ರಾಷ್ಟ್ರ ರಾಜಕೀಯ

AI ಡೀಪ್‌ಫೇಕ್ ವಿರುದ್ಧ ಗಡ್ಕರಿ ಗರ್ಜನೆ: Meta, X ಮತ್ತು Google ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆಗೆ ಬಾಂಬೆ ಹೈಕೋರ್ಟ್ ಹಸಿರು ನಿಶಾನೆ!

Hemanth Rajashekar

ವರದಿಗಾರರು (Reporter)

Hemanth Rajashekar

07:54 AM IST

AI ಡೀಪ್‌ಫೇಕ್ ವಿರುದ್ಧ ಗಡ್ಕರಿ ಗರ್ಜನೆ: Meta, X ಮತ್ತು Google ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆಗೆ ಬಾಂಬೆ ಹೈಕೋರ್ಟ್ ಹಸಿರು ನಿಶಾನೆ!

ಮುಂಬೈ: ಎಐ (AI – ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ದುರ್ಬಳಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಮಾಹಿತಿಗಳ ವಿರುದ್ಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅತ್ಯಂತ ಕಠಿಣ ಕಾನೂನು ಹೆಜ್ಜೆಯನ್ನಿಟ್ಟಿದ್ದಾರೆ. ಕೇಂದ್ರ ಸರ್ಕಾರದ ಎಥನಾಲ್ ಮಿಶ್ರಿತ ಪೆಟ್ರೋಲ್ (EBP) ಮತ್ತು ‘E20’ ಇಂಧನ ನೀತಿಯಿಂದ ತಾವು ಹಾಗೂ ತಮ್ಮ ಕುಟುಂಬ ಲಾಭ ಪಡೆದಿದೆ ಎಂದು ನಕಲಿ ಹಾಗೂ ತಿದ್ದುಪಡಿ ಮಾಡಿದ (Deepfake) ವೀಡಿಯೊಗಳನ್ನು ಹರಿಬಿಟ್ಟಿದ್ದ ಡಿಜಿಟಲ್ ದೈತ್ಯ ಸಂಸ್ಥೆಗಳಾದ ಮೆಟಾ (Meta Platforms), ಎಕ್ಸ್ (X Corp), ಗೂಗಲ್ (Google LLC) ಹಾಗೂ ಯೂಟ್ಯೂಬ್ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಲು ಬಾಂಬೆ ಹೈಕೋರ್ಟ್ ಸಚಿವ ಗಡ್ಕರಿ ಅವರಿಗೆ ಅಧಿಕೃತ ಅನುಮತಿ ನೀಡಿದೆ.

ಪ್ರಕರಣದ ವಿಚಾರಣೆಗಾಗಿ ಸ್ವತಃ ಮುಂಬೈನಲ್ಲಿದ್ದ ಗಡ್ಕರಿ ಅವರ ಪರ ವಕೀಲರು, ‘ಲೆಟರ್ಸ್ ಪೇಟೆಂಟ್’‌ನ ಕ್ಲಾಸ್ XII ಅಡಿಯಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಭಯ್ ಅಹುಜಾ ಅವರಿದ್ದ ಪೀಠವು, ತಕ್ಷಣವೇ ಮೊಕದ್ದಮೆ ದಾಖಲಿಸಲು ಸಚಿವರಿಗೆ ಹಸಿರು ನಿಶಾನೆ ತೋರಿಸಿದೆ.

ವೈಯಕ್ತಿಕ ಲಾಭದ ಸುಳ್ಳು ಆರೋಪ: ಅಸಲಿಗೆ ಸತ್ಯವೇನು?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎಐ-ಆಧಾರಿತ ನಕಲಿ ವೀಡಿಯೊ ಮತ್ತು ಆಡಿಯೊಗಳಲ್ಲಿ ನಿತಿನ್ ಗಡ್ಕರಿ ಹಾಗೂ ಅವರ ಕುಟುಂಬಸ್ಥರು E20 ಇಂಧನ ಯೋಜನೆಯ ಜಾರಿಯಿಂದ ಕೋಟ್ಯಂತರ ರೂಪಾಯಿಗಳ ವೈಯಕ್ತಿಕ ಹಣಕಾಸಿನ ಲಾಭ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಲಾಗಿತ್ತು.

ಆದರೆ, ಕೋರ್ಟ್‌ಗೆ ಸಲ್ಲಿಸಲಾದ ದೂರಿನಲ್ಲಿ ಗಡ್ಕರಿ ಅವರು ಸ್ಪಷ್ಟಪಡಿಸಿದ್ದು:

  1. ಯೋಜನೆಯ ಉಸ್ತುವಾರಿ: ಎಥನಾಲ್ ಮಿಶ್ರಿತ ಪೆಟ್ರೋಲ್ (EBP) ಮತ್ತು E20 ನೀತಿಯು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ (Ministry of Petroleum and Natural Gas) ಒಳಪಡುತ್ತದೆಯೇ ವಿನಃ ತಮ್ಮ ರಸ್ತೆ ಸಾರಿಗೆ ಸಚಿವಾಲಯಕ್ಕೆ ಅಲ್ಲ.
  2. ಯಾವುದೇ ಸಂಬಂಧವಿಲ್ಲ: ಈ ಯೋಜನೆಗಳ ನಿರ್ಧಾರ ಅಥವಾ ಅನುಷ್ಠಾನದಲ್ಲಿ ಗಡ್ಕರಿ ಅವರಾಗಲಿ ಅಥವಾ ಅವರ ಕುಟುಂಬವಾಗಲಿ ಯಾವುದೇ ಹಿತಾಸಕ್ತಿ ಅಥವಾ ಪಾತ್ರವನ್ನು ಹೊಂದಿಲ್ಲ.
  3. ಹಕ್ಕುಗಳ ಉಲ್ಲಂಘನೆ: ಅನುಮತಿಯಿಲ್ಲದೆ ತಮ್ಮ ಮುಖ, ದ್ವನಿ ಹಾಗೂ ವ್ಯಕ್ತಿತ್ವದ ಹಕ್ಕುಗಳನ್ನು (Personality Rights) ದುರ್ಬಳಕೆ ಮಾಡಿಕೊಂಡು ನಿಂದನಾತ್ಮಕ ವಿಷಯಗಳನ್ನು ಸೃಷ್ಟಿಸಲಾಗಿದೆ.

“ಟೀಕೆಗೆ ವಿರೋಧವಿಲ್ಲ, ಆದರೆ ಸತ್ಯ ತಿರುಚುವುದಕ್ಕೆ ಸಹನೆಯಿಲ್ಲ”

ಗಡ್ಕರಿ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸ್ಪಷ್ಟವಾಗಿ ಎತ್ತಿಹಿಡಿದಿದ್ದಾರೆ. “ಸರ್ಕಾರದ ನೀತಿಗಳು ಅಥವಾ ಸಚಿವರ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕವಾಗಿ ಮುಕ್ತವಾಗಿ ಚರ್ಚಿಸುವುದು, ವಿಮರ್ಶಿಸುವುದು ಅಥವಾ ವಿಶ್ಲೇಷಣೆ ಮಾಡುವುದನ್ನು ತಡೆಯುವುದು ಈ ದೂರಿನ ಉದ್ದೇಶವಲ್ಲ. ಆದರೆ, ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ವ್ಯಕ್ತಿತ್ವ ಹರಣ ಮಾಡುವುದು ಮತ್ತು ಸಂಪೂರ್ಣ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಸಾರ್ವಜನಿಕರನ್ನು ಹಾದಿತಪ್ಪಿಸುವುದು ಕಾನೂನುಬಾಹಿರ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಸಂಕಷ್ಟ; ರೂ. 11 ಕೋಟಿ ಪರಿಹಾರದ ಬೇಡಿಕೆ

ಕೇಂದ್ರ ಇನ್ಫರ್ಮೇಷನ್ ಟೆಕ್ನಾಲಜಿ (MeitY) ಹಾಗೂ ಟೆಲಿಕಾಂ ಸಚಿವಾಲಯಗಳನ್ನೂ ಈ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿರುವ ಎಲ್ಲಾ ಅಪಪ್ರಚಾರದ ವೀಡಿಯೊಗಳು, ರೀಲ್ಸ್‌ಗಳು ಹಾಗೂ ಪೋಸ್ಟ್‌ಗಳನ್ನು ತಕ್ಷಣವೇ ತೆಗೆದುಹಾಕಲು (Take down) ಮತ್ತು ಭವಿಷ್ಯದಲ್ಲಿ ಇಂತಹ ವಿಷಯಗಳು ಹರಡದಂತೆ ತಡೆಹಿಡಿಯಲು ಮಧ್ಯಂತರ ತಡೆಕಾಜ್ಞೆ (Interim Injunction) ನೀಡಬೇಕೆಂದು ಅರ್ಜಿ ಕೋರಿದೆ. ಜೊತೆಗೆ, ಈ ಸುಳ್ಳು ಪ್ರಚಾರದಿಂದಾಗಿ ಉಂಟಾದ ತೀವ್ರ ಮಾನಸಿಕ ಹಾಗೂ ಸಾಮಾಜಿಕ ಗೌರವದ ಧಕ್ಕೆಯ ನಿಮಿತ್ತ 11 ಕೋಟಿ ರೂಪಾಯಿಗಳ ಪರಿಹಾರವನ್ನು ಗಡ್ಕರಿ ಕೇಳಿದ್ದಾರೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಡೀಪ್‌ಫೇಕ್ ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ದೇಶದ ಉನ್ನತ ನಾಯಕರನ್ನೇ ಗುರಿಯಾಗಿಸುತ್ತಿರುವ ಘಟನೆಗಳಿಗೆ ಈ ಕಾನೂನು ಹೋರಾಟ ಒಂದು ದೊಡ್ಡ ಎಚ್ಚರಿಕೆಯ ಸಂದೇಶವಾಗಿದೆ.

ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

20 ವರ್ಷಗಳ ಸುದೀರ್ಘ ಕಾಯುವಿಕೆಗೆ ಸಿಕ್ತು ಬಂಗಾರದ ಉತ್ತರ: ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಇತಿಹಾಸ ನಿರ್ಮಿಸಿ ಬಂಗಾರಕ್ಕೆ ಮುತ್ತಿಟ್ಟ ಭಾರತದ ಶರ್ಮಿಳಾ!

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ