ಕರ್ನಾಟಕ ಸುದ್ದಿ

ಎಸ್‌ಐಆರ್ ‘ಟಾರ್ಗೆಟ್’ ಕಾಟ, ಮೂವರು ನೌಕರರು ಸಾವು: ಮೇಲಧಿಕಾರಿಗಳ ಕಿರುಕುಳಕ್ಕೆ ನೌಕರರ ಆಕ್ರೋಶ.

Hemanth Rajashekar

ವರದಿಗಾರರು (Reporter)

Hemanth Rajashekar

03:05 AM IST

ಎಸ್‌ಐಆರ್ ‘ಟಾರ್ಗೆಟ್’ ಕಾಟ, ಮೂವರು ನೌಕರರು ಸಾವು: ಮೇಲಧಿಕಾರಿಗಳ ಕಿರುಕುಳಕ್ಕೆ ನೌಕರರ ಆಕ್ರೋಶ.

ಬೆಂಗಳೂರು: ಕರ್ನಾಟಕದಲ್ಲಿ ಕಂದಾಯ ಇಲಾಖೆ ಮತ್ತು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೆಳಹಂತದ ನೌಕರರ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ಇತ್ತೀಚೆಗೆ ಜಾರಿಗೆ ಬಂದಿರುವ ಕಡ್ಡಾಯ ಎಸ್‌ಐಆರ್ ಪ್ರಕ್ರಿಯೆಯ ಟಾರ್ಗೆಟ್ ಮುಗಿಸುವ ತೀವ್ರ ಒತ್ತಡ ಮತ್ತು ಮೇಲಧಿಕಾರಿಗಳ ಕಿರುಕುಳಕ್ಕೆ ಕೇವಲ ಕೆಲವೇ ದಿನಗಳ ಅಂತರದಲ್ಲಿ ಮೂವರು ಕಂದಾಯ ನೌಕರರು ಜೀವ ಕಳೆದುಕೊಂಡಿದ್ದಾರೆ. ಈ ಸಾಲು ಸಾಲು ಸಾವುಗಳು ಇಡೀ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ನೌಕರರ ಸಂಘಟನೆಗಳು ಬೀದಿಗಿಳಿದು ಹೋರಾಟ ಆರಂಭಿಸಿವೆ.

ತುಮಕೂರಿನಲ್ಲಿ ವಿಎಒ ಭುವನಾ ರಸ್ತೆ ಅಪಘಾತಕ್ಕೆ ಬಲಿ: ಅಹೋರಾತ್ರಿ ಧರಣಿ ಆರಂಭ

ತುಮಕೂರು ಜಿಲ್ಲೆಯ ಗೂಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಯಾಗಿ (ವಿಎಒ) ಕರ್ತವ್ಯ ನಿರ್ವಹಿಸುತ್ತಿದ್ದ 26 ವರ್ಷದ ಯುವತಿ ಭುವನಾ ಶನಿವಾರ ಮುಂಜಾನೆ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಎಸ್‌ಐಆರ್ ಕೆಲಸದ ಗಡಿಬಿಡಿಯಲ್ಲಿ ಮುಂಜಾನೆಯೇ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

ಭುವನಾ ಅವರ ಸಾವಿಗೆ ಇಲಾಖೆಯ ಅತಿಯಾದ ಕೆಲಸದ ಒತ್ತಡವೇ ನೇರ ಕಾರಣ ಎಂದು ಆರೋಪಿಸಿರುವ ಕಂದಾಯ ಇಲಾಖೆ ನೌಕರರು, ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದಾರೆ. ಈ ಪ್ರತಿಭಟನೆ ಈಗ ಉಗ್ರ ಸ್ವರೂಪ ಪಡೆದುಕೊಂಡಿದ್ದು, ನೌಕರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ನಿದ್ದೆಯಲ್ಲೇ ಕೊನೆಯುಸಿರೆಳೆದ ಬಿಎಲ್‌ಓ ನಟರಾಜ್

ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ದಾರುಣ ಘಟನೆ ಸಂಭವಿಸಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಅಧಿಕಾರಿಯಾಗಿ (ಬಿಎಲ್‌ಓ) ಕಾರ್ಯನಿರ್ವಹಿಸುತ್ತಿದ್ದ ನಟರಾಜ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಎಸ್‌ಐಆರ್ ಪ್ರಕ್ರಿಯೆಯ ದೈನಂದಿನ ಟಾರ್ಗೆಟ್‌ಗಳನ್ನು ಪೂರ್ಣಗೊಳಿಸಲು ನಟರಾಜ್ ಹಗಲಿರುಳು ಶ್ರಮಿಸುತ್ತಿದ್ದರು ಎನ್ನಲಾಗಿದೆ. ತಡರಾತ್ರಿವರೆಗೂ ನಿಗದಿತ ಡಿಜಿಟಲ್ ಕೆಲಸಗಳನ್ನು ಮುಗಿಸಿ ಮನೆಗೆ ಬಂದು ಮಲಗಿದ್ದ ನಟರಾಜ್, ತೀವ್ರ ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ತಡೆದುಕೊಳ್ಳಲಾಗದೆ ರಾತ್ರಿಯೇ ಹೃದಯಾಘಾತಕ್ಕೊಳಗಾಗಿದ್ದಾರೆ. ಮುಂಜಾನೆ ಅವರು ಎದ್ದೇಳಲೇ ಇಲ್ಲ. ಕರ್ತವ್ಯನಿರತ ಅಧಿಕಾರಿಯ ಈ ದಿಢೀರ್ ಸಾವು ಅವರ ಇಡೀ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.

ಬೀದರ್‌ನಲ್ಲಿ ಕರ್ತವ್ಯದ ವೇಳೆಯೇ ಕುಸಿದು ಬಿದ್ದು ಸುನೀಲ್ ಸಾವು

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸರ್ವೆ ಕಾರ್ಯದ ವೇಳೆ ಬಿಎಲ್‌ಒ ಒಬ್ಬರು ಹೃದಯಾಘಾತದಿಂದ ಮೃತಪಟ್ಟ ಮೂರನೇ ಘಟನೆ ಬೀದರ್ ಜಿಲ್ಲೆಯ ಅಮಲಾಪುರ ಗ್ರಾಮದಲ್ಲಿ ವರದಿಯಾಗಿದೆ. ಭಾಲ್ಕಿ ತಾಲೂಕಿನ ಮೂಲದ 45 ವರ್ಷದ ಸುನೀಲ್ ಮೃತಪಟ್ಟ ದುರ್ದೈವಿ ಬಿಎಲ್‌ಒ ಆಗಿದ್ದಾರೆ.

ಕಳೆದ ಹಲವು ದಿನಗಳಿಂದ ಬಿಡುವಿಲ್ಲದೆ ಎಸ್‌ಐಆರ್ ಕಾರ್ಯದಲ್ಲಿ ತೊಡಗಿಕೊಂಡಿದ್ದ ಸುನೀಲ್, ಅಮಲಾಪುರ ಗ್ರಾಮದ 33ನೇ ಬೂತ್‌ನಲ್ಲಿ ಮನೆ ಮನೆ ಸಮೀಕ್ಷೆ ನಡೆಸುತ್ತಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರಾದರೂ, ಸ್ಟಂಟ್ ಅಳವಡಿಸುವ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗಾಂಧಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೆಳಹಂತದ ನೌಕರರ ಪಾಲಿಗೆ ಸಿಂಹಸ್ವಪ್ನವಾದ ‘ಟಾರ್ಗೆಟ್ ಟೆನ್ಷನ್’

ಮನೆ ಮನೆಗೆ ತೆರಳಿ ಮೊಬೈಲ್ ಆಪ್‌ಗಳ ಮೂಲಕ ಮಾಹಿತಿ ಸಂಗ್ರಹಿಸುವ ಎಸ್‌ಐಆರ್ ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ ಎಂದು ನೌಕರರ ಸಂಘಟನೆಗಳು ಗಂಭೀರ ಆರೋಪ ಮಾಡಿವೆ. ಈ ತಾಂತ್ರಿಕ ಕೆಲಸವನ್ನು ಅತ್ಯಂತ ವೇಗವಾಗಿ ಮತ್ತು ನಿಗದಿತ ಅವಧಿಯೊಳಗೆ ಮುಗಿಸುವಂತೆ ಉನ್ನತ ಮಟ್ಟದ ಅಧಿಕಾರಿಗಳು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಾಗೂ ಸಭೆಗಳಲ್ಲಿ ತೀವ್ರ ಮಾನಸಿಕ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಅಧಿಕಾರಿಗಳ ಕಿರುಕುಳ, ಅಮಾನತ್ತಿನ ಬೆದರಿಕೆ ಹಾಗೂ ಟಾರ್ಗೆಟ್‌ ತಲುಪುವ ಧಾವಂತದಿಂದಾಗಿ ನೌಕರರು ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಸರಿಯಾದ ವಿಶ್ರಾಂತಿ ಇಲ್ಲದೆ, ಮಾನಸಿಕ ಸ್ಥಿಮಿತ ಕಳೆದುಕೊಂಡು ಇಂತಹ ಜೀವಹಾನಿ ಸಂಭವಿಸುತ್ತಿವೆ ಎಂದು ನೌಕರರು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ತಕ್ಷಣವೇ ಎಸ್‌ಐಆರ್ ಪ್ರಕ್ರಿಯೆಯ ನಿಯಮಗಳನ್ನು ಸಡಿಲಗೊಳಿಸಬೇಕು ಮತ್ತು ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

ಬಿಜೆಪಿಯಲ್ಲಿ ಶೀಘ್ರದಲ್ಲೇ ಸರ್ಜರಿ: ಯುವ ನಾಯಕರಿಗೆ ಪಟ್ಟ, ಸಂಸದೀಯ ಮಂಡಳಿಯಲ್ಲೂ ಭಾರಿ ಬದಲಾವಣೆಯ ಮುನ್ಸೂಚನೆ!

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ