ಆನ್‌ಲೈನ್ ಲವ್ – ಗೇಮ್ ಗ್ಯಾಂಗ್: ಅಪ್ರಾಪ್ತ ಬಾಲಕಿಯರ ಅಪಹರಣ ಯತ್ನ ಭಗ್ನ, ಅಹಮದಾಬಾದ್‌ನಲ್ಲಿ ಆರ್‌ಪಿಎಫ್ ಕಾರ್ಯಾಚರಣೆ.
ವರದಿಗಾರರು (Reporter)
Hemanth Rajashekar04:56 AM IST

ಆನ್‌ಲೈನ್ ಸೋಶಿಯಲ್ ಮೀಡಿಯಾ ಹಾಗೂ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ದುರ್ಬಳಕೆ ಮಾಡಿಕೊಂಡು ಅಪ್ರಾಪ್ತ ಬಾಲಕಿಯರನ್ನು ವಂಚಿಸುವ ಮತ್ತೊಂದು ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದೆ. ರಾಜಸ್ಥಾನದ ಜೋಧ್‌ಪುರದಿಂದ ಅಪಹರಿಸಲ್ಪಟ್ಟು ಬೆಂಗಳೂರಿಗೆ ತೆರಳುವ ರೈಲಿನಲ್ಲಿ ಕರೆದೊಯ್ಯಲಾಗುತ್ತಿದ್ದ ಇಬ್ಬರು ಅಪ್ರಾಪ್ತ ಹಿಂದೂ ಬಾಲಕಿಯರನ್ನು ಅಹಮದಾಬಾದ್‌ನಲ್ಲಿ ರೇಲ್ವೆ ರಕ್ಷಣೆ ಪಡೆ (RPF) ಸಮಯೋಚಿತ ಕಾರ್ಯಾಚರಣೆಯ ಮೂಲಕ ಯಶಸ್ವಿಯಾಗಿ ರಕ್ಷಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕಿಬ್ ಅನ್ಸಾರಿ (24) ಹಾಗೂ ಸೈಯದ್ ಇಬ್ರಾಹಿಂ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ತನಿಖೆಗಾಗಿ ಜೋಧ್‌ಪುರ ಪೋಲಿಸರಿಗೆ ಹಸ್ತಾಂತರಿಸಲಾಗಿದೆ.
ಸೋಶಿಯಲ್ ಮೀಡಿಯಾ ಮತ್ತು ಗೇಮಿಂಗ್ ಮೂಲಕ ಪರಿಚಯ
ಪ್ರಾಥಮಿಕ ತನಿಖೆಯ ವಿವರಗಳ ಪ್ರಕಾರ, ಆರೋಪಿಗಳು ನಕಲಿ ಗುರುತಿನ ಚೀಟಿ ಹಾಗೂ ನಕಲಿ ಹೆಸರುಗಳನ್ನು ಬಳಸಿಕೊಂಡು ಆನ್‌ಲೈನ್ ಗೇಮಿಂಗ್ ಮತ್ತು ಸೋಶಿಯಲ್ ಮೀಡಿಯಾ ಆ್ಯಪ್‌ಗಳ ಮೂಲಕ ಜೋಧ್‌ಪುರದ ಬಾಲಕಿಯರನ್ನು ಸಂಪರ್ಕಿಸಿದ್ದರು. ಆನ್‌ಲೈನ್‌ನಲ್ಲಿ ಅಪರಿಚಿತರಾಗಿದ್ದ ಈ ಆರೋಪಿಗಳು, ಬಾಲಕಿಯರೊಂದಿಗೆ ಸುಳ್ಳು ಭರವಸೆಗಳನ್ನು ನೀಡಿ ನಂಬಿಕೆ ಗಿಟ್ಟಿಸಿಕೊಂಡಿದ್ದರು.
ಬಾಲಕಿಯರು ಮನೆಯಿಂದ ಹೊರಬರುವಂತೆ ಪ್ರಚೋದಿಸಿದ ಆರೋಪಿಗಳು, ಅವರನ್ನು ಜೋಧ್‌ಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕರೆದೊಯ್ಯುತ್ತಿದ್ದರು.

ಕಾರ್ಯಾಚರಣೆ ನಡೆಸಿದ ಆರ್‌ಪಿಎಫ್: ‘ಆಪರೇಷನ್ ಪ್ರಹಾರಿ’ ಯಶಸ್ಸು
ಜೋಧ್‌ಪುರದ ಕುಡಿ ಭಗತಾಸನಿ ಪೊಲೀಸ್ ಠಾಣೆಯಲ್ಲಿ ಬಾಲಕಿಯರು ಕಾಣೆಯಾಗಿರುವ ಬಗ್ಗೆ ದೂರು ದಾಖಲಾದ ತಕ್ಷಣ, ಪೊಲೀಸರು ಸಕ್ರಿಯರಾದರು. ಬಾಲಕಿಯರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆ ಜೋಧ್‌ಪುರ ಪೊಲೀಸರು ಅಹಮದಾಬಾದ್ ಆರ್‌ಪಿಎಫ್ ವಿಭಾಗಕ್ಕೆ ತುರ್ತು ಮಾಹಿತಿ ರವಾನಿಸಿದರು.
ಮಾಹಿತಿ ತಲುಪಿದ ತಕ್ಷಣ, ಆರ್‌ಪಿಎಫ್ ತಂಡವು ‘ಆಪರೇಷನ್ ಪ್ರಹಾರಿ’ ಅಡಿಯಲ್ಲಿ ಅಹಮದಾಬಾದ್ ರೈಲು ನಿಲ್ದಾಣದಲ್ಲಿ ಜೋಧ್‌ಪುರ-ಬೆಂಗಳೂರು ರೈಲನ್ನು ತಡೆದು ವ್ಯಾಪಕ ತಪಾಸಣೆ ನಡೆಸಿತು. ರೈಲಿನಲ್ಲಿದ್ದ ಒಬ್ಬ ಬಾಲಕಿ ಹಾಗೂ ಆಕೆಯನ್ನು ಕರೆದೊಯ್ಯುತ್ತಿದ್ದ ಆರೋಪಿಯನ್ನು ತಕ್ಷಣವೇ ವಶಕ್ಕೆ ಪಡೆಯಲಾಯಿತು. ಮತ್ತೊಬ್ಬ ಆರೋಪಿ ಮತ್ತು ಬಾಲಕಿಯನ್ನು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಪತ್ತೆಹಚ್ಚಿ ರಕ್ಷಿಸಲಾಯಿತು.
ತನಿಖೆಯಲ್ಲಿ ಹೊರಬಿದ್ದ ಆಘಾತಕಾರಿ ಅಂಶಗಳು
ಆರೋಪಿಗಳನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ ಹಲವಾರು ಶಾಕಿಂಗ್ ವಿಷಯಗಳು ಹೊರಬಿದ್ದಿವೆ. ಆರೋಪಿಗಳು ನಕಲಿ ಆಧಾರ್ ಕಾರ್ಡ್‌ಗಳನ್ನು (e-Aadhaar) ಬಳಸುತ್ತಿದ್ದುದ್ದು ಹಾಗೂ ತಮ್ಮ ಮೊಬೈಲ್‌ನಲ್ಲಿದ್ದ ಸಾಕ್ಷ್ಯಗಳನ್ನು ಅಳಿಸಿಹಾಕಲು ಯತ್ನಿಸಿದ್ದು ಬೆಳಕಿಗೆ ಬಂದಿದೆ.
ಮಾನವ ಸಾಗಾಣಿಕೆ ಮತ್ತು ನಕಲಿ ದಾಖಲೆಗಳ ಸೃಷ್ಟಿಯ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಆಳವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಜಾಲದ ಹಿಂದೆ ಬಂಗ್ಲಾದೇಶಕ್ಕೆ ಹೆಣ್ಣುಮಕ್ಕಳನ್ನು ಸಾಗಿಸುವ ಅಥವಾ ಮಾರಾಟ ಮಾಡುವ ದೊಡ್ಡ ಅಂತಾರಾಷ್ಟ್ರೀಯ ಜಾಲವಿದೆಯೇ ಎಂಬ ಕೋನದಲ್ಲೂ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.
ಪೋಷಕರಿಗೆ ಪೊಲೀಸ್ ಇಲಾಖೆಯ ಮುಖ್ಯ ಎಚ್ಚರಿಕೆ
ಈ ಘಟನೆಯು ಆನ್‌ಲೈನ್ ಜಗತ್ತಿನಲ್ಲಿ ಅಪ್ರಾಪ್ತ ಮಕ್ಕಳು ಎದುರಿಸುತ್ತಿರುವ ಅಪಾಯಗಳನ್ನು ಮತ್ತೆ ಎತ್ತಿ ತೋರಿಸಿದೆ. ಪೋಷಕರು ತಮ್ಮ ಮಕ್ಕಳ ಸೋಶಿಯಲ್ ಮೀಡಿಯಾ ಹಾಗೂ ಆನ್‌ಲೈನ್ ಗೇಮಿಂಗ್ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ನಕಲಿ ಪ್ರೊಫೈಲ್‌ಗಳ ಮೂಲಕ ಪರಿಚಯವಾಗುವ ಅಪರಿಚಿತರ ಬಗ್ಗೆ ಜಾಗರೂಕರಾಗಿರಲು ಸೂಚಿಸಲಾಗಿದೆ.
ಸ್ಥಳೀಯ ಪೊಲೀಸರು ಹಾಗೂ ಆರ್‌ಪಿಎಫ್ ತಂಡದ ಜಂಟಿ ಕಾರ್ಯಾಚರಣೆಯಿಂದಾಗಿ ಇಬ್ಬರು ಬಾಲಕಿಯರು ಸುರಕ್ಷಿತವಾಗಿ ರಕ್ಷಿಸಲ್ಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: