ಶಿವಾಜಿನಗರ ಅಕ್ರಮ ತೆರವು ವೇಳೆ ಹಲ್ಲೆ: ಗಾಯಗೊಂಡ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಸನ್ಮಾನ.
ವರದಿಗಾರರು (Reporter)
Hemanth Rajashekar06:52 AM IST

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರ್ವಜನಿಕ ರಸ್ತೆ ಹಾಗೂ ಕಾಲುದಾರಿಗಳನ್ನು ಅತಿಕ್ರಮಣ ಮುಕ್ತಗೊಳಿಸುವುದು ಸುಲಭದ ಮಾತಲ್ಲ. ಇಂತಹ ಅಪಾಯಕಾರಿ ಸವಾಲುಗಳ ನಡುವೆಯೂ ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಿ, ತಮ್ಮ ಕರ್ತವ್ಯ ಪ್ರಜ್ಞೆ ಮೆರೆದ ಬಿಬಿಎಂಪಿ ಅಧಿಕಾರಿಗಳ ಸಾಹಸವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಶ್ರೀ ಕೃಷ್ಣ ಬೈರೇಗೌಡ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಇತ್ತೀಚೆಗೆ ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಶಿವಾಜಿನಗರದಲ್ಲಿ ಬೀದಿಬದಿ ವ್ಯಾಪಾರಿಗಳ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ವೇಳೆ ಕೆಲ ಕಿಡಿಗೇಡಿಗಳು ನಿಯಮ ಉಲ್ಲಂಘಿಸುವುದಲ್ಲದೆ, ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಏಕಾಏಕಿ ಭೌತಿಕ ಹಲ್ಲೆ ನಡೆಸಿ ಭೀತಿ ವಾತಾವರಣ ನಿರ್ಮಿಸಲು ಯತ್ನಿಸಿದ್ದರು. ಆದರೆ, ಈ ಯಾವುದೇ ಬೆದರಿಕೆಗೂ ಬಗ್ಗದ ಅಧಿಕಾರಿಗಳು, ತಮಗೆ ಎದುರಾದ ಹಲ್ಲೆಯನ್ನೂ ಲೆಕ್ಕಿಸದೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸಚಿವರ ಕಚೇರಿಯಲ್ಲಿ ವಿಶೇಷ ಸನ್ಮಾನ
ಅಧಿಕಾರಿಗಳ ಈ ಧೈರ್ಯ, ಕರ್ತವ್ಯನಿಷ್ಠೆ ಮತ್ತು ಶಿಸ್ತನ್ನು ಗೌರವಿಸುವ ಸಲುವಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಹಲ್ಲೆಗೊಳಗಾದ ಅಧಿಕಾರಿಗಳನ್ನು ತಮ್ಮ ಕಚೇರಿಗೆ ಆಹ್ವಾನಿಸಿ ಆತ್ಮೀಯವಾಗಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು:
“ಯಾವುದೇ ಬೆದರಿಕೆ ಅಥವಾ ದಾಳಿಗೆ ಕಂಜೂಸಾಗದೆ ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿಹಿಡಿದ ಈ ಅಧಿಕಾರಿಗಳ ಕಾರ್ಯ ಪ್ರತಿಯೊಬ್ಬರಿಗೂ ಮಾದರಿ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಅಕ್ರಮ ಒತ್ತುವರಿಗಳ ವಿರುದ್ಧದ ಕಾರ್ಯಾಚರಣೆ ಇಲ್ಲಿಗೆ ನಿಲ್ಲುವುದಿಲ್ಲ. ನಗರದ ಶಿಸ್ತು ಕಾಪಾಡಲು ಇಂತಹ ಕಟ್ಟುನಿಟ್ಟಿನ ಕ್ರಮಗಳು ನಿರಂತರವಾಗಿ ಮುಂದುವರಿಯಲಿವೆ,” ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರ ತೀವ್ರ ತನಿಖೆ: 12ಕ್ಕೂ ಹೆಚ್ಚು ಆರೋಪಿಗಳ ಬಂಧನ!
ಸರ್ಕಾರಿ ಅಧಿಕಾರಿಗಳ ಮೇಲೆ ನಡೆದ ಭೀಕರ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ವಿವಿಧ ಗಂಭೀರ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಶೇಷ ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸಿ, ಹಲ್ಲೆಯ ರೂವಾರಿ ಹಾಗೂ ಪ್ರಮುಖ ಆರೋಪಿಯಾದ ಬಸವರಾಜ್ ಪಡುಕೋಟೆ ಸೇರಿದಂತೆ ಒಟ್ಟು 12ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಹಾಗೂ ತನಿಖೆ ತೀವ್ರಗತಿಯಲ್ಲಿ ಸಾಗಿದೆ.
ಬಿಗಿ ಪೊಲೀಸ್ ಭದ್ರತೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡ ಒತ್ತುವರಿ ತೆರವು
ಹಲ್ಲೆ ಘಟನೆಯ ನಂತರವೂ ಹಿಂಜರಿಯದ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಶಿವಾಜಿನಗರ ಪೊಲೀಸರ ಭಾರಿ ಭದ್ರತೆಯ ನಡುವೆ ಘಟನಾ ಸ್ಥಳಕ್ಕೆ ಮರಳಿ ಕಾರ್ಯಾಚರಣೆಯನ್ನು ಪುನರಾರಂಭಿಸಿದರು. ಪೊಲೀಸ್ ತುಕಡಿಗಳ ಸಮ್ಮುಖದಲ್ಲಿ ಶಿವಾಜಿನಗರದ ಪ್ರಮುಖ ಕಾಲುದಾರಿಗಳಲ್ಲಿದ್ದ ಎಲ್ಲಾ ಅಕ್ರಮ ಅಂಗಡಿಗಳು, ಕೌಂಟರ್‌ಗಳು ಹಾಗೂ ಕಟ್ಟಡಗಳ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದರು.
ಅಧಿಕಾರಿಗಳ ಈ ಧೈರ್ಯ ಹಾಗೂ ಪೋಲಿಸರ ಶೀಘ್ರ ಕ್ರಮವು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸರ್ಕಾರಿ ನೌಕರರಲ್ಲಿ ಹೊಸ ಭರವಸೆ ಹಾಗೂ ಆತ್ಮವಿಶ್ವಾಸವನ್ನು ತುಂಬಿದೆ.
ಸಚಿವರ ಈ ಭರವಸೆ ಹಾಗೂ ಗೌರವ ಸಲ್ಲಿಕೆಯು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸರ್ಕಾರಿ ನೌಕರರಲ್ಲಿ ಹೊಸ ಭರವಸೆ ಹಾಗೂ ಆತ್ಮವಿಶ್ವಾಸವನ್ನು ತುಂಬಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: