ಬೆಂಗಳೂರಿನ ಸಂಚಾರ ಕ್ರಾಂತಿ: ಇಂದೇ ಲೋಕಾರ್ಪಣೆಗೊಳ್ಳುತ್ತಿದೆ ₹631 ಕೋಟಿ ವೆಚ್ಚದ ‘ಶ್ರೀ ಎಸ್. ಎಂ. ಕೃಷ್ಣ ದಶಪಥ ರಸ್ತೆ’! ಟೋಲ್ ಮತ್ತು ಸಿಗ್ನಲ್ ಮುಕ್ತ ಕಾರಿಡಾರ್.
ವರದಿಗಾರರು (Reporter)
Hemanth Rajashekar12:20 AM IST

ಬೆಂಗಳೂರು: ಸಿಲಿಕಾನ್ ಸಿಟಿಯ ಇತಿಹಾಸದಲ್ಲೇ ಇಂದು ಮತ್ತೊಂದು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ದಿನ. ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಸುಸಂದರ್ಭದಲ್ಲೇ, ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಯ ಹರಿಕಾರ, ಆಧುನಿಕ ಬೆಂಗಳೂರಿನ ಶಿಲ್ಪಿ ಹಾಗೂ ಪದ್ಮವಿಭೂಷಣ ಪುರಸ್ಕೃತ ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಎಂ. ಕೃಷ್ಣ ಅವರ ಹೆಸರಿನ ಅತ್ಯಾಧುನಿಕ ದಶಪಥ (10 ಲೇನ್) ರಸ್ತೆಯು ಇಂದೇ ಸಾರ್ವಜನಿಕ ಬಳಕೆಗೆ ಅಧಿಕೃತವಾಗಿ ಸಮರ್ಪಣೆಗೊಳ್ಳುತ್ತಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ₹631 ಕೋಟಿ ಭಾರೀ ವೆಚ್ಚದಲ್ಲಿ ನಿರ್ಮಿಸಿರುವ ಈ ಮಹತ್ವಾಕಾಂಕ್ಷೆಯ “ಮೇಜರ್ ಆರ್ಟೀರಿಯಲ್ ರಸ್ತೆ” (MAR) ಪಶ್ಚಿಮ ಮತ್ತು ದಕ್ಷಿಣ ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಬದಲಾಯಿಸಲಿದೆ.
40 ನಿಮಿಷಗಳ ಪ್ರಯಾಣ ಕೇವಲ 15 ನಿಮಿಷಕ್ಕೆ!
ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ನಿಂದ ಮೈಸೂರು ರಸ್ತೆಯ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ನೇರ ಸಂಪರ್ಕ ಕಲ್ಪಿಸುವ ಈ ರಸ್ತೆಯ ವಿಶೇಷತೆಯೆಂದರೆ ಇದು ಸಂಪೂರ್ಣವಾಗಿ ಟೋಲ್ ಮುಕ್ತ (Toll Free) ಮತ್ತು ಸಿಗ್ನಲ್ ಮುಕ್ತ (Signal Free) ಆಗಿದೆ. ನೈಸ್ ರಸ್ತೆಗೆ ಅತ್ಯುತ್ತಮ ಪರ್ಯಾಯವಾಗಿರುವ ಈ ಮಾರ್ಗವು ಸಾರ್ವಜನಿಕರ ಇಂಧನ ಮತ್ತು ಅಮೂಲ್ಯ ಸಮಯವನ್ನು ಉಳಿಸಲಿದೆ. ಹಿಂದೆ ಒಂದು ಗಂಟೆ ತೆಗೆದುಕೊಳ್ಳುತ್ತಿದ್ದ ಪ್ರಯಾಣದ ಅವಧಿ ಇನ್ಮುಂದೆ ಕೇವಲ 15 ನಿಮಿಷಗಳಿಗೆ ಇಳಿಕೆಯಾಗಲಿದೆ.
ಈ ಹೈಟೆಕ್ ದಶಪಥ ರಸ್ತೆಯ ಪ್ರಮುಖ ವೈಶಿಷ್ಟ್ಯಗಳು:
- 10.7 ಕಿಲೋಮೀಟರ್ ಉದ್ದದ ಕಾರಿಡಾರ್: ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಬೆಸೆಯುವ ಸಿಗ್ನಲ್ ರಹಿತ ಹೈವೇ.
- 100 ಮೀಟರ್ ಅಗಲದ ಬೃಹತ್ ರಸ್ತೆ: ಭವಿಷ್ಯದ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾದ 10 ಲೇನ್‌ಗಳ ಆಧುನಿಕ ಹೆದ್ದಾರಿ.
- ಭವಿಷ್ಯದ ಮೆಟ್ರೋ ಲೇನ್ ತಾಣ: ರಸ್ತೆಯ ಮಧ್ಯಭಾಗದಲ್ಲಿ 3 ಮೀಟರ್ ಅಗಲದ ಸೆಂಟ್ರಲ್ ಮೀಡಿಯನ್ ಇದ್ದು, ಭವಿಷ್ಯದಲ್ಲಿ ಮೆಟ್ರೋ ಜಾಲ ವಿಸ್ತರಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ.
- ಹಸಿರು ವಲಯ (Green Boulevards): ಪರಿಸರ ಕಾಳಜಿಯೊಂದಿಗೆ ರಸ್ತೆಯ ಎರಡೂ ಬದಿಗಳಲ್ಲಿ 27 ಮೀಟರ್ ಅಗಲದ ಭವ್ಯ ಹಸಿರು ವಲಯವನ್ನು ನಿರ್ಮಿಸಲಾಗಿದೆ.
- ಸುರಂಗ ಮತ್ತು ಮೇಲ್ಸೇತುವೆಗಳು: ಸಂಚಾರ ಸುಗಮಗೊಳಿಸಲು 3 ಪ್ರಮುಖ ಅಂಡರ್‌ಪಾಸ್‌ಗಳು, 11 ಅತ್ಯಾಧುನಿಕ ಸೇತುವೆಗಳು ಮತ್ತು 270 ಮೀಟರ್ ಉದ್ದದ ಆಕರ್ಷಕ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ.
- ಸೈಕಲ್ ಪ್ರಿಯರಿಗೆ ವಿಶೇಷ ಟ್ರ್ಯಾಕ್: ಪರಿಸರ ಸ್ನೇಹಿ ಸಂಚಾರಕ್ಕೆ ಪ್ರೋತ್ಸಾಹ ನೀಡಲು ಪ್ರತ್ಯೇಕ ಸೈಕಲ್ ಟ್ರ್ಯಾಕ್ ವ್ಯವಸ್ಥೆ ಮಾಡಲಾಗಿದೆ.
- ಕೆಂಪೇಗೌಡ ಲೇಔಟ್‌ನ ಸಂಪರ್ಕ ಸೇತು: ಈ ರಸ್ತೆಯು ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲಾ 9 ಬ್ಲಾಕ್‌ಗಳನ್ನು ಒಂದಕ್ಕೊಂದು ಜೋಡಿಸುತ್ತದೆ.

ಜೂನ್ 27ರ ಐತಿಹಾಸಿಕ ವಿಶ್ವದಾಖಲೆ ಅಭಿಯಾನಕ್ಕೆ ಬೆಂಗಳೂರು ಸಜ್ಜು!
ಈ ಮಹತ್ವದ ದಿನವನ್ನು ಕೇವಲ ರಸ್ತೆ ಉದ್ಘಾಟನೆಗೆ ಸೀಮಿತಗೊಳಿಸದೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಸಿರು ಅಭಿಯಾನವನ್ನು ಆಯೋಜಿಸಿದೆ.
15 ಲಕ್ಷ ಸ್ಥಳೀಯ ಸಸಿಗಳನ್ನು ನೆಡುವ ಬೃಹತ್ ಐತಿಹಾಸಿಕ ಅಭಿಯಾನ ಹಾಗೂ ಭವ್ಯ ವಾಕಥಾನ್ ಕಾರ್ಯಕ್ರಮ ಇಂದು ನಡೆಯಲಿದ್ದು, ಗಿನ್ನೆಸ್ ವಿಶ್ವದಾಖಲೆಯ ಪುಟ ಸೇರಲು ರಾಜಧಾನಿ ಸಜ್ಜಾಗಿದೆ. ಕಾಯುವಿಕೆ ಕೊನೆಗೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ.
ಮುಂಜಾನೆ 4 ಗಂಟೆಯಿಂದಲೇ ‘ನಮ್ಮ ಮೆಟ್ರೋ’ ಆರಂಭ!
ಇಡೀ ನಗರದಾದ್ಯಂತ ವಾಹನ ದಟ್ಟಣೆ ನಿಯಂತ್ರಿಸಲು ಬಿಎಂಆರ್‌ಸಿಎಲ್ (BMRCL) ಮಹತ್ವದ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸುಲಭಗೊಳಿಸಲು ಮತ್ತು ಪರಿಸರ ಪ್ರೇಮಿಗಳ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲು ಇಂದು ಮುಂಜಾನೆ 4:00 ಗಂಟೆಯಿಂದಲೇ ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಿದೆ. ನಗರದ ಪರ್ಪಲ್ (ನೇರಳೆ), ಗ್ರೀನ್ (ಹಸಿರು) ಮತ್ತು ಯೆಲ್ಲೋ (ಹಳದಿ) ಮಾರ್ಗಗಳ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದಲೂ ಏಕಕಾಲಕ್ಕೆ ಮೆಟ್ರೋ ಸೇವೆ ಆರಂಭವಾಗಿದ್ದು, ಸಾರ್ವಜನಿಕರು ಟ್ರಾಫಿಕ್ ಕಿರಿಕಿರಿ ಇಲ್ಲದೆ ಪರಿಸರ ಸ್ನೇಹಿ ಪ್ರಯಾಣದ ಲಾಭ ಪಡೆಯಬಹುದಾಗಿದೆ.

ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಮೆಟ್ರೋ ಪ್ರಯಾಣಿಕರ ಗಮನಕ್ಕೆ: ವಿಶ್ವದಾಖಲೆಯ ಈ ಐತಿಹಾಸಿಕ ಅಭಿಯಾನಕ್ಕೆ ಸಾರ್ವಜನಿಕರು ಮತ್ತು ನಾಗರಿಕರು ಸುಲಭವಾಗಿ ತಲುಪಲು ಅನುವಾಗುವಂತೆ, ಜೂನ್ 27ರಂದು ‘ನಮ್ಮ ಮೆಟ್ರೋ’ ಸೇವೆಯು ಮುಂಜಾನೆ 4:00 ಗಂಟೆಯಿಂದಲೇ ಆರಂಭವಾಗಿದೆ.
ಗಣ್ಯರ ಉಪಸ್ಥಿತಿಯಲ್ಲಿ ಲೋಕಾರ್ಪಣೆ
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ, ರಾಜ್ಯ ಸಚಿವ ಸಂಪುಟದ ಪ್ರಮುಖ ಸಚಿವರ, ಬಿಡಿಎ ಅಧ್ಯಕ್ಷರಾದ ಎನ್. ಎ. ಹ್ಯಾರಿಸ್, ಬೃಹತ್ ಬೆಂಗಳೂರು ಪ್ರಾಧಿಕಾರ (GBA), ಬಿಡಿಎ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಈ ಹೆಮ್ಮೆಯ ರಸ್ತೆ ಇಂದು ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.
ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಮೈಲಿಗಲ್ಲಾಗಿರುವ ಈ ಭವ್ಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಮತ್ತು ಸಸಿ ನೆಡುವ ಮಹಾ ಅಭಿಯಾನದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಲಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಬಿಡದಿ ಸ್ಮಾರ್ಟ್ ಸಿಟಿ: ಬೈರಮಂಗಲದಲ್ಲೇ ಮುಖಾಮುಖಿ ಚರ್ಚೆ; ಸಿಎಂಗೆ ಎಚ್‌ಡಿಕೆ ಹೆಣೆದ ಪತ್ರವ್ಯೂಹ!