362 ಕೆಎಎಸ್ ಅಧಿಕಾರಿಗಳಿಗೆ ಸಂಕಷ್ಟ: 2022ರ ಕಾಯ್ದೆ ರದ್ದು
ವರದಿಗಾರರು (Reporter)
Ashwini Vikram11:24 AM IST

ಕರ್ನಾಟಕದ ಆಡಳಿತ ಸೇವೆಯಲ್ಲಿ ಕೆಲಸ ಮಾಡುತ್ತಿರುವ 362 ಕೆಎಎಸ್ (KAS) ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದ ದೀರ್ಘಕಾಲದ ವಿವಾದಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 2011ರ ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಪ್ರಕ್ರಿಯೆಯನ್ನು ಮರುಜಾರಿಗೆ ತರಲು ರಾಜ್ಯ ಸರ್ಕಾರ 2022ರಲ್ಲಿ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ 29/10/2026ರಂದು ಅಸಂವಿಧಾನಿಕ ಎಂದು ಘೋಷಿಸಿ ರದ್ದುಗೊಳಿಸಿದೆ. ಇದರಿಂದ ಈ ಕಾಯ್ದೆಯಡಿ ನೇಮಕಗೊಂಡಿದ್ದ 191 ಅಧಿಕಾರಿಗಳ ಹುದ್ದೆಗಳೂ ಅಂತ್ಯಗೊಳ್ಳಲಿವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
362 ಕೆಎಎಸ್ ನೇಮಕಾತಿ ವಿವಾದಕ್ಕೆ ಸುಪ್ರೀಂ ಕೋರ್ಟ್ ತೀರ್ಪು
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಆಯ್ಕೆ ಮತ್ತು ನೇಮಕಾತಿ ದೃಢೀಕರಣ) ಕಾಯ್ದೆ-2022 ಅನ್ನು ರದ್ದುಗೊಳಿಸಿದೆ.
ಶಾಸಕಾಂಗಕ್ಕೆ ಕಾನೂನು ರೂಪಿಸುವ ಅಧಿಕಾರವಿದೆ. ಆದರೆ, ನ್ಯಾಯಾಲಯ ಈಗಾಗಲೇ ನೀಡಿರುವ ತೀರ್ಪನ್ನು ಮತ್ತೊಂದು ಕಾಯ್ದೆಯ ಮೂಲಕ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಹಿಂದಿನ ನ್ಯಾಯಾಲಯಗಳ ತೀರ್ಪುಗಳನ್ನು ಬದಿಗೊತ್ತುವ ಉದ್ದೇಶದಿಂದ 2022ರ ಕಾಯ್ದೆ ಜಾರಿಗೆ ತರಲಾಗಿತ್ತು ಎಂಬ ಅಂಶವನ್ನೂ ನ್ಯಾಯಾಲಯ ಗಮನಿಸಿದೆ.
ಈ ಪ್ರಕರಣದಲ್ಲಿ ಶ್ರೀನಿವಾಸ ಟಿ. ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶಗಳನ್ನೂ ರದ್ದುಗೊಳಿಸಿದೆ.
2011ರ ಕೆಪಿಎಸ್ಸಿ ಪರೀಕ್ಷೆಯಲ್ಲಿ ಏನಾಗಿತ್ತು?
2011ರ ನವೆಂಬರ್ 3ರಂದು ಕೆಪಿಎಸ್ಸಿ ಗ್ರೂಪ್ ಎ ಮತ್ತು ಬಿ ಹುದ್ದೆಗಳ 362 ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಈ ಪರೀಕ್ಷೆಗೆ ಒಟ್ಟು 1,38,307 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 91,667 ಮಂದಿ ಪ್ರಾಥಮಿಕ ಪರೀಕ್ಷೆ ಬರೆದಿದ್ದರು. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ 6,211 ಅಭ್ಯರ್ಥಿಗಳ ಪೈಕಿ 1,090 ಮಂದಿಯನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು.
ಆದರೆ, ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ 2013ರಲ್ಲಿ ರಾಜ್ಯ ಸರ್ಕಾರ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸುವುದನ್ನು ತಡೆಹಿಡಿಯಿತು. ಬಳಿಕ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ದಳಕ್ಕೆ (CID) ವಹಿಸಲಾಯಿತು.
ಸಿಐಡಿ ತನಿಖೆಯಲ್ಲಿ ಕೆಪಿಎಸ್ಸಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ, ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಭಾವ ಬೀರಿರುವ ಗಂಭೀರ ಆರೋಪಗಳು ಬೆಳಕಿಗೆ ಬಂದಿದ್ದವು. ಹಲವು ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಒಂದೇ ರೀತಿಯ ಅಂಕಗಳನ್ನು ನೀಡಿರುವುದು, ಆಯೋಗದ ಕಚೇರಿಯಲ್ಲಿದ್ದ ಡಿಜಿಟಲ್ ವಿಡಿಯೋ ರೆಕಾರ್ಡರ್ ಬದಲಾಯಿಸಿರುವುದು ಸೇರಿದಂತೆ ಹಲವು ಅಂಶಗಳನ್ನು ನ್ಯಾಯಾಲಯ ಗಮನಿಸಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿತ್ತು. ಕರ್ನಾಟಕ ಹೈಕೋರ್ಟ್ ಕೂಡ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿತ್ತು. ಬಳಿಕ ಸುಪ್ರೀಂ ಕೋರ್ಟ್ ಕೂಡ ನೇಮಕಾತಿ ರದ್ದತಿ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು.
2022ರಲ್ಲಿ ಕಾಯ್ದೆ ಜಾರಿಗೆ ತಂದಿದ್ದೇಕೆ?
ನೇಮಕಾತಿ ರದ್ದಾದ ಬಳಿಕ ಆಯ್ಕೆಯಾಗಿದ್ದ ಅಭ್ಯರ್ಥಿಗಳು ನ್ಯಾಯಕ್ಕಾಗಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KAT) ಮೊರೆ ಹೋಗಿದ್ದರು. ಈ ನಡುವೆ ರಾಜ್ಯ ಸರ್ಕಾರ 2022ರಲ್ಲಿ ಹೊಸ ಕಾಯ್ದೆಯನ್ನು ಜಾರಿಗೆ ತಂದು 2011ರ ಆಯ್ಕೆ ಪ್ರಕ್ರಿಯೆಗೆ ಮರುಜೀವ ನೀಡಲು ಮುಂದಾಗಿತ್ತು.
ಈ ಕಾಯ್ದೆಯಡಿ ಹಿಂದಿನ ನೇಮಕಾತಿ ರದ್ದತಿ ಆದೇಶಗಳನ್ನು ರದ್ದುಗೊಳಿಸಿ, ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಅಭ್ಯರ್ಥಿಗಳ ತಪ್ಪಿಲ್ಲದಿದ್ದರೂ ಅವರಿಗೆ ಅನ್ಯಾಯವಾಗಬಾರದು ಎಂಬ ಕಾರಣವನ್ನು ಸರ್ಕಾರ ಮುಂದಿಟ್ಟಿತ್ತು.
ಈ ಕಾನೂನಿನ ಆಧಾರದ ಮೇಲೆ ಒಟ್ಟು 191 ಅಭ್ಯರ್ಥಿಗಳಿಗೆ ನೇಮಕಾತಿ ನೀಡಲಾಗಿತ್ತು. ಆದರೆ, ಆಯ್ಕೆಯಾಗಿದ್ದ 362 ಮಂದಿಯಲ್ಲಿ 46 ಅಭ್ಯರ್ಥಿಗಳ ಆಯ್ಕೆಯಲ್ಲಿ ಅಕ್ರಮ ಕಂಡುಬಂದಿತ್ತು. ನೇಮಕಾತಿ ಪಡೆದ 191 ಮಂದಿಯಲ್ಲಿಯೂ 14 ಮಂದಿ ಅಕ್ರಮದ ವ್ಯಾಪ್ತಿಗೆ ಬಂದಿದ್ದರು ಎಂದು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಈಗ ಸುಪ್ರೀಂ ಕೋರ್ಟ್ 2022ರ ಕಾಯ್ದೆಯನ್ನೇ ಅಸಂವಿಧಾನಿಕ ಎಂದು ಘೋಷಿಸಿರುವುದರಿಂದ ಅದರ ಆಧಾರದ ಮೇಲೆ ನೀಡಿದ್ದ ನೇಮಕಾತಿಗಳೂ ಅಂತ್ಯಗೊಳ್ಳಲಿವೆ ಎಂದು ಸ್ಪಷ್ಟಪಡಿಸಿದೆ.
ಅಧಿಕಾರಿಗಳಿಗೆ ಮರುಪರೀಕ್ಷೆ ಅವಕಾಶ: ಸರ್ಕಾರಕ್ಕೆ ಹೊಸ ಸೂಚನೆ
ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಕೆಲವು ಪ್ರಮುಖ ಸೂಚನೆಗಳನ್ನೂ ನೀಡಿದೆ. 2011ರ ನೇಮಕಾತಿ ಪ್ರಕ್ರಿಯೆಯನ್ನು ಮತ್ತೆ ಹಳೆಯ ಹಂತದಿಂದ ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿರುವ ನ್ಯಾಯಾಲಯ, ಪ್ರಸ್ತುತ ಗ್ರೂಪ್ ಎ ಮತ್ತು ಬಿ ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊಸದಾಗಿ ನೇಮಕಾತಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ಹಿಂದೆ ನೇಮಕಗೊಂಡು ಅಕ್ರಮದ ಆರೋಪದಿಂದ ಮುಕ್ತರಾಗಿರುವ ಅಧಿಕಾರಿಗಳು, ಪ್ರಕರಣದ ವಿಚಾರಣೆ ಬಾಕಿ ಇರುವ ಕೆಎಟಿ ಅರ್ಜಿದಾರರು ಹಾಗೂ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ ಆರು ಅಭ್ಯರ್ಥಿಗಳಿಗೆ ಹೊಸ ನೇಮಕಾತಿಯಲ್ಲಿ ಒಂದು ಬಾರಿಯ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಸೂಚಿಸಿದೆ.
ಪ್ರಸ್ತುತ ಸೇವೆಯಲ್ಲಿರುವ ಅಧಿಕಾರಿಗಳು ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ಆಯ್ಕೆಯಾದರೆ, ಅವರ ಹಿಂದಿನ ಸೇವಾವಧಿಯನ್ನು ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳ ಲೆಕ್ಕಾಚಾರಕ್ಕೆ ಪರಿಗಣಿಸಬೇಕು. ಆದರೆ, ಹೊಸ ನೇಮಕಾತಿ ದಿನಾಂಕದಿಂದಲೇ ಅವರ ಸೇವಾ ಹಿರಿತನವನ್ನು ಲೆಕ್ಕಹಾಕಬೇಕು. ಹಿಂದಿನ ಅವಧಿಗೆ ಬಾಕಿ ವೇತನ ಅಥವಾ ಹಿಂದಿನ ದಿನಾಂಕದಿಂದ ಕಲ್ಪಿತ ನೇಮಕಾತಿ ಸೌಲಭ್ಯ ನೀಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ನ ಈ ತೀರ್ಪಿನಿಂದ ರಾಜ್ಯ ಸರ್ಕಾರದ ಮುಂದಿನ ನಡೆ ಮಹತ್ವ ಪಡೆದುಕೊಂಡಿದೆ. ಹೊಸ ನೇಮಕಾತಿ ಅಧಿಸೂಚನೆ ಯಾವಾಗ ಹೊರಬೀಳಲಿದೆ ಮತ್ತು ಪ್ರಸ್ತುತ ಸೇವೆಯಲ್ಲಿರುವ ಅಧಿಕಾರಿಗಳ ಮುಂದಿನ ಸೇವಾ ಸ್ಥಿತಿಗತಿ ಹೇಗೆ ನಿರ್ಧಾರವಾಗಲಿದೆ ಎಂಬುದರ ಬಗ್ಗೆ ಈಗ ಕೆಎಎಸ್ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ALSO READ ;
ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಐವರು ಕನ್ನಡಿಗರು ಸಾವು
ಹಾರ್ಮುಜ್ ಜಲಸಂಧಿಯಲ್ಲಿ ತೈಲ ಹಡಗಿನ ಮೇಲೆ ದಾಳಿ: 27 ಭಾರತೀಯ ನಾವಿಕರು ಪಾರು!