ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಆದೇಶ: ಡಾ. ವೀರೇಂದ್ರ ಹೆಗ್ಗಡೆ ವಿರುದ್ಧ ನಡೆದಿತ್ತಾ ಭಾರಿ ಸಂಚು? ಚಿನ್ನಯ್ಯ ಬಿಚ್ಚಿಟ್ಟ ಸತ್ಯ.
ವರದಿಗಾರರು (Reporter)
Hemanth Rajashekar05:38 AM IST

ಕರ್ನಾಟಕ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ 2012ರ 17 ವರ್ಷದ ಬಾಲಕಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸುಮಾರು 14 ವರ್ಷಗಳ ನಂತರ ಬಿಗ್ ಟ್ವಿಸ್ಟ್ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದ ಈ ಘೋರ ಕೃತ್ಯದ ಕುರಿತು ನಿಷ್ಪಕ್ಷಪಾತ ಮತ್ತು ಸ್ವತಂತ್ರ ತನಿಖೆ ನಡೆಸುವಂತೆ ಮಾನ್ಯ ಸುಪ್ರೀಂ ಕೋರ್ಟ್ ಹೊಸ ಆದೇಶ ಹೊರಡಿಸಿದೆ. ಹಳೆಯ ತನಿಖಾಧಿಕಾರಿಗಳನ್ನು ಹೊರಗಿಟ್ಟು, ಹೊಸ ತನಿಖಾ ತಂಡವನ್ನು ರಚಿಸಿ ಮುಂದಿನ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಆರಂಭದಲ್ಲಿ ಕರ್ನಾಟಕ ಹೈಕೋರ್ಟ್ ಈ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿತ್ತು. ಸಂತ್ರಸ್ತೆಯ ಕುಟುಂಬದವರು ಮಾತ್ರ ಮರುತನಿಖೆಗೆ ಮನವಿ ಮಾಡಬಹುದು ಎಂದು ಹೇಳಿತ್ತು. ಆದರೆ, ಸುಪ್ರೀಂ ಕೋರ್ಟ್‌ನ ಈಗಿನ ಹಸ್ತಕ್ಷೇಪವು ಸೌಜನ್ಯ ಕುಟುಂಬಕ್ಕೆ ಮತ್ತು ನ್ಯಾಯಕ್ಕಾಗಿ ಕಾಯುತ್ತಿರುವ ಸಾರ್ವಜನಿಕರಿಗೆ ಹೊಸ ನಿರೀಕ್ಷೆಯ ಬೆಳಕನ್ನು ನೀಡಿದೆ.
ಪ್ರಕರಣದ ಹಿನ್ನೆಲೆ ಮತ್ತು ಹಳೆಯ ತನಿಖೆಗಳು
ಸೌಜನ್ಯ ಪ್ರಕರಣವನ್ನು ಹಿಂದೆ ಕರ್ನಾಟಕ ಸಿಐಡಿ (CID) ಮತ್ತು ಸಿಬಿಐ (CBI) ತನಿಖೆ ನಡೆಸಿದ್ದವು. ಸಿಬಿಐ ತನಿಖೆಯ ವೇಳೆ ಬಂಧಿಸಲ್ಪಟ್ಟ ಏಕೈಕ ಆರೋಪಿ ಸಂತೋಷ್ ರಾವ್ ಅವರನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 2023 ರಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಇದರ ನಂತರ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಅವರ ತಾಯಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ನಡುವೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆದರೆ, ಈಗ ಈ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ದೊಡ್ಡ ಮಟ್ಟದ ಸಂಚು ಹೆಣೆಯಲಾಗಿದೆ ಎಂಬ ಗಂಭೀರ ಆರೋಪಗಳು ಹೊರಬಂದಿವೆ.

ಧರ್ಮಸ್ಥಳ ಪ್ರಕರಣ: ಚಿನ್ನಯ್ಯ ಹೊರಹಾಕಿದ ಗಂಭೀರ ವಿಚಾರಗಳು
ವಿಶೇಷ ತನಿಖಾ ತಂಡ (SIT) ಬಂಧಿಸಿದ ಚಿನ್ನಯ್ಯ, ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ತನ್ನ ಮೇಲೆ ನಡೆದ ಒತ್ತಡ, ಬೆದರಿಕೆ ಹಾಗೂ ಹಣದ ಆಮಿಷಗಳ ಕುರಿತು ಪೋಲಿಸರಿಗೆ ದೂರು ನೀಡಿದ್ದು, ಹಲವು ಸ್ಪೋಟಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ:
- ಸಂಚಿನ ಆರಂಭ: ಉಜಿರೆಯಲ್ಲಿ ಕೆಲಸ ಮಾಡುತ್ತಿದ್ದಾಗ ವಿಠಲ ಗೌಡ ಎಂಬಾತ ಮೊದಲ ಬಾರಿಗೆ ತನ್ನನ್ನು ಸಂಪರ್ಕಿಸಿ ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿದ್ದಾಗಿ ಚಿನ್ನಯ್ಯ ತಿಳಿಸಿದ್ದಾನೆ.
- ಸಾಲು ಸಾಲು ಶವಗಳ ಸುಳ್ಳು ಕಥೆ: ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂತುಹಾಕಲಾಗಿದೆ ಅಥವಾ ಸುಡಲಾಗಿದೆ ಎಂದು ಹೇಳಿಕೆಯನ್ನು ನೀಡುವಂತೆ ತನಗೆ ಸೂಚಿಸಲಾಗಿತ್ತು ಎಂದು ಆತ ಆರೋಪಿಸಿದ್ದಾನೆ.
- ಹಣದ ಆಮಿಷ ಮತ್ತು ಬ್ಯಾಂಕ್ ವರ್ಗಾವಣೆ: ಮಹೇಶ್ ಶೆಟ್ಟಿ ತಿಮರೋಡಿ ತನಗೆ ಹಣ ನೀಡಲು ಯತ್ನಿಸಿದ್ದು, ಆ ಹಣವನ್ನು ಚಿನ್ನಯ್ಯ ನಿರಾಕರಿಸಿದ್ದಾಗ ಆತನ ಹೆಂಡತಿಯ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ ಸಭೆಗಳಿಗೆ ಕರೆಯಲಾಗಿತ್ತು.
- ಮಂಡ್ಯದಲ್ಲಿ ಸಭೆ ಹಾಗೂ ಮಾನಸಿಕ ಒತ್ತಡ: ಮಂಡ್ಯದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠಲ ಗೌಡ ಸೇರಿದಂತೆ ಇತರರನ್ನು ಭೇಟಿಯಾದಾಗ ಶವಗಳನ್ನು ಎಲ್ಲಿ ಹೂಳಲಾಗಿದೆ ಎಂದು ತೋರಿಸುವಂತೆ ಆತನ ಮೇಲೆ ಒತ್ತಡ ಹೇರಲಾಗಿತ್ತು.
- ದೆಹಲಿ ಮತ್ತು ಬೆಂಗಳೂರಿನಲ್ಲಿ ಸಹಿ ಸಂಗ್ರಹ: ದೆಹಲಿ ಮತ್ತು ಬೆಂಗಳೂರಿಗೆ ಕರೆದೊಯ್ದು, ವಕೀಲ ಕೆ.ವಿ. ಧನಂಜಯ್ ಅವರ ಕಚೇರಿಯಲ್ಲಿ ಪ್ರಕರಣದ ದಾಖಲೆಗಳನ್ನು ತೋರಿಸಲಾಗಿತ್ತು. ದಾಖಲೆಗಳ ನೈಜ ಉದ್ದೇಶವನ್ನು ತಿಳಿಸದೇ ಆತನಿಂದ ಸಹಿಗಳನ್ನು ಪಡೆಯಲಾಗಿತ್ತು.
- ರೂ. 50 ಲಕ್ಷದ ಆಮಿಷ ಮತ್ತು ಯೂಟ್ಯೂಬ್ ವೀಡಿಯೊ: ಧರ್ಮಸ್ಥಳ ಹಾಗೂ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಿದರೆ ರೂ. 50 ಲಕ್ಷ ಕೊಡುವುದಾಗಿ ಮಹೇಶ್ ಶೆಟ್ಟಿ ತಿಮರೋಡಿ ವಾಗ್ದಾನ ಮಾಡಿದ್ದರು. ಅಲ್ಲದೆ ಯೂಟ್ಯೂಬ್ ಚಾನೆಲ್‌ಗಾಗಿ ಹೇಳಿಕೆಗಳನ್ನು ಬಲವಂತವಾಗಿ ಹೇಳಿಸಿ ವೀಡಿಯೊ ರೆಕಾರ್ಡ್ ಮಾಡಲಾಗಿತ್ತು.
- ಪ್ರಕಾಶ್ ರಾಜ್ ಬೆಂಬಲದ ಆರೋಪ: ನಟ ಪ್ರಕಾಶ್ ರಾಜ್ ಅವರು ಗಿರೀಶ್ ಮಟ್ಟಣ್ಣನವರ್ ನೀಡುವ ಸೂಚನೆಗಳನ್ನು ಪಾಲಿಸುವಂತೆ ತನಗೆ ಪ್ರೋತ್ಸಾಹ ನೀಡಿದ್ದರು ಎಂದು ಚಿನ್ನಯ್ಯ ಆರೋಪಿಸಿದ್ದಾನೆ. SIT ರಚನೆಯಾದಾಗ ಕೆಲವರು ಸಂಭ್ರಮಿಸಿ, ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸುವುದಾಗಿ ಮಾತನಾಡಿಕೊಂಡಿದ್ದರು.
- ದೈಹಿಕ ಹಲ್ಲೆ ಮತ್ತು ಜೀವ ಬೆದರಿಕೆ: ಶವಗಳು ಇಲ್ಲದ ಜಾಗವನ್ನು ಶವ ಹೂತಿಟ್ಟ ಜಾಗವೆಂದು ತೋರಿಸಲು ತನಗೆ ತರಬೇತಿ ನೀಡಲಾಗಿತ್ತು. ಇದಕ್ಕೆ ಒಪ್ಪದಿದ್ದಾಗ ಗಿರೀಶ್ ಮಟ್ಟಣ್ಣನವರ್ ಗೋಡೆಗೆ ತಲೆ ಜಜ್ಜಿ ಹಲ್ಲೆ ನಡೆಸಿದ್ದಲ್ಲದೆ, ಮಹೇಶ್ ಶೆಟ್ಟಿ ತಿಮರೋಡಿ ಜಾತಿ ನಿಂದನೆ ಮಾಡಿ, ಹೆಂಡತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು.
ಧರ್ಮಸ್ಥಳದ ವಿರುದ್ಧ ಹೆಣೆದ ಗೂಢಾಲೋಚನೆ
ಚಿನ್ನಯ್ಯ ಈಗ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠಲ ಗೌಡ, ಜಯಂತ್, ಸಮೀರ್ ಎಂಡಿ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದು, ತನಗೆ ಬೆದರಿಕೆ ಹಾಕಿ, ಹಲ್ಲೆ ನಡೆಸಿ, ಧರ್ಮಸ್ಥಳ ಹಾಗೂ ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸುಳ್ಳು ಸಾಕ್ಷಿ ನುಡಿಯುವಂತೆ ಒತ್ತಡ ಹೇರಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾನೆ.
ಈ ಸಮಗ್ರ ಸಂಚಿಗೆ ಕೇರಳ ಮತ್ತು ಇತರ ಮೂಲಗಳಿಂದ ಧನಸಹಾಯ ಬಂದಿದ್ದು, ಪವಿತ್ರ ಹಿಂದೂ ಕ್ಷೇತ್ರವಾದ ಧರ್ಮಸ್ಥಳದ ಗೌರವಕ್ಕೆ ಭಂಗ ತರುವುದು ಮತ್ತು ಅದರ ಸುದೀರ್ಘ ಪರಂಪರೆಯನ್ನು ಕಳಂಕಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು ಎಂಬ ಆರೋಪಗಳು ಕೇಳಿಬಂದಿವೆ. ಸೌಜನ್ಯ ಪ್ರಕರಣದ ನೈಜ ಅಪರಾಧಿಗಳಿಗೆ ಶಿಕ್ಷೆಯಾಗುವುದರ ಜೊತೆಗೆ, ಧರ್ಮಸ್ಥಳದ ವಿರುದ್ಧ ನಡೆದಿರುವ ಈ ಗಂಭೀರ ಗೂಢಾಲೋಚನೆಯ ಕುರಿತೂ ಪೂರ್ಣ ಪ್ರಮಾಣದ ತನಿಖೆಯಾಗಿ ಕಾನೂನು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಜಾರ್ಖಂಡ್ ಮೂಲದ ಕುಖ್ಯಾತ ನಕ್ಸಲ್ ನಾಯಕ ಬ್ರಿಜೇಶ್ ಗಂಜು ವಾರಣಾಸಿಯಲ್ಲಿ ಎನ್‌ಕೌಂಟರ್‌ನಲ್ಲಿ ಹತ್ಯೆ.