ಗಣೇಶೋತ್ಸವ ಅನ್ನದಾನದಲ್ಲಿ ನಿಂದನೆ ಆರೋಪ: ಶಾಸಕ ಮುನಿರತ್ನ ಮನೆ ಎದುರು ಭಾರಿ ಉದ್ವಿಗ್ನತೆ, ಕಾರು ತಡೆದು ಆಕ್ರೋಶ.
ವರದಿಗಾರರು (Reporter)
Hemanth Rajashekar04:28 AM IST

ಬೆಂಗಳೂರಿನ ಮಲ್ಲೇಶ್ವರಂ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವದ ಅನ್ನದಾನ ಕಾರ್ಯಕ್ರಮದ ವೇಳೆ ಆರ್‌ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ಸಾರ್ವಜನಿಕರ ವಿರುದ್ಧ ಆಕ್ಷೇಪಾರ್ಹ ಹಾಗೂ ನಿಂದನೀಯ ಭಾಷೆ ಬಳಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆ ಬೆನ್ನಲ್ಲೇ ರಾಜಧಾನಿಯಲ್ಲಿ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿದ್ದು, ಸಾರ್ವಜನಿಕರು ಹಾಗೂ ಸ್ಥಳೀಯ ಮುಖಂಡರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಆರೋಪದ ಬೆನ್ನಲ್ಲೇ ಶಾಸಕ ಮುನಿರತ್ನ ಅವರ ವೈಯಕ್ತಿಕ ನಿವಾಸದ ಎದುರು ತಡರಾತ್ರಿವರೆಗೂ ನಾಟಕೀಯ ಬೆಳವಣಿಗೆಗಳು ನಡೆದವು. ನೂರಾರು ಸಂಖ್ಯೆಯಲ್ಲಿ ನೆರೆದ ಸ್ಥಳೀಯ ನಿವಾಸಿಗಳು ಹಾಗೂ ಪ್ರತಿಭಟನಾಕಾರರು ಶಾಸಕರ ನಡವಳಿಕೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ, ಶಾಸಕರ ಕಾರನ್ನು ತಡೆದು ನಿಲ್ಲಿಸಿ ತಮ್ಮ ಆಕ್ರೋಶ ಹೊರಹಾಕಿದರು. ಜನಪ್ರತಿನಿಧಿಯಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಶಾಸಕರು ಈ ರೀತಿ ನಿಂದನೀಯ ಪದ ಬಳಸಿರುವುದು ಅಕ್ಷಮ್ಯ ಅಪರಾಧ ಎಂದು ಪ್ರತಿಭಟನಾಕಾರರು ನ್ಯಾಯಕ್ಕೆ ಆಗ್ರಹಿಸಿದರು.
ಪೋಲಿಸ್ ಭದ್ರತೆ ಹೆಚ್ಚಳ, ಕೆಎಸ್‌ಆರ್‌ಪಿ ತುಕಡಿ ನಿಯೋಜನೆ
ಘಟನೆಯ ತೀವ್ರತೆಯನ್ನು ಅರಿತ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಶಾಸಕ ಮುನಿರತ್ನ ಅವರ ನಿವಾಸದ ಸುತ್ತಮುತ್ತ ಭಾರಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಸ್ಥಳದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ಅಂದರೆ ಕೆಎಸ್‌ಆರ್‌ಪಿಯ (KSRP) ಒಂದು ತುಕಡಿಯನ್ನು ನಿಯೋಜಿಸಲಾಗಿದೆ. ಇದರೊಂದಿಗೆ 25ಕ್ಕೂ ಹೆಚ್ಚು ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ಶಾಸಕರ ಮನೆ ಸುತ್ತಮುತ್ತ ಕಾವಲಿಗೆ ನಿಲ್ಲಿಸಲಾಗಿದೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯಕ್ಕೆ ಪರಿಸ್ಥಿತಿ ಸಂಪೂರ್ಣವಾಗಿ ಹತೋಟಿಯಲ್ಲಿದೆ ಎಂದು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿದ್ದ ಪ್ರತ್ಯಕ್ಷದರ್ಶಿಗಳಿಂದ ಹಾಗೂ ಸ್ಥಳದಲ್ಲಿದ್ದ ವಿಡಿಯೋ ಸಾಕ್ಷ್ಯಾಧಾರಗಳನ್ನು ಕಲೆಹಾಕುವ ಕೆಲಸ ನಡೆಯುತ್ತಿದೆ.
ತನಿಖೆಯ ನಂತರ ಮುಂದಿನ ಕಾನೂನು ಕ್ರಮ
ಪೊಲೀಸ್ ಇಲಾಖೆಯ ಮೂಲಗಳ ಪ್ರಕಾರ, ನಡೆದಿದೆ ಎನ್ನಲಾದ ಘಟನೆಯ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅನ್ನದಾನ ಕಾರ್ಯಕ್ರಮದಲ್ಲಿ ಶಾಸಕರು ನಿಂದನೀಯ ಪದಗಳನ್ನು ಬಳಸಿದ್ದಾರೆಯೇ ಮತ್ತು ಅಲ್ಲಿ ಪ್ರತಿಭಟನೆ ಭುಗಿಲೇಳಲು ಕಾರಣವಾದ ಸಂದರ್ಭಗಳು ಯಾವುವು ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ತನಿಖೆಯಿಂದ ಹೊರಬರುವ ಸತ್ಯಾಸತ್ಯತೆಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮದ ಹೆಸರಿನಲ್ಲಿ ನಡೆದ ಈ ವಿವಾದ ಈಗ ನಗರದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಶಾಸಕರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಬೆಂಗಳೂರು ನಕಲಿ ಮಾತ್ರೆ ದಂಧೆ: ಪ್ರಮುಖ ಆರೋಪಿ ಪ್ರಶಾಂತ್‌ಗೆ ಅಕ್ಟೋಬರ್ 7 ರವರೆಗೆ ಎಸ್‌ಐಟಿ ಕಸ್ಟಡಿ.
ಅಫ್ಘಾನಿಸ್ತಾನಕ್ಕೆ ಭಾರತದ ಮಾನವೀಯ ನೆರವು: ಕಾಬೂಲ್‌ಗೆ ಮತ್ತೊಂದು ಜೀವರಕ್ಷಕ ಔಷಧ ರವಾನೆ.