ಲಕ್ನೋದಲ್ಲಿ ಭೀಕರ ಅಗ್ನಿ ದುರಂತ 15 ವಿದ್ಯಾರ್ಥಿಗಳು ಸಜೀವ ದಹನ: ಜೀವ ಉಳಿಸಿಕೊಳ್ಳಲು ಮಹಡಿಯಿಂದ ಜಿಗಿದ ಯುವಕರು, ಗೋಡೆ ಒಡೆದು ಹೆಣಗಳ ಹೊರತೆಗೆದ ರಕ್ಷಣಾ ಪಡೆ.
ವರದಿಗಾರರು (Reporter)
Hemanth Rajashekar01:46 AM IST

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಅಲಿಗಂಜ್ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಘೋರ ದುರಂತವೊಂದು ಸಂಭವಿಸಿದೆ. ಇಲ್ಲಿನ ಮೂರು ಅಂತಸ್ತಿನ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದ್ದ ಅನಿಮೇಷನ್ ಕೋಚಿಂಗ್ ಸೆಂಟರ್ ಮತ್ತು ಗೇಮಿಂಗ್ ಜೋನ್‌ನಲ್ಲಿ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಕನಿಷ್ಠ 15 ಯುವ ವಿದ್ಯಾರ್ಥಿಗಳು ಸಜೀವ ದಹನವಾಗಿದ್ದಾರೆ. ಮೃತರ ವಯಸ್ಸು 22 ರಿಂದ 27 ವರ್ಷಗಳಾಗಿದ್ದು, ಇವರಲ್ಲಿ ನಾಲ್ಕು ಯುವತಿಯರೂ ಸೇರಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಹಲವರನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (KGMU) ಟ್ರೌಮಾ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನೆತ್ತಿ ಸುಡುವ ಹೊಗೆ: ಜೀವ ಉಳಿಸಿಕೊಳ್ಳಲು ಮಹಡಿಯಿಂದ ಜಿಗಿದ ವಿದ್ಯಾರ್ಥಿಗಳು!
ಸೋಮವಾರ ಮಧ್ಯಾಹ್ನ ಸುಮಾರು 2:15 ರ ಸುಮಾರಿಗೆ ಅಲಿಗಂಜ್‌ನ ಉಷಾ ಮೆಹ್ತಾ ಮಾರ್ಗದ ಪುರಾನಿಯಾ ಎಂಬಲ್ಲಿ ಈ ಘಟನೆ ನಡೆದಿದೆ. ಕಟ್ಟಡದ ಎರಡನೇ ಮಹಡಿಯಲ್ಲಿ ‘ಲರ್ನಿಂಗ್ ಸ್ಪೇಸ್’ ಎಂಬ ಲೈಬ್ರರಿ ಕಮ್ ಕೋಚಿಂಗ್ ಸೆಂಟರ್ ಹಾಗೂ ‘ಹೆಡ್ ಹಾಪರ್ ಸ್ಟುಡಿಯೋ’ ಎಂಬ 3D ಆರ್ಟ್ ಮತ್ತು ಗೇಮಿಂಗ್ ಅನಿಮೇಷನ್ ಸಂಸ್ಥೆ ಇತ್ತು. ಘಟನೆ ನಡೆದಾಗ ಸುಮಾರು 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಹಾಗೂ ತರಬೇತಿಗಾಗಿ ಅಲ್ಲಿ ನೆರೆದಿದ್ದರು. ಬೇಸ್‌ಮೆಂಟ್‌ನಿಂದ ಏಕಾಏಕಿ ಹರಡಿದ ದಟ್ಟವಾದ ಕಪ್ಪು ಹೊಗೆ ಮತ್ತು ಬೆಂಕಿಯ ಜ್ವಾಲೆ ಇಡೀ ಮಹಡಿಯನ್ನು ಆವರಿಸಿಕೊಂಡಿತು.
ಇದರಿಂದ ಕಂಗೆಟ್ಟ ವಿದ್ಯಾರ್ಥಿಗಳು ಹೊರಗೆ ಬರಲಾರದೆ ಒಳಗೆ ಸಿಲುಕಿಕೊಂಡರು. ಕೆಲವರು ಪ್ರಾಣ ಉಳಿಸಿಕೊಳ್ಳಲು ಕಿಟಕಿ ಗಾಜುಗಳನ್ನು ಒಡೆದು ಎರಡನೇ ಮಹಡಿಯಿಂದಲೇ ಕೆಳಗೆ ಜಿಗಿದಿದ್ದಾರೆ. ಈ ವೇಳೆ ಕೆಳಗಿದ್ದ ಕಬ್ಬಿಣದ ರೇಲಿಂಗ್ ಹಾಗೂ ಗ್ರಿಲ್ ಮೇಲೆ ಬಿದ್ದು ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ದಟ್ಟ ಹೊಗೆಯಿಂದ ಉಸಿರುಗಟ್ಟಿ ರಕ್ಷಣೆಗಾಗಿ ಮೂರ್ನಾಲ್ಕು ವಿದ್ಯಾರ್ಥಿಗಳು ಬಾತ್‌ರೂಮ್ ಒಳಗೆ ಹೋಗಿ ಬೀಗ ಹಾಕಿಕೊಂಡಿದ್ದರು ಎನ್ನಲಾಗಿದ್ದು, ದುರದೃಷ್ಟವಶಾತ್ ಅವರು ಅಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಗೋಡೆ ಒಡೆದು ಹೆಣಗಳ ಹೊರತೆಗೆದ ರಕ್ಷಣಾ ಪಡೆ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ 14ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸತತ ಕಾರ್ಯಾಚರಣೆ ನಡೆಸಿದವು. ಕಟ್ಟಡದ ಒಳಗೆ ಹೋಗಲು ದಾರಿ ಸಿಗದ ಕಾರಣ, ರಕ್ಷಣಾ ಸಿಬ್ಬಂದಿ ಜೆಸಿಬಿ ಮೂಲಕ ಕಟ್ಟಡದ ಹಿಂಭಾಗದ ಗೋಡೆಯನ್ನು ಒಡೆದು ಒಳಗೆ ಪ್ರವೇಶಿಸಿದರು. ಆದರೆ ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ 15 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಅವರ ಮೃತದೇಹಗಳನ್ನು ಹಿಂಭಾಗದ ಗೋಡೆ ಒಡೆದ ಜಾಗದ ಮೂಲಕವೇ ಹೊರಕ್ಕೆ ತೆಗೆಯಲಾಯಿತು.

ಸಿಎಂ ಯೋಗಿ, ಪ್ರಧಾನಿ ಮೋದಿ ತೀವ್ರ ಸಂತಾಪ; ಪರಿಹಾರ ಘೋಷಣೆ
ಘಟನೆಯ ಭೀಕರತೆ ತಿಳಿಯುತ್ತಿದ್ದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಅಲಿಗಢ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಲಕ್ನೋಗೆ ಧಾವಿಸಿದರು. ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿಎಂ, ನಂತರ ಕೆಜಿಎಂಯು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದು, 7 ದಿನಗಳಲ್ಲಿ ವರದಿ ನೀಡುವಂತೆ ಆದೇಶಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಭೀಕರ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ವಸತಿ ಕಟ್ಟಡದಲ್ಲಿ ವಾಣಿಜ್ಯ ವ್ಯವಹಾರ: ನಡುರಾತ್ರಿಯಲ್ಲೇ ನಾಲ್ವರ ಬಂಧನ!
ಪ್ರಾಥಮಿಕ ತನಿಖೆಯ ಪ್ರಕಾರ, ಬೇಸ್‌ಮೆಂಟ್‌ನಲ್ಲಿರುವ ಹವಾನಿಯಂತ್ರಣ (AC) ಘಟಕದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಆದರೆ, ಅತ್ಯಂತ ಆಘಾತಕಾರಿ ವಿಷಯವೆಂದರೆ, ಈ ಮೂರು ಅಂತಸ್ತಿನ ಕಟ್ಟಡವನ್ನು ಕೇವಲ ವಸತಿ ಉದ್ದೇಶಕ್ಕಾಗಿ ಅನುಮೋದನೆ ಪಡೆಯಲಾಗಿತ್ತು. ಆದರೆ ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಇದನ್ನು ಕೋಚಿಂಗ್ ಸೆಂಟರ್, ಗೇಮಿಂಗ್ ಜೋನ್ ಮತ್ತು ಪೆಟ್ ಕ್ಲಿನಿಕ್‌ನಂತಹ ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತಿತ್ತು. ಘಟನೆಗೆ ಸಂಬಂಧಿಸಿದಂತೆ ಬೇಜವಾಬ್ದಾರಿತನ ತೋರಿದ ಆಡಳಿತ ಮಂಡಳಿಯ ರಾಮಕೃಷ್ಣ ಉಪಾಧ್ಯಾಯ, ವೀರೇಂದ್ರ ಪ್ರಸಾದ್ ಶುಕ್ಲಾ ಸೇರಿದಂತೆ ನಾಲ್ಕು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಕಟ್ಟಡವನ್ನು ಸೀಲ್ ಮಾಡಿದ್ದಾರೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಜಾಗತಿಕ ಇತಿಹಾಸ ಸೃಷ್ಟಿಸಿದ ಭಾರತ: ವಿಶ್ವದಲ್ಲೇ ನಂ.1 ರಸ್ತೆ ಜಾಲ ಹೊಂದಿದ ಗರಿಮೆ! ಆದರೆ ಗುಣಮಟ್ಟದ ಕಥೆಯೇನು?