ವಿಮಾನಯಾನ ರಂಗದಲ್ಲಿ ಕ್ರಾಂತಿ: ಮುಂದಿನ 10 ವರ್ಷಗಳಲ್ಲಿ 120 ಹೊಸ ವಿಮಾನ ನಿಲ್ದಾಣಗಳು! ಉಡಾನ್ ಯೋಜನೆ.
ವರದಿಗಾರರು (Reporter)
Hemanth Rajashekar01:04 AM IST

ದೇಶದ ನಾಗರಿಕ ವಿಮಾನಯಾನ ರಂಗದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ಕೇಂದ್ರ ಸರ್ಕಾರ ನಾಂದಿ ಹಾಡಿದೆ. ಪ್ರಾದೇಶಿಕ ವಾಯು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಜನಪ್ರಿಯ ‘ಉಡಾನ್’ (UDAN – ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯ ಮುಂದಿನ ಹೊಸ ಹಂತವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಮುಂದಿನ 10 ವರ್ಷಗಳಲ್ಲಿ ದೇಶದ ಸಣ್ಣ ಮತ್ತು ಮಧ್ಯಮ ನಗರಗಳನ್ನು ಒಳಗೊಂಡಂತೆ ಒಟ್ಟು 120 ಹೊಸ ಸ್ಥಳಗಳಿಗೆ ವಿಮಾನ ಸಂಪರ್ಕ ಕಲ್ಪಿಸುವ ಜತೆಗೆ, ಬರೋಬ್ಬರಿ 4 ಕೋಟಿಗೂ ಹೆಚ್ಚು ಜನರಿಗೆ ಕೈಗೆಟುಕುವ ದರದಲ್ಲಿ ವಿಮಾನ ಪ್ರಯಾಣದ ಭಾಗ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ.
ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಸುಧಾರಿತ ಉಡಾನ್ ಯೋಜನೆಯ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರು ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು. ಈ ನೂತನ ನೀತಿಯು ದೇಶದ ಮೂಲೆ ಮೂಲೆಗೂ ವಾಯು ಸಂಪರ್ಕ ಜಾಲವನ್ನು ವಿಸ್ತರಿಸಲು ಗೇಮ್ ಚೇಂಜರ್ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏರ್‌ಲೈನ್ಸ್‌ಗಳಿಗೆ ಬಂಪರ್ ಕೊಡುಗೆ: 5 ವರ್ಷಗಳವರೆಗೆ ಆರ್ಥಿಕ ನೆರವು ವಿಸ್ತರಣೆ
ಸುಧಾರಿತ ಉಡಾನ್ ಯೋಜನೆಯಡಿ ವಾಯುಯಾನ ಸಂಸ್ಥೆಗಳಿಗೆ ಸರ್ಕಾರ ದೊಡ್ಡ ಮಟ್ಟದ ಉತ್ತೇಜನ ನೀಡಿದೆ. ವಿಮಾನಯಾನ ಸೇವೆ ಒದಗಿಸುವ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಆರ್ಥಿಕ ನೆರವನ್ನು (ವೈಯಬಿಲಿಟಿ ಗ್ಯಾಪ್ ಫಂಡಿಂಗ್ – VGF) ಪಡೆಯುವ ಅರ್ಹತಾ ವ್ಯಾಪ್ತಿಯನ್ನು ಸರ್ಕಾರ ಗಣನೀಯವಾಗಿ ವಿಸ್ತರಿಸಿದೆ. ಇದರೊಂದಿಗೆ, ಈ ಹಿಂದೆ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಆರ್ಥಿಕ ನೆರವಿನ ಅವಧಿಯನ್ನು 3 ವರ್ಷಗಳಿಂದ 5 ವರ್ಷಗಳವರೆಗೆ ವಿಸ್ತರಿಸಲಾಗಿದೆ ಎಂದು ಸಚಿವರು ತಿಳಿಸಿದರು. ಸರ್ಕಾರದ ಈ ಕ್ರಮದಿಂದಾಗಿ ಹೊಸ ಮಾರ್ಗಗಳಲ್ಲಿ ವಿಮಾನಯಾನ ಸೇವೆ ಆರಂಭಿಸುವ ಸಂಸ್ಥೆಗಳ ಆರ್ಥಿಕ ಹೊರೆ ತಗ್ಗಲಿದ್ದು, ಗ್ರಾಹಕರಿಗೆ ನಿರಂತರವಾಗಿ ಸೇವೆ ಒದಗಿಸಲು ಸಹಕಾರಿಯಾಗಲಿದೆ.

ಟೈರ್-2 ಮತ್ತು ಟೈರ್-3 ನಗರಗಳಿಗೆ ವಿಶೇಷ ಆದ್ಯತೆ
ದೇಶದ ಪ್ರಮುಖ ಮಹಾನಗರಗಳಷ್ಟೇ ಅಲ್ಲದೆ ಸಣ್ಣ ನಗರಗಳಿಗೂ ವಾಯು ಸಂಪರ್ಕದ ಲಾಭ ಸಿಗಬೇಕು ಎಂಬ ಉದ್ದೇಶದಿಂದ ಆಯ್ದ ಟೈರ್-2 ಮತ್ತು ಟೈರ್-3 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಗೆ (Operation and Maintenance) ಕೇಂದ್ರ ಸರ್ಕಾರ ನೇರ ಬೆಂಬಲ ನೀಡಲಿದೆ. ಇದು ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮತ್ತು ಸುಗಮವಾಗಿ ವಿಮಾನ ಸಂಚಾರ ನಡೆಸಲು ದಾರಿ ಮಾಡಿಕೊಡಲಿದೆ.
ಮುಂದಿನ ಒಂದು ದಶಕದಲ್ಲಿ ದೇಶಾದ್ಯಂತ ಒಟ್ಟು 100 ಹೊಸ ವಿಮಾನ ನಿಲ್ದಾಣಗಳು ಹಾಗೂ 200 ಹೆಲಿಪೋರ್ಟ್‌ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಇದಕ್ಕಾಗಿ ಬರೋಬ್ಬರಿ 29 ಸಾವಿರ ಕೋಟಿ ರೂಪಾಯಿಗಳ ಬೃಹತ್ ಬಜೆಟ್ ಅನ್ನು ಮೀಸಲಿಡಲಾಗಿದೆ ಎಂದು ರಾಮ್ ಮೋಹನ್ ನಾಯ್ಡು ಅವರು ಮಾಹಿತಿ ನೀಡಿದ್ದಾರೆ.
ಆತ್ಮನಿರ್ಭರ ಭಾರತಕ್ಕೆ ಮತ್ತಷ್ಟು ಬಲ
ಹೊಸ ಉಡಾನ್ ಯೋಜನೆಯು ಕೇವಲ ಪ್ರಯಾಣಿಕರ ಸೌಕರ್ಯಕ್ಕಷ್ಟೇ ಸೀಮಿತವಾಗಿರದೆ, ದೇಶದ ಒಟ್ಟಾರೆ ಆರ್ಥಿಕತೆಗೂ ಭದ್ರ ಬುನಾದಿ ಹಾಕಲಿದೆ. ಭಾರತದಲ್ಲೇ ವಿಮಾನಗಳ ಉತ್ಪಾದನೆಯನ್ನು ಉತ್ತೇಜಿಸುವುದು, ವಿಮಾನಗಳ ನಿರ್ವಹಣೆ ಮತ್ತು ದುರಸ್ತಿ (MRO) ವ್ಯವಸ್ಥೆಯನ್ನು ಬಲಪಡಿಸುವುದು, ಪ್ರಾದೇಶಿಕ ಪ್ರವಾಸೋದ್ಯಮಕ್ಕೆ ಚಾಲನೆ ನೀಡುವುದು ಹಾಗೂ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಇದು ‘ಆತ್ಮನಿರ್ಭರ ಭಾರತ’ದ ಕನಸನ್ನು ಸಾಕಾರಗೊಳಿಸಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: