ಪಾಕಿಸ್ತಾನಕ್ಕೆ ಭಾರತದ ಡಿಪ್ಲೊಮ್ಯಾಟಿಕ್ ಪೆಟ್ಟು: ವಿದೇಶಾಂಗ ಸಚಿವಾಲಯದ ಗೋಷ್ಠಿಯಲ್ಲಿ ಮೊಳಗಿದ ಬಲೂಚಿಸ್ತಾನ್ ಸ್ವಾತಂತ್ರ್ಯದ ಧ್ವನಿ!
ವರದಿಗಾರರು (Reporter)
Hemanth Rajashekar05:46 AM IST

ನವದೆಹಲಿ: ನವದೆಹಲಿಯಲ್ಲಿ ನಡೆದ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಪತ್ರಿಕಾಗೋಷ್ಠಿಯಲ್ಲಿ ಬಲೂಚಿಸ್ತಾನ್ ಸ್ವಾತಂತ್ರ್ಯ ದಿನಾಚರಣೆಯ ವಿಷಯವು ಪ್ರಮುಖವಾಗಿ ಸದ್ದು ಮಾಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಲೂಚಿಸ್ತಾನ್ ಜನರ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ಹಾಗೂ ಪಾಕಿಸ್ತಾನದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿದ್ದಕ್ಕಾಗಿ ‘ರಿಪಬ್ಲಿಕ್ ಆಫ್ ಬಲೂಚಿಸ್ತಾನ್’ ಭಾರತ ಸರ್ಕಾರ ಹಾಗೂ ಭಾರತೀಯ ಮಾಧ್ಯಮಗಳಿಗೆ ತನ್ನ ತೀವ್ರ ಕೃತಜ್ಞತೆಯನ್ನು ಸಲ್ಲಿಸಿದೆ.
ಆಗಸ್ಟ್ 11, 2026 ರಂದು ನಡೆದ ಮಾಧ್ಯಮ ಗೋಷ್ಠಿಯಲ್ಲಿ ಭಾರತೀಯ ಮಾಧ್ಯಮ ಪ್ರತಿನಿಧಿಗಳು ಬಲೂಚಿಸ್ತಾನ್ ಸ್ವಾತಂತ್ರ್ಯ ದಿನಾಚರಣೆ ಹಾಗೂ ಜಗತ್ತಿನಾದ್ಯಂತ ನಡೆಯುತ್ತಿರುವ ಬಲೂಚ್ ಹೋರಾಟಗಾರರ ಕಾರ್ಯಕ್ರಮಗಳ ಕುರಿತು ಪ್ರಸ್ತಾಪಿಸಿ ವಿದೇಶಾಂಗ ಸಚಿವಾಲಯದ ಗಮನ ಸೆಳೆದಿದ್ದರು. ಈ ಬೆಳವಣಿಗೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿರುವ ಬಲೂಚಿಸ್ತಾನ್ ಗಣರಾಜ್ಯ, ಪಾಕಿಸ್ತಾನದ ಅಕ್ರಮ ಆಕ್ರಮಣಕಾರಿ ನೀತಿಗಳ ವಿರುದ್ಧ ಗಟ್ಟಿಯಾದ ನಿಲುವು ತಳೆದಿರುವ ಭಾರತದ ನಡೆಯನ್ನು ಶ್ಲಾಘಿಸಿದೆ.
ವಿದೇಶಾಂಗ ಸಚಿವಾಲಯದ ಕಠಿಣ ಎಚ್ಚರಿಕೆ ಮತ್ತು ಜಾಗತಿಕ ಕರೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (PoJK) ಸೇರಿದಂತೆ ಪಾಕಿಸ್ತಾನದ ಅಧೀನದಲ್ಲಿರುವ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ ಭೀಕರ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು. ಪಾಕಿಸ್ತಾನವು ತನ್ನ ಆಡಳಿತಕ್ಕೊಳಪಟ್ಟ ಪ್ರದೇಶಗಳಲ್ಲಿ ಮುಗ್ಧ ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳು, ಅಕ್ರಮ ಬಂಧನಗಳು ಮತ್ತು ಸೇನಾ ಬಲಪ್ರಯೋಗಗಳ ಬಗ್ಗೆ ಅಂತರರಾಷ್ಟ್ರೀಯ ಸಮುದಾಯವು ತಕ್ಷಣವೇ ಗಮನಹರಿಸಬೇಕು ಮತ್ತು ಪಾಕಿಸ್ತಾನವನ್ನು ಹೊಣೆಗಾರನನ್ನಾಗಿ ಮಾಡಬೇಕು ಎಂದು ಅವರು ಪ್ರತಿಪಾದಿಸಿದರು.
ವಿದೇಶಾಂಗ ಸಚಿವಾಲಯದ ಈ ಹೇಳಿಕೆಯನ್ನು ಉಲ್ಲೇಖಿಸಿ ಹೇಳಿಕೆ ಬಿಡುಗಡೆ ಮಾಡಿರುವ ಬಲೂಚಿಸ್ತಾನ್ ಪ್ರತಿನಿಧಿಗಳು, “ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರ ಹಾಗೂ ತನ್ನ ಅಕ್ರಮ ನಿಯಂತ್ರಣದಲ್ಲಿರುವ ಇತರ ಪ್ರದೇಶಗಳಲ್ಲಿ ಪಾಕಿಸ್ತಾನ ನಡೆಸುತ್ತಿರುವ ಘೋರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಜಗತ್ತಿನೆದುರು ತೆರೆದಿಡಲು ಭಾರತ ತಳೆದಿರುವ ಸದ್ಧಾಂತಿಕ ಹಾಗೂ ನಿರಂತರ ನಿಲುವು ಅತ್ಯಂತ ಪ್ರಶಂಸನೀಯ” ಎಂದು ತಿಳಿಸಿದ್ದಾರೆ.

“ಮಾನವ ಹಕ್ಕುಗಳಿಗೆ ಗಡಿಗಳ ಹಿತಾಸಕ್ತಿಯಿಲ್ಲ”: ಬಲೂಚಿಸ್ತಾನ್ ಬಹಿರಂಗ ಹೇಳಿಕೆ
ರಿಪಬ್ಲಿಕ್ ಆಫ್ ಬಲೂಚಿಸ್ತಾನ್ ಹೊರಡಿಸಿರುವ ಅಧಿಕೃತ ಪ್ರಕಟಣೆಯಲ್ಲಿ, ಜಾಗತಿಕ ಸಮುದಾಯದ ಜವಾಬ್ದಾರಿಯನ್ನು ನೆನಪಿಸಲಾಗಿದೆ. “ಮಾನವ ಹಕ್ಕುಗಳು ಯಾವುದೇ ನಿರ್ದಿಷ್ಟ ಭೌಗೋಳಿಕ ಗಡಿಗಳಿಗೆ ಸೀಮಿತವಾಗಿಲ್ಲ. ಬಲೂಚಿಸ್ತಾನ್, ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (PoJK), ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಪಾಕಿಸ್ತಾನದ ಅಕ್ರಮ ವಶದಲ್ಲಿರುವ ಇತರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ಗೌರವ, ಸ್ವಾತಂತ್ರ್ಯ, ನ್ಯಾಯ ಮತ್ತು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸುವ ಮೂಲಭೂತ ಹಕ್ಕಿದೆ” ಎಂದು ಬಲೂಚ್ ನಾಯಕತ್ವ ಪ್ರತಿಪಾದಿಸಿದೆ.
ಬಲೂಚ್ ಮತ್ತು ಕಾಶ್ಮೀರಿ ಜನರ ವಿರುದ್ಧ ಪಾಕಿಸ್ತಾನದ ಸೇನಾ ಪಡೆಗಳು ನಡೆಸುತ್ತಿರುವ ಜನಾಂಗೀಯ ಸಂಹಾರ ಮತ್ತು ನಿರಂತರ ಶೋಷಣೆಯನ್ನು ಕೊನೆಗೊಳಿಸಲು ಅಂತರರಾಷ್ಟ್ರೀಯ ಸಮುದಾಯದ ನಿರ್ಣಾಯಕ ಹಸ್ತಕ್ಷೇಪ ಅತ್ಯಗತ್ಯವಾಗಿದೆ ಎಂದು ಪ್ರಕಟಣೆ ಒತ್ತಿಹೇಳಿದೆ. ಬಲೂಚಿಸ್ತಾನ್‌ನ ಸ್ವಾತಂತ್ರ್ಯವನ್ನು ಸ್ವತಂತ್ರ ರಾಷ್ಟ್ರವಾಗಿ ಗುರುತಿಸುವುದು ಹಾಗೂ ಪಿಒಜೆಕೆಯಲ್ಲಿ ಮಿಲಿಟರಿ ಬಲಪ್ರಯೋಗಕ್ಕೆ ಒಳಗಾಗುತ್ತಿರುವ ಲಕ್ಷಾಂತರ ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಜಾಗತಿಕ ಸಂಸ್ಥೆಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಲಾಗಿದೆ.
ಬಲೂಚಿಸ್ತಾನ್ ಸ್ವಾತಂತ್ರ್ಯ ದಿನಾಚರಣೆಯ ಐತಿಹಾಸಿಕ ಹಿನ್ನೆಲೆ
ಆಗಸ್ಟ್ 11 ಬಲೂಚ್ ಜನರಿಗೆ ಅತ್ಯಂತ ಪ್ರಮುಖ ದಿನವಾಗಿದೆ. 1947 ರಲ್ಲಿ ಬ್ರಿಟಿಷ್ ಆಡಳಿತ ಮುಕ್ತಾಯಗೊಂಡಾಗ ಕಲಾತ್ ಸಂಸ್ಥಾನವು (ಇಂದಿನ ಬಲೂಚಿಸ್ತಾನ್) ತನ್ನನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿತ್ತು. ಆದರೆ, ಮಾರ್ಚ್ 1948 ರಲ್ಲಿ ಪಾಕಿಸ್ತಾನವು ಸಶಸ್ತ್ರ ಬಲಪ್ರಯೋಗದ ಮೂಲಕ ಬಲೂಚಿಸ್ತಾನ್ ಅನ್ನು ಬಲವಂತವಾಗಿ ತನ್ನೊಳಗೆ ವಿಲೀನಗೊಳಿಸಿಕೊಂಡಿತು. ಅಂದಿನಿಂದಲೂ ಬಲೂಚ್ ಜನರು ತಮ್ಮ ಕಳೆದುಹೋದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯಕ್ಕಾಗಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ.
ಪ್ರತಿ ವರ್ಷ ಆಗಸ್ಟ್ 11 ರಂದು ವಿಶ್ವದಾದ್ಯಂತ ಇರುವ ಬಲೂಚ್ ಸಮುದಾಯವು ಇದನ್ನು ತಮ್ಮ ‘ಸ್ವಾತಂತ್ರ್ಯ ದಿನ’ವಾಗಿ ಆಚರಿಸುತ್ತದೆ. ಈ ವರ್ಷ ಭಾರತದ ವಿದೇಶಾಂಗ ಸಚಿವಾಲಯದ ಗೋಷ್ಠಿಯಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಗೆ ಬಂದಿರುವುದು, ಬಲೂಚಿಸ್ತಾನ್‌ನ ಬಿಡುಗಡೆ ಹೋರಾಟಕ್ಕೆ ರಾಜತಾಂತ್ರಿಕ ಹಾಗೂ ಮಾಧ್ಯಮ ಮಟ್ಟದಲ್ಲಿ ರಾಜತಾಂತ್ರಿಕ ಬೆಂಬಲ ಸಿಗುತ್ತಿರುವುದರ ಸಂಕೇತವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ವೇದಿಕೆಯಲ್ಲಿ ಹೆಚ್ಚಿದ ಒತ್ತಡ
ಭಾರತವು ತನ್ನ ವಿದೇಶಾಂಗ ನೀತಿಯಲ್ಲಿ ಮಾನವ ಹಕ್ಕುಗಳು ಮತ್ತು ಭಯೋತ್ಪಾದನೆ ವಿರುದ್ಧದ ಸದ್ಧಾಂತಿಕ ನಿಲುವನ್ನು ಎತ್ತಿಹಿಡಿದಿರುವುದನ್ನು ಬಲೂಚಿಸ್ತಾನ್ ಮುಕ್ತಕಂಠದಿಂದ ಶ್ಲಾಘಿಸಿದೆ. ದಶಕಗಳಿಂದ ಕತ್ತಲಲ್ಲಿರುವ ಮತ್ತು ಧ್ವನಿ ಅಡಗಿಸಲ್ಪಟ್ಟಿರುವ ಮುಗ್ಧ ಜನರ ಪರವಾಗಿ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿ ಎತ್ತಲು ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳು ಮುಂದೆ ಬರಬೇಕೆಂದು ಬಲೂಚಿಸ್ತಾನ್ ಗಣರಾಜ್ಯ ಮತ್ತೊಮ್ಮೆ ಕರೆ ನೀಡಿದೆ. ಈ ಬೆಳವಣಿಗೆಯು ದಕ್ಷಿಣ ಏಷ್ಯಾದ ರಾಜಕೀಯ ಚಿತ್ರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿ ತೀವ್ರ ಹಿನ್ನಡೆಯನ್ನುಂಟುಮಾಡಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಸೌದಿ-ಟರ್ಕಿ-ಪಾಕಿಸ್ತಾನ್ ನಡುವೆ ‘ಮಕ್ಕಾ ಜಂಟಿ ರಕ್ಷಣಾ ಒಪ್ಪಂದ’ ಅಂಕಿತ! ಇರಾನ್ ಆಕ್ರೋಶ.