನ್ನು ಪತ್ತೆಹಚ್ಚಿದ್ದಾರೆ.

ಖೆಡ್ಡಾಕ್ಕೆ ಬಿದ್ದ ಆರೋಪಿಗಳು ಯಾರು?

ಬಂಧಿತ ಜಾಲವು ಅತ್ಯಂತ ವ್ಯವಸ್ಥಿತವಾಗಿ ದೇಶದ ವಿವಿಧ ಮೂಲೆಗಳಿಂದ ಹಾಗೂ ಅಂತರರಾಷ್ಟ್ರೀಯ ಕೊಂಡಿಗಳ ಮೂಲಕ ಬೆಂಗಳೂರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿತ್ತು. ಬಂಧಿತರ ವಿವರ ಹೀಗಿದೆ:

  • ವಿದೇಶಿ ಪ್ರಜೆಗಳು: ಸೆನೆಗಲ್, ಟಾಂಜಾನಿಯಾ ಮತ್ತು ನೈಜೀರಿಯಾ ಮೂಲದ ಮೂವರು ವಿದೇಶಿ ಪ್ರಜೆಗಳು (ಇವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ). ಇವರು ದೆಹಲಿಯಿಂದ ಡ್ರಗ್ಸ್ ಸಾಗಾಟದ ಪ್ರಮುಖ ಕೊಂಡಿಯಾಗಿದ್ದರು.
  • ಹೊರ ರಾಜ್ಯದವರು: ದೆಹಲಿ ಮತ್ತು ಹರಿಯಾಣ ಮೂಲದ ಮೂವರು ಪ್ರಮುಖ ಪೆಡ್ಲರ್‌ಗಳು.
  • ಕರ್ನಾಟಕದವರು: ಬೆಂಗಳೂರು ಹಾಗೂ ಕರಾವಳಿ ಮೂಲದ ಇಬ್ಬರು ಸ್ಥಳೀಯ ಲಿಂಕ್‌ಗಳು.

ಕಾರ್ಯಾಚರಣೆ ನಡೆದಿದ್ದು ಹೇಗೆ?

ಮೇ 11 ರಂದು ಬೆಂಗಳೂರಿನ ಆನಂದನಗರದ ಉನ್ನತಿ ಲೇಔಟ್ ಬಳಿ ಕಾರೊಂದರಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಹೆಬ್ಬಾಳ ಪೊಲೀಸರಿಗೆ ಸಿಕ್ಕಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಇನ್ಸ್‌ಪೆಕ್ಟರ್ ಭೈರಾ ನೇತೃತ್ವದ ತಂಡ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದು, 4.18 ಕೆಜಿ ಎಂಡಿಎಂಎ ವಶಪಡಿಸಿಕೊಂಡಿತು.

ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ದೆಹಲಿಯಿಂದ ಕಡಿಮೆ ಬೆಲೆಗೆ ಡ್ರಗ್ಸ್ ತಂದು ಬೆಂಗಳೂರಿನಲ್ಲಿ ದುಬಾರಿ ಬೆಲೆಗೆ ಐಟಿ ಉದ್ಯೋಗಿಗಳು ಹಾಗೂ ಯುವಕರಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅವರ ನೀಡಿದ ಸುಳಿವಿನ ಮೇರೆಗೆ ಮೇ 14 ರಂದು ಚಿಕ್ಕನಾಯಕನಹಳ್ಳಿಯ ಮನೆಯೊಂದರ ಮೇಲೆ ದಾಳಿ ಮಾಡಿ ಹೆಚ್ಚುವರಿಯಾಗಿ 10.12 ಕೆಜಿ ಮಾದಕ ವಸ್ತುವನ್ನು ಜಪ್ತಿ ಮಾಡಲಾಯಿತು.

ಇಷ್ಟಕ್ಕೇ ನಿಲ್ಲದ ಪೊಲೀಸರು ತನಿಖೆಯನ್ನು ಹರಿಯಾಣ ಮತ್ತು ದೆಹಲಿಗೂ ವಿಸ್ತರಿಸಿದರು. ಅಲ್ಲಿ ಬೀಡು ಬಿಟ್ಟು ಕಾರ್ಯಾಚರಣೆ ನಡೆಸಿದ ತಂಡ, ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಮೂವರು ವಿದೇಶಿ ಪ್ರಜೆಗಳು ಹಾಗೂ ದೆಹಲಿಯ ಕಿಂಗ್‌ಪಿನ್‌ಗಳನ್ನು ಹೆಡೆಮುರಿಕಟ್ಟಿ ಟ್ರಾನ್ಸಿಟ್ ವಾರಂಟ್ ಮೂಲಕ ಬೆಂಗಳೂರಿಗೆ ಕರೆತಂದಿದೆ. ತದನಂತರ ಹೆಣ್ಣೂರಿನಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿ ಆತನಿಂದ 3.2 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಈ ಕಾರ್ಯಾಚರಣೆಯಲ್ಲಿ 17.5 ಕೆಜಿ ಡ್ರಗ್ಸ್ ಜೊತೆಗೆ ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳು ಹಾಗೂ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

ನೆಲದಡಿಗೆ ಸರಿದ ಕಿಂಗ್‌ಪಿನ್‌ಗಳು: ತನಿಖೆ ಚುರುಕು

“ಇದು ಬೆಂಗಳೂರು ಪೊಲೀಸರು ಇತ್ತೀಚಿನ ದಿನಗಳಲ್ಲಿ ನಡೆಸಿದ ಅತಿ ದೊಡ್ಡ ಡ್ರಗ್ ಬೇಟೆಗಳಲ್ಲೊಂದಾಗಿದೆ. ಈ ಜಾಲದ ಕೆಲವು ಪ್ರಮುಖ ಸೂತ್ರಧಾರರು ಸದ್ಯ ಅಡಗಿಕೊಂಡಿದ್ದು (ಅಂಡರ್‌ಗ್ರೌಂಡ್), ಅವರನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ” ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಹೆಬ್ಬಾಳ ಪೊಲೀಸ್ ತಂಡಕ್ಕೆ ಪೊಲೀಸ್ ಕಮಿಷನರ್ ಅವರು 2 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ಇಡೀ ಜಾಲದ ಹಿಂದಿರುವ ಅಂತರರಾಷ್ಟ್ರೀಯ ಡ್ರಗ್ ಮಾಫಿಯಾದ ಬೇರುಗಳನ್ನು ಸದ್ಯದಲ್ಲೇ ಪತ್ತೆಹಚ್ಚುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

ಸ್ವದೇಶಿ ತಂತ್ರಜ್ಞಾನದ ‘ವಾಯು ಅಸ್ತ್ರ-1’ ಉನ್ನತ ಮಟ್ಟದ ಪರೀಕ್ಷೆ ಯಶಸ್ವಿ ಪೂರ್ಣ.

Hemanth Rajashekar

Hemanth – Senior Photojournalist: He is an accomplished photojournalist with over 10 years of experience at a state-leading newspaper, known for delivering credible, impactful, and people-centric journalism. With a strong foundation in print media, he has consistently covered a wide spectrum of beats including politics, public affairs, social issues, crime, culture, and breaking news. As a photojournalist, Hemanth brings stories to life through compelling visuals, capturing decisive moments that add depth and authenticity to news reporting. His photographs reflect a keen eye for detail, strong composition, and an ability to narrate powerful stories through images. Respected for his ethical reporting, ground-level insight, and accuracy, Hemanth has built a reputation as a dependable voice in journalism.

Leave a Reply

Your email address will not be published. Required fields are marked *