ಕರ್ನಾಟಕ ಸುದ್ದಿ

ಬೆಂಗಳೂರು-ಮೈಸೂರು ನೈಸ್ ರಸ್ತೆ ಅಕ್ರಮ: ಡಿ.ಕೆ. ಶಿವಕುಮಾರ್ ವಿರುದ್ಧ ಸಮರ ಸಾರಿದ ಹೆಚ್.ಡಿ.ಕೆ.

Hemanth Rajashekar

ವರದಿಗಾರರು (Reporter)

Hemanth Rajashekar

05:46 AM IST

ಬೆಂಗಳೂರು-ಮೈಸೂರು ನೈಸ್ ರಸ್ತೆ ಅಕ್ರಮ: ಡಿ.ಕೆ. ಶಿವಕುಮಾರ್ ವಿರುದ್ಧ ಸಮರ ಸಾರಿದ ಹೆಚ್.ಡಿ.ಕೆ.

ಬೆಂಗಳೂರು: ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕ್ಯಾರಿಡಾರ್ (BMICP) ಯೋಜನೆಯ ಅನುಷ್ಠಾನದಲ್ಲಿ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE) ಸಂಸ್ಥೆಯು ಎಸಗಿರುವ ಭಾರೀ ಅಕ್ರಮಗಳು ಹಾಗೂ ಈ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಷ್ಕ್ರಿಯತೆಯನ್ನು ಖಂಡಿಸಿ, ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ 6 ಪುಟಗಳ ಬಹಿರಂಗ ಪತ್ರ ಬರೆದಿದ್ದಾರೆ.

ದಿನಾಂಕ 15-08-2026 ರಂದು ಬರೆದಿರುವ ಈ ಪತ್ರದಲ್ಲಿ, ಕರ್ನಾಟಕ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ದಿನಾಂಕ 29-07-2026 ರಂದು ನೀಡಿರುವ ಮಹತ್ವದ ತೀರ್ಪನ್ನು ಉಲ್ಲೇಖಿಸಿ, ನೈಸ್ ಸಂಸ್ಥೆಯ ವಿರುದ್ಧ ಸರ್ಕಾರ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಹೈಕೋರ್ಟ್‌ ಚಾಟಿ: “ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣ”

ಕರ್ನಾಟಕ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ತನ್ನ ತೀರ್ಪಿನಲ್ಲಿ “ಬಿಎಂಐಸಿಪಿ (BMICP) ಯೋಜನೆಯು ಕರ್ನಾಟಕ ರಾಜ್ಯದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿರಬಹುದು” ಎಂದು ಕಠಿಣವಾಗಿ ಅಭಿಪ್ರಾಯಪಟ್ಟಿದೆ. ನೈಸರ್ಗಿಕ ಸಂಪನ್ಮೂಲಗಳ ಟ್ರಸ್ಟಿಯಾಗಿರಬೇಕಾದ ಸರ್ಕಾರವು, ಸಾರ್ವಜನಿಕ ಹಿತಾಸಕ್ತಿ ಹಾಗೂ ಪರಿಸರವನ್ನು ಗಾಳಿಗೆ ತೂರಿ ಖಾಸಗಿ ಸಂಸ್ಥೆಯ ಹಿತಾಸಕ್ತಿಗೆ ಮಣೆ ಹಾಕಿರುವುದನ್ನು ನ್ಯಾಯಾಲಯ ತೀವ್ರವಾಗಿ ತಪರಾಕಿ ಹಾಕಿದೆ.

ಅಷ್ಟೇ ಅಲ್ಲದೆ, “ಭೂಮಿ ಮತ್ತು ಜೀವನಾಧಾರ ಕಳೆದುಕೊಂಡ ರೈತರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಸಂವಿಧಾನದ ವಿಧಿ 300A ಅಡಿಯಲ್ಲಿ ಸಿಗಬೇಕಾದ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ನೈಸ್ ಯೋಜನೆಯಲ್ಲಿ ನೈಸ್ (ಉತ್ತಮ) ಎನ್ನುವುದು ಏನೂ ಇಲ್ಲ” ಎಂದು ನ್ಯಾಯಾಲಯದ ಪೀಠ ಗಂಭೀರವಾಗಿ ಟೀಕಿಸಿದೆ.

ಒಪ್ಪಂದ ಉಲ್ಲಂಘನೆ ಮತ್ತು ಹೆಚ್ಚುವರಿ ಭೂಮಿ ದುರ್ಬಳಕೆ

1997ರ ಮೂಲ ಫ್ರೇಮ್ ವರ್ಕ್ ಅಗ್ರಿಮೆಂಟ್ (FWA) ಪ್ರಕಾರ ನೈಸ್ ಸಂಸ್ಥೆಗೆ ಮೂಲಸೌಕರ್ಯ ಹಾಗೂ 5 ಉಪನಗರಗಳ (Townships) ನಿರ್ಮಾಣಕ್ಕೆ ಒಟ್ಟು 20,193 ಎಕರೆ ಭೂಮಿಯನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ ಬಿಡದಿ, ರಾಮನಗರ ಹಾಗೂ ಶ್ರೀರಂಗಪಟ್ಟಣ ಭಾಗಗಳಲ್ಲಿ ಉಪನಗರಗಳಿಗೆ 13,194 ಎಕರೆ ಹಾಗೂ 111 ಕಿ.ಮೀ ಎಕ್ಸ್‌ಪ್ರೆಸ್‌ವೇ ಸೇರಿ ರಸ್ತೆ ನಿರ್ಮಾಣಕ್ಕೆ ಭೂಮಿ ಭೂಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿತ್ತು.

ಆದರೆ, ನೈಸ್ ಸಂಸ್ಥೆಯು 111 ಕಿ.ಮೀ ಎಕ್ಸ್‌ಪ್ರೆಸ್‌ವೇ ಪೈಕಿ ಕೇವಲ 5 ಕಿ.ಮೀ ರಸ್ತೆಯನ್ನು ಮಾತ್ರ ನಿರ್ಮಿಸಿದೆ. ನಿಗದಿತ ಕಾಲಮಿತಿಯೊಳಗೆ (2012 ಹಾಗೂ 2014 ರೊಳಗೆ) ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸದೆ, ಹೆಚ್ಚುವರಿ ಭೂಮಿಯನ್ನು ಪಡೆದು ರಿಯಲ್ ಎಸ್ಟೇಟ್ (Joint Development Agreement) ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಸಚಿವ ಸಂಪುಟದ ಉಪ-ಸಮಿತಿ ಹಾಗೂ ನ್ಯಾಯಾಲಯದ ವರದಿಗಳನ್ನು ಉಲ್ಲೇಖಿಸಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಅನಧಿಕೃತ ಟೋಲ್ ಸಂಗ್ರಹ ಮತ್ತು ರೈತರ ಶೋಷಣೆ

ಸಂಸ್ಥೆಯು 20,000 ಎಕರೆಗೂ ಹೆಚ್ಚು ಭೂಮಿಯನ್ನು ತನ್ನ ವಶದಲ್ಲಿಟ್ಟುಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. 2011ರ ನಂತರ ರಾಜ್ಯ ಸರ್ಕಾರದ ಯಾವುದೇ ಅಧಿಕೃತ ಅಧಿಸೂಚನೆ ಇಲ್ಲದೆ ಅನಧಿಕೃತವಾಗಿ ಟೋಲ್ ದರಗಳನ್ನು ಹೆಚ್ಚಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದೆ.

ಕೆ.ಐ.ಎ.ಡಿ.ಬಿ (KIADB) ಕಾಯ್ದೆ ಸೆಕ್ಷನ್ 28(1) ಅಡಿಯಲ್ಲಿ ಭೂಸ್ವಾಧೀನದ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರ, ವರ್ಷಗಳ ಕಾಲ ಅಂತಿಮ ಅಧಿಸೂಚನೆ ಹೊರಡಿಸದೆ ಅಥವಾ ಪರಿಹಾರ ನೀಡದೆ ಸಾವಿರಾರು ರೈತರನ್ನು ತ್ರಿಸಂಕು ಸ್ಥಿತಿಯಲ್ಲಿಡಲಾಗಿದೆ. ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ನೀಡಬೇಕಿದ್ದ ವಸತಿ ಸಮುಚ್ಚಯಗಳನ್ನು ನಿರ್ಮಿಸದೆ ವಂಚಿಸಲಾಗಿದೆ.

ಹೆಚ್.ಡಿ. ಕುಮಾರಸ್ವಾಮಿ ಅವರ ಪ್ರಮುಖ ಬೇಡಿಕೆಗಳು:

  • ಟೋಲ್ ವಶಕ್ಕೆ ಪಡೆಯುವುದು: FWA ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವ ನೈಸ್ ಸಂಸ್ಥೆಯ ಟೋಲ್ ಸಂಗ್ರಹವನ್ನು ತಕ್ಷಣವೇ ರದ್ದುಗೊಳಿಸಿ, ರಸ್ತೆಯನ್ನು ಸರ್ಕಾರವೇ ತನ್ನ ಸುಪರ್ದಿಗೆ ಪಡೆಯಬೇಕು.
  • ಹೆಚ್ಚುವರಿ ಭೂಮಿ ವಾಪಸ್: ನೈಸ್ ಸಂಸ್ಥೆ ಹಾಗೂ ಕೆ.ಐ.ಎ.ಡಿ.ಬಿ ವಶದಲ್ಲಿರುವ 554 ಎಕರೆ ಹೆಚ್ಚುವರಿ ಭೂಮಿ ಸೇರಿದಂತೆ ಯೋಜನೇತರ ಉದ್ದೇಶಕ್ಕೆ ಬಳಸಲಾದ ಎಲ್ಲಾ ಭೂಮಿಯನ್ನು ತಕ್ಷಣವೇ ವಾಪಸ್ ಪಡೆಯಬೇಕು.
  • ರೈತರಿಗೆ ಪರಿಹಾರ ಹಾಗೂ ಭೂಮಿ ಬಿಡುಗಡೆ: ಅನಗತ್ಯವಾಗಿ ಭೂಸ್ವಾಧೀನ ಅಧಿಸೂಚನೆಯಲ್ಲಿ ಸಿಲುಕಿರುವ ರೈತರ ಜಮೀನುಗಳನ್ನು ತಕ್ಷಣ ಬಿಡುಗಡೆಗೊಳಿಸಿ, ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು.
  • ಯೋಜನೆ ರದ್ಧತಿ ಹಾಗೂ ಕ್ರಿಮಿನಲ್ ಕ್ರಮ: ಹೈಕೋರ್ಟ್ ನಿರ್ದೇಶನದಂತೆ ಟಿ.ಬಿ. ಜಯಚಂದ್ರ ಅಧ್ಯಕ್ಷತೆಯ ಸದನ ಸಮಿತಿ ವರದಿ ಮತ್ತು ಸಚಿವ ಸಂಪುಟ ಉಪಸಮಿತಿಯ ಶಿಫಾರಸುಗಳನ್ನು ಜಾರಿಗೆ ತಂದು, ಬಿಎಂಐಸಿಪಿ ಯೋಜನೆಯನ್ನು ರದ್ದುಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

ಕಳೆದ 30 ವರ್ಷಗಳಿಂದ ನೈಸ್ ಸಂಸ್ಥೆಯು ವಿವಿಧ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳನ್ನು ಸೃಷ್ಟಿಸುತ್ತಾ ಕಾಲಹರಣ ಮಾಡುತ್ತಿದ್ದು, ಸರ್ಕಾರ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ. ಇನ್ನಾದರೂ ಸರ್ಕಾರ ಕಣ್ಣು ತೆರೆದು ಹೈಕೋರ್ಟ್ ತೀರ್ಪನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

ಆನ್‌ಲೈನ್ ಲವ್ – ಗೇಮ್ ಗ್ಯಾಂಗ್: ಅಪ್ರಾಪ್ತ ಬಾಲಕಿಯರ ಅಪಹರಣ ಯತ್ನ ಭಗ್ನ, ಅಹಮದಾಬಾದ್‌ನಲ್ಲಿ ಆರ್‌ಪಿಎಫ್ ಕಾರ್ಯಾಚರಣೆ.

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ