ದೇಶ - ವಿದೇಶ

ಇತಿಹಾಸ ಸೃಷ್ಟಿಸಿದ ಆಂಧ್ರಪ್ರದೇಶ: ಭಾರತದ ಮೊದಲ ಖಾಸಗಿ ಚಿನ್ನದ ಗಣಿ ‘ಸ್ವರ್ಣಗಿರಿ’ ಅಧಿಕೃತವಾಗಿ ಆರಂಭ!

Hemanth Rajashekar

ವರದಿಗಾರರು (Reporter)

Hemanth Rajashekar

02:13 AM IST

ಇತಿಹಾಸ ಸೃಷ್ಟಿಸಿದ ಆಂಧ್ರಪ್ರದೇಶ: ಭಾರತದ ಮೊದಲ ಖಾಸಗಿ ಚಿನ್ನದ ಗಣಿ ‘ಸ್ವರ್ಣಗಿರಿ’ ಅಧಿಕೃತವಾಗಿ ಆರಂಭ!

ಸ್ವಾತಂತ್ರ್ಯದ ನಂತರದ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಖಾಸಗಿ ವಲಯದ ಬೃಹತ್ ಚಿನ್ನದ ಗಣಿಗಾರಿಕೆ ಯೋಜನೆಗೆ ಆಂಧ್ರಪ್ರದೇಶದಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ತುಗ್ಗಲಿ ಮಂಡಲದ ಜೊನ್ನಗಿರಿ ಗ್ರಾಮದಲ್ಲಿ ಈ ಐತಿಹಾಸಿಕ ಚಿನ್ನದ ಗಣಿ ಯೋಜನೆಯನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಬುಧವಾರ ಉದ್ಘಾಟಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಜೊನ್ನಗಿರಿ ಗ್ರಾಮವನ್ನು ಇನ್ನು ಮುಂದೆ ಅಧಿಕೃತವಾಗಿ ‘ಸ್ವರ್ಣಗಿರಿ’ ಎಂದು ಮರುನಾಮಕರಣ ಮಾಡಲಾಗುವುದು ಎಂದು ಘೋಷಿಸಿದರು. ಈ ಯೋಜನೆಯು ಸ್ಥಳೀಯ ನಿವಾಸಿಗಳ ಬದುಕಿನಲ್ಲಿ ಬಂಗಾರದ ಭವಿಷ್ಯವನ್ನು ತರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2047ರ ವೇಳೆಗೆ ಆಂಧ್ರಪ್ರದೇಶವನ್ನು ‘ಸ್ವರ್ಣಾಂಧ್ರ ಪ್ರದೇಶ’ವನ್ನಾಗಿ ಪರಿವರ್ತಿಸುವ ‘ವಿಕ್ಷಿತ್ ಭಾರತ್’ ದೂರದೃಷ್ಟಿಗೆ ಈ ಯೋಜನೆ ಭದ್ರ ಬುನಾದಿಯಾಗಲಿದೆ ಎಂದು ನಾಯ್ಡು ತಿಳಿಸಿದರು.

ಚಿನ್ನದ ಗಣಿಯ ಮಾಲೀಕರು ಯಾರು? ಎಷ್ಟು ಹೂಡಿಕೆ?

ಭಾರತದ ಮೊದಲ ಸಮಗ್ರ ಗ್ರೀನ್‌ಫೀಲ್ಡ್ ಖಾಸಗಿ ಚಿನ್ನದ ಗಣಿ ಯೋಜನೆಯನ್ನು ಜಿಯೋಮೈಸೂರು ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (GMSI) ಮತ್ತು ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದಕ್ಕೆ ಪ್ರಮುಖವಾಗಿ ಲಾಯ್ಡ್ಸ್ ಮೆಟಲ್ಸ್ ಅಂಡ್ ಎನರ್ಜಿ ಹಾಗೂ ಮೈನಿಂಗ್ ದೈತ್ಯ ಎನಿಸಿಕೊಂಡಿರುವ ತ್ರಿವೇಣಿ ಅರ್ಥ್‌ಮೂವರ್ಸ್ (ತ್ರಿವೇಣಿ ಗ್ರೂಪ್) ಬೆಂಬಲ ನೀಡಿದೆ.

ತ್ರಿವೇಣಿ ಗ್ರೂಪ್ ಮತ್ತು ಲಾಯ್ಡ್ಸ್ ಮೆಟಲ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಬಿ. ಪ್ರಭಾಕರನ್ ಅವರು ಈ ಯೋಜನೆಯ ನೇತೃತ್ವ ವಹಿಸಿದ್ದಾರೆ. ಈ ಗಣಿಗಾರಿಕೆ ಯೋಜನೆಗಾಗಿ ಸುಮಾರು 405 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಹೂಡಿಕೆ ಮಾಡಲಾಗಿದ್ದು, ಇದು ಸುಮಾರು 598 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಿಸಿದೆ. ಮುಖ್ಯಮಂತ್ರಿಗಳ ಮನವಿಗೆ ಸ್ಪಂದಿಸಿದ ತ್ರಿವೇಣಿ ಸಮೂಹದ ಎಂಡಿ ಪ್ರಭಾಕರನ್ ಅವರು ಸ್ವರ್ಣಗಿರಿ ಗ್ರಾಮವನ್ನು ದತ್ತು ಪಡೆದು, ಅದನ್ನು ಆದರ್ಶ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಒಪ್ಪಿಕೊಂಡಿದ್ದಾರೆ.

PC: PTI.

ಈ ಚಿನ್ನದ ಗಣಿಯಿಂದ ದೇಶ ಮತ್ತು ರಾಜ್ಯಕ್ಕಿರುವ ನಿರೀಕ್ಷೆಗಳೇನು?

ಭಾರತವು ಪ್ರತಿವರ್ಷ ಸುಮಾರು 700 ರಿಂದ 1,000 ಟನ್ ಚಿನ್ನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲದ ನಂತರ ಭಾರತ ಅತಿ ಹೆಚ್ಚು ಆಮದು ಮಾಡಿಕೊಳ್ಳುವುದು ಚಿನ್ನವನ್ನೇ ಆಗಿದೆ. ಈ ನಿಟ್ಟಿನಲ್ಲಿ ಸ್ವರ್ಣಗಿರಿ ಗಣಿಯು ದೇಶದ ಸ್ವಾವಲಂಬನೆಗೆ ದೊಡ್ಡ ಶಕ್ತಿ ನೀಡಲಿದೆ.

  • ಉತ್ಪಾದನಾ ಗುರಿ: ಆರಂಭಿಕ ಹಂತದಲ್ಲಿ (2026-27) ಈ ಗಣಿಯಿಂದ ವಾರ್ಷಿಕ 400 ಕೆಜಿ ಚಿನ್ನ ಉತ್ಪಾದಿಸುವ ಗುರಿ ಹೊಂದಲಾಗಿದೆ. ಮುಂದಿನ ಹಂತದಲ್ಲಿ ಇದನ್ನು ವಾರ್ಷಿಕ 900 ಕೆಜಿಗೆ (ಸುಮಾರು 1 ಟನ್) ಹೆಚ್ಚಿಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ವಾರ್ಷಿಕ 2 ಟನ್‌ಗೆ ವಿಸ್ತರಿಸುವ ಯೋಜನೆ ಇದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ದೀರ್ಘಾವಧಿಯಲ್ಲಿ ರಾಜ್ಯದ ಒಟ್ಟು ಉತ್ಪಾದನೆಯನ್ನು 50 ಮೆಟ್ರಿಕ್ ಟನ್‌ಗೆ ಕೊಂಡೊಯ್ಯುವ ಗುರಿ ಘೋಷಿಸಿದ್ದಾರೆ.
  • ಉದ್ಯೋಗಾವಕಾಶ: ಈ ಯೋಜನೆಯಿಂದ ಸ್ಥಳೀಯವಾಗಿ ಸುಮಾರು 700 ನೇರ ಹಾಗೂ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಲ್ಲಿ ಶೇಕಡಾ 80 ರಷ್ಟು ಉದ್ಯೋಗಗಳನ್ನು ಸ್ಥಳೀಯ ಯುವಕರು ಮತ್ತು ಮಹಿಳೆಯರಿಗೆ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಸ್ಥಳೀಯರಿಗೆ ತರಬೇತಿ ನೀಡಲಾಗುತ್ತಿದೆ.
  • ಸರ್ಕಾರಕ್ಕೆ ಆದಾಯ: ಚಿನ್ನದ ಉತ್ಪಾದನೆಯಿಂದ ಆಂಧ್ರಪ್ರದೇಶ ಸರ್ಕಾರಕ್ಕೆ ಶೇಕಡಾ 4 ರಷ್ಟು ರಾಯಲ್ಟಿ ಸಿಗಲಿದೆ. ಆರಂಭಿಕ ಹಂತದಲ್ಲೇ ವಾರ್ಷಿಕ 57 ಕೋಟಿ ರೂಪಾಯಿ ಆದಾಯ ಬರಲಿದ್ದು, ಉತ್ಪಾದನೆ 900 ಕೆಜಿಗೆ ಏರಿಕೆಯಾದಾಗ ರಾಜ್ಯ ಸರ್ಕಾರದ ಆದಾಯ ವಾರ್ಷಿಕ 144 ಕೋಟಿ ರೂಪಾಯಿಗೆ ತಲುಪಲಿದೆ.
  • ಸ್ಥಳೀಯ ಜ್ಯುವೆಲ್ಲರಿ ಪಾರ್ಕ್: ಗಣಿಯಿಂದ ಹೊರತೆಗೆಯಲಾದ ಚಿನ್ನವನ್ನು ಬೇರೆ ರಾಜ್ಯಗಳಿಗೆ ಕಳುಹಿಸುವ ಬದಲಾಗಿ, ಸ್ಥಳೀಯ ಚಿನ್ನದ ವ್ಯಾಪಾರಿಗಳಿಗೆ ಮಾತ್ರ ಮಾರಾಟ ಮಾಡಲು ಕಂಪನಿ ನಿರ್ಧರಿಸಿದೆ. ಜೊತೆಗೆ ಸ್ವರ್ಣಗಿರಿಯಲ್ಲೇ ಅತ್ಯಾಧುನಿಕ ‘ಜ್ಯುವೆಲ್ಲರಿ ಮ್ಯಾನುಫ್ಯಾಕ್ಚರಿಂಗ್ ಪಾರ್ಕ್’ ಸ್ಥಾಪಿಸುವುದಾಗಿ ಸಿಎಂ ಘೋಷಿಸಿದ್ದಾರೆ.

ಐತಿಹಾಸಿಕ ಹಿನ್ನೆಲೆ: ಸ್ವರ್ಣಗಿರಿ (ಜೊನ್ನಗಿರಿ) ಪ್ರದೇಶವು ಇಂದಿನದ್ದಲ್ಲ. ಮೂರನೇ ಶತಮಾನದಲ್ಲೇ ಅಂದರೆ ಸಾಮ್ರಾಟ್ ಅಶೋಕನ ಆಳ್ವಿಕೆಯ ಕಾಲದಲ್ಲಿ ಮತ್ತು ನಂತರ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಇದು ಪ್ರಮುಖ ಚಿನ್ನದ ಉತ್ಪಾದನಾ ಕೇಂದ್ರವಾಗಿತ್ತು ಎಂಬುದಕ್ಕೆ ಇಲ್ಲಿನ ಮೌರ್ಯರ ಕಾಲದ ಶಾಸನಗಳು ಸಾಕ್ಷಿಯಾಗಿವೆ. ಈಗ 2000 ವರ್ಷಗಳ ನಂತರ ಆಧುನಿಕ ತಂತ್ರಜ್ಞಾನದೊಂದಿಗೆ ಈ ಗಣಿಗೆ ಮರುಜೀವ ನೀಡಲಾಗಿದೆ.

ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

ಭಾರತದ ಬಿಗ್ ಡಿಪ್ಲೋಮ್ಯಾಟಿಕ್ ವಿನ್: ತಲೆಮರೆಸಿಕೊಂಡಿದ್ದ ನಿರವ್ ಮೋದಿಗೆ ಲಂಡನ್‌ನಲ್ಲಿ ಭಾರಿ ಆಘಾತ, ಬ್ಯಾಂಕ್ ಆಫ್ ಇಂಡಿಯಾಗೆ ₹100 ಕೋಟಿ ಕಟ್ಟಲು ಆದೇಶ.

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ

ಇತಿಹಾಸ ಸೃಷ್ಟಿಸಿದ ಆಂಧ್ರಪ್ರದೇಶ: ಭಾರತದ ಮೊದಲ ಖಾಸಗಿ ಚಿನ್ನದ ಗಣಿ ‘ಸ್ವರ್ಣಗಿರಿ’ ಅಧಿಕೃತವಾಗಿ ಆರಂಭ! | ಈಕ್ಷಣ