ರಾಜಧಾನಿಯ 5 ಸ್ಟಾರ್ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ, ಕೆಟ್ಟ ಹಾಲು: ನಿಮ್ಮ ಜೇಬು ಖಾಲಿ ಮಾಡುವ ಐಷಾರಾಮಿ ಹೋಟೆಲ್‌ಗಳನ್ನು ಬಹಿಷ್ಕರಿಸುವ ಸಮಯ ಬಂದಿದೆಯೇ?
ವರದಿಗಾರರು (Reporter)
Hemanth Rajashekar05:33 AM IST

ಬೆಂಗಳೂರಿನ ಐಷಾರಾಮಿ ಮತ್ತು ನಕ್ಷತ್ರ ಹೋಟೆಲ್‌ಗಳಲ್ಲಿ ಬಡಿಸುವ ಆಹಾರದ ನೈಜ ಚಿತ್ರಣ ಹೊರಬಿದ್ದಿದ್ದು, ಗ್ರಾಹಕರು ಬೆಚ್ಚಿಬೀಳುವಂತಾಗಿದೆ. ಸಾವಿರಾರು ರೂಪಾಯಿ ತೆತ್ತು ಪಂಚತಾರಾ ಹೋಟೆಲ್‌ಗಳಿಗೆ ತೆರಳುವ ಸಾರ್ವಜನಿಕರಿಗೆ ಕೆಟ್ಟ, ಕಾಲಾವಧಿ ಮುಗಿದ ಮತ್ತು ಶಿಲೀಂಧ್ರ ಹಿಡಿದ ಆಹಾರ ಉಣಿಸುತ್ತಿರುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಡೆಸಿದ ದಿಢೀರ್ ದಾಳಿಯಿಂದ ಸಾಬೀತಾಗಿದೆ.
ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯು ಆಗಸ್ಟ್ 7 ರಿಂದ ಆಗಸ್ಟ್ 9 ರವರೆಗೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿರುವ 60 ಕ್ಕೂ ಹೆಚ್ಚು 3-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಗೋದಾಮುಗಳ ಮೇಲೆ ಬೃಹತ್ ಕಾರ್ಯಾಚರಣೆ ನಡೆಸಿದೆ. ಒಟ್ಟು 30 ವಿಶೇಷ ಅಧಿಕಾರಿಗಳ ತಂಡಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದು, ಅಡುಗೆ ಮನೆಗಳ ನೈರ್ಮಲ್ಯ, ಆಹಾರ ಸಂಗ್ರಹಣೆ ಹಾಗೂ ದಿನಾಂಕದ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿವೆ.
ದೊಡ್ಡ ಮಟ್ಟದ ಜಪ್ತಿ ಹಾಗೂ ಅಕ್ರಮಗಳ ವಿವರ:
ಮೂರು ದಿನಗಳ ಈ ಸರಣಿ ತಪಾಸಣೆಯಲ್ಲಿ ಆಹಾರ ಅಧಿಕಾರಿಗಳು ಒಟ್ಟು 77 ಆಹಾರ ಮಾದರಿಗಳನ್ನು (ಸ್ಯಾಂಪಲ್ಸ್) ಸಂಗ್ರಹಿಸಿ ಹೆಚ್ಚಿನ ವೈಜ್ಞಾನಿಕ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಸಿಕ್ಕ ಅಸಹ್ಯಕರ ಮತ್ತು ಅಸುರಕ್ಷಿತ ಆಹಾರ ಪದಾರ್ಥಗಳನ್ನು ಕಂಡು ಅಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದಾರೆ.
ಇಲಾಖೆಯು ದಾಳಿ ವೇಳೆ ಒಟ್ಟು 1,040 ಕೆಜಿಗೂ ಹೆಚ್ಚು ತರಕಾರಿ, ಮಾಂಸ ಹಾಗೂ ಇತರ ಖಾದ್ಯಗಳನ್ನು ಮತ್ತು 94 ಲೀಟರ್‌ಗೂ ಹೆಚ್ಚು ಹಾಲು, ಮೊಸರು ಹಾಗೂ ಬಳಸಿ ಉಳಿದ ಅಡುಗೆ ಎಣ್ಣೆಯನ್ನು ವಶಪಡಿಸಿಕೊಂಡು ನಾಶಪಡಿಸಿದೆ. ಇದರಲ್ಲಿ 640 ಕೆಜಿಗೂ ಹೆಚ್ಚು ಕುರಿ, ಕೋಳಿ ಮತ್ತು ಮೀನಿನ ಮಾಂಸವನ್ನು ಸೂಕ್ತ ಲೇಬಲ್ ಇಲ್ಲದೆ ಹಾಗೂ ಕಾಲಾವಧಿ ಮುಗಿದಿದ್ದರೂ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಇದರ ಜೊತೆಗೆ 276 ಕೆಜಿ ಕೊಳೆತ ಹಾಗೂ ಬೂಷ್ಟು ಹಿಡಿದ ತರಕಾರಿಗಳು, 45 ಲೀಟರ್ ಅವಧಿ ಮುಗಿದ ಹಾಲು-ಮೊಸರು ಮತ್ತು 49 ಲೀಟರ್ ಹಳೆಯ ಅಡುಗೆ ಎಣ್ಣೆಯನ್ನು ಜಪ್ತಿ ಮಾಡಲಾಗಿದೆ.

ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಅಪಾಯಕಾರಿ ರಾಸಾಯನಿಕ ಬಳಕೆ:
ಬ್ರಿಗೇಡ್ ರಸ್ತೆಯಲ್ಲಿರುವ ಪ್ರಸಿದ್ಧ ಅಂತರರಾಷ್ಟ್ರೀಯ ಫಾಸ್ಟ್ ಫುಡ್ ಸಂಸ್ಥೆ ಮ್ಯಾಕ್‌ಡೊನಾಲ್ಡ್ಸ್ (McDonald’s) ಔಟ್‌ಲೆಟ್‌ನಲ್ಲಿ ಭಾರಿ ಉಲ್ಲಂಘನೆ ಕಂಡುಬಂದಿದೆ. ಕರಿದು ಉಳಿದಿದ್ದ ಹಳೆಯ ಅಡುಗೆ ಎಣ್ಣೆಯನ್ನು ಮತ್ತೆ ಬಳಸಲು ಅದರ ಬಣ್ಣ ಮತ್ತು ವಾಸನೆ ಬದಲಾಯಿಸಲು ‘ಮ್ಯಾಗ್ನೀಸಿಯಮ್ ಸಲ್ಫೈಟ್’ (Magnesium Sulfite) ಎಂಬ ರಾಸಾಯನಿಕವನ್ನು ಬಳಸುತ್ತಿದ್ದುದು ತಪಾಸಣೆ ವೇಳೆ ಧೃಡಪಟ್ಟಿದೆ. ಈ ಘಟನೆ ಸಾರ್ವಜನಿಕ ಆರೋಗ್ಯದ ಜೊತೆ ಆಟವಾಡುತ್ತಿರುವುದಕ್ಕೆ ಜೀವಂತ ಸಾಕ್ಷಿಯಾಗಿದೆ.
ಅಡುಗೆ ಮನೆಗಳ ಬಂದ್ ಮತ್ತು ನೋಟಿಸ್ ಜಾರಿ:
ನೈರ್ಮಲ್ಯ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದ ಯುಬಿ ಸಿಟಿಯ ಸ್ಕೈ ಹೋಟೆಲ್ ಹಾಗೂ ಪೆಗ್ಸ್ ಅಂಡ್ ಬಾಟಲ್ಸ್ ಸೇರಿದಂತೆ ಎರಡು ಪ್ರಮುಖ ಹೋಟೆಲ್‌ಗಳ ಅಡುಗೆ ಮನೆಗಳನ್ನು ಅಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಬಂದ್ ಮಾಡಿಸಿದ್ದಾರೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳನ್ನು ಒಟ್ಟಿಗೆ ಇಟ್ಟಿರುವುದು, ಅಡುಗೆ ಮನೆಗಳಲ್ಲಿ ನೈರ್ಮಲ್ಯ ಇಲ್ಲದಿರುವುದು, ವಿದೇಶಿ ಉತ್ಪನ್ನಗಳನ್ನು ಮರು-ಪ್ಯಾಕ್ ಮಾಡಿ ಕಾಲಾವಧಿ ವಿಸ್ತರಿಸಿರುವುದು ಮುಂತಾದ ಗಂಭೀರ ಲೋಪಗಳು ಕಂಡುಬಂದಿವೆ. ಲೋಪ ಎಸಗಿದ ಎಲ್ಲಾ ಹೋಟೆಲ್‌ಗಳಿಗೆ ನೋಟಿಸ್ ನೀಡಲಾಗಿದ್ದು, ನ್ಯಾಯಾಂಗ ಮಂಡಳಿಯ ಮುಂದೆ ಕಾನೂನು ಕ್ರಮ ಜರುಗಿಸಲು ಶಿಫಾರಸು ಮಾಡಲಾಗಿದೆ.
ಸ್ಟಾರ್ ಹೋಟೆಲ್‌ಗಳನ್ನು ಸಾರ್ವಜನಿಕರು ಬಹಿಷ್ಕರಿಸಬೇಕೇ?
ಹೆಚ್ಚಿನ ಹಣ ನೀಡಿದರೆ ಶುಚಿ ಮತ್ತು ರುಚಿಯಾದ ಆಹಾರ ಸಿಗುತ್ತದೆ ಎನ್ನುವ ನಂಬಿಕೆಯಿಂದ ಜನರು 3-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್‌ಗಳಿಗೆ ತೆರಳುತ್ತಾರೆ. ಆದರೆ, ಅದ್ದೂರಿ ದೀಪಾಲಂಕಾರ ಮತ್ತು ಐಷಾರಾಮಿ ವಾತಾವರಣದ ಹಿಂದೆ ಸಾರ್ವಜನಿಕರಿಗೆ ವಿಷಪೂರಿತ, ಬೂಷ್ಟು ಹಿಡಿದ ಹಾಗೂ ಕಾಲಾವಧಿ ಮುಗಿದ ಆಹಾರ ಉಣಿಸಲಾಗುತ್ತಿದೆ ಎಂಬುದು ಈಗ ಸಾಬೀತಾಗಿದೆ. ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಇಂತಹ ದ್ರೋಹ ಎಸಗುವ ಹೋಟೆಲ್‌ಗಳಿಗೆ ಕೇವಲ ದಂಡ ವಿಧಿಸಿದರೆ ಸಾಲದು. ಗ್ರಾಹಕರು ಜಾಗೃತರಾಗಿ ಇಂತಹ ಅಸುರಕ್ಷಿತ ಹೋಟೆಲ್‌ಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ನಿರ್ಧಾರ ಕೈಗೊಂಡಾಗ ಮಾತ್ರ ಈ ಮಾಫಿಯಾಗೆ ತಕ್ಕ ಪಾಠ ಕಲಿಸಲು ಸಾಧ್ಯ.
FSSAI ನಿಯಮಾವಳಿಗಳ ಪ್ರಕಾರ ಆಹಾರ ನೈರ್ಮಲ್ಯ ಕಾಪಾಡದ ಯಾವುದೇ ಸಂಸ್ಥೆಯ ವಿರುದ್ಧ ಸಾರ್ವಜನಿಕರು ದೂರು ನೀಡಬಹುದು. ಇಲಾಖೆಯು ಇಂತಹ ತಪಾಸಣೆಗಳನ್ನು ನಿರಂತರವಾಗಿ ಮುಂದುವರಿಸುವುದಾಗಿ ತಿಳಿಸಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
$110 ಬಿಲಿಯನ್ ಡಾಲರ್ ಎಕ್ಸ್‌ಪೋರ್ಟ್ ಡ್ರೀಮ್: ಭಾರತದ ಆಹಾರ ಸಂಸ್ಕರಣಾ ವಲಯಕ್ಕಿದೆ ಅಗಾಧ ಅವಕಾಶ
ಭಾರತ-ಚೀನಾ ಮುಕ್ತ ವ್ಯಾಪಾರ ಆರಂಭವಾದರೆ ಅಮೆರಿಕನ್ ದಾದಾಗಿರಿ ಅಂತ್ಯ – ಖ್ಯಾತ ಅರ್ಥಶಾಸ್ತ್ರಜ್ಞ ಜಿಮ್ ಒ ನೀಲ್!
ಸ್ವಾತಂತ್ರ್ಯ ಬಂದು 79 ವರ್ಷಗಳ ಬಳಿಕ ಹಳ್ಳಿಗೆ ಕಾಲಿಟ್ಟ ಮೊದಲ ಸರ್ಕಾರಿ ಬಸ್! ಆರತಿ, ಮೇಳ-ತಾಳದೊಂದಿಗೆ ಸಂಭ್ರಮಾಚರಣೆ.