ವಿಶ್ವದ ಅತಿದೊಡ್ಡ ಮೊಸರು ಘಟಕ! ಬಂಗಾಳದಲ್ಲಿ ಅಮುಲ್ ಧಮಾಕಾ: ದಿನಕ್ಕೆ 10 ಲಕ್ಷ ಕೆಜಿ ಮೊಸರು ಉತ್ಪಾದನೆ.
ವರದಿಗಾರರು (Reporter)
Hemanth Rajashekar05:28 AM IST

ಭಾರತದ ಹಾಲಿನ ಸಹಕಾರ ರಂಗದ ದೈತ್ಯ ಸಂಸ್ಥೆ ‘ಅಮುಲ್’ (Amul) ದೇಶದ ಕ್ಷೀರ ಕ್ರಾಂತಿಯಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾ ಬಳಿಯ ಹೌರಾ ಫುಡ್ ಪಾರ್ಕ್‌ನಲ್ಲಿ ವಿಶ್ವದ ಅತ್ಯಂತ ದೊಡ್ಡ ಮೊಸರು ಉತ್ಪಾದನಾ ಘಟಕವನ್ನು ಸ್ಥಾಪಿಸಲು ಅಮುಲ್ ಪ್ಲಾನ್ ಮಾಡಿದ್ದು, ಈ ಬೃಹತ್ ಯೋಜನೆಗೆ ಚಾಲನೆ ನೀಡಲಾಗಿದೆ.
ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಈ ಮೆಗಾ ಹೂಡಿಕೆ ಹರಿದುಬಂದಿದ್ದು, ರಾಜ್ಯದ ಆಹಾರ ಸಂಸ್ಕರಣೆ ಮತ್ತು ಕ್ಷೀರ ಉದ್ಯಮಕ್ಕೆ ಅಭೂತಪೂರ್ವ ಬಲ ಸಿಕ್ಕಂತಾಗಿದೆ.
700 ಕೋಟಿ ರೂಪಾಯಿ ಬೃಹತ್ ಹೂಡಿಕೆ!
ಅಮುಲ್ ಬಂಗಾಳ ಡೈರಿ ಪ್ರಾಜೆಕ್ಟ್ (Amul Bengal Dairy Project) ಅಡಿಯಲ್ಲಿ ಬಂಗಾಳದ ಹೌರಾ ಜಿಲ್ಲೆಯ ಸಂಕೇರೈಲ್ ಫುಡ್ ಪಾರ್ಕ್‌ನಲ್ಲಿ ಈ ಅತ್ಯಾಧುನಿಕ ಘಟಕ ತಲೆಯೆತ್ತುತ್ತಿದೆ. ಒಟ್ಟು ₹700 ಕೋಟಿ ಹೂಡಿಕೆಯಲ್ಲಿ ಈ ಮೆಗಾ ಡೈರಿ ಸಂಕೀರ್ಣ ನಿರ್ಮಾಣವಾಗುತ್ತಿದ್ದು, ಪೂರ್ವ ಭಾರತದಲ್ಲೇ ಅತ್ಯಂತ ದೊಡ್ಡ ಹಾಲಿನ ಸಂಸ್ಕರಣಾ ಕೇಂದ್ರವಾಗಿ ರೂಪುಗೊಳ್ಳಲಿದೆ.

ಎಷ್ಟು ಪ್ರಮಾಣದ ಮೊಸರು ಉತ್ಪಾದನೆಯಾಗಲಿದೆ?
ಈ ಘಟಕವು ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದ ನಂತರ ಪ್ರತಿದಿನ 30 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರಲಿದೆ.
- ಮೊಸರು ಉತ್ಪಾದನೆ: ಪ್ರತಿದಿನ ಬರೊಬ್ಬರಿ 1,000 ಮೆಟ್ರಿಕ್ ಟನ್ (10 ಲಕ್ಷ ಕಿಲೋಗ್ರಾಂ) ಮೊಸರು, ಮಿಸ್ಟಿ ದೋಯ್ (ಸಿಹಿ ಮೊಸರು), ಮಜ್ಜಿಗೆ ಹಾಗೂ ಲಸ್ಸಿ ಉತ್ಪಾದನೆಯಾಗಲಿದೆ. ಇದು ಜಾಗತಿಕ ಮಟ್ಟದಲ್ಲೇ ಒಂದೇ ಘಟಕದಲ್ಲಿ ಉತ್ಪಾದನೆಯಾಗುವ ಗರಿಷ್ಠ ಮೊಸರಿನ ಪ್ರಮಾಣವಾಗಿದೆ.
- ಇತರ ಡೈರಿ ಉತ್ಪನ್ನಗಳು: ಪ್ರತಿದಿನ 10 ಲಕ್ಷ ಲೀಟರ್ ಪ್ಯಾಕ್ ಮಾಡಿದ ಹಾಲು, 2 ಲಕ್ಷ ಲೀಟರ್ UHT ಹಾಲು, 1 ಲಕ್ಷ ಲೀಟರ್ ಐಸ್‌ಕ್ರೀಮ್, 20 ಟನ್ ಪನ್ನೀರ್, 10 ಟನ್ ತುಪ್ಪ, 10 ಟನ್ ಹಾಲಿ ನಿಂದ ಮಾಡಿದ ಸಿಹಿತಿಂಡಿಗಳು ಹಾಗೂ 2.5 ಲಕ್ಷ ಫ್ಲೇವರ್ಡ್ ಮಿಲ್ಕ್ ಪ್ಯಾಕೆಟ್‌ಗಳು ಉತ್ಪಾದನೆಯಾಗಲಿವೆ.
ಘಟಕ ಯಾವಾಗ ಆರಂಭ?
ಅಮುಲ್ ಆಡಳಿತ ಮಂಡಳಿಯ (GCMMF) ಅಧಿಕೃತ ಮಾಹಿತಿಯ ಪ್ರಕಾರ, ಈ ಮೆಗಾ ಪ್ಲಾಂಟ್‌ನ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಮುಂದಿನ 2 ವರ್ಷಗಳಲ್ಲಿ (2028ರ ವೇಳೆಗೆ) ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ.
ಉದ್ಯೋಗಾವಕಾಶ ಮತ್ತು ರೈತರಿಗೆ ಆರ್ಥಿಕ ಲಾಭ
ಈ ಯೋಜನೆ ಬಂಗಾಳದ ಗ್ರಾಮೀಣ ಆರ್ಥಿಕತೆಗೆ ಭಾರಿ ಚೇತರಿಕೆ ನೀಡಲಿದೆ:
- ನೇರ ಉದ್ಯೋಗಗಳು: ಹೊಸ ಘಟಕದಿಂದ ಸುಮಾರು 1,000 ಜನರಿಗೆ ನೇರ ಉದ್ಯೋಗ ದೊರೆಯಲಿದೆ.
- ಪರೋಕ್ಷ ಉದ್ಯೋಗ ಮತ್ತು ಸಾರಿಗೆ: ಹಾಲು ಸಂಗ್ರಹಣೆ, ಶೀತಲೀಕರಣ ಕೇಂದ್ರಗಳು, ವಿತರಣೆ ಮತ್ತು ಸಾರಿಗೆ ವಲಯದಲ್ಲಿ ಸಾವಿರಾರು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.
- ರೈತರ ಆದಾಯ ಹೆಚ್ಚಳ: ಪ್ರಸ್ತುತ ಬಂಗಾಳದ 1.25 ಲಕ್ಷ ಹಾಲಿನ ಉತ್ಪಾದಕರು ಅಮುಲ್ ಜತೆ ಸಂಪರ್ಕದಲ್ಲಿದ್ದಾರೆ. ಈ ಘಟಕ ಪೂರ್ಣಗೊಂಡಾಗ ಬಂಗಾಳದ ಸುಮಾರು 2.5 ಲಕ್ಷ ರೈತರು ಹಾಗೂ ಹಾಲಿನ ಉತ್ಪಾದಕರು ನೇರ ಲಾಭ ಪಡೆಯಲಿದ್ದಾರೆ.
ಬಂಗಾಳದಲ್ಲಿ ಕೈಗಾರಿಕಾ ಚೇತರಿಕೆ
ಬಂಗಾಳದಲ್ಲಿ ನೂತನ ಸರ್ಕಾರ ರಚನೆಯಾದ ನಂತರ ಕೈಗಾರಿಕಾ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿದೆ. ಈ ಯೋಜನೆಗೆ ಸರ್ಕಾರ ಉಚಿತವಾಗಿ ಜಾಗ ಒದಗಿಸಿದ್ದು, ‘ಶ್ವೇತ ಕ್ರಾಂತಿ 2.0’ (White Revolution 2.0) ಯೋಜನೆಗೆ ಇದು ದಾರಿದೀಪವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: