ಸಜ್ಜೆಪಾಳ್ಯ 44 ಎಕರೆ ಜಮೀನು: ಒಕ್ಕಲಿಗರ ಸಂಘಕ್ಕೆ ಹಕ್ಕಿಲ್ಲ!
ವರದಿಗಾರರು (Reporter)
Ashwini Vikram11:51 AM IST

ಬೆಂಗಳೂರು: ಸಜ್ಜೆಪಾಳ್ಯದ 44 ಎಕರೆ 33 ಗುಂಟೆ ಜಮೀನಿನ ಹಕ್ಕು ಮತ್ತು ನಿರ್ವಹಣೆ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಜಮೀನಿನ ಮೇಲೆ ರಾಜ್ಯ ಒಕ್ಕಲಿಗರ ಸಂಘ ಹಾಗೂ ಅದರ ಉಸ್ತುವಾರಿಯಲ್ಲಿರುವ ಕೃಷ್ಣಪ್ಪ ರಂಗಮ್ಮ ಎಜುಕೇಷನ್ ಟ್ರಸ್ಟ್ಗೆ ಯಾವುದೇ ಹಕ್ಕು, ಮಾಲೀಕತ್ವ ಅಥವಾ ಆಸಕ್ತಿ ಇಲ್ಲ ಎಂದು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ಪೀಠ 30/10/2026ರಂದು ಸ್ಪಷ್ಟಪಡಿಸಿದೆ. ಬಿ.ಪಿ. ಮಹೇಂದ್ರ ಅವರಿಗೆ ಜಮೀನಿನ ನಿರ್ವಹಣೆ, ಬಳಕೆ ಮತ್ತು ಮಾರಾಟ ಮಾಡುವ ಅಧಿಕಾರವಿದೆ ಎಂದು ನ್ಯಾಯಾಲಯ ತಿಳಿಸಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಸಜ್ಜೆಪಾಳ್ಯ ಗ್ರಾಮದ ಸರ್ವೆ ನಂಬರ್ 15ಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಯುತ್ತಿತ್ತು. ಈ ವಿವಾದಕ್ಕೆ ಸಂಬಂಧಿಸಿದ ಮೂರು ಪ್ರತ್ಯೇಕ ರಿಟ್ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಿದ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಸಜ್ಜೆಪಾಳ್ಯ 44 ಎಕರೆ ಜಮೀನು ವಿವಾದದ ಹಿನ್ನೆಲೆ
ಈ ಜಮೀನು ಮೂಲತಃ ರಂಗಮ್ಮ ಎಂಬುವರಿಗೆ ಸೇರಿತ್ತು. ಅವರು 15/03/1962ರಂದು ನೋಂದಾಯಿತ ವಿಲ್ ಬರೆದಿದ್ದು, ತಮ್ಮ ಆಸ್ತಿಗಳ ನಿರ್ವಹಣೆ ಮತ್ತು ಉದ್ದೇಶಿತ ಕಾರ್ಯಗಳಿಗಾಗಿ ಬಿ.ಎಂ. ಪುಟ್ಟಸ್ವಾಮಿ ಅವರನ್ನು ಕಾರ್ಯನಿರ್ವಾಹಕರನ್ನಾಗಿ ನೇಮಿಸಿದ್ದರು.
ರಂಗಮ್ಮ ಅವರ ನಿಧನದ ನಂತರ, 19/10/1978ರಂದು ಬಿ.ಎಂ. ಪುಟ್ಟಸ್ವಾಮಿ ಅವರು ರಾಜ್ಯ ಒಕ್ಕಲಿಗರ ಸಂಘದ ಪರವಾಗಿ ಟ್ರಸ್ಟ್ ಡೀಡ್ ಸಿದ್ಧಪಡಿಸಿದ್ದರು. ಶಿಕ್ಷಣದ ಅಭಿವೃದ್ಧಿ, ಬಡ ವಿದ್ಯಾರ್ಥಿಗಳಿಗೆ ನೆರವು ಮತ್ತು ಜ್ಞಾನ ಪ್ರಸಾರಕ್ಕಾಗಿ ಈ ಆಸ್ತಿಯನ್ನು ಬಳಸಬೇಕು ಎಂಬ ಉದ್ದೇಶವನ್ನು ಅದರಲ್ಲಿ ಉಲ್ಲೇಖಿಸಲಾಗಿತ್ತು.
ಟ್ರಸ್ಟ್ನ ಷರತ್ತುಗಳ ಪ್ರಕಾರ, ಜಮೀನಿನ ಆದಾಯದ ಕನಿಷ್ಠ ಶೇ.50ರಷ್ಟನ್ನು ಶಿಕ್ಷಣಕ್ಕೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣಕ್ಕೆ ಬಳಸಬೇಕಿತ್ತು. ಉಳಿದ ಆದಾಯವನ್ನು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಇತರ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಬಳಸುವ ಉದ್ದೇಶವಿತ್ತು.
ಆದರೆ, ಈ ಟ್ರಸ್ಟ್ ಡೀಡ್ನ ಆಧಾರದ ಮೇಲೆ ಜಮೀನನ್ನು ನಿರ್ವಹಿಸುವ ಅಧಿಕಾರ ಯಾರಿಗೆ ಸೇರಬೇಕು ಎಂಬ ವಿಚಾರದಲ್ಲಿ ನಂತರ ಭಿನ್ನಾಭಿಪ್ರಾಯ ಉಂಟಾಯಿತು. ಸಂಘ ಮತ್ತು ಬಿ.ಎಂ. ಪುಟ್ಟಸ್ವಾಮಿ ಅವರ ಕುಟುಂಬದ ನಡುವೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿತು.
ಒಕ್ಕಲಿಗರ ಸಂಘದ ಹಕ್ಕಿನ ವಾದ ತಿರಸ್ಕರಿಸಿದ ಹೈಕೋರ್ಟ್
ಜಮೀನಿನ ಮಾಲೀಕತ್ವ ಮತ್ತು ಸ್ವಾಧೀನಕ್ಕಾಗಿ ಒಕ್ಕಲಿಗರ ಸಂಘ ಈ ಹಿಂದೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಓಎಸ್ ನಂ.5796/2001ರ ಪ್ರಕರಣದಲ್ಲಿ ಜಮೀನಿನ ಮಾಲೀಕತ್ವ ಘೋಷಣೆ ಮತ್ತು ಸ್ವಾಧೀನ ನೀಡುವಂತೆ ಸಂಘ ಮನವಿ ಮಾಡಿತ್ತು.
ಈ ಪ್ರಕರಣದಲ್ಲಿ ಸಂಘಕ್ಕೆ ಸರ್ವೆ ನಂಬರ್ 15ರ ಒಟ್ಟು ಜಮೀನಿನಲ್ಲಿ 6 ಎಕರೆ 20 ಗುಂಟೆಯಷ್ಟು ಹಕ್ಕು ನೀಡುವ ಸಂಬಂಧ ರಾಜಿ ಪ್ರಕ್ರಿಯೆಯೂ ನಡೆದಿತ್ತು. ಆದರೆ, ಅಗತ್ಯ ನ್ಯಾಯಾಲಯದ ಶುಲ್ಕ ಪಾವತಿಸದ ಕಾರಣ ರಾಜಿ ಆಧಾರದ ಮೇಲೆ ಅಂತಿಮ ಡಿಕ್ರಿ ಪಡೆಯಲು ಸಾಧ್ಯವಾಗಲಿಲ್ಲ. ಈ ವಿಚಾರದಲ್ಲಿ ಸಂಘ ನಡೆಸಿದ ಮುಂದಿನ ಕಾನೂನು ಪ್ರಯತ್ನಗಳಿಗೂ ಯಶಸ್ಸು ಸಿಗಲಿಲ್ಲ.
ಈ ಹಿಂದಿನ ತೀರ್ಪುಗಳು ಮತ್ತು ಸುಪ್ರೀಂ ಕೋರ್ಟ್ನ ಆದೇಶಗಳನ್ನು ಪರಿಶೀಲಿಸಿದ ಹೈಕೋರ್ಟ್, 1978ರ ಟ್ರಸ್ಟ್ ಡೀಡ್ ಮಾತ್ರ ಆಧಾರವಾಗಿಟ್ಟುಕೊಂಡು ಒಕ್ಕಲಿಗರ ಸಂಘಕ್ಕೆ ಜಮೀನಿನ ಮೇಲೆ ಹಕ್ಕು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಸಂಘ ಅಥವಾ ಅದರ ಉಸ್ತುವಾರಿಯಲ್ಲಿರುವ ಕೃಷ್ಣಪ್ಪ ರಂಗಮ್ಮ ಎಜುಕೇಷನ್ ಟ್ರಸ್ಟ್ಗೆ ಸಂಬಂಧಿತ ಆಸ್ತಿಯ ಮೇಲೆ ಯಾವುದೇ ಹಕ್ಕು, ಮಾಲೀಕತ್ವ ಅಥವಾ ಕಾನೂನುಬದ್ಧ ಆಸಕ್ತಿ ಇಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿದೆ.
ಬಿ.ಪಿ. ಮಹೇಂದ್ರ ಅವರಿಗೆ ಜಮೀನು ನಿರ್ವಹಣೆ ಅಧಿಕಾರ
ಈ ಪ್ರಕರಣದಲ್ಲಿ ಬಿ.ಎಂ. ಪುಟ್ಟಸ್ವಾಮಿ ಅವರ ಪುತ್ರ ಬಿ.ಪಿ. ಮಹೇಂದ್ರ ಅವರು ಜಮೀನಿನ ನಿರ್ವಹಣೆ ಮತ್ತು ಬಳಕೆಯ ಹಕ್ಕಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ರಂಗಮ್ಮ ಅವರು ಬರೆದಿದ್ದ ವಿಲ್ ಮತ್ತು ಹಿಂದಿನ ಕಾನೂನು ಬೆಳವಣಿಗೆಗಳನ್ನು ಆಧರಿಸಿ ಅವರು ತಮ್ಮ ವಾದ ಮಂಡಿಸಿದ್ದರು.
ಎಲ್ಲ ದಾಖಲೆಗಳು, ಹಿಂದಿನ ನ್ಯಾಯಾಲಯಗಳ ಆದೇಶಗಳು ಮತ್ತು ಸಂಬಂಧಪಟ್ಟ ಕಾನೂನು ಅಂಶಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರು ಬಿ.ಪಿ. ಮಹೇಂದ್ರ ಅವರಿಗೆ ಆಸ್ತಿಯ ನಿರ್ವಹಣೆ ಮಾಡುವ ಹಕ್ಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಂಗಮ್ಮ ಅವರ ವಿಲ್ನ ಉದ್ದೇಶದಂತೆ ಆಸ್ತಿಯನ್ನು ನಿರ್ವಹಿಸುವುದು, ಅಗತ್ಯವಿದ್ದರೆ ಮಾರಾಟ ಮಾಡುವುದು ಮತ್ತು ಮಾರಾಟದಿಂದ ಬರುವ ಹಣವನ್ನು ವಿಲ್ನಲ್ಲಿ ತಿಳಿಸಿರುವ ಉದ್ದೇಶಗಳಿಗೆ ಬಳಸುವ ಅಧಿಕಾರವೂ ಅವರಿಗೆ ಇದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದೇ ವೇಳೆ, ಬಿ.ಎಂ. ಪುಟ್ಟಸ್ವಾಮಿ ಅವರ ಇತರ ಕಾನೂನು ವಾರಸುದಾರರು ಈ ಆಸ್ತಿಯ ಮೇಲೆ ಹಕ್ಕು ಹೊಂದಿಲ್ಲ ಎಂದೂ ನ್ಯಾಯಾಲಯ ಹೇಳಿದೆ. ಹೀಗಾಗಿ, ಸಂಘದ ಹಕ್ಕಿನ ವಾದದ ಜೊತೆಗೆ ಕುಟುಂಬದ ಇತರ ಸದಸ್ಯರ ಹಕ್ಕಿನ ವಿಚಾರದಲ್ಲೂ ನ್ಯಾಯಾಲಯ ಸ್ಪಷ್ಟನೆ ನೀಡಿದೆ.
ಮೂರು ರಿಟ್ ಅರ್ಜಿಗಳ ಕುರಿತು ಮಹತ್ವದ ಆದೇಶ
ಸಜ್ಜೆಪಾಳ್ಯ ಜಮೀನಿಗೆ ಸಂಬಂಧಿಸಿದಂತೆ ಡಬ್ಲ್ಯೂ.ಪಿ. ನಂ.25735/2024, ಡಬ್ಲ್ಯೂ.ಪಿ. ನಂ.960/2025 ಮತ್ತು ಡಬ್ಲ್ಯೂ.ಪಿ. ನಂ.24418/2025 ಅರ್ಜಿಗಳನ್ನು ಹೈಕೋರ್ಟ್ ಒಟ್ಟಿಗೆ ವಿಚಾರಣೆ ನಡೆಸಿತ್ತು.
ಈ ಪೈಕಿ ಕೃಷ್ಣಪ್ಪ ರಂಗಮ್ಮ ಎಜುಕೇಷನ್ ಟ್ರಸ್ಟ್ ಮತ್ತು ರಾಜ್ಯ ಒಕ್ಕಲಿಗರ ಸಂಘ ಸಲ್ಲಿಸಿದ್ದ ಡಬ್ಲ್ಯೂ.ಪಿ. ನಂ.960/2025 ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಬಿ.ಪಿ. ಮಹೇಂದ್ರ ಅವರು ಸಲ್ಲಿಸಿದ್ದ ಡಬ್ಲ್ಯೂ.ಪಿ. ನಂ.25735/2024 ಮತ್ತು ಡಬ್ಲ್ಯೂ.ಪಿ. ನಂ.24418/2025 ಅರ್ಜಿಗಳನ್ನು ಪುರಸ್ಕರಿಸಿದೆ.
ಇದರ ಪರಿಣಾಮವಾಗಿ, ಸಹಾಯಕ ಆಯುಕ್ತರ ಮುಂದೆ ಬಾಕಿ ಇದ್ದ ಆರ್ಎ (ಬಿಎನ್) 118/2021ರ ಮೇಲ್ಮನವಿ ವಿಚಾರಣೆಯನ್ನೂ ರದ್ದುಪಡಿಸಲಾಗಿದೆ. ಹಾಗೆಯೇ, 31/07/2025ರ ಪ್ರಾದೇಶಿಕ ಆಯುಕ್ತರ ಆದೇಶ ಮತ್ತು ಅದಕ್ಕೆ ಸಂಬಂಧಿಸಿದ 02/08/2025ರ ಮ್ಯುಟೇಷನ್ ದಾಖಲಾತಿಯನ್ನೂ ರದ್ದುಪಡಿಸಲಾಗಿದೆ.
ಈ ತೀರ್ಪು ಸಜ್ಜೆಪಾಳ್ಯದ ದೀರ್ಘಕಾಲದ ಜಮೀನು ವಿವಾದದಲ್ಲಿ ಮಹತ್ವದ ತಿರುವು ನೀಡಿದೆ. ಮುಂದಿನ ದಿನಗಳಲ್ಲಿ ಕಂದಾಯ ದಾಖಲೆಗಳ ಬದಲಾವಣೆ ಮತ್ತು ಆಸ್ತಿ ನಿರ್ವಹಣೆಗೆ ಸಂಬಂಧಿಸಿದ ಕ್ರಮಗಳ ಬಗ್ಗೆ ಸಾರ್ವಜನಿಕರ ಗಮನ ನೆಟ್ಟಿದೆ.
ALSO READ;