₹4.65 ಲಕ್ಷ ಕೋಟಿ ಟಾರ್ಗೆಟ್! ಭಾರತ–ಕೆನಡಾ CEPA 5ನೇ ಸುತ್ತು ಇಂದು; ಏನೆಲ್ಲ ಚರ್ಚೆ?
ವರದಿಗಾರರು (Reporter)
Shreeja Rakshith04:26 PM IST

ನವದೆಹಲಿ/ಒಟ್ಟಾವಾ: ಹಲವು ವರ್ಷಗಳ ರಾಜತಾಂತ್ರಿಕ ಏರಿಳಿತಗಳ ಬಳಿಕ ಭಾರತ ಮತ್ತು ಕೆನಡಾ ನಡುವಿನ ಆರ್ಥಿಕ ಸಂಬಂಧಕ್ಕೆ ಮತ್ತೆ ವೇಗ ನೀಡುವ ಪ್ರಯತ್ನ ಮುಂದುವರಿದಿದೆ. ಇದರ ಭಾಗವಾಗಿ ಉಭಯ ದೇಶಗಳು ಇಂದು, ಅಕ್ಟೋಬರ್ 5 ರಿಂದ ಕೆನಡಾದ ಒಟ್ಟಾವಾದಲ್ಲಿ ಪ್ರಸ್ತಾವಿತ Comprehensive Economic Partnership Agreement (CEPA) ಕುರಿತು 5 ನೇ ಸುತ್ತಿನ ಮಾತು ಕತೆ ಆರಂಭಿಸುತ್ತಿವೆ. ಐದು ದಿನಗಳ ಈ ಮಾತುಕತೆ ಅಕ್ಟೋಬರ್ 9ರವರೆಗೆ ನಡೆಯಲಿದ್ದು, 2026ರ ಅಂತ್ಯದೊಳಗೆ ಒಪ್ಪಂದವನ್ನು ಅಂತಿಮಗೊಳಿಸುವ ಗುರಿಯನ್ನು ಎರಡೂ ದೇಶಗಳು ಹೊಂದಿವೆ.
ಈ ಮಾತುಕತೆ ಕೇವಲ ಮತ್ತೊಂದು ವ್ಯಾಪಾರ ಒಪ್ಪಂದದ ಸುತ್ತಿನ ಚರ್ಚೆಯಲ್ಲ. ಇತ್ತೀಚಿನ ವರ್ಷಗಳಲ್ಲಿ ರಾಜತಾಂತ್ರಿಕ ಸಂಬಂಧಗಳಲ್ಲಿ ಉಂಟಾಗಿದ್ದ ಬಿರುಕುಗಳ ನಂತರ ಭಾರತ–ಕೆನಡಾ ಸಂಬಂಧವನ್ನು ಆರ್ಥಿಕ ಸಹಕಾರದ ಮೂಲಕ ಮತ್ತಷ್ಟು ಬಲಪಡಿಸುವ ಪ್ರಯತ್ನ ಇದಾಗಿದೆ. ವಿಶೇಷವಾಗಿ ವ್ಯಾಪಾರ, ಇಂಧನ, ಪ್ರಮುಖ ಖನಿಜಗಳು, ತಂತ್ರಜ್ಞಾನ, ಸೇವೆಗಳು, ಹೂಡಿಕೆ ಮತ್ತು ವೃತ್ತಿಪರರ ಸಂಚಾರ ದಂತಹ ಕ್ಷೇತ್ರಗಳಲ್ಲಿ ಮುಂದಿನ ಹಂತದ ಸಹಕಾರಕ್ಕೆ ಈ CEPA ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ.
5ನೇ ಸುತ್ತಿನ ಮಾತುಕತೆ ಏಕೆ ಮಹತ್ವದ್ದು?
ಭಾರತ ಮತ್ತು ಕೆನಡಾ ನಡುವಿನ CEPA ಮಾತುಕತೆಗಳು ಮೊದಲ ಬಾರಿಗೆ 2015ರಲ್ಲಿ ಆರಂಭವಾಗಿದ್ದವು. 2015ರಿಂದ 2017ರ ನಡುವೆ ಹಲವು ಸುತ್ತಿನ ಚರ್ಚೆಗಳು ನಡೆದಿದ್ದರೂ, ನಂತರ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಬಳಿಕ ಉಭಯ ದೇಶಗಳು 2025ರ ನವೆಂಬರ್‌ನಲ್ಲಿ ಮತ್ತೆ ಔಪಚಾರಿಕ ಮಾತುಕತೆಗಳನ್ನು ಆರಂಭಿಸಲು ಒಪ್ಪಿಕೊಂಡವು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರ ನಡುವೆ ನಡೆದ ಉನ್ನತ ಮಟ್ಟದ ಮಾತುಕತೆಗಳ ಬಳಿಕ ದ್ವಿಪಕ್ಷೀಯ ಆರ್ಥಿಕ ಸಂಬಂಧಕ್ಕೆ ಮತ್ತೆ ಚೈತನ್ಯ ದೊರೆಯಿತು.
ಈಗಾಗಲೇ ನಾಲ್ಕನೇ ಸುತ್ತಿನ ಮಾತುಕತೆ ನವದೆಹಲಿಯಲ್ಲಿ ಸೆಪ್ಟೆಂಬರ್18 ರಂದು ಮುಕ್ತಾಯ ಗೊಂಡಿದೆ. ಅದರ ಬೆನ್ನಲ್ಲೇ ಐದನೇ ಸುತ್ತನ್ನು ಒಟ್ಟಾವಾದಲ್ಲಿ ನಡೆಸಲಾಗುತ್ತಿದೆ. ಅಂದರೆ, ಎರಡೂ ದೇಶಗಳು ಚರ್ಚೆಯನ್ನು ವೇಗಗೊಳಿಸಿ ಈ ವರ್ಷದ ಅಂತ್ಯದೊಳಗೆ ಒಪ್ಪಂದದತ್ತ ಸಾಗಲು ಪ್ರಯತ್ನಿಸುತ್ತಿವೆ.
CEPA ಎಂದರೇನು?
CEPA ಎಂದರೆ Comprehensive Economic Partnership Agreement, ಅಂದರೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ. ಸಾಮಾನ್ಯವಾಗಿ ಇಂತಹ ಒಪ್ಪಂದದ ಮೂಲಕ ಎರಡು ದೇಶಗಳು ಪರಸ್ಪರ ವ್ಯಾಪಾರ ಮಾಡುವ ಸರಕುಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವುದು ಅಥವಾ ಹಂತ ಹಂತವಾಗಿ ತೆಗೆದುಹಾಕುವುದು, ಸೇವಾ ಕ್ಷೇತ್ರಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವುದು, ಹೂಡಿಕೆಯನ್ನು ಉತ್ತೇಜಿಸುವುದು ಮತ್ತು ವೃತ್ತಿಪರರ ಸಂಚಾರವನ್ನು ಸುಗಮಗೊಳಿಸುವಂತಹ ಕ್ರಮಗಳನ್ನು ಕೈಗೊಳ್ಳುತ್ತವೆ.
ಹೀಗಾಗಿ ಭಾರತ–ಕೆನಡಾ CEPA ಜಾರಿಗೆ ಬಂದರೆ ಅದರ ಪರಿಣಾಮ ಕೇವಲ ಆಮದು–ರಫ್ತು ಕಂಪನಿಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ಔಷಧ, ಉಕ್ಕು, ಸಮುದ್ರ ಉತ್ಪನ್ನಗಳು, ಬಟ್ಟೆ, ಎಲೆಕ್ಟ್ರಾನಿಕ್ಸ್, ರಾಸಾಯನಿಕಗಳು ಸೇರಿದಂತೆ ಭಾರತದ ಹಲವು ರಫ್ತು ಕ್ಷೇತ್ರಗಳಿಗೆ ಕೆನಡಾ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ಸಿಗಬಹುದು. ಮತ್ತೊಂದೆಡೆ, ಕೆನಡಾದಿಂದ ಭಾರತಕ್ಕೆ ಬೇಳೆಕಾಳುಗಳು, ಕಲ್ಲಿದ್ದಲು, ರಸಗೊಬ್ಬರ, ಕಾಗದ, ಕಚ್ಚಾ ತೈಲ ಸೇರಿದಂತೆ ಹಲವು ಉತ್ಪನ್ನಗಳ ಆಮದು ನಡೆಯುತ್ತಿದೆ.
ಇಂಧನ, ಪ್ರಮುಖ ಖನಿಜಗಳತ್ತ ಭಾರತದ ಗಮನ
ಈ ಸುತ್ತಿನ ಮಾತುಕತೆಯಲ್ಲಿ ಇಂಧನಮತ್ತುcritical minerals ಪ್ರಮುಖ ವಿಷಯಗಳಾಗುವ ಸಾಧ್ಯತೆಯಿದೆ. ಭಾರತದ ಕೈಗಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಅಗತ್ಯವಿರುವ ಪ್ರಮುಖ ಖನಿಜಗಳ ಪೂರೈಕೆ ಸರಪಳಿಯನ್ನು ವೈವಿಧ್ಯಗೊಳಿಸುವುದು ಈಗ ಪ್ರಮುಖ ಆರ್ಥಿಕ ಆದ್ಯತೆಯಾಗಿದೆ.
ಕೆನಡಾ ಕೂಡ ಭಾರತದಿಂದ ಹೂಡಿಕೆಯನ್ನು ಆಕರ್ಷಿಸಲು ಆಸಕ್ತಿ ಹೊಂದಿದೆ. ವಿಶೇಷವಾಗಿ ಗಣಿಗಾರಿಕೆ ಮತ್ತು ಇಂಧನ ಯೋಜನೆಗಳಲ್ಲಿ ಭಾರತೀಯ ಕಂಪನಿಗಳ ಭಾಗವಹಿಸುವಿಕೆಗೆ ಅವಕಾಶಗಳನ್ನು ಹೆಚ್ಚಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಮಾರ್ಚ್‌ನಲ್ಲಿ ಭಾರತ ಮತ್ತು ಕೆನಡಾ ಪ್ರಮುಖ ಖನಿಜಗಳ ಕುರಿತು ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದ ಮಾಡಿಕೊಂಡಿದ್ದವು. ಇದರ ವ್ಯಾಪ್ತಿಯಲ್ಲಿ ಅನ್ವೇಷಣೆ, ಗಣಿಗಾರಿಕೆ, ಸಂಸ್ಕರಣೆ, ಹೂಡಿಕೆ ಮತ್ತು ತಾಂತ್ರಿಕ ಸಹಕಾರದಂತಹ ಕ್ಷೇತ್ರಗಳು ಸೇರಿವೆ.
ಇದರ ಜೊತೆಗೆ, ಕೆನಡಾದ Cameco ಮತ್ತು ಭಾರತದ Department of Atomic Energy ನಡುವೆ ದೀರ್ಘಾವಧಿಯ ಯುರೇನಿಯಂ ಪೂರೈಕೆಗೆ ಸಂಬಂಧಿಸಿದ C$2.6 ಬಿಲಿಯನ್ ಒಪ್ಪಂದಕ್ಕೂ ಮಹತ್ವವಿದೆ. ಇಂಧನ ಭದ್ರತೆಯ ದೃಷ್ಟಿಯಿಂದ ಇಂತಹ ಸಹಕಾರ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಿಸುವ ಸಾಧ್ಯತೆಯಿದೆ.
ವ್ಯಾಪಾರದ ಪ್ರಮಾಣ ಎಷ್ಟು?
ಭಾರತ ಮತ್ತು ಕೆನಡಾ ನಡುವಿನ ವ್ಯಾಪಾರಕ್ಕೆ ಇನ್ನೂ ದೊಡ್ಡ ಸಾಮರ್ಥ್ಯವಿದೆ. ಭಾರತದ ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2025ರಲ್ಲಿಉಭಯ ದೇಶಗಳ ಒಟ್ಟು ವ್ಯಾಪಾರ ಸುಮಾರು30.4 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿತ್ತು. ಎರಡೂ ದೇಶಗಳು 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 70 ಬಿಲಿಯನ್ ಡಾಲರ್ ಗೆ ಹೆಚ್ಚಿಸುವ ಗುರಿ ಹೊಂದಿವೆ.
ಆದರೆ 2025–26ರ ಸರಕು ವ್ಯಾಪಾರದ ಅಂಕಿಅಂಶ ನೋಡಿದರೆ ಒಟ್ಟು ವಹಿವಾಟಿನಲ್ಲಿ ಇಳಿಕೆ ಕಂಡುಬಂದಿದೆ. ಆ ಅವಧಿಯಲ್ಲಿ ಸರಕು ವ್ಯಾಪಾರ ಸುಮಾರು 7.95 ಬಿಲಿಯನ್ಡಾಲರ್ ಆಗಿದ್ದು, ಹಿಂದಿನ ಹಣಕಾಸು ವರ್ಷದ 8.7 ಬಿಲಿಯನ್ ಡಾಲರ್‌ಗೆ ಹೋಲಿಸಿದರೆ 8.23% ಕುಸಿತ ಕಂಡಿದೆ. ಇದೇ ಅವಧಿಯಲ್ಲಿ ಭಾರತದ ಕೆನಡಾಕ್ಕೆ ರಫ್ತು 10.63% ಏರಿಕೆಯಾಗಿ 4.67 ಬಿಲಿಯನ್ಡಾಲರ್ ತಲುಪಿದ್ದರೆ, ಕೆನಡಾದಿಂದ ಭಾರತದ ಆಮದು 26.14% ಇಳಿದು 3.28 ಬಿಲಿಯನ್ಡಾಲರ್ ಆಗಿದೆ.
ಹೀಗಾಗಿ CEPAಯ ಪ್ರಮುಖ ಉದ್ದೇಶಗಳಲ್ಲಿ ಒಂದೆಂದರೆ ಈಗಿರುವ ವ್ಯಾಪಾರ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವುದು.
ಸೇವಾ ಕ್ಷೇತ್ರಕ್ಕೂ ದೊಡ್ಡ ಅವಕಾಶ
ಸರಕು ವ್ಯಾಪಾರದ ಜೊತೆಗೆ ಸೇವಾಕ್ಷೇತ್ರ ಕೂಡ CEPA ಮಾತುಕತೆಯ ಪ್ರಮುಖ ಭಾಗವಾಗಿದೆ. ಭಾರತದಿಂದ ಕೆನಡಾಕ್ಕೆ ದೂರಸಂಪರ್ಕ, ಕಂಪ್ಯೂಟರ್ ಮತ್ತು ಮಾಹಿತಿ ಸೇವೆಗಳು ಹಾಗೂ ಇತರ ವ್ಯವಹಾರ ಸೇವೆಗಳ ರಫ್ತು ನಡೆಯುತ್ತಿದೆ. ಹೀಗಾಗಿ ಭಾರತೀಯ ಐಟಿ ಮತ್ತು ವೃತ್ತಿಪರ ಸೇವಾ ಕಂಪನಿಗಳಿಗೆ ಕೆನಡಾದ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ಸೃಷ್ಟಿಸುವ ವಿಚಾರ ಮಹತ್ವ ಪಡೆಯಬಹುದು.
ಇದರ ಜೊತೆಗೆ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು skilled workersಗೆ ಸಂಬಂಧಿಸಿದ mobility ವಿಷಯವೂ ದ್ವಿಪಕ್ಷೀಯ ಸಂಬಂಧದಲ್ಲಿ ಪ್ರಮುಖವಾಗಿದೆ. ಕೆನಡಾದಲ್ಲಿ ಸುಮಾರು 29 ಲಕ್ಷ ಭಾರತೀಯ ಮೂಲದ ಜನರು ಮತ್ತು 4.27 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಇರುವುದರಿಂದ ಜನ-ಜನ ಸಂಪರ್ಕವೂ ಈ ಸಂಬಂಧದ ದೊಡ್ಡ ಭಾಗವಾಗಿದೆ.
ಮೋದಿ–ಕಾರ್ನಿ ಭೇಟಿಯ ಬಳಿಕ ವೇಗ
ಈ CEPA ಮಾತುಕತೆಗಳ ಮತ್ತೊಂದು ಮಹತ್ವದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರ ನಡುವಿನ ಇತ್ತೀಚಿನ ಸಂವಹನವಾಗಿದೆ. 2025ರ G7 ಶೃಂಗಸಭೆಯ ಸಂದರ್ಭದಲ್ಲಿ ಇಬ್ಬರು ನಾಯಕರು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧವನ್ನು ಪುನರ್‌ನಿರ್ಮಿಸುವ ಬಗ್ಗೆ ಚರ್ಚಿಸಿದ್ದರು. ನಂತರ ವ್ಯಾಪಾರ ಮಾತುಕತೆಗಳನ್ನು ಪುನರಾರಂಭಿಸುವ ನಿರ್ಧಾರಕ್ಕೆ ವೇಗ ದೊರೆಯಿತು.
ಮುಂದಿನ ದಿನಗಳಲ್ಲಿ ಕೆನಡಾದ ಅಂತಾರಾಷ್ಟ್ರೀಯ ವ್ಯಾಪಾರ ಸಚಿವ ಮ್ಯಾನಿಂದರ್ಸಿಧು 300ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳ ನಿಯೋಗದೊಂದಿಗೆ ನವದೆಹಲಿಗೆ ಭೇಟಿ ನೀಡುವ ಕಾರ್ಯಕ್ರಮವೂ ಇದೆ. ಇದು ಮಾತುಕತೆ ಕೇವಲ ಸರ್ಕಾರಿ ಮಟ್ಟಕ್ಕೆ ಸೀಮಿತವಾಗದೆ ಉದ್ಯಮ ಮತ್ತು ಹೂಡಿಕೆ ಕ್ಷೇತ್ರಗಳಿಗೂ ವಿಸ್ತರಿಸುತ್ತಿರುವುದನ್ನು ಸೂಚಿಸುತ್ತದೆ.
ಮುಂದೆ ಏನಾಗಲಿದೆ?
ಅಕ್ಟೋಬರ್ 5ರಿಂದ 9ರವರೆಗೆ ನಡೆಯಲಿರುವ ಐದನೇ ಸುತ್ತಿನಲ್ಲಿ ಹಲವು ಸೂಕ್ಷ್ಮ ಮತ್ತು ಪ್ರಮುಖ ವಿಷಯಗಳ ಕುರಿತು ಮಾತುಕತೆ ನಡೆಯಲಿದೆ. ಸರಕುಗಳ ಮೇಲಿನ ಸುಂಕ, ಸೇವಾ ಮಾರುಕಟ್ಟೆ ಪ್ರವೇಶ, ಹೂಡಿಕೆ, ಇಂಧನ, ಪ್ರಮುಖ ಖನಿಜಗಳು, ವಿಮಾನಯಾನ ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎರಡೂ ದೇಶಗಳು ತಮ್ಮ ಹಿತಾಸಕ್ತಿಗಳನ್ನು ಸಮತೋಲನ ಗೊಳಿಸಬೇಕಿದೆ. ಕೆನಡಾ ಇಂಧನ, critical minerals, aerospace ಮತ್ತು artificial intelligence ಕ್ಷೇತ್ರಗಳಲ್ಲಿ ಭಾರತದೊಂದಿಗೆ ಸಹಕಾರ ವಿಸ್ತರಿಸಲು ಆಸಕ್ತಿ ತೋರಿಸಿದೆ.
ಹೀಗಾಗಿ ಈ ಐದನೇ ಸುತ್ತಿನ ಮಾತುಕತೆಯ ಫಲಿತಾಂಶ ಮುಂದಿನ ಚರ್ಚೆಗಳ ವೇಗವನ್ನು ನಿರ್ಧರಿಸಬಹುದು. ಎರಡೂ ದೇಶಗಳು 2026ರ ಅಂತ್ಯದೊಳಗೆ CEPA ಪೂರ್ಣಗೊಳಿಸುವ ಗುರಿ ಹೊಂದಿದ್ದರೂ, ಅಂತಿಮ ಒಪ್ಪಂದಕ್ಕೆ ತಲುಪಲು ಉಳಿದಿರುವ ಸೂಕ್ಷ್ಮ ವಿಷಯಗಳ ಕುರಿತು ಒಮ್ಮತ ಸಾಧಿಸುವುದು ಮುಖ್ಯವಾಗಲಿದೆ.
ಒಟ್ಟಿನಲ್ಲಿ, ಭಾರತ–ಕೆನಡಾCEPA ಕೇವಲ ತೆರಿಗೆ ಮತ್ತುಸುಂಕ ಕಡಿತದ ಒಪ್ಪಂದವಲ್ಲ; ಇದು ಎರಡೂ ದೇಶಗಳ ವ್ಯಾಪಾರ, ಹೂಡಿಕೆ, ಇಂಧನ ಭದ್ರತೆ, ತಂತ್ರಜ್ಞಾನ ಮತ್ತು ಜನ-ಜನ ಸಂಪರ್ಕಕ್ಕೆ ಹೊಸ ದಿಕ್ಕು ನೀಡುವ ಪ್ರಯತ್ನವಾಗಿದೆ . 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 70 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿಯ ಹಿನ್ನೆಲೆಯಲ್ಲಿ, ಒಟ್ಟಾವಾದಲ್ಲಿ ಆರಂಭವಾಗುತ್ತಿರುವ ಐದನೇ ಸುತ್ತಿನ ಮಾತುಕತೆ ಮೇಲೆ ಇದೀಗ ಉದ್ಯಮ ವಲಯದಿಂದ ಹಿಡಿದು ರಫ್ತುದಾರರು ಮತ್ತು ಉದ್ಯೋಗಾಕಾಂಕ್ಷಿಗಳವರೆಗೆ ಹಲವು ವಲಯಗಳ ಗಮನ ನೆಟ್ಟಿದೆ.
ಮುಂದಿನ ಐದು ದಿನಗಳ ಚರ್ಚೆಯಲ್ಲಿ ಯಾವ ಕ್ಷೇತ್ರಗಳಲ್ಲಿ ಒಪ್ಪಂದದ ಹತ್ತಿರ ಬರಲಾಗುತ್ತದೆ ಮತ್ತು ಯಾವ ವಿಷಯಗಳು ಇನ್ನೂ ಬಾಕಿ ಉಳಿಯುತ್ತವೆ ಎಂಬುದು ಭಾರತ–ಕೆನಡಾ ಆರ್ಥಿಕ ಸಂಬಂಧದ ಮುಂದಿನ ಹಂತವನ್ನು ನಿರ್ಧರಿಸಲಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
KPSC ವಿಳಂಬದ ನಡುವೆ KEA ಸ್ಪೀಡ್! 4 ತಿಂಗಳಲ್ಲಿ 7,905 ನೇಮಕಾತಿ; ಉದ್ಯೋಗಾಕಾಂಕ್ಷಿಗಳಿಗೆ ಸಿಕ್ಕ ಸಂದೇಶವೇನು?
ಅಮೆರಿಕದ $20,000 Visa Bond: ಭಾರತಕ್ಕೆ ವಿನಾಯಿತಿ; ಭಾರತೀಯರಿಗೆ ಏನು ಬದಲಾವಣೆ?
ಜೀವಂತವಾಗಿದ್ದರೂ ಮತದಾರರ ಪಟ್ಟಿಯಲ್ಲಿ ‘ಸತ್ತವರು’! ಕರ್ನಾಟಕದಲ್ಲಿ ಪರಿಶೀಲನೆ ವೇಳೆ ಬಯಲಾದ ಶಾಕಿಂಗ್ ಸಂಗತಿ.