ಮಂಗಳೂರು: ನಕಲಿ ಆಧಾರ್ ಹೊಂದಿದ್ದ 8 ಅಕ್ರಮ ಬಾಂಗ್ಲಾದೇಶಿಯರ ಜೊತೆ, ದೇಶಕ್ಕೇ ಕಂಟಕವಾಗಿದ್ದ ಮೂವರು ಭಾರತೀಯ ಏಜೆಂಟರ ಬಂಧನ.
ವರದಿಗಾರರು (Reporter)
Hemanth Rajashekar12:03 AM IST

ಮಂಗಳೂರು (ಸುರತ್ಕಲ್): ಕರ್ನಾಟಕದ ಕರಾವಳಿ ನಗರಿ ಮಂಗಳೂರಿನ ಸುರತ್ಕಲ್‌ನಲ್ಲಿ ಆತಂಕಕಾರಿ ಜಾಲವೊಂದನ್ನು ಭೇದಿಸಿರುವ ಸುರತ್ಕಲ್ ಪೊಲೀಸರು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನೆಲೆಸಿದ್ದ ಎಂಟು ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ, ಈ ಅಕ್ರಮ ನುಸುಳುಕೋರರಿಗೆ ಭಾರತದೊಳಗೆ ಬರಲು ದಾರಿ ಮಾಡಿಕೊಟ್ಟು, ನಕಲಿ ಗುರುತಿನ ಚೀಟಿ ಹಾಗೂ ಕೆಲಸದ ವ್ಯವಸ್ಥೆ ಕಲ್ಪಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮೂವರು ಪ್ರಮುಖ ಭಾರತೀಯ ಏಜೆಂಟರನ್ನು ಸಹ ಕಂಬಿ ಎಣಿಸುವಂತೆ ಮಾಡಿದ್ದಾರೆ.
ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ನುಸುಳುಕೋರರು
ಸುರತ್ಕಲ್‌ನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ತಂಡದ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸಿದ್ದರು. ಈ ವೇಳೆ ಎಂಟು ಜನ ಬಾಂಗ್ಲಾದೇಶದ ರಾಜಶಾಹಿ ಮೂಲದವರು ಯಾವುದೇ ಅಧಿಕೃತ ವೀಸಾ ಅಥವಾ ಪಾಸ್‌ಪೋರ್ಟ್ ಇಲ್ಲದೆ ಭಾರತದ ಗಡಿ ದಾಟಿ ಅಕ್ರಮವಾಗಿ ನುಸುಳಿರುವುದು ದೃಢಪಟ್ಟಿದೆ. ಬಂಧಿತರಿಂದ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ವಿಳಾಸ ಹೊಂದಿದ್ದ ನಕಲಿ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂಲ ಆಧಾರ್ ಕಾರ್ಡ್‌ಗಳ ಮೇಲೆ ತಮ್ಮದೇ ಭಾವಚಿತ್ರಗಳನ್ನು ಅಂಟಿಸಿ, ಕಲರ್ ಜೆರಾಕ್ಸ್ ಮಾಡಿ ಇವರು ಭಾರತೀಯ ನಾಗರಿಕರ ಸೋಗಿನಲ್ಲಿ ಓಡಾಡುತ್ತಿದ್ದರು.

ದೇಶದ ಸುರಕ್ಷತೆಗೆ ಕಂಟಕವಾದ ಮೂವರು ಭಾರತೀಯರ ಬಂಧನ
ಅಕ್ರಮ ವಲಸಿಗರಿಗಿಂತಲೂ ದೇಶದ ಆಂತರಿಕ ಭದ್ರತೆಗೆ ಅತಿ ದೊಡ್ಡ ಭೀತಿಯಾಗಿ ಕಾಡುತ್ತಿರುವುದು ಇಂತಹ ನುಸುಳುಕೋರರಿಗೆ ಭಾರತದೊಳಗೆ ಕೆಂಪು ಹಾಸು ಹಾಸುವ ದೇಶದ್ರೋಹಿ ದಲ್ಲಾಳಿಗಳು. ಈ ಪ್ರಕರಣದಲ್ಲಿ ಬಾಂಗ್ಲಾದೇಶಿಯರಿಗೆ ಸುರತ್ಕಲ್ ಮತ್ತು ಮಂಗಳೂರಿನಲ್ಲಿ ಆಶ್ರಯ, ನಕಲಿ ಆಧಾರ್ ಕಾರ್ಡ್ ಹಾಗೂ ಉದ್ಯೋಗದ ವ್ಯವಸ್ಥೆ ಮಾಡಿಕೊಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮೂವರು ಭಾರತೀಯ ದಲ್ಲಾಳಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೊಯ್ದಿನ್ ಇಸ್ಲಾಂ (35), ದಿಲ್ವರ್ ಹುಸೇನ್ (29) ಮತ್ತು ರಸೂಲ್ ಇಸ್ಲಾಂ (23) ಎಂದು ಗುರುತಿಸಲಾಗಿದೆ. ಮೊಯ್ದಿನ್ ಮತ್ತು ದಿಲ್ವರ್‌ನನ್ನು ಸ್ಥಳೀಯವಾಗಿ ಬಂಧಿಸಲಾಗಿದ್ದರೆ, ಮತ್ತೊಬ್ಬ ಆರೋಪಿ ರಸೂಲ್ ಇಸ್ಲಾಂನನ್ನು ಕೋಲ್ಕತ್ತಾ ಪೊಲೀಸರ ನೆರವಿನೊಂದಿಗೆ ಪಶ್ಚಿಮ ಬಂಗಾಳದಲ್ಲಿ ಸೆರೆಹಿಡಿಯಲಾಗಿದೆ.
ಆಂತರಿಕ ಭದ್ರತೆಗೆ ದಲ್ಲಾಳಿಗಳೇ ಅತಿ ದೊಡ್ಡ ಮುಳ್ಳು: ಗಡಿ ದಾಟಿಸುವ ಕೃತ್ಯದಿಂದ ಹಿಡಿದು ಸ್ಥಳೀಯವಾಗಿ ವಸತಿ ಮತ್ತು ಕೆಲಸ ಕೊಡಿಸುವವರೆಗೆ ಈ ಜಾಲ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಸ್ವಾರ್ಥ ಲಾಭಕ್ಕಾಗಿ ದೇಶದ ಭದ್ರತೆಯನ್ನು ಪಣಕ್ಕಿಡುತ್ತಿರುವ ಇಂತಹ ಸ್ಥಳೀಯ ದಲ್ಲಾಳಿಗಳು, ಅಕ್ರಮ ವಲಸಿಗರಿಗಿಂತಲೂ ದೇಶಕ್ಕೆ ಭಾರಿ ದೊಡ್ಡ ಅಪಾಯಕಾರಿಯಾಗಿದ್ದಾರೆ.
ಮುಂದುವರಿದ ತನಿಖೆ ಮತ್ತು ಕಠಿಣ ಕ್ರಮ
ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಬಂಧಿತ ಬಾಂಗ್ಲಾದೇಶಿ ಪ್ರಜೆಗಳನ್ನು ನಿಯಮಾನುಸಾರ ಗಡಿಪಾರು ಮಾಡಲು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (FRRO) ವರದಿ ಸಲ್ಲಿಸಲಾಗಿದೆ. ಈ ಜಾಲದ ಹಿಂದೆ ಇನ್ನು ಯಾರಾದರೂ ಪ್ರಭಾವಿ ವ್ಯಕ್ತಿಗಳು ಅಥವಾ ಸ್ಥಳೀಯ ಏಜೆಂಟರು ಭಾಗಿಯಾಗಿದ್ದಾರೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಆದಿಚುಂಚನಗಿರಿ ಮಠದ ₹100 ಕೋಟಿ ಆಸ್ತಿಗೆ ಕನ್ನ; ಉಪ ತಹಶೀಲ್ದಾರ್ ಸೇರಿ 10 ಮಂದಿ ಕಟಕಟೆಗೆ!