ದಕ್ಷ ಕಾರ್ಯಾಚರಣೆ, ಅಪಾರ ಸಾಧನೆ: ದಕ್ಷಿಣ ಪಶ್ಚಿಮ ರೈಲ್ವೆಯ RPF ತಂಡದಿಂದ 33 ಮಕ್ಕಳ ರಕ್ಷಣೆ, ₹12.5 ಕೋಟಿ ಮೌಲ್ಯದ ಮಾದಕ ದ್ರವ್ಯ ಜಪ್ತಿ.
ವರದಿಗಾರರು (Reporter)
Hemanth Rajashekar07:51 AM IST

ಬೆಂಗಳೂರು: ಪ್ರಯಾಣಿಕರ ಸುರಕ್ಷತೆ, ಆಸ್ತಿಪಾಸ್ತಿಗಳ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ದಕ್ಷಿಣ ಪಶ್ಚಿಮ ರೈಲ್ವೆಯ (SWR) ರೈಲ್ವೆ ಸುರಕ್ಷತಾ ಪಡೆ (RPF) ಮತ್ತೊಮ್ಮೆ ಅತ್ಯುತ್ತಮ ಸಾಧನೆ ಮಾಡಿದೆ. ಆಗಸ್ಟ್ 2026ರ ಮಾಸಿಕ ಕಾರ್ಯಕ್ಷಮತೆ ವರದಿಯನ್ನು ಬಿಡುಗಡೆ ಮಾಡಿರುವ ಆರ್‌ಪಿಎಫ್, ಈ ಅವಧಿಯಲ್ಲಿ ಕೈಗೊಂಡ ಪ್ರಮುಖ ಕಾರ್ಯಾಚರಣೆಗಳು, ಅಪರಾಧ ತಡೆ ಚಟುವಟಿಕೆಗಳು ಮತ್ತು ಮಾನವೀಯ ಸೇವೆಗಳ ವಿವರಗಳನ್ನು ಹಂಚಿಕೊಂಡಿದೆ.
ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಭದ್ರತೆಯನ್ನು ಹೆಚ್ಚಿಸುವ ಜೊತೆಗೆ, ಮಾದಕ ದ್ರವ್ಯ ಕಳ್ಳಸಾಗಣೆ ತಡೆಯುವುದು, ಕಪ್ಪುಮಾರುಕಟ್ಟೆಯಲ್ಲಿ ಟಿಕೆಟ್ ಮಾರಾಟ ಜಾಲವನ್ನು ಭೇದಿಸುವುದು ಹಾಗೂ ಸಂಕಷ್ಟದಲ್ಲಿರುವ ಯುವಕರು ಮತ್ತು ಹಿರಿಯರಿಗೆ ನೆರವಾಗುವ ನಿಟ್ಟಿನಲ್ಲಿ ಪಡೆ ಮಹತ್ವದ ಮೈಲಿಗಲ್ಲು ಸಾಧಿಸಿದೆ.
‘ಆಪರೇಷನ್ ನನ್ಹೆ ಫರಿಶ್ತೆ’ ಮತ್ತು ‘ಆಪರೇಷನ್ ಡಿಗ್ನಿಟಿ’: ಮಾನವೀಯತೆಯ ಸ್ಪಂದನೆ
ಸಾಮಾಜಿಕ ಕಳಕಳಿಯ ಭಾಗವಾಗಿ ಆರ್‌ಪಿಎಫ್ ಹಮ್ಮಿಕೊಂಡಿರುವ ‘ಆಪರೇಷನ್ ನನ್ಹೆ ಫರಿಶ್ತೆ’ (Operation Nanhe Faristheh) ಅಭಿಯಾನದ ಅಡಿಯಲ್ಲಿ ಒಟ್ಟು 33 ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಮನೆ ತೊರೆದು ಬಂದಿದ್ದ ಅಥವಾ ಕುಟುಂಬದಿಂದ ಬೇರ್ಪಟ್ಟಿದ್ದ 27 ಬಾಲಕರು ಹಾಗೂ 6 ಬಾಲಕಿಯರನ್ನು ಆರ್‌ಪಿಎಫ್ ಸಿಬ್ಬಂದಿ ಗುರುತಿಸಿ, ಸೂಕ್ತ ತನಿಖೆ ಮತ್ತು ಪರಿಶೀಲನೆಗಳ ನಂತರ ಸರ್ಕಾರೇತರ ಸಂಸ್ಥೆಗಳು (NGO) ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ಪೋಲಿಸರಿಗೆ ಹಸ್ತಾಂತರಿಸಿದ್ದಾರೆ.
ಅದೇ ರೀತಿ, ‘ಆಪರೇಷನ್ ಡಿಗ್ನಿಟಿ’ (Operation Dignity) ಮೂಲಕ ನಿಲ್ದಾಣಗಳಲ್ಲಿ ಅಸಹಾಯಕರಾಗಿ ಅಲೆಯುತ್ತಿದ್ದ, ಆರೈಕೆ ಮತ್ತು ರಕ್ಷಣೆಯ ಅಗತ್ಯವಿದ್ದ ನಾಲ್ವರು ಹಿರಿಯ ನಾಗರಿಕರನ್ನು ರಕ್ಷಿಸಲಾಗಿದೆ. ಸೂಕ್ತ ದಾಖಲೆಗಳ ಪರಿಶೀಲನೆಯ ನಂತರ ಅವರನ್ನು ಮತ್ತೆ ಅವರ ಕುಟುಂಬಸ್ಥರೊಂದಿಗೆ ಸೇರಿಸಲಾಗಿದೆ ಅಥವಾ ಸೂಕ್ತ ಕಲ್ಯಾಣ ಸಂಸ್ಥೆಗಳ ಆಶ್ರಯಕ್ಕೆ ಒಪ್ಪಿಸಲಾಗಿದೆ.
‘ಆಪರೇಷನ್ ನಾರ್ಕೋಸ್’: ₹12.5 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ಮಾದಕ ದ್ರವ್ಯಗಳ ವಿರುದ್ಧ ಸಮರ ಸಾರಿರುವ ಆರ್‌ಪಿಎಫ್ ‘ಆಪರೇಷನ್ ನಾರ್ಕೋಸ್’ (Operation Narcos) ಅಡಿಯಲ್ಲಿ ಐತಿಹಾಸಿಕ ಯಶಸ್ಸು ಗಳಿಸಿದೆ. ರೈಲುಗಳ ಮೂಲಕ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 127.5 ಕೆಜಿ ಗಾಂಜಾ ಮತ್ತು ಭಾರಿ ಪ್ರಮಾಣದ 14.98 ಕೆಜಿ ಅಂಫೆಟಮೈನ್ (Amphetamine) ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಒಟ್ಟು ಸಿಕ್ಕಿಬಿದ್ದ ಮಾದಕ ದ್ರವ್ಯಗಳ ಮೌಲ್ಯ ಸುಮಾರು ₹12.5 ಕೋಟಿ ಎಂದು ಅಂದಾಜಿಸಲಾಗಿದೆ. ಈ ಜಾಲಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ.
ಜೊತೆಗೆ, ‘ಆಪರೇಷನ್ ಸತರ್ಕ್’ (Operation Satark) ಅಡಿಯಲ್ಲಿ ಅಕ್ರಮ ಮಧ್ಯ ಸಾಗಣೆ ವಿರುದ್ಧ ನಡೆಸಿದ ದಾಳಿಯಲ್ಲಿ 8 ಪ್ರಕರಣಗಳನ್ನು ದಾಖಲಿಸಲಾಗಿದ್ದು, 89 ಲೀಟರ್ ಅಕ್ರಮ ಮದ್ಯವನ್ನು ಜಪ್ತಿ ಮಾಡಿ ಮುಂದಿನ ಕ್ರಮಕ್ಕಾಗಿ ಅಬಕಾರಿ ಇಲಾಖೆಗೆ ಒಪ್ಪಿಸಲಾಗಿದೆ.

ಟಿಕೆಟ್ ದಲ್ಲಾಳಿಗಳ ವಿರುದ್ಧ ‘ಆಪರೇಷನ್ ಉಪಲಬ್ಧ’
ರೈಲ್ವೆ ಟಿಕೆಟ್‌ಗಳನ್ನು ಅಕ್ರಮವಾಗಿ ಖರೀದಿ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ದಲ್ಲಾಳಿಗಳ (Touts) ವಿರುದ್ಧ ‘ಆಪರೇಷನ್ ಉಪಲಬ್ಧ’ (Operation Uplabdh) ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ವಲಯದ ವಿವಿಧ ಟ್ರಾವೆಲ್ ಏಜೆನ್ಸಿಗಳ ಮೇಲೆ ದಿಢೀರ್ ದಾಳಿ ನಡೆಸಿದ ಆರ್‌ಪಿಎಫ್ ಸಿಬ್ಬಂದಿ, ರೈಲ್ವೆ ಕಾಯ್ದೆಯ ಸೆಕ್ಷನ್ 143ರ ಅಡಿಯಲ್ಲಿ 12 ದಲ್ಲಾಳಿಗಳನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯ ವೇಳೆ ₹53,001 ಮೌಲ್ಯದ 18 ಸಕ್ರಿಯ (Live) ಟಿಕೆಟ್‌ಗಳು ಹಾಗೂ ₹2,32,909 ಮೌಲ್ಯದ 56 ಬಳಸಿದ (Used) ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಯಾಣಿಕರ ಭದ್ರತೆ ಹಾಗೂ ‘ಮೇರಿ ಸಹೇಲಿ’ ಇನಿಶಿಯೇಟಿವ್
ರೈಲು ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರು ಮರೆತುಬಿಟ್ಟು ಹೋದ ಅಥವಾ ಕಳೆದುಕೊಂಡ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಚಿನ್ನಾಭರಣಗಳನ್ನು ಆರ್‌ಪಿಎಫ್ ಯಶಸ್ವಿಯಾಗಿ ಪತ್ತೆಹಚ್ಚಿದೆ. ಒಟ್ಟು 67 ಪ್ರತ್ಯೇಕ ಘಟನೆಗಳಲ್ಲಿ ತಕ್ಷಣ ಸ್ಪಂದಿಸಿದ ಸಿಬ್ಬಂದಿ, ₹66.41 ಲಕ್ಷ ಮೌಲ್ಯದ ವಸ್ತುಗಳನ್ನು ಮರಳಿ ಪಡೆದು ಅವರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಭದ್ರತೆಗಾಗಿ ಜಾರಿಯಲ್ಲಿರುವ ‘ಮೇರಿ ಸಹೇಲಿ’ (Meri Saheli) ಯೋಜನೆಯಡಿ, ಪ್ರಸ್ತುತ 32 ವಿಶೇಷ, ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ನಿರಂತರ ನಿಗಾವಹಿಸಲಾಗುತ್ತಿದೆ. ಮಹಿಳಾ ಪ್ರಯಾಣಿಕರಿಗೆ ಗರಿಷ್ಠ ಭದ್ರತೆ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅಲ್ಲದೆ, ವಲಯದಾದ್ಯಂತ ಪ್ರತಿದಿನ 125 ರಿಂದ 130 ಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಿ, 36 ರಿಂದ 40 ಎಕ್ಸ್‌ಪ್ರೆಸ್ ಹಾಗೂ ವಿಶೇಷ ರೈಲುಗಳಿಗೆ ಭದ್ರತಾ ಬೆಂಗಾವಲು (Escort) ಒದಗಿಸಲಾಗುತ್ತಿದೆ.
ದಕ್ಷಿಣ ಪಶ್ಚಿಮ ರೈಲ್ವೆಯ ಆರ್‌ಪಿಎಫ್ ತೋರಿರುವ ಈ ನಿರಂತರ ಜಾಗರೂಕತೆ ಮತ್ತು ಕ್ಷಿಪ್ರ ಕಾರ್ಯಾಚರಣೆಯು ಪ್ರಯಾಣಿಕರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ರಾಜಕೀಯ ಕಂಪನ: ಸಚಿವ ಸತೀಶ್ ಜಾರಕಿಹೊಳಿ ಕುಟುಂಬದ 18 ನೆಲೆಗಳ ಮೇಲೆ ಇಡಿ ದಿಢೀರ್ ದಾಳಿ.