ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ PSI ನೇಮಕಾತಿ ಅಕ್ರಮ ಸಂಬಂಧಿಸಿದಂತೆ ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಅಭ್ಯರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿಯನ್ನ ವಜಾಗೊಳಿಸಿ, ರಾಜ್ಯ ಸರ್ಕಾರದ ಆದೇಶವನ್ನ ಎತ್ತಿಹಿಡಿದಿದೆ. ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ತಕರಾರು ಅರ್ಜಿಗಳನ್ನ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಧೀಶರಾದ ಎಸ್. ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಅಕ್ಟೋಬರ್ 26 ಕ್ಕೆ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿಸಿತ್ತು. ಇವತ್ತು ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸೆಲೆಕ್ಟ್ ಆಗಿದ್ದ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಸರ್ಕಾರದ ಆದೇಶವನ್ನ ಪೀಠ ಎತ್ತಿ ಹಿಡಿದಿದೆ. ಇದರ ಜೊತೆಯಲ್ಲೇ ರಾಜ್ಯ ಸರ್ಕಾರವು ಸ್ವತಂತ್ರ ಸಂಸ್ಥೆಯಿಂದ ಹೊಸದಾಗಿ ಲಿಖಿತ ಪರೀಕ್ಷೆ ನಡೆಸಬಹುದೆಂದು ಆದೇಶಿಸಿರುವ ನ್ಯಾಯಾಲಯ ಪರಾರದರ್ಶಕವಾಗಿ ಪರೀಕ್ಷೆ ನಡೆಸುವುದನ್ನ ಖಾತರಿಪಡಿಸಬೇಕು ಎಂದು ಸೂಚಿಸಿದೆ.
ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಮೊರೆ
ಹಗರಣ ಬೆಳಕಿಗೆ ಬರ್ತಿದ್ದಂತೆ ತನಿಖೆ ಕೈಗೊಂಡಿದ್ದ ಅಂದಿನ ಸಿಐಡಿ ಅಧಿಕಾರಿಗಳು ಲಿಖಿತ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳು ಹಾಗೂ ನೇಮಕಾತಿ ವಿಭಾಗದ ಎಡಿಜಿಪಿ ಸೇರಿದಂತೆ ಹಲವು ಅಧಿಕಾರಿಗಳನ್ನ ಬಂಧಿಸಿದ್ರು. ನೇಮಕಾತಿ ಪ್ರಕ್ರಿಯೆಯನ್ನೇ ರದ್ದು ಮಾಡಿದ್ದ ಸರ್ಕಾರ 2022ರ ಏಪ್ರಿಲ್ 29 ರಂದು ಮರು ಪರೀಕ್ಷೆ ನಡೆಸೋದಾಗಿ ಆದೇಶ ಹೊರಡಿಸಿತ್ತು. ಸರ್ಕಾರದ ನಿರ್ಧಾರ ಪ್ರಶ್ನಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಆಯ್ಕೆಯಾಗಿದ್ದ ಅಭ್ಯರ್ಥಿ ಎನ್.ವಿ. ಚಂದನ್ ಸೇರಿದಂತೆ ಹಲವು ಅಭ್ಯರ್ಥಿಗಳು ಸರ್ಕಾರದ ಆದೇಶ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ರು. ಇದೀಗ ವಿಚಾರಣೆ ನಡೆಸಿದ ಕೋರ್ಟ್, ಮರುಪರೀಕ್ಷೆ ಮಾಡುವಂತೆ ಆದೇಶಿಸಿದೆ.
