ಕ್ರೈಂ

ಸಾರ್ವಜನಿಕರ ಕಣ್ಣೆದುರೇ ಯುವತಿಯ ಭೀಕರ ಕೊಲೆ: ಮಹಿಳೆಯರ ಸುರಕ್ಷತೆಗೆ ಇನ್ಯಾವಾಗ ಸಿಗುತ್ತೆ ಗ್ಯಾರಂಟಿ?

Hemanth Rajashekar

ವರದಿಗಾರರು (Reporter)

Hemanth Rajashekar

02:19 AM IST

ಸಾರ್ವಜನಿಕರ ಕಣ್ಣೆದುರೇ ಯುವತಿಯ ಭೀಕರ ಕೊಲೆ: ಮಹಿಳೆಯರ ಸುರಕ್ಷತೆಗೆ ಇನ್ಯಾವಾಗ ಸಿಗುತ್ತೆ ಗ್ಯಾರಂಟಿ?

ಬಂಟ್ವಾಳ: “ಮನುಷ್ಯತ್ವ ದಿನದಿಂದ ದಿನಕ್ಕೆ ಸಾಯ್ತಾ ಇದೆಯಾ? ಅಪರಾಧ ಕೃತ್ಯಗಳು ಮಿತಿಮೀರುತ್ತಿವೆಯೇ? ಮಹಿಳೆಯರು ಮುಕ್ತವಾಗಿ, ಭಯವಿಲ್ಲದೆ ಬದುಕಲು ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು?” ಎನ್ನುವ ಗಂಭೀರ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮತ್ತೊಮ್ಮೆ ಎದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ 21 ವರ್ಷದ ಯುವತಿ ಲಾವಣ್ಯ ಎಂಬಾಕೆಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಡೀ ರಾಜ್ಯವನ್ನೇ ನಡುಗಿಸಿದೆ.

ಪೊಲೀಸ್ ತನಿಖೆಯಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಕೊಲೆಯಾದ ಯುವತಿಯನ್ನು ಬಂಟ್ವಾಳ ತಾಲೂಕಿನ ಕಾಕ್ಕೆಪದವು ಗ್ರಾಮದ ನಿವಾಸಿ ಲಾವಣ್ಯ ಎಂದು ಗುರುತಿಸಲಾಗಿದೆ. ಆಕೆ ಕಲ್ಲಡ್ಕದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮುಗಿಸಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಈ ದಾರುಣ ಘಟನೆ ಸಂಭವಿಸಿದೆ. ಇನ್ನು ಈ ಅಮಾನವೀಯ ಕೃತ್ಯ ಎಸಗಿದ ಹಂತಕನನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ನಿವಾಸಿ 22 ವರ್ಷದ ಚೇತನ್ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಈತ ಮೃತ ಲಾವಣ್ಯ ಅವರ ದೂರದ ಸಂಬಂಧಿಯಾಗಿದ್ದು, ಆಕೆಯ ಮೇಲೆ ಏಕಪಕ್ಷೀಯ ಪ್ರೀತಿ ಹೊಂದಿದ್ದ ಎನ್ನಲಾಗಿದೆ.

ಲಾವಣ್ಯ ಕೆಲಸ ಮುಗಿಸಿ ಬಸ್ ಹತ್ತಿದಾಗ, ಚೇತನ್ ಕೂಡ ಅದೇ ಬಸ್‌ನಲ್ಲಿ ಆಕೆಯ ಪಕ್ಕದಲ್ಲೇ ಬಂದು ಕುಳಿತಿದ್ದ ಎನ್ನಲಾಗಿದೆ. ಬಸ್ ಬಂಟ್ವಾಳದ ಬಿ.ಸಿ. ರೋಡ್ ನಿಲ್ದಾಣಕ್ಕೆ ತಲುಪಿ ಇಬ್ಬರೂ ಕೆಳಗಿಳಿಯುತ್ತಿದ್ದಂತೆ, ಚೇತನ್ ಮಚ್ಚಿನಂತಹ ಮಾರಕಾಸ್ತ್ರದಿಂದ ಆಕೆಯನ್ನು ಬೆನ್ನಟ್ಟಿದ್ದಾನೆ. ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಹಾಗೂ ಸಾರ್ವಜನಿಕರು ನೋಡ ನೋಡುತ್ತಿದ್ದಂತೆಯೇ ಆಕೆಯ ಮೇಲೆ ಅಮಾನವೀಯವಾಗಿ ಮುಗಿಬಿದ್ದಿದ್ದಾನೆ. ಆಕೆ ಅಲ್ಲಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿದರೂ ಬಿಡದ ದುಷ್ಕರ್ಮಿ, ಎಲ್ಲರ ಕಣ್ಣೆದುರೇ ಘಾಸಿಗೊಳಿಸಿದ್ದಾನೆ. ಸುತ್ತಲೂ ಇದ್ದ ಜನರೆಲ್ಲಾ ಈ ಭೀಕರ ದೃಶ್ಯವನ್ನು ನೋಡಿ ದಿಗ್ಭ್ರಮೆಗೊಂಡಿದ್ದಾರೆ.

ಕೊಲೆಗೂ ಮುನ್ನ ಸಂಬಂಧಿಕರಿಗೆ ಕರೆ ಮಾಡಿದ್ದ ಲಾವಣ್ಯ

ದಾಳಿ ನಡೆಯುವುದಕ್ಕಿಂತ ಕೆಲವೇ ನಿಮಿಷಗಳ ಮುನ್ನ ಲಾವಣ್ಯ ಅವರು ತಮ್ಮ ಸಂಬಂಧಿಕರೊಬ್ಬರಿಗೆ ಫೋನ್ ಮಾಡಿದ್ದರು. ಬಸ್‌ನಲ್ಲಿ ಯುವಕನೊಬ್ಬ ತನ್ನ ಪಕ್ಕದಲ್ಲೇ ಬಂದು ಕುಳಿತು ಕಾಟ ನೀಡುತ್ತಿರುವ ಬಗ್ಗೆ ಆಕೆ ಆತಂಕ ಹಂಚಿಕೊಂಡಿದ್ದರು. ಸದ್ಯ ತನಿಖಾಧಿಕಾರಿಗಳು ಲಾವಣ್ಯ ಅವರ ಮೊಬೈಲ್ ಕರೆಗಳ ವಿವರ (CDR) ಹಾಗೂ ಬಸ್ ನಿಲ್ದಾಣದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದ್ದಾರೆ.

ಘಟನೆ ನಡೆದ ತಕ್ಷಣ ಆರೋಪಿ ಚೇತನ್ ಸ್ಥಳದಿಂದ ಪರಾರಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಅರುಣ್ ಕುಮಾರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.

ಮಹಿಳಾ ಸುರಕ್ಷತೆಯ ಬಗ್ಗೆ ಹೆಚ್ಚಿದ ಆತಂಕ

ಬಸ್ ನಿಲ್ದಾಣದಂತಹ ಅತ್ಯಂತ ಜನನಿಬಿಡ ಸಾರ್ವಜನಿಕ ಸ್ಥಳದಲ್ಲೇ ನಡೆದಿರುವ ಈ ಭೀಕರ ಕೃತ್ಯವು ಮಹಿಳೆಯರ ಸುರಕ್ಷತೆ ಮತ್ತು ಸಾರ್ವಜನಿಕ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ. ಏಕಪಕ್ಷೀಯ ಪ್ರೀತಿಯ ಹುಚ್ಚು ತನಕ್ಕೆ ಮತ್ತೊಂದು ಅಮಾಯಕ ಜೀವ ಬಲಿಯಾಗಿದೆ. ಲಾವಣ್ಯ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ಇಂತಹ ದಾರುಣ ಘಟನೆಗಳು ಮರುಕಳಿಸದಂತೆ ತಡೆಯಲು ಆರೋಪಿ ಚೇತನ್‌ನನ್ನು ತಕ್ಷಣವೇ ಬಂಧಿಸಿ, ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸುತ್ತಿದ್ದಾರೆ.

ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

ಹೆಚ್‌ಎಂಟಿ ಭೂ ಹಗರಣದ ಹುತ್ತಕ್ಕೆ ಕೈಹಾಕಿದ ಹೆಚ್.ಡಿ. ಕುಮಾರಸ್ವಾಮಿ: 175 ಎಕರೆ ಲೂಟಿ ಆರೋಪ, ‘ಕೈ’ ನಾಯಕನಿಗೆ ಬಿಗ್ ಶಾಕ್!

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ