ನಮ್ಮ ಬೆಂಗಳೂರು

ಬೆಂಗಳೂರು ಮೆಟ್ರೋ ಪ್ರಯಾಣಿಕರೇ ಎಚ್ಚರ!: ಟ್ರ್ಯಾಕ್ ಇಳಿದರೆ ₹20,000 ದಂಡ, ಹೆಡ್‌ಫೋನ್ ಇಲ್ಲದೆ ಹಾಡು ಹಾಕಿದರೆ ಬೀಳುತ್ತೆ ₹2,500 ಫೈನ್.

Hemanth Rajashekar

ವರದಿಗಾರರು (Reporter)

Hemanth Rajashekar

05:56 AM IST

ಬೆಂಗಳೂರು ಮೆಟ್ರೋ ಪ್ರಯಾಣಿಕರೇ ಎಚ್ಚರ!: ಟ್ರ್ಯಾಕ್ ಇಳಿದರೆ ₹20,000 ದಂಡ, ಹೆಡ್‌ಫೋನ್ ಇಲ್ಲದೆ ಹಾಡು ಹಾಕಿದರೆ ಬೀಳುತ್ತೆ ₹2,500 ಫೈನ್.

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ನಿಯಮ ಉಲ್ಲಂಘಿಸುವ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಭಾರಿ ಆಘಾತ ನೀಡಿದೆ. ಮೆಟ್ರೋ ಹಳಿಗಳ ಮೇಲೆ ಅಕ್ರಮವಾಗಿ ಪ್ರವೇಶಿಸುವುದು, ಮದ್ಯಪಾನ ಮಾಡಿ ಸಂಚರಿಸುವುದು, ಹೆಡ್‌ಫೋನ್ ಇಲ್ಲದೆ ಲೌಡ್ ಮ್ಯೂಸಿಕ್ ಹಾಕುವುದು ಹಾಗೂ ಟಿಕೆಟ್ ರಹಿತ ಅಥವಾ ನಕಲಿ ಟಿಕೆಟ್ ಪ್ರಯಾಣ ಸೇರಿದಂತೆ ವಿವಿಧ ಉಲ್ಲಂಘನೆಗಳಿಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು ಶೇಕಡಾ 400 ಕ್ಕಿಂತ ಹೆಚ್ಚು ಹೆಚ್ಚಿಸಲಾಗಿದೆ. ಈ ಪರಿಷ್ಕೃತ ದಂಡದ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ‘ಜನವಿಶ್ವಾಸ (ಉಪಬಂಧಗಳ ತಿದ್ದುಪಡಿ) ಕಾಯಿದೆ 2026’ರ ಅಡಿಯಲ್ಲಿ ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯಿದೆ 2002ರ ನಿಯಮಗಳನ್ನು ಪರಿಷ್ಕರಿಸಿದೆ. ಈ ಹಿಂದೆ ನಿಯಮ ಉಲ್ಲಂಘಿಸುವವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಿದ್ದ ಬಿಎಂಆರ್‌ಸಿಎಲ್, ಈಗ ತಕ್ಷಣವೇ ಸ್ಥಳದಲ್ಲೇ ಭಾರಿ ಪ್ರಮಾಣದ ದಂಡ ವಿಧಿಸುವ ಅಧಿಕಾರ ಪಡೆದುಕೊಂಡಿದೆ. ಇದಕ್ಕಾಗಿ ಸ್ಟೇಷನ್ ಮ್ಯಾನೇಜ್‌ಮೆಂಟ್ ಸಿಬ್ಬಂದಿಯನ್ನು ಪರಿಶೀಲನಾ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ದಂಡದ ವಿರುದ್ಧ ಮೇಲ್ಮನವಿ ಸಲ್ಲಿಸಲು ಇಚ್ಛಿಸುವ ಪ್ರಯಾಣಿಕರು 30 ದಿನಗಳ ಒಳಗಾಗಿ ಹಿರಿಯ ಅಧಿಕಾರಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, 60 ದಿನಗಳಲ್ಲಿ ಅರ್ಜಿ ವಿಲೇವಾರಿಯಾಗಲಿದೆ.

ಪ್ರಮುಖ ಉಲ್ಲಂಘನೆಗಳು ಹಾಗೂ ಪರಿಷ್ಕೃತ ದಂಡದ ಪಟ್ಟಿ:

  • ಮೆಟ್ರೋ ಹಳಿಗಳ ಮೇಲೆ ನಡೆಯುವುದು / ಟ್ರ್ಯಾಕ್ ದಾಟುವುದು: ಅತ್ಯಂತ ಅಪಾಯಕಾರಿ ಉಲ್ಲಂಘನೆಯಾಗಿದ್ದು, ಈ ಹಿಂದೆ ಇದ್ದ ದಂಡವನ್ನು ನಾಲ್ಕು ಪಟ್ಟು ಹೆಚ್ಚಿಸಿ ಬರೋಬ್ಬರಿ ₹20,000 ನಿಗದಿಪಡಿಸಲಾಗಿದೆ.
  • ಸಹಪ್ರಯಾಣಿಕರಿಗೆ ತೊಂದರೆ, ಮದ್ಯಪಾನ, ಅಸಭ್ಯ ವರ್ತನೆ: ಹೆಡ್‌ಫೋನ್ ಇಲ್ಲದೆ ಜೋರಾಗಿ ಸಂಗೀತ ಹಾಕುವುದು, ಮದ್ಯಪಾನ, ಅಸಭ್ಯವಾಗಿ ವರ್ತಿಸುವುದು ಅಥವಾ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯುವುದಕ್ಕೆ ವಿಧಿಸುವ ದಂಡದ ಗರಿಷ್ಠ ಮಿತಿ ₹500 ರಿಂದ ₹2,500 ಕ್ಕೆ ಏರಿಕೆಯಾಗಿದೆ.
  • ಅನಧಿಕೃತ ಪ್ರವೇಶ: ನಿಷೇಧಿತ ಪ್ರದೇಶಗಳಿಗೆ ಅಥವಾ ಮೆಟ್ರೋ ಆವರಣಕ್ಕೆ ಅನಧಿಕೃತವಾಗಿ ಪ್ರವೇಶಿಸಿದರೆ ₹5,000 ವರೆಗೆ ದಂಡ ವಿಧಿಸಲಾಗುತ್ತದೆ.
  • ಪ್ರತಿಭಟನೆ ಮತ್ತು ಪೋಸ್ಟರ್‌ಗಳು: ಮೆಟ್ರೋ ಕಾರ್ಯಾಚರಣೆಗೆ ಅಡ್ಡಿಪಡಿಸುವ ಧರಣಿ, ಪ್ರತಿಭಟನೆ ಅಥವಾ ಅನಧಿಕೃತ ಪೋಸ್ಟರ್‌ ಹಚ್ಚಿದರೆ ₹10,000 ವರೆಗೆ ದಂಡ ವಿಧಿಸಲಾಗುವುದು.
  • ಟಿಕೆಟ್‌ಗಳ ದುರುಪಯೋಗ ಮತ್ತು ವಂಚನೆ: ಮೆಟ್ರೋ ಟಿಕೆಟ್ ಅಥವಾ ಪಾಸ್‌ಗಳನ್ನು ನಕಲು ಮಾಡುವುದು, ತಿದ್ದುಪಡಿ ಮಾಡುವುದು ಅಥವಾ ಅಕ್ರಮವಾಗಿ ಮಾರಾಟ ಮಾಡುವುದಕ್ಕೆ ₹20,000 ದಂಡ ನಿಗದಿಪಡಿಸಲಾಗಿದೆ. ನಕಲಿ ಅಥವಾ ತಿದ್ದುಪಡಿ ಮಾಡಿದ ಟಿಕೆಟ್‌ಗಳನ್ನು ಬಳಸಿ ಪ್ರಯಾಣಿಸಿದರೆ ₹5,000 ದಂಡ ಹಾಗೂ ಇತರ ಟಿಕೆಟ್ ಸಂಬಂಧಿತ ವಂಚನೆಗಳಿಗೆ ಗರಿಷ್ಠ ₹25,000 ವರೆಗೆ ದಂಡ ಬೀಳಲಿದೆ.

ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ನೈರ್ಮಲ್ಯ ಹಾಗೂ ಪ್ರಯಾಣಿಕರ ಶಿಸ್ತನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಲು ಬಿಎಂಆರ್‌ಸಿಎಲ್ ಈ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ಮೆಟ್ರೋ ಪ್ರಯಾಣಿಕರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಭಾರಿ ದಂಡ ತೆರುವುದನ್ನು ತಪ್ಪಿಸಿಕೊಳ್ಳಬೇಕಿದೆ.

ವಿಶ್ವದ ಅತಿದೊಡ್ಡ ಮೊಸರು ಘಟಕ! ಬಂಗಾಳದಲ್ಲಿ ಅಮುಲ್ ಧಮಾಕಾ: ದಿನಕ್ಕೆ 10 ಲಕ್ಷ ಕೆಜಿ ಮೊಸರು ಉತ್ಪಾದನೆ.

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ