ರೈಲ್ವೇ ನಿಲ್ದಾಣಗಳ ಕ್ಯಾಂಟೀನ್ ಮೇಲೆ ಸರ್ಕಾರ ದಿಢೀರ್ ದಾಳಿ: ಕಳಪೆ ಆಹಾರ ಮಾರುತ್ತಿದ್ದ 112 ಸ್ಟಾಲ್‌ಗಳು ಪತ್ತೆ!
ವರದಿಗಾರರು (Reporter)
Hemanth Rajashekar03:09 AM IST

ಬೆಂಗಳೂರು: ರೈಲು ಪ್ರಯಾಣ ಮಾಡುವಾಗ ಸಿಗುವ ಬಿಸಿಬಿಸಿ ತಿಂಡಿ, ಚಟ್ನಿ ಹಾಗೂ ಸಿಹಿ ತಿನಿಸುಗಳನ್ನು ನೀವೇನಾದರೂ ಆಸೆಪಟ್ಟು ಸವಿಯುತ್ತಿದ್ದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ! ನೀವು ತಿನ್ನುವ ಆಹಾರ ನಿಮ್ಮ ಆರೋಗ್ಯಕ್ಕೆ ತೀವ್ರ ಹಾನಿ ಉಂಟುಮಾಡಬಹುದು. ರಾಜ್ಯದ ವಿವಿಧ ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಪೂರೈಸಲಾಗುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟ ಅತ್ಯಂತ ಕಳಪೆಯಾಗಿದ್ದು, ಅಪಾಯಕಾರಿ ರೀತಿಯಲ್ಲಿ ತಯಾರಿಸಿ ಮಾರಾಟ ಮಾಡುತ್ತಿರುವುದು ಇಲಾಖೆಯ ತಪಾಸಣೆಯಲ್ಲಿ ಬಯಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಯು.ಟಿ. ಖಾದರ್ ಅವರ ಮಾರ್ಗದರ್ಶನದಲ್ಲಿ, ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಕಮಿಷನರ್ ಕಚೇರಿಯಿಂದ ಆಯೋಜಿಸಲಾದ ವಿಶೇಷ ಕಾರ್ಯಾಚರಣೆಯಲ್ಲಿ ಅಧಿಕಾರಿಗಳ ತಂಡ ರೈಲ್ವೇ ನಿಲ್ದಾಣಗಳಲ್ಲಿರುವ ಆಹಾರ ಮಳಿಗೆಗಳು, ಕ್ಯಾಂಟೀನ್‌ಗಳು ಹಾಗೂ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದೆ.
36 ನಿಲ್ದಾಣಗಳು, 112 ಆಹಾರ ಮಳಿಗೆಗಳ ತಪಾಸಣೆ

ದಿನಾಂಕ 20.08.2026 ರಂದು ರಾಜ್ಯದಾದ್ಯಂತ ಆಹಾರ ಸುರಕ್ಷತಾ ಕಾಯ್ದೆ 2006 (Food Safety and Standards Act, 2006) ಹಾಗೂ ಸಂಬಂಧಿತ ನಿಯಮಗಳ ಅಡಿಯಲ್ಲಿ ವಿಶಾಲ ಪ್ರಮಾಣದ ತಪಾಸಣಾ ಅಭಿಯಾನವನ್ನು ಕೈಗೊಳ್ಳಲಾಯಿತು. ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಂಕಿತ ಅಧಿಕಾರಿಗಳು (Designated Officers) ತಮ್ಮ ವ್ಯಾಪ್ತಿಯ ರೈಲ್ವೇ ನಿಲ್ದಾಣಗಳಿಗೆ ಭೇಟಿ ನೀಡಿ, ಹೋಟೆಲ್‌ಗಳು, ಸ್ಟಾಲ್‌ಗಳು, ಪ್ಯಾಂಟ್ರಿ ಕಾರುಗಳು ಹಾಗೂ ಆಹಾರ ತಯಾರಿಕಾ ಘಟಕಗಳ ಪರಿಶೀಲನೆ ನಡೆಸಿದರು.

ಈ ಕಾರ್ಯಾಚರಣೆಯ ಸಮಯದಲ್ಲಿ ರಾಜ್ಯದ ಒಟ್ಟು 36 ಪ್ರಮುಖ ರೈಲ್ವೇ ನಿಲ್ದಾಣಗಳಿಗೆ ಭೇಟಿ ನೀಡಿ, 112 ಆಹಾರ ಮಳಿಗೆಗಳನ್ನು ಆಳವಾಗಿ ತಪಾಸಣೆಗೊಳಪಡಿಸಲಾಯಿತು. ಈ ವೇಳೆ ಆಹಾರ ನೈರ್ಮಲ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ಲೋಪಗಳು ಕಂಡುಬಂದಿವೆ.
ದಾಳಿಯ ವೇಳೆ ಪತ್ತೆಯಾದ ಪ್ರಮುಖ ಭೀಕರ ಲೋಪಗಳು:
- ಪ್ಲಾಸ್ಟಿಕ್‌ನಲ್ಲಿ ಇಡ್ಲಿ ತಯಾರಿ: ಮೈಸೂರು ರೈಲ್ವೇ ನಿಲ್ದಾಣದ ಕೆಲವು ಆಹಾರ ತಯಾರಿಕಾ ಘಟಕಗಳಲ್ಲಿ, ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾದ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಇಡ್ಲಿ ತಯಾರಿಸುತ್ತಿರುವುದು ಕಂಡುಬಂದಿದೆ.
- Newspaper ಹಾಗೂ ಪ್ಲಾಸ್ಟಿಕ್ ಬಕೆಟ್ ಬಳಕೆ: ತಯಾರಿಸಿದ ವಡೆಗಳನ್ನು ದಿನಪತ್ರಿಕೆಗಳ (Newspapers) ಮೇಲೆ ಇಡಲಾಗಿತ್ತು ಹಾಗೂ ಗ್ರಾಹಕರಿಗೆ ನೀಡುವಾಗಲೂ ಸುದ್ದಿಹಾಳೆಗಳಲ್ಲಿ ಸುತ್ತಿ ಕೊಡಲಾಗುತ್ತಿತ್ತು. ಇಷ್ಟೇ ಅಲ್ಲದೆ, ಚಟ್ನಿಯನ್ನು ಆಹಾರ ಸಂಗ್ರಹಣೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್ ಬಕೆಟ್‌ಗಳಲ್ಲಿ ಶೇಖರಿಸಿಡಲಾಗಿತ್ತು.
- ಕಾರ್ಡ್‌ಬೋರ್ಡ್ ಬಾಕ್ಸ್‌ಗಳಲ್ಲಿ ಸಮೋಸ: ಸಮೋಸಗಳನ್ನು ಯಾವುದೇ ಸುರಕ್ಷತಾ ಮಾನದಂಡಗಳಿಲ್ಲದೆ ಕಾರ್ಡ್‌ಬೋರ್ಡ್ ಪೆಟ್ಟಿಗೆಗಳಲ್ಲಿ ಶೇಖರಿಸಿಡಲಾಗಿತ್ತು.
- ಬುಸ್ಟಾದ/ಶಿಲೀಂಧ್ರ (Fungal Growth) ತರಕಾರಿಗಳು: ಕೆಲವು ಮಳಿಗೆಗಳಲ್ಲಿ ಈರುಳ್ಳಿ ಹಾಗೂ ಇತರ ತರಕಾರಿಗಳ ಮೇಲೆ ಬೂಷ್ಟು/ಫಂಗಸ್ ಬೆಳೆದಿರುವುದು ಪತ್ತೆಯಾಗಿದೆ.
- ಅವಧಿ ಮುಗಿದ ಹಾಲು ಹಾಗೂ ಮೊಸರು ಮಾರಾಟ: ಹಾವೇರಿ ಜಿಲ್ಲೆಯ ರೈಲ್ವೇ ನಿಲ್ದಾಣವೊಂದರಲ್ಲಿ ಕಾಳಾವಧಿ ಮುಗಿದಿದ್ದ (Expired) ನಂದಿನಿ ಮೊಸರು ಹಾಗೂ ದೊಡ್ಲ ಬ್ರಾಂಡ್‌ನ ಹಾಲಿನ ಪ್ಯಾಕೆಟ್‌ಗಳನ್ನು ಮಾರಾಟಕ್ಕೆ ಇಟ್ಟಿರುವುದು ಕಂಡುಬಂದಿದೆ. ಜೊತೆಗೆ ಹಲವು ಕಡೆ ದಿನಾಂಕ ಮುಗಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣಗಳು ದಾಖಲಾಗಿವೆ.
- ಅನುಮತಿ ಇಲ್ಲದ ಕೃತಕ ಬಣ್ಣಗಳ ಬಳಕೆ: ಆಹಾರ ಉತ್ಪನ್ನಗಳಲ್ಲಿ ನಿಷೇಧಿತ ಅಥವಾ ಮಿತಿಮೀರಿದ ರಾಸಾಯನಿಕ ಬಣ್ಣಗಳನ್ನು ಬಳಸಿರುವುದು ಕಂಡುಬಂದಿದೆ. ಜಿಲೇಬಿಯಲ್ಲಿ ಹಳದಿ ಬಣ್ಣ ಮತ್ತು ಖೋವಾ ಪೇಡಾದಲ್ಲಿ ಗುಲಾಬಿ (Pink) ಬಣ್ಣವನ್ನು ಅತಿಯಾಗಿ ಬಳಸಲಾಗಿತ್ತು.
- ಚಿತ್ರಾನ್ನ, ಚಪಾತಿ ಮತ್ತು ಸ್ಯಾವರಿ ಪ್ಯಾಕೆಟ್‌ಗಳ ಮೇಲೆ ಲೇಬಲ್ ಕೊರತೆ: ಸ್ಯಾವರಿ ಫುಡ್ಸ್ ಹಾಗೂ ಚಪಾತಿ ಪ್ಯಾಕೆಟ್‌ಗಳ ಮೇಲೆ ಯಾವುದೇ ತಯಾರಿಕಾ ದಿನಾಂಕ, ಲೇಬಲ್ ಅಥವಾ ವಿವರಣೆಗಳಿರಲಿಲ್ಲ.
- ಲೈಸೆನ್ಸ್ ಪ್ರದರ್ಶಿಸದಿರುವುದು ಹಾಗೂ ನೈರ್ಮಲ್ಯದ ಅಭಾವ: ಕೆ.ಆರ್. ಪುರಂ ರೈಲ್ವೇ ನಿಲ್ದಾಣದ ಹೋಟೆಲ್ ಒಂದರಲ್ಲಿ ತೀವ್ರ ಅಸ್ವಸ್ಥಕಾರಿ ಅಸುರಕ್ಷಿತ ವಾತಾವರಣ ಕಂಡುಬಂದಿದೆ. ಅಲ್ಲದೆ, ಹಲವು ಅಂಗಡಿಗಳಲ್ಲಿ ಆಹಾರ ಉದ್ಯಮ ನೋಂದಣಿ ಪ್ರಮಾಣಪತ್ರವನ್ನು (Registration Certificate) ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಿರಲಿಲ್ಲ.
ಕಠಿಣ ಕಾನೂನು ಕ್ರಮಕ್ಕೆ ಸೂಚನೆ
ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ, ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆಹಾರ ಉದ್ದಿಮೆದಾರರ (Food Business Operators) ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಕಮಿಷನರ್ ತಿಳಿಸಿದ್ದಾರೆ. ಕಂಡುಬಂದ ಲೋಪದೋಷಗಳ ಕುರಿತು ರೈಲ್ವೇ ಉನ್ನತಾಧಿಕಾರಿಗಳಿಗೆ ಸಂಪೂರ್ಣ ವರದಿ ನೀಡಲಾಗುತ್ತಿದ್ದು, ತಪ್ಪಿತಸ್ಥ ವ್ಯಾಪಾರಿಗಳ ವಿರುದ್ಧ ದಂಡ ಹಾಗೂ ಲೈಸೆನ್ಸ್ ರದ್ದತಿಯಂತಹ ಕಾನೂನು ಕ್ರಮಗಳು ಜಾರಿಯಾಗಲಿವೆ.
ಪ್ರಯಾಣಿಕರು ಯಾವುದೇ ರೈಲ್ವೇ ನಿಲ್ದಾಣಗಳಲ್ಲಿ ನೈರ್ಮಲ್ಯವಿಲ್ಲದ ಅಥವಾ ಅವಧಿ ಮುಗಿದ ಆಹಾರ ಪದಾರ್ಥಗಳು ಕಂಡುಬಂದಲ್ಲಿ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ಇಲಾಖೆ ಮನವಿ ಮಾಡಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಹಾಕಿ ವಿಶ್ವಕಪ್ 2026: ಪಾಕಿಸ್ತಾನ ವಿರುದ್ಧ ಭಾರತಕ್ಕೆ 5-3 ಅಂತರದ ಭರ್ಜರಿ ಜಯ! ಮುಂದಿನ ಹಂತಕ್ಕೆ ದಾಪುಗಾಲು.
ಕಳಪೆ ಆಹಾರ, ನಕಲಿ ಔಷಧಿಗೆ ಬೀಳಲಿದೆ ಬ್ರೇಕ್: ಕರ್ನಾಟಕದಲ್ಲಿ ಜಾರಿಯಾಯ್ತು ‘QR ಕೋಡ್’ ದೂರು ವ್ಯವಸ್ಥೆ ಜಾರಿ.