ಮಹಾರಾಷ್ಟ್ರ: iPhone ಇಎಂಐ ಜಗಳಕ್ಕೆ ಬೆಟ್ಟದಿಂದ ಜಿಗಿದು ತಂದೆ-ತಾಯಿ, ಮಗ ಮೂವರೂ ದುರ್ಮರಣ!
ವರದಿಗಾರರು (Reporter)
Hemanth Rajashekar09:37 AM IST

ಕೇವಲ ಒಂದು ಐಫೋನ್ ಮೊಬೈಲ್ ಫೋನ್ ಮತ್ತು ಅದರ ಕಂತುಗಳನ್ನು (EMI) ಪಾವತಿಸಲು ಸಾಧ್ಯವಾಗದೆ ನಡೆದ ಕೌಟುಂಬಿಕ ಜಗಳವು ಮಹಾರಾಷ್ಟ್ರದಲ್ಲಿ ಹೃದಯವಿದ್ರಾವಕ ದುರಂತದಲ್ಲಿ ಕೊನೆಗೊಂಡಿದೆ. ಐಫೋನ್ ಖರೀದಿಸಿ ಅದರ ಇಎಂಐ ಕಟ್ಟಲಾಗದೆ ತಂದೆಯೊಂದಿಗೆ ಜಗಳವಾಡಿದ 19 ವರ್ಷದ ಯುವಕ ಬೆಟ್ಟದ ತುದಿಯಿಂದ ಧುಮುಕಿದ್ದು, ಆತನನ್ನು ರಕ್ಷಿಸಲು ಹೋದ ತಂದೆ-ತಾಯಿ ಇಬ್ಬರೂ ಬೆಟ್ಟದಿಂದ ಬಿದ್ದು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮನಕಲುಕುವ ಘಟನೆಯು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ತಿಸ್ಗಾಂವ್ ಪ್ರದೇಶದಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ವಿಡಿಯೋಗಳು ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಶೋಕ ಮೂಡಿಸಿದೆ.
ದುರಂತದ ಹಿನ್ನೆಲೆ ಮತ್ತು ಜಗಳಕ್ಕೆ ಕಾರಣ:
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೃತನನ್ನು 19 ವರ್ಷದ ಕುನಾಲ್ ಮುರಳೀಧರ್ ಚಂದಗುಡೆ ಎಂದು ಗುರುತಿಸಲಾಗಿದೆ. ಕುನಾಲ್ ಇತ್ತೀಚೆಗಷ್ಟೇ ತನ್ನ ಆಸೆಯಂತೆ ದುಬಾರಿ ಬೆಲೆಯ ಐಫೋನ್ ಖರೀದಿಸಿದ್ದ. ಆದರೆ, ಅದರ ಮಾಸಿಕ ಕಂತುಗಳನ್ನು (EMI) ಪಾವತಿಸಲು ಆತನ ಬಳಿ ಹಣವಿರಲಿಲ್ಲ. ಹೀಗಾಗಿ ಆತ ತನ್ನ ಕುಟುಂಬದ ಬಳಿ ಇಎಂಐ ಹಣ ನೀಡುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ.
ಶುಕ್ರವಾರ ಬೆಳಿಗ್ಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕುನಾಲ್ ಹಾಗೂ ಆತನ ತಂದೆ ಮುರಳೀಧರ್ ಚಂದಗುಡೆ (48) ನಡುವೆ ತೀವ್ರ ವಾಕ್ಸಮರ ನಡೆದಿದೆ. ತಂದೆ ಹಣ ನೀಡಲು ನಿರಾಕರಿಸಿದ್ದರಿಂದ ತೀವ್ರ ಕೋಪಗೊಂಡ ಕುನಾಲ್, ಮನೆಯಿಂದ ಹೊರಬಿದ್ದು ವಾಳುಜ್ ಎಂಡಿಸಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಸ್ಗಾಂವ್ ಬಳಿಯಿರುವ ಬೆಟ್ಟಕ್ಕೆ ತೆರಳಿದ್ದ.
ಪ್ರಾಣ ಉಳಿಸಲು ಬೆಟ್ಟಕ್ಕೆ ಓಡಿಬಂದ ಹೆತ್ತವರು:
ಸುಮಾರು ಬೆಳಿಗ್ಗೆ 10 ಗಂಟೆಯ ವೇಳೆಗೆ ಕುನಾಲ್ ಬೆಟ್ಟದ ತುದಿಯಲ್ಲಿದ್ದು ಆತ್ಮಹತ್ಯೆಗೆತ್ನಿಸುತ್ತಿದ್ದಾನೆ ಎಂಬ ವಿಷಯ ಹೆತ್ತವರಿಗೆ ತಿಳಿದಿದೆ. ತಕ್ಷಣವೇ ಆತನ ತಂದೆ ಮುರಳೀಧರ್ ಹಾಗೂ ತಾಯಿ ಸಂಗೀತಾ ಚಂದಗುಡೆ (ಛತ್ರಪತಿ ಸಂಭಾಜಿನಗರದ ಝಲ್ಟಾ ಫಾಟಾ ಪ್ರದೇಶದ ನಿವಾಸಿಗಳು) ಬೆಟ್ಟದ ಬಳಿ ಧಾವಿಸಿದ್ದಾರೆ. ಸ್ಥಳೀಯ ಗ್ರಾಮಸ್ಥರು ಮತ್ತು ಪೊಲೀಸರು ಸಹ ಸ್ಥಳಕ್ಕೆ ತಲುಪಿ ಯುವಕನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಲಾಗಿತ್ತು. ಯುವಕ ಕೆಳಗೆ ಬಿದ್ದರೆ ಆತನನ್ನು ರಕ್ಷಿಸಲು ಕೆಳಭಾಗದಲ್ಲಿ ರಕ್ಷಣಾ ಬಲೆಯನ್ನು (Net) ಅಳವಡಿಸಲು ಸಿಬ್ಬಂದಿ ಸಿದ್ಧತೆ ನಡೆಸುತ್ತಿದ್ದರು. ಆದರೆ ಯುವಕ ಸ್ಥಳೀಯರು ಮತ್ತು ಪೊಲೀಸರು ಹತ್ತಿರ ಬರದಂತೆ ಬೆಟ್ಟದ ತುದಿಯಲ್ಲಿ ತನ್ನ ಜಾಗವನ್ನು ಪದೇ ಪದೇ ಬದಲಾಯಿಸುತ್ತಿದ್ದ.
ಕಣ್ಣೆದುರಲ್ಲೇ ನಡೆದ ಭೀಕರ ಸಾವು:
ತಂದೆ ಮುರಳೀಧರ್ ಅವರು ಮಗನನ್ನು ಸಮಾಧಾನಪಡಿಸಿ, ಕೆಳಗೆ ಇಳಿದು ಬರುವಂತೆ ಕೇಳಿಕೊಳ್ಳುತ್ತಿದ್ದರು. ಆದರೆ, ಆ ಕ್ಷಣದಲ್ಲಿ ಕುನಾಲ್ ಏಕಾಏಕಿ ಬೆಟ್ಟದ ತುದಿಯಿಂದ ಕೆಳಗೆ ಜಿಗಿದಿದ್ದಾನೆ. ಮಗನನ್ನು ಹಿಡಿದು ರಕ್ಷಿಸಲು ಯತ್ನಿಸಿದ ತಂದೆ ಮುರಳೀಧರ್ ಕೂಡ ನಿಯಂತ್ರಣ ತಪ್ಪಿ ಮಗನ ಜೊತೆಯಲ್ಲೇ ಕಂದಕಕ್ಕೆ ಬಿದ್ದಿದ್ದಾರೆ.
ತನ್ನ ಕಣ್ಣೆದುರಲ್ಲೇ ಮಗ ಮತ್ತು ಪತಿ ಬೆಟ್ಟದಿಂದ ಬಿದ್ದು ಪ್ರಾಣ ಬಿಟ್ಟಿದ್ದನ್ನು ಕಂಡ ತಾಯಿ ಸಂಗೀತಾ ಅವರು ತೀವ್ರ ಆಘಾತಕ್ಕೊಳಗಾಗಿ, ಕ್ಷಣಮಾತ್ರದಲ್ಲಿ ತಾನೂ ಬೆಟ್ಟದ ತುದಿಯಿಂದ ಕೆಳಗೆ ಜಿಗಿದಿದ್ದಾರೆ. ಪ್ರತ್ಯಕ್ಷದರ್ಶಿಗಳು ಮತ್ತು ಪ್ರಾಣ ರಕ್ಷಿಸಲು ಬಂದಿದ್ದ ಕ್ಯಾಮೆರಾ ಕಣ್ಣುಗಳ ಎದುರಲ್ಲೇ ಇಡೀ ಕುಟುಂಬದ ಮೂವರೂ ದುರ್ಮರಣಕ್ಕೀಡಾಗಿದ್ದಾರೆ.
ಪೊಲೀಸರ ಕ್ರಮ:
ಘಟನೆ ನಡೆದ ತಕ್ಷಣವೇ ವಾಳುಜ್ ಎಂಡಿಸಿ ಪೊಲೀಸರು ಮೂವರ ಮೃತದೇಹಗಳನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ದುಬಾರಿ ವಸ್ತುಗಳ ವ್ಯಾಮೋಹ ಮತ್ತು ಇಎಂಐ ಸಾಲದ ಒತ್ತಡ ಇಡೀ ಕುಟುಂಬವನ್ನೇ ಬಲಿ ಪಡೆದಿರುವುದು ಸಾರ್ವಜನಿಕರಲ್ಲಿ ತೀವ್ರ ಕಳವಳವನ್ನುಂಟುಮಾಡಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: