ಬಿಡದಿ ಸ್ಮಾರ್ಟ್ ಸಿಟಿ: ಬೈರಮಂಗಲದಲ್ಲೇ ಮುಖಾಮುಖಿ ಚರ್ಚೆ; ಸಿಎಂಗೆ ಎಚ್‌ಡಿಕೆ ಹೆಣೆದ ಪತ್ರವ್ಯೂಹ!
ವರದಿಗಾರರು (Reporter)
Hemanth Rajashekar02:56 AM IST

ಬೆಂಗಳೂರು: ಪ್ರಸ್ತಾಪಿತ ಬಿಡದಿ ಸ್ಮಾರ್ಟ್ ಸಿಟಿ (ನವನಗರ) ಯೋಜನೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆ ವಿಚಾರವಾಗಿ ಕರ್ನಾಟಕ ರಾಜಕಾರಣದಲ್ಲಿ ಈಗ ಹೈವೋಲ್ಟೇಜ್ ಡ್ರಾಮಾ ಶುರುವಾಗಿದೆ. ಬಿಡದಿ ಸುತ್ತಮುತ್ತಲಿನ ರೈತರ ಭೂಮಿ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (HDK vs DKS) ನಡುವಿನ ವಾಕ್ಸಮರ ಈಗ ತಾರಕಕ್ಕೇರಿದೆ. ಇದರ ಬೆನ್ನಲ್ಲೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅವರಿಗೆ ನೇರವಾಗಿ ಎರಡನೇ ಬಾರಿ ಪತ್ರ ಬರೆಯುವ ಮೂಲಕ ಹೊಸ ರಾಜಕೀಯ ಸಂಚಲನ ಸೃಷ್ಟಿಸಿದ್ದಾರೆ.
ಬೈರಮಂಗಲದಲ್ಲೇ ಮುಖಾಮುಖಿ ಚರ್ಚೆ: ಎಚ್‌ಡಿಕೆ ಡೆಡ್‌ಲೈನ್!
“ರೈತರ ಭೂಮಿ, ಬದುಕು ಮತ್ತು ಭವಿಷ್ಯದ ಪ್ರಶ್ನೆ ಇದು. ಈ ಯೋಜನೆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೂ ಅದು ಬೈರಮಂಗಲದಲ್ಲೇ, ಭೂಮಿ ಕಳೆದುಕೊಳ್ಳುತ್ತಿರುವ ರೈತರ ಸಮ್ಮುಖದಲ್ಲೇ ನಡೆಯಬೇಕು” ಎಂದು ಕುಮಾರಸ್ವಾಮಿ ತೀವ್ರ ಪಟ್ಟು ಹಿಡಿದಿದ್ದಾರೆ.
ಮುಖ್ಯಮಂತ್ರಿಗಳಿಗೆ ಬರೆದಿರುವ ಎರಡನೇ ಪತ್ರದಲ್ಲಿ ಜೂನ್ 27, 2026 ರಂದು ತಾವು ಬೈರಮಂಗಲದಲ್ಲೇ ಇರುವುದಾಗಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಸಂತ್ರಸ್ತ ರೈತರು ಮತ್ತು ತೊಂದರೆಗೆ ಸಿಲುಕಿರುವ ಜನಸಾಮಾನ್ಯರ ಧ್ವನಿಯನ್ನು ಆಲಿಸಲು ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಸ್ವತಃ ಸ್ಥಳಕ್ಕೆ ಆಗಮಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ನನ್ನ ನಿಲುವಿನಲ್ಲಿ ಗೊಂದಲವಿಲ್ಲ, ಪ್ರಶ್ನೆಯೇ ಇಲ್ಲ!
ತಮ್ಮ ನಿಲುವಿನ ಬಗ್ಗೆ ಎದ್ದಿರುವ ವದಂತಿಗಳಿಗೆ ತೆರೆ ಎಳೆದಿರುವ ಎಚ್.ಡಿ. ಕುಮಾರಸ್ವಾಮಿ, “ನನ್ನ ನಿಲುವಿನಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲ, ಗೊಂದಲವೂ ಇಲ್ಲ. ಬಿಡದಿ ನವನಗರ ಯೋಜನೆಯಿಂದ ತೊಂದರೆಗೊಳಗಾಗುವ ರೈತರ ಪರವಾಗಿ ನನ್ನ ಹೋರಾಟ ಎಂದಿಗೂ ಬದಲಾಗುವುದಿಲ್ಲ. ಈ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ.

ಬಿಡದಿ ನವನಗರ ಮತ್ತು ಗ್ರೇಟರ್ ಬೆಂಗಳೂರು ವಿವಾದವೇನು?
ರಾಜ್ಯ ಸರ್ಕಾರವು ಬಿಡದಿ ಭಾಗದಲ್ಲಿ ಬೃಹತ್ ನವನಗರ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಇದಕ್ಕೆ ಪೂರಕವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯನ್ನು ವಿಸ್ತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಆದರೆ, ಈ ಯೋಜನೆಯಿಂದಾಗಿ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿ ಉದ್ಯಮಿಗಳ ಹಾಗೂ ರಿಯಲ್ ಎಸ್ಟೇಟ್ ಪಾಲಾಗುತ್ತದೆ, ಇದರಿಂದ ಸ್ಥಳೀಯ ರೈತರು ಬೀದಿಪಾಲಾಗುತ್ತಾರೆ ಎನ್ನುವುದು ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರ ಪ್ರಮುಖ ಆರೋಪವಾಗಿದೆ.
ಮತ್ತೊಂದೆಡೆ ರಾಮನಗರ ಮತ್ತು ಕನಕಪುರ ಭಾಗದ ಮೇಲೆ ರಾಜಕೀಯ ಹಿಡಿತ ಸಾಧಿಸಲು ಡಿ.ಕೆ. ಶಿವಕುಮಾರ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಇಬ್ಬರೂ ಈ ಬಿಡದಿ ಇಶ್ಯೂ ಕೈಗೆತ್ತಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಸದ್ಯಕ್ಕಂತೂ ಈ ರೈತರ ಭೂಮಿ ಹೋರಾಟ ದೊಡ್ಡ ರಾಜಕೀಯ ಯುದ್ಧವಾಗಿ ಮಾರ್ಪಟ್ಟಿದೆ. ಜೂನ್ 27 ರಂದು ಬೈರಮಂಗಲದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುತ್ತಾರಾ ಅಥವಾ ಕುಮಾರಸ್ವಾಮಿ ಅವರೇ ಮುಂದಿನ ಹೋರಾಟದ ಹಾದಿ ತುಳಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: