ನಮ್ಮ ಬೆಂಗಳೂರು

ಬೀದಿ ದೀಪ ನಿರ್ವಹಣೆ ನಿರ್ಲಕ್ಷಿಸಿದ ಜಿಬಿಎ ಕಾರ್ಯಪಾಲಕ ಅಭಿಯಂತರ ಹೆಚ್.ವಿ. ರಮೇಶ್ ಅಮಾನತು!

Hemanth Rajashekar

ವರದಿಗಾರರು (Reporter)

Hemanth Rajashekar

07:31 AM IST

ಬೀದಿ ದೀಪ ನಿರ್ವಹಣೆ ನಿರ್ಲಕ್ಷಿಸಿದ ಜಿಬಿಎ ಕಾರ್ಯಪಾಲಕ ಅಭಿಯಂತರ ಹೆಚ್.ವಿ. ರಮೇಶ್ ಅಮಾನತು!

ಬೆಂಗಳೂರು: ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳು ಉರಿಯದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ಕರ್ತವ್ಯಲೋಪ ಎಸಗಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವಿದ್ಯುತ್ ವಿಭಾಗದ ಕಾರ್ಯಪಾಲಕ ಅಭಿಯಂತರ (ಇಇ) ಹೆಚ್.ವಿ. ರಮೇಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆದೇಶ ಹೊರಡಿಸಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ನಡೆಸಿದ ಖುದ್ದು ಪರಿಶೀಲನೆ ವೇಳೆ ಸತ್ಯಾಂಶ ಹೊರಬಂದಿದ್ದು, ಸಚಿವರಿಗೆ ಸುಳ್ಳು ಮಾಹಿತಿ ನೀಡಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಜಿಬಿಎ ಜಂಟಿ ಆಯುಕ್ತರು (ಆಡಳಿತ) ಈ ಶಿಸ್ತುಕ್ರಮ ಜರುಗಿಸಿದ್ದಾರೆ.

ಸಚಿವರ ಮಿಂಚಿನ ಪರಿಶೀಲನೆಗೆ ಬಯಲಾಯ್ತು ಅಧಿಕಾರಿಗಳ ಕಳ್ಳಾಟ

ಆಗಸ್ಟ್ 28ರ ಸಂಜೆ ಬೆಂಗಳೂರಿನ ಅತ್ಯಂತ ದಟ್ಟಣೆಯ ಹಾಗೂ ಪ್ರಮುಖ ರಸ್ತೆಯಾದ ಹಡ್ಸನ್ ವೃತ್ತದಿಂದ ಚಾಲುಕ್ಯ ವೃತ್ತದವರೆಗಿನ ವಿದ್ಯುತ್ ಬೀದಿ ದೀಪಗಳ ಕಾರ್ಯನಿರ್ವಹಣೆಯನ್ನು ಸಚಿವ ಕೃಷ್ಣಭೈರೇಗೌಡ ಅವರು ಖುದ್ದಾಗಿ ಪರಿಶೀಲಿಸಿದ್ದರು. ಈ ವೇಳೆ ಒಟ್ಟು 222 ವಿದ್ಯುತ್ ಕಂಬಗಳ ಪೈಕಿ 140 ಕಂಬಗಳಲ್ಲಿನ ಬೀದಿ ದೀಪಗಳು ಉರಿಯುತ್ತಿರಲಿಲ್ಲ. ಕೇವಲ 82 ದೀಪಗಳು ಮಾತ್ರ ಉರಿಯುತ್ತಿದ್ದುದು ಕಂಡುಬಂದಿದೆ.

ಉನ್ನತ ನ್ಯಾಯಾಲಯ, ಮುಖ್ಯ ನ್ಯಾಯಮೂರ್ತಿಗಳ ನಿವಾಸ, ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ಪ್ರತಿ ನಿಮಿಷಕ್ಕೆ ನೂರಾರು ವಾಹನಗಳು ಸಂಚರಿಸುವ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲೇ ಈ ಮಟ್ಟದ ನಿರ್ಲಕ್ಷ್ಯ ವಹಿಸಿರುವುದು ಸಚಿವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.

ಸುಳ್ಳು ವರದಿ ನೀಡಿ ಸಿಕ್ಕಿಬಿದ್ದ ಎಂಜಿನಿಯರ್

ಬೀದಿ ದೀಪಗಳ ಸಮರ್ಪಕ ನಿರ್ವಹಣೆ ಕುರಿತು ಸಚಿವ ಕೃಷ್ಣಭೈರೇಗೌಡ ಅವರು ಈಗಾಗಲೇ ಎರಡು ಪ್ರಮುಖ ಸಭೆಗಳನ್ನು ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆಗಸ್ಟ್ 4ರಂದು ನಡೆದ ಸಭೆಯಲ್ಲೂ ಸಹ ಲೋಪದೋಷ ತಿದ್ದುಪಡಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿತ್ತು.

ಆದರೆ, ಈ ಸಭೆಯಲ್ಲಿ ಕಾರ್ಯಪಾಲಕ ಅಭಿಯಂತರ ಹೆಚ್.ವಿ. ರಮೇಶ್ ಅವರು 222 ಬೀದಿ ದೀಪಗಳ ಪೈಕಿ ಹೆಚ್ಚಿನ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರಿಗೆ ಮಾಹಿತಿ ನೀಡಿದ್ದರು. ತದನಂತರ ನಡೆಸಿದ ಸ್ಪಾಟ್ ಸರ್ವೇಯಲ್ಲಿ 140 ದೀಪಗಳು ಬಂದ್ ಆಗಿರುವುದು ಸಾಬೀತಾಗಿದ್ದು, ಅಧಿಕಾರಿಯ ಜವಾಬ್ದಾರಿರಹಿತ ನಡವಳಿಕೆ ಹಾಗೂ ಸುಳ್ಳು ಮಾಹಿತಿ ಬಯಲಾಗಿದೆ.

ಅಮಾನತು ಆದೇಶದಲ್ಲೇನಿದೆ?

ಕರ್ನಾಟಕ ಸಿವಿಲ್ ಸೇವಾ (ನಡವಳಿಕೆ) ನಿಯಮಾವಳಿ 2021ರ ನಿಯಮ 3ನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಮತ್ತು 1957ರ ಕೆ.ಸಿ.ಎಸ್ (ಸಿ.ಸಿ.ಎ) ನಿಯಮಾವಳಿ ನಿಯಮ 10ರ ಅಡಿಯಲ್ಲಿ ಹೆಚ್.ವಿ. ರಮೇಶ್ ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಅಮಾನತಿನ ಅವಧಿಯಲ್ಲಿ ಸರ್ಕಾರದ ಮುಂಚಿತ ಅನುಮತಿಯಲ್ಲದೆ ಕೇಂದ್ರ ಸ್ಥಾನವನ್ನು ಬಿಡಬಾರದೆಂದು ಹಾಗೂ ನಿಯಮಾವಳಿ ಪ್ರಕಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಜಂಟಿ ಆಯುಕ್ತರ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಗುತ್ತಿಗೆದಾರ ಕಂಪನಿಗೂ ಶಾಕ್: 1 ಲಕ್ಷ ದಂಡ!

ಹೊಸ ಎಲ್‌ಇಡಿ ಯೋಜನೆ ನಿರ್ವಹಣೆ ವಹಿಸಿಕೊಂಡಿದ್ದ ಎಂ/ಎಸ್ ಎಫ್ಲಿಯಂ ಪ್ರೈವೇಟ್ ಲಿಮಿಟೆಡ್ (M/s Effium Pvt Ltd) ಸಂಸ್ಥೆಯು ಕಾರ್ಯನಿರ್ವಹಣೆಯಲ್ಲಿ ತೀವ್ರ ನಿರ್ಲಕ್ಷ್ಯ ತೋರಿದೆ. ಈ ಕಳಪೆ ಕೆಲಸಕ್ಕಾಗಿ ಈ ಹಿಂದೆ ನೋಟಿಸ್ ನೀಡಲಾಗಿದ್ದರೂ ಸುಧಾರಣೆ ಕಾಣದ ಕಾರಣ, ಸಂಸ್ಥೆಗೆ ರೂ. 1 ಲಕ್ಷ ದಂಡ ವಿಧಿಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರ ಭದ್ರತೆಗೆ ಹಾಗೂ ಸಂಚಾರ ಸುಗಮತೆಗೆ ಧಕ್ಕೆ ತರುವಂತಹ ಯಾವುದೇ ಮೂಲಸೌಕರ್ಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನಗರಾಭಿವೃದ್ಧಿ ಸಚಿವಾಲಯ ಹಾಗೂ ಜಿಬಿಎ ಈ ಕಠಿಣ ಕ್ರಮದ ಮೂಲಕ ನೀಡಿದೆ.

ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

ಬೆಂಗಳೂರಿನಲ್ಲಿ ರೌಡಿಶೀಟರ್‌ಗಳ ರಕ್ತಚರಿತ್ರೆಗೆ ಸ್ಕೆಚ್: ಮಾರಾಕಾಸ್ತ್ರ ಪ್ರದರ್ಶಿಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಪೊಲೀಸರ ಬಲೆಗೆ.

ಭೂಮಂಡಲದ ಮೇಲೊಂದು ಕಣ್ಣು: ಜಗತ್ತಿನ ಮೊದಲ GEO ಹೈಪರ್‌ಸ್ಪೆಕ್ಟ್ರಲ್ ಉಪಗ್ರಹ ‘GISAT-1A’ ಉಡಾವಣೆಗೆ ಇಸ್ರೋ ಸಜ್ಜು.

ಮಹಿಳಾ ಸಬಲೀಕರಣದ ಹಾದಿಯಲ್ಲಿ ಹೊಸ ಇತಿಹಾಸ: ಭಾರತೀಯ ಸೇನೆಯ ಮೊದಲ ವೈದ್ಯಕೇತರ ಮಹಿಳಾ ‘ಏರ್ ವೈಸ್ ಮಾರ್ಷಲ್’ ಆಗಿ ಶಕ್ತಿ ಶರ್ಮಾ.

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ