ನೀಟ್ ಪರೀಕ್ಷೆ ಅಕ್ರಮ ಹೋರಾಟಕ್ಕೆ ಬಿಗ್ ಟ್ವಿಸ್ಟ್: 26ನೇ ದಿನಕ್ಕೆ ನಿರಾಹಾರ ದೀಕ್ಷೆ ಹಿಂಪಡೆದ ಸೋನಮ್ ವಾಂಗ್‌ಚುಕ್!
ವರದಿಗಾರರು (Reporter)
Hemanth Rajashekar07:12 AM IST

ನೀಟ್ (NEET) ಪರೀಕ್ಷೆ ಅಕ್ರಮ ಖಂಡಿಸಿ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕೆಂದು ಆಗ್ರಹಿಸಿ ಕಳೆದ 26 ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ನಿರಾಹಾರ ದೀಕ್ಷೆಯನ್ನು ಖ್ಯಾತ ಪರಿಸರ ಹಾಗೂ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್‌ಚುಕ್ ಗುರುವಾರ ತಡರಾತ್ರಿ ಕೊನೆಗೊಳಿಸಿದ್ದಾರೆ.
ಇಬ್ಬರು ಕೇಂದ್ರ ಸಚಿವರ ಸಮ್ಮುಖದಲ್ಲಿ ಕೆಲವು ಪ್ರಮುಖ ಷರತ್ತುಗಳ ಮೇಲೆ ಅವರು ಉಪವಾಸ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ ಎಂದು ಲೇಹ್ ಅಪೆಕ್ಸ್ ಬಾಡಿಯ ಸಹ-ಸಂಚಾಲಕ ಛೇರಿಂಗ್ ದೋರ್ಜೆ ಲಾಕ್ರುಕ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಲಿಖಿತ ಭರವಸೆ
ದೋರ್ಜೆ ಲಾಕ್ರುಕ್ ಅವರ ಪ್ರಕಾರ, ಹೋರಾಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಿಂಸಾಚಾರದಲ್ಲಿ ತೊಡಗಿರದಿದ್ದರೆ ಅವರ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಿದೆ. ಇದರ ಜೊತೆಗೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಮಾನಸಿಕ ಆಘಾತ ತಾಳಲಾರದೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಧನಾತ್ಮಕವಾಗಿ ಪರಿಶೀಲಿಸುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸೋನಮ್ ವಾಂಗ್‌ಚುಕ್ ಉಪವಾಸ ಅಂತ್ಯಗೊಳಿಸಿರುವುದಕ್ಕೆ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭೀಜಿತ್ ದೀಪ್ಕೆ ಸಂತಸ ವ್ಯಕ್ತಪಡಿಸಿದ್ದು, ನಿರಾಳತೆ ವ್ಯಕ್ತಪಡಿಸಿದ್ದಾರೆ. ಆದರೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸಿಜೆಪಿ ಮತ್ತು ವಿದ್ಯಾರ್ಥಿ ಸಂಘಟನೆಗಳು ಪಟ್ಟು ಹಿಡಿದಿವೆ.
ವಿದ್ಯಾರ್ಥಿಗಳ ಕಳವಳಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ
ಮತ್ತೊಂದೆಡೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ನೀಟ್ ಪರೀಕ್ಷಾ ಅಕ್ರಮದ ಕುರಿತು ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳ ಆತಂಕವನ್ನು ಶಮನಗೊಳಿಸಲು ಯತ್ನಿಸಿದ್ದಾರೆ.
“ಪ್ರಶ್ನೆಪತ್ರಿಕೆ ಸೋರಿಕೆಯು ಸಾಧಾರಣ ಲೋಪವಲ್ಲ; ಇದು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಅಗಾಧ ವೇದನೆ ಉಂಟುಮಾಡುವ ಅನ್ಯಾಯವಾಗಿದೆ ಎಂಬುದನ್ನು ನಾನು ಚೆನ್ನಾಗಿ ಬಲ್ಲೆ. ಕಳೆದ ಎರಡೂವರೆ ತಿಂಗಳುಗಳಲ್ಲಿ ನಾವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ತಪ್ಪಿತಸ್ಥರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದಕ್ಕೂ ಮುನ್ನ, ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರಿಗೆ ತರಿತ ಶಿಕ್ಷೆ ಒದಗಿಸಲು ಫಾಸ್ಟ್ ಟ್ರ್ಯಾಕ್ (ಶೀಘ್ರ ಗತಿ) ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಪ್ರಧಾನಿ ಘೋಷಿಸಿದ್ದರು. ಅದರಂತೆ ದೆಹಲಿ ಹೈಕೋರ್ಟ್, ನ್ಯಾಯಮೂರ್ತಿ ಅನು ಗ್ರೋವರ್ ಬಾಲಿಗಾ ಅವರನ್ನು ಶೀಘ್ರ ಗತಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಇನ್ನು, ಸಿಜೆಪಿ (CJP) ನಿಯೋಗವು ಶುಕ್ರವಾರ (ಜುಲೈ 24, 2026) ಮಧ್ಯಾಹ್ನ 12:30 ಕ್ಕೆ ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚಿಸಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಭಾರತದ ಹೊಸ ಅಭೇದ್ಯ ವಾಯು ರಕ್ಷಾ ಕವಚ: ಡಿಆರ್‌ಡಿಒ ‘ಕುಶ’ ಸುದೀರ್ಘ ವ್ಯಾಪ್ತಿಯ ಕ್ಷಿಪಣಿ ಚೊಚ್ಚಲ ಪರೀಕ್ಷೆ ಯಶಸ್ವಿ.