ಪೇಪರ್ ನೋಟುಗಳಿಗೆ ಗುಡ್‌ಬೈ? ಬರಲಿದೆ ಹೊಸ ಪಾಲಿಮರ್ ನೋಟು! – RBI
ವರದಿಗಾರರು (Reporter)
Hemanth Rajashekar12:32 AM IST

ಭಾರತೀಯ ಬ್ಯಾಂಕಿಂಗ್ ವಲಯದಲ್ಲಿ ಮತ್ತೊಂದು ಐತಿಹಾಸಿಕ ಕ್ರಾಂತಿಗೆ ಕಾಲ ಸನ್ನಿಹಿತವಾಗಿದೆ. ದೇಶದಲ್ಲಿ ಡಿಜಿಟಲ್ ಪಾವತಿಗಳು ಎಷ್ಟೇ ವೇಗವಾಗಿ ಬೆಳೆಯುತ್ತಿದ್ದರೂ, ನಗದು ಹಣದ ಬಳಕೆಯ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಇದೇ ಕಾರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಇದೀಗ ದಶಕದಷ್ಟು ಹಳೆಯದಾದ, ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಮರುಜೀವಗೊಳಿಸಲು ಗಂಭೀರ ಚಿಂತನೆ ನಡೆಸಿದೆ. ಹೌದು, ಸದ್ಯದಲ್ಲೇ ನಿಮ್ಮ ಕೈಯಲ್ಲಿರುವ ಕಾಗದದ ನೋಟುಗಳ ಜಾಗಕ್ಕೆ, ನೀರಿನಲ್ಲಿ ನೆನೆಸಿದರೂ ಹಾಳಾಗದ, ಸುಲಭವಾಗಿ ಹರಿದು ಹೋಗದ ‘ಪ್ಲಾಸ್ಟಿಕ್ (ಪಾಲಿಮರ್) ನೋಟುಗಳು’ ಬರಲಿವೆ!
ಪಟ್ನಾ ಮತ್ತು ಮುಂಬೈನಲ್ಲಿ ಇತ್ತೀಚೆಗೆ ನಡೆದ ಆರ್‌ಬಿಐನ ಉನ್ನತ ಮಟ್ಟದ ಬೋರ್ಡ್ ಸಭೆಗಳಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ಶೀಘ್ರದಲ್ಲೇ ಪ್ರಾಯೋಗಿಕ ಯೋಜನೆ (Pilot Project) ಚಾಲನೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಏನಿದು ಪ್ಲಾಸ್ಟಿಕ್ ಅಥವಾ ಪಾಲಿಮರ್ ನೋಟು?
ನಾವು ಬಳಸುವ ಸಾಮಾನ್ಯ ಕಾಗದದ ನೋಟುಗಳನ್ನು ಹತ್ತಿ (Cotton) ಮತ್ತು ಲಿನಿನ್ ಮಿಶ್ರಣದಿಂದ ತಯಾರಿಸಲಾಗುತ್ತದೆ. ಆದರೆ ಪಾಲಿಮರ್ ನೋಟುಗಳನ್ನು ‘ಬಯಾಕ್ಸಿಯಲಿ ಓರಿಯಂಟೆಡ್ ಪಾಲಿಪ್ರೊಪಿಲೀನ್’ (BOPP) ಎನ್ನುವ ತೆಳುವಾದ, ನಮ್ಯತೆಯುಳ್ಳ ಪ್ಲಾಸ್ಟಿಕ್ ಫಿಲ್ಮ್ ಬಳಸಿ ಮುದ್ರಿಸಲಾಗುತ್ತದೆ. ಇವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಂತೆ ಗಟ್ಟಿಯಾಗಿರುವುದಿಲ್ಲ; ಬದಲಿಗೆ ಸಾಮಾನ್ಯ ನೋಟುಗಳಂತೆಯೇ ಹಗುರವಾಗಿದ್ದು, ಸುಲಭವಾಗಿ ಮಡಚಬಹುದಾದ ಗುಣ ಹೊಂದಿರುತ್ತವೆ.

ಆರ್‌ಬಿಐ ಈ ನಿರ್ಧಾರಕ್ಕೆ ಬರಲು ಮುಖ್ಯ ಕಾರಣಗಳೇನು?
೧. ಮಿತಿಮೀರುತ್ತಿರುವ ಮುದ್ರಣ ವೆಚ್ಚ (₹೬,೦೦೦ ಕೋಟಿಗೂ ಅಧಿಕ ವೆಚ್ಚ): ಭಾರತದಲ್ಲಿ ಹೊಸ ನೋಟುಗಳನ್ನು ಮುದ್ರಿಸಲು ಮತ್ತು ಹಳೆಯ ನೋಟುಗಳನ್ನು ಬದಲಾಯಿಸಲು ತಗಲುವ ವಾರ್ಷಿಕ ವೆಚ್ಚವು ಸ್ಥಿರವಾಗಿರುವುದಿಲ್ಲ. ಇದು ಪ್ರತಿವರ್ಷ ಭಾರಿ ಏರಿಳಿತ ಕಾಣುತ್ತಿದ್ದು, ಕೆಲವು ವರ್ಷಗಳಲ್ಲಿ ಈ ವೆಚ್ಚ ಬರೋಬ್ಬರಿ ₹೬,೦೦೦ ಕೋಟಿ ರೂಪಾಯಿಗಳನ್ನೂ ಮೀರುತ್ತದೆ! ಕೇವಲ ನೋಟುಗಳ ನಿರ್ವಹಣೆಗಾಗಿಯೇ ದೇಶದ ಬೊಕ್ಕಸದಿಂದ ಇಷ್ಟು ದೊಡ್ಡ ಮೊತ್ತ ವ್ಯಯವಾಗುತ್ತಿರುವುದು ಆರ್‌ಬಿಐಗೆ ದೊಡ್ಡ ತಲೆನೋವಾಗಿದೆ.
೨. ಪ್ರತಿವರ್ಷ ಕೋಟ್ಯಂತರ ನೋಟುಗಳು ನಾಶ: ಸಾರ್ವಜನಿಕ ಬಳಕೆಯಲ್ಲಿ ಅತಿಯಾಗಿ ಕೊಳಕಾದ, ಹರಿದುಹೋದ ಅಥವಾ ಹಾನಿಗೊಳಗಾದ ಲಕ್ಷಾಂತರ ಪೇಪರ್ ನೋಟುಗಳನ್ನು ಆರ್‌ಬಿಐ ಪ್ರತಿವರ್ಷ ಚಲಾವಣೆಯಿಂದ ಹಿಂತೆಗೆದುಕೊಂಡು ಯಂತ್ರಗಳ ಮೂಲಕ ಸಂಪೂರ್ಣವಾಗಿ ನಾಶಪಡಿಸುತ್ತದೆ (ಶ್ರೆಡ್ ಮಾಡುತ್ತದೆ). ಅದರಲ್ಲೂ ವಿಶೇಷವಾಗಿ ದೈನಂದಿನ ಚಲಾವಣೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ೧೦೦ ರೂ. ಮತ್ತು ೫೦0 ರೂ. ಮುಖಬೆಲೆಯ ನೋಟುಗಳೇ ಹೀಗೆ ಅತಿ ಹೆಚ್ಚು ಹಾನಿಗೊಳಗಾಗುತ್ತಿವೆ.
೩. ೩ ಪಟ್ಟು ಹೆಚ್ಚು ಬಾಳಿಕೆ (Long Shelf Life): ಸಾಂಪ್ರದಾಯಿಕ ಹತ್ತಿ ಆಧಾರಿತ ಕಾಗದದ ಹಣಕ್ಕೆ ಹೋಲಿಸಿದರೆ, ಪಾಲಿಮರ್ (ಪ್ಲಾಸ್ಟಿಕ್) ನೋಟುಗಳು ಸಾಮಾನ್ಯವಾಗಿ ೨.೫ ರಿಂದ ೩ ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಅಂದರೆ ಇವು ಸುಲಭವಾಗಿ ಹರಿಯುವುದಿಲ್ಲ, ಕೊಳಕಾಗುವುದಿಲ್ಲ ಮತ್ತು ನೀರಿಗೆ ಬಿದ್ದರೂ ಹಾಳಾಗುವುದಿಲ್ಲ. ಆರಂಭಿಕ ಮುದ್ರಣ ವೆಚ್ಚ ಸ್ವಲ್ಪ ಹೆಚ್ಚಾಗಿದ್ದರೂ, ದೀರ್ಘಾವಧಿಯಲ್ಲಿ ಇವು ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಗಳನ್ನು ಉಳಿಸಲಿವೆ.
೪. ಕಳ್ಳನೋಟು ಹಾವಳಿಗೆ ಬ್ರೇಕ್: ಪ್ಲಾಸ್ಟಿಕ್ ನೋಟುಗಳಲ್ಲಿ ಅತ್ಯಾಧುನಿಕ ಸೆಕ್ಯೂರಿಟಿ ಫೀಚರ್‌ಗಳನ್ನು ಅಳವಡಿಸಬಹುದು. ಇದರಲ್ಲಿ ಪಾರದರ್ಶಕ ವಿಂಡೋಗಳು (Transparent Windows), ಹೊಲೊಗ್ರಾಮ್‌ಗಳು ಹಾಗೂ ವಿಶೇಷ ಶಾಯಿಗಳನ್ನು ಬಳಸುವುದರಿಂದ ಕಳ್ಳನೋಟುಗಳನ್ನು ತಯಾರಿಸುವುದು ಅಸಾಧ್ಯದ ಮಾತು.
ಮೊದಲ ಹಂತದಲ್ಲಿ ಯಾವ ನೋಟುಗಳು ಬರಲಿವೆ?
ಸಾರ್ವಜನಿಕ ವಲಯದಲ್ಲಿ ಅತಿ ಹೆಚ್ಚು ಚಲಾವಣೆಯಲ್ಲಿರುವ ಮತ್ತು ಬೇಗನೇ ಹಾಳಾಗುವ ಕನಿಷ್ಠ ಮುಖಬೆಲೆಯ ೧೦ ರೂ. ಮತ್ತು ೨೦ ರೂ. ನೋಟುಗಳನ್ನು ಮೊದಲ ಹಂತದಲ್ಲಿ ಪಾಲಿಮರ್ ರೂಪದಲ್ಲಿ ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಬಿಡಲು ಆರ್‌ಬಿಐ ಯೋಜಿಸಿದೆ. ಈ ಪೈಲಟ್ ಪ್ರಾಜೆಕ್ಟ್ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ದೊಡ್ಡ ಮುಖಬೆಲೆಯ ನೋಟುಗಳಿಗೂ ಇದನ್ನು ವಿಸ್ತರಿಸುವ ಸಾಧ್ಯತೆ ಇದೆ.
ಈ ಹಿಂದೆ ಏನಾಗಿತ್ತು? ಎಟಿಎಂ ಬಗೆಹರಿದಿದೆಯೇ?
ಭಾರತಕ್ಕೆ ಪ್ಲಾಸ್ಟಿಕ್ ನೋಟುಗಳ ಪರಿಕಲ್ಪನೆ ಹೊಸದೇನಲ್ಲ. ಈ ಹಿಂದೆ ದೇಶದ ಕೆಲವು ಪ್ರಮುಖ ನಗರಗಳಲ್ಲಿ ೧೦ ರೂಪಾಯಿಯ ಪ್ಲಾಸ್ಟಿಕ್ ನೋಟುಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗಿತ್ತು. ಆದರೆ ಆಗಿನ ತಂತ್ರಜ್ಞಾನದ ಕೊರತೆಯಿಂದಾಗಿ ಎಟಿಎಂ (ATM) ಯಂತ್ರಗಳು ಈ ನೋಟುಗಳನ್ನು ಗುರುತಿಸಲು ಮತ್ತು ವಿತರಿಸಲು ವಿಫಲವಾಗಿದ್ದರಿಂದ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ಯಾವುದೇ ಸಮಸ್ಯೆಯಿಲ್ಲದೆ ಎಟಿಎಂ ಯಂತ್ರಗಳ ಮೂಲಕ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆ ಮಾಡಲು ಬ್ಯಾಂಕಿಂಗ್ ಕ್ಷೇತ್ರ ಸಜ್ಜಾಗಿದೆ ಎಂದು ವರದಿಗಳು ಹೇಳಿವೆ.
ಇದಲ್ಲದೆ, ಆಸ್ಟ್ರೇಲಿಯಾ, ಕೆನಡಾ, ಸಿಂಗಾಪುರ್ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ವಿಶ್ವದ ೬0 ಕ್ಕೂ ಹೆಚ್ಚು ದೇಶಗಳು ಪಾಲಿಮರ್ ನೋಟುಗಳನ್ನು ಯಶಸ್ವಿಯಾಗಿ ಬಳಸುತ್ತಿವೆ. ಇದೀಗ ಭಾರತವೂ ಈ ಸಾಲಿಗೆ ಸೇರಲು ಸಜ್ಜಾಗುತ್ತಿದ್ದು, ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಇದೊಂದು ಮೈಲಿಗಲ್ಲಾಗಲಿದೆ ಎನ್ನಬಹುದು.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: