ಆಹಾರ ಮಾತ್ರವಲ್ಲ, ಈಗ ಔಷಧಿಯೂ ನಕಲಿ! ಬಿಡದಿ ಟೋಲ್ ಗೇಟ್ ಬಳಿ 5 ಕೋಟಿ ರೂ. ಮೌಲ್ಯದ ಕಳಪೆ ಮಾತ್ರೆಗಳ ಬೃಹತ್ ಜಾಲ ಭೇದಿಸಿದ ಅಧಿಕಾರಿಗಳು.
ವರದಿಗಾರರು (Reporter)
Hemanth Rajashekar07:35 AM IST

ಬೆಂಗಳೂರು: ಆಹಾರ ಪದಾರ್ಥಗಳಲ್ಲಿ ಕಲಬರಕೆ ಮತ್ತು ಕಳಪೆ ಮಟ್ಟದ ಪದಾರ್ಥಗಳ ಮಾರಾಟದ ಸುದ್ದಿಗಳನ್ನು ಕೇಳಿ ಬೆಚ್ಚಿಬಿದ್ದಿದ್ದ ಜನತೆಗೆ ಈಗ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ರೋಗ ನಿವಾರಣೆಗೆ ಬಳಸುವ ಜೀವ ರಕ್ಷಕ ಔಷಧಗಳೇ ಈಗ ನಕಲಿಯಾಗಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ರಾಜಧಾನಿ ಬೆಂಗಳೂರಿನ ಹೊರವಲಯದ ಬಿಡದಿ ಟೋಲ್ ಗೇಟ್ ಬಳಿ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ (FSDA) ಅಧಿಕಾರಿಗಳು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಬೃಹತ್ ನಕಲಿ ಔಷಧ ರಿಪ್ಯಾಕಿಂಗ್ ದಂಧೆ ಬಯಲಿಗೆ ಬಂದಿದೆ.
ದಾಳಿಯ ವೇಳೆ ಅಂದಾಜು 5 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಕಳಪೆ ಮತ್ತು ನಕಲಿ ಔಷಧಗಳನ್ನು ಜಪ್ತಿ ಮಾಡಲಾಗಿದ್ದು, ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶವನ್ನು ಹುಟ್ಟುಹಾಕಿದೆ.
ಬಹುರಾಷ್ಟ್ರೀಯ ಕಂಪನಿಗಳ ಹೆಸರಿನಲ್ಲಿ ರಿಪ್ಯಾಕಿಂಗ್ ದಂಧೆ
ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಬಿಡದಿ ಟೋಲ್ ಗೇಟ್ ಸಮೀಪದ ಹೆಜ್ಜಾಲ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಈ ಅಕ್ರಮ ಜಾಲವು ಅತ್ಯಂತ ಶಾಕಿಂಗ್ ಶೈಲಿಯಲ್ಲಿ ಕೆಲಸ ಮಾಡುತ್ತಿತ್ತು. ಮಾರುಕಟ್ಟೆಯಲ್ಲಿ ಸಿಗುವ ಕಳಪೆ ಹಾಗೂ ಅಗ್ಗದ ಮಾತ್ರೆಗಳನ್ನು ತಂದು, ಅವುಗಳ ಮೇಲಿರುವ ಹಳೆಯ ಲೇಬಲ್‌ಗಳನ್ನು ಕೆಮಿಕಲ್ ಸ್ಪೇ್ರ ಬಳಸಿ ತೆರವುಗೊಳಿಸಲಾಗುತ್ತಿತ್ತು. ನಂತರ ಜಗತ್ಪ್ರಸಿದ್ಧ ಬಹುರಾಷ್ಟ್ರೀಯ ಫಾರ್ಮಾಸ್ಯುಟಿಕಲ್ (MNC) ಕಂಪನಿಗಳ ಹೆಸರಿನ ಹೊಸ ಲೇಬಲ್‌ಗಳು ಮತ್ತು ಕವರ್‌ಗಳನ್ನು ಬಳಸಿ ರಿಪ್ಯಾಕ್ ಮಾಡಲಾಗುತ್ತಿತ್ತು.
ಕೇವಲ 600 ರಿಂದ 700 ರೂಪಾಯಿಗೆ ಸಿಗುತ್ತಿದ್ದ ಕಳಪೆ ಔಷಧಗಳನ್ನು, ಖ್ಯಾತ ಬ್ರ್ಯಾಂಡ್‌ಗಳ ಹೆಸರು ಅಂಟಿಸಿ 6,000 ದಿಂದ 7,000 ರೂಪಾಯಿಯವರೆಗೆ ಅಂದರೆ ಹತ್ತು ಪಟ್ಟು ಹೆಚ್ಚು ಬೆಲೆಗೆ ಚಿಲ್ಲರೆ ಔಷಧ ಅಂಗಡಿಗಳಿಗೆ ಪೂರೈಕೆ ಮಾಡಲು ಸಂಚು ರೂಪಿಸಲಾಗಿತ್ತು.

ಪರವಾನಗಿಯೇ ಇಲ್ಲದ ಅಕ್ರಮ ಕಟ್ಟಡ: ಎಫ್‌ಐಆರ್ ದಾಖಲು
ಆಹಾರ ಸುರಕ್ಷತೆ ಮತ್ತು ಔಷಧ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಖಚಿತ ಮಾಹಿತಿ ಆಧರಿಸಿ ಈ ದಾಳಿ ನಡೆಸಿದ್ದಾರೆ. ತನಿಖೆಯ ವೇಳೆ ಈ ಘಟಕವು ಯಾವುದೇ ಸಿಂಧುತ್ವ ಹೊಂದಿರುವ ಉತ್ಪಾದನಾ ಅಥವಾ ರಿಪ್ಯಾಕಿಂಗ್ ಲೈಸೆನ್ಸ್ (Licence) ಇಲ್ಲದೆ ಅಕ್ರಮವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಸ್ಥಳೀಯ ಪೊಲೀಸರ ನೆರವಿನೊಂದಿಗೆ ಈ ಅಕ್ರಮ ಜಾಲದ ವಿರುದ್ಧ ಪ್ರಕರಣ (FIR) ದಾಖಲಿಸಿಕೊಳ್ಳಲಾಗಿದ್ದು, ಜಪ್ತಿಯಾದ ಔಷಧೀಯ ಕಚ್ಚಾ ವಸ್ತುಗಳು, ಲೇಬಲಿಂಗ್ ಯಂತ್ರಗಳು ಮತ್ತು ಪ್ಯಾಕಿಂಗ್ ಸಾಮಗ್ರಿಗಳ ಸಮಗ್ರ ಪರಿಶೀಲನೆ ನಡೆಯುತ್ತಿದೆ.
ಜಾಲದ ಮೂಲ ಜಾಲಾಡಲು ತನಿಖೆ ತೀವ್ರ
ಖೋಟಾ ಔಷಧ ತಯಾರಿಕೆಗೆ ಬಳಸುತ್ತಿದ್ದ ಮೂಲ ಕಚ್ಚಾ ವಸ್ತುಗಳು ಎಲ್ಲಿಂದ ಪೂರೈಕೆಯಾಗುತ್ತಿದ್ದವು? ಈ ಅಕ್ರಮ ಜಾಲದ ಹಿಂದಿರುವ ಪ್ರಮುಖ ರೂವಾರಿಗಳು ಯಾರು? ಮತ್ತು ಈಗಾಗಲೇ ಈ ನಕಲಿ ಮಾತ್ರೆಗಳು ಯಾವ್ಯಾವ ಮೆಡಿಕಲ್ ಸ್ಟೋರ್‌ಗಳಿಗೆ ತಲುಪಿವೆ ಎಂಬ ಬಗ್ಗೆ ಇಲಾಖೆಯು ಆಳವಾದ ತನಿಖೆ ಕೈಗೆತ್ತಿಕೊಂಡಿದೆ.
ಇಲಾಖೆಯ ಎಚ್ಚರಿಕೆ: “ಸಾರ್ವಜನಿಕರ ಜೀವದ ಜೊತೆ ಆಟವಾಡುವ ಇಂತಹ ಸಮಾಜಘಾತಕ ಕೃತ್ಯಗಳನ್ನು ಸಹಿಸುವುದಿಲ್ಲ. ನಕಲಿ ಔಷಧಗಳನ್ನು ಜಾಲಾಡಿ ಮಾರುಕಟ್ಟೆಯಿಂದ ಹಿಂಪಡೆಯುವ ಕಾರ್ಯ ಹಾಗೂ ಗ್ರಾಹಕರಿಗೆ ನಕಲಿ ಬ್ರ್ಯಾಂಡ್‌ಗಳನ್ನು ಪತ್ತೆಹಚ್ಚಲು ನೆರವಾಗುವ ವ್ಯವಸ್ಥೆಗಳನ್ನು ಬಲಪಡಿಸಲಾಗುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೋಟೆಲ್, ಕ್ಯಾಂಟೀನ್ ಮತ್ತು ಕ್ವಿಕ್ ಕ್ರಾಮರ್ಸ್ ದಾಸ್ತಾನು ಮಳಿಗೆಗಳಲ್ಲಿ ಇತ್ತೀಚೆಗೆ ಆಹಾರ ಸುರಕ್ಷತಾ ಇಲಾಖೆ ತೀವ್ರ ತಪಾಸಣೆ ನಡೆಸಿತ್ತು. ಆದರೆ ಈಗ ನೇರವಾಗಿ ಜೀವ ರಕ್ಷಕ ಔಷಧಗಳೇ ನಕಲಿಯಾಗಿ ಸಿಕ್ಕಿಬಿದ್ದಿರುವುದು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ.
ನಕಲಿ ಅಥವಾ ಕಳಪೆ ಮಟ್ಟದ ಔಷಧಗಳು ಮಾರುಕಟ್ಟೆಗೆ ಬಂದಾಗ ಸಾಮಾನ್ಯ ಗ್ರಾಹಕರು ಅವುಗಳನ್ನು ತಕ್ಷಣವೇ ಗುರುತಿಸುವುದು ಕೊಂಚ ಸವಾಲಿನ ಕೆಲಸ. ಆದಾಗ್ಯೂ, ಕೆಲವು ಪ್ರಮುಖ ಲಕ್ಷಣಗಳನ್ನು ಗಮನಿಸುವುದರ ಮೂಲಕ ಮತ್ತು ಮುನ್ನೆಚ್ಚರಿಕೆ ವಹಿಸುವುದರ ಮೂಲಕ ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ನಕಲಿ ಔಷಧಗಳಿಂದ ರಕ್ಷಿಸಿಕೊಳ್ಳಬಹುದು.
ಅವುಗಳ ಸಂಪೂರ್ಣ ವಿವರ ಇಲ್ಲಿದೆ:
ನಕಲಿ ಔಷಧಗಳನ್ನು ಗುರುತಿಸುವುದು ಹೇಗೆ?
- ಪ್ಯಾಕಿಂಗ್ ಮತ್ತು ಸ್ಪೆಲ್ಲಿಂಗ್ ದೋಷಗಳು: ಖ್ಯಾತ ಕಂಪನಿಗಳ ಹೆಸರು, ಸ್ಪೆಲ್ಲಿಂಗ್ (Spelling) ಅಥವಾ ಲೋಗೋಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳಿವೆಯೇ ಎಂದು ಪರೀಕ್ಷಿಸಿ. ನಕಲಿ ಔಷಧಗಳ ಕವರ್‌ಗಳಲ್ಲಿ ಅಕ್ಷರ ದೋಷಗಳು ಅಥವಾ ಕಳಪೆ ಪ್ರಿಂಟಿಂಗ್ (ಮಸುಕಾದ ಬರಹ) ಹೆಚ್ಚಾಗಿ ಕಂಡುಬರುತ್ತದೆ.
- ಭೌತಿಕ ಬದಲಾವಣೆಗಳು:
- ಮಾತ್ರೆಗಳ ಬಣ್ಣ, ಆಕಾರ ಅಥವಾ ಗಾತ್ರದಲ್ಲಿ ವ್ಯತ್ಯಾಸವಿದ್ದರೆ.
- ಮಾತ್ರೆಗಳು ಸುಲಭವಾಗಿ ಪುಡಿಯಾಗುತ್ತಿದ್ದರೆ, ಕ್ರ್ಯಾಕ್ ಆಗಿದ್ದರೆ ಅಥವಾ ಕವರ್‌ಗೆ ಅಂಟಿಕೊಳ್ಳುತ್ತಿದ್ದರೆ.
- ಸಿಲಪ್/ದ್ರವ ರೂಪದ ಔಷಧಗಳಲ್ಲಿ ಅನಗತ್ಯ ಕೆಸರು (Sediment) ಅಥವಾ ಬಣ್ಣ ಬದಲಾಗಿದ್ದರೆ.
- QR/Bar Code ಪರೀಕ್ಷಿಸಿ: ಪ್ರಸ್ತುತ ಪ್ರಮುಖ ಮತ್ತು ಜೀವ ರಕ್ಷಕ ಔಷಧಗಳ ಪ್ಯಾಕ್ ಮೇಲೆ QR ಕೋಡ್ ಅಥವಾ ಬಾರ್ ಕೋಡ್ ಇರುತ್ತದೆ. ನಿಮ್ಮ ಮೊಬೈಲ್‌ನಿಂದ ಸ್ಕ್ಯಾನ್ ಮಾಡಿದಾಗ ಔಷಧ ತಯಾರಿಸಿದ ಕಂಪನಿ, ಬ್ಯಾಚ್ ನಂಬರ್ ಮತ್ತು ನೈಜತೆಯ ವಿವರಗಳು ದೊರೆಯುತ್ತವೆ.
- ರುಚಿ ಮತ್ತು ವಾಸನೆ: ಪ್ರತಿನಿತ್ಯ ಬಳಸುವ ಔಷಧಗಳ ರುಚಿ ಅಥವಾ ವಾಸನೆಯಲ್ಲಿ ಹಠಾತ್ ವ್ಯತ್ಯಾಸ ಕಂಡುಬಂದಲ್ಲಿ ಅದನ್ನು ಸೇವಿಸದೆ ವೈದ್ಯರ ಗಮನಕ್ಕೆ ತನ್ನಿ.
ಔಷಧ ಖರೀದಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು
- ಪರವಾನಗಿ ಹೊಂದಿದ ಮೆಡಿಕಲ್ ಶಾಪ್‌ಗಳಲ್ಲೇ ಖರೀದಿಸಿ: ಅಧಿಕೃತ ಮತ್ತು ವಿಶ್ವಸನೀಯ ಔಷಧ ಮಾರಾಟ ಮಳಿಗೆಗಳಿಂದಲೇ (Licensed Pharmacy) ಔಷಧಗಳನ್ನು ಕೊಳ್ಳಿ.
- ಖಚಿತವಾಗಿ ಬಿಲ್ ಪಡೆಯಿರಿ: ಔಷಧ ಖರೀದಿಸಿದಾಗ ತಪ್ಪದೇ GST ಮತ್ತು ಲೈಸೆನ್ಸ್ ಸಂಖ್ಯೆ ಹೊಂದಿರುವ ಪಕ್ಕಾ ಬಿಲ್ (Invoice) ಕೇಳಿ ಪಡೆಯಿರಿ. ಬಿಲ್‌ನಲ್ಲಿ ಔಷಧದ ಹೆಸರು, ಬ್ಯಾಚ್ ನಂಬರ್ (Batch No.) ಮತ್ತು ಎಕ್ಸ್‌ಪೈರಿ ದಿನಾಂಕ (Expiry Date) ನಮೂದಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
- ಅತಿಯಾದ ರಿಯಾಯಿತಿಗೆ ಮರುಳಾಗಬೇಡಿ: ಮಾರುಕಟ್ಟೆ ದರಕ್ಕಿಂತ ಶೇಕಡಾ 50-70% ನಷ್ಟು ಅತಿಯಾದ ರಿಯಾಯಿತಿ ನೀಡಿ ಮಾರಾಟ ಮಾಡುವ ಅನುಮಾನಾಸ್ಪದ ಮೂಲಗಳಿಂದ ಅಥವಾ ಅನಧಿಕೃತ ಆನ್‌ಲೈನ್ ಸೈಟ್‌ಗಳಿಂದ ಔಷಧಗಳನ್ನು ಖರೀದಿಸಬೇಡಿ.
- ಎಕ್ಸ್‌ಪೈರಿ ದಿನಾಂಕ ಪರಿಶೀಲಿಸಿ: ಔಷಧದ ಪ್ಯಾಕ್ ಮೇಲಿರುವ ತಯಾರಿಕಾ ದಿನಾಂಕ (MFG Date) ಮತ್ತು ಮುಕ್ತಾಯದ ದಿನಾಂಕ (Expiry Date) ಸ್ಪಷ್ಟವಾಗಿದೆಯೇ ಅಥವಾ ಅದರ ಮೇಲೆ ಮತ್ತೊಂದು ಲೇಬಲ್ ಅಂಟಿಸಲಾಗಿದೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ.
ನೆನಪಿಡಿ: ಯಾವುದೇ ಔಷಧಿಯನ್ನು ಬಳಸಿದ ನಂತರ ಅದರ ಪರಿಣಾಮ ಕಂಡುಬಾರದೆ ಇದ್ದರೆ ಅಥವಾ ಹೊಸ ರೀತಿಯ ಅಡ್ಡಪರಿಣಾಮಗಳು (Side-effects) ಕಾಣಿಸಿಕೊಂಡರೆ, ತಕ್ಷಣವೇ ಅದನ್ನು ಬಳಸುವುದನ್ನು ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸಿ ಮತ್ತು ಹತ್ತಿರದ ಔಷಧ ನಿಯಂತ್ರಣ ಇಲಾಖೆಗೆ (Drug Control Department) ದೂರು ನೀಡಿ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿಧಿವಶ: ಕಲ್ಪತರು ನಾಡಿನ ಹಿರಿಯ ನಾಯಕ ಇನ್ನಿಲ್ಲ!