ಮುಂಡಗೋಡದಲ್ಲಿ ಪಾದರಕ್ಷೆ ಹಗರಣ: ಲೋಕಾಯುಕ್ತಕ್ಕೆ ದೂರು ನೀಡಲು SDMC ನಿರ್ಧಾರ
ವರದಿಗಾರರು (Reporter)
Shreeja Rakshith01:50 PM IST

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬೆಡಸಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾದ ಪಾದರಕ್ಷೆಗಳ ಗುಣಮಟ್ಟದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲಾಗಿರುವ ಪಾದರಕ್ಷೆಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಆರೋಪಿಸಿ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಪಾಲಕರು-ಪೋಷಕರು ಪಾದರಕ್ಷೆಗಳನ್ನು ತಿರಸ್ಕರಿಸಿ ಶಾಲೆಯ ಎದುರಿನಲ್ಲೇ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾದರಕ್ಷೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು
ಪ್ರತಿ ವರ್ಷದಂತೆ ಈ ಬಾರಿಯೂ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರದ ಜೊತೆಗೆ ಪಾದರಕ್ಷೆಗಳನ್ನೂ ಉಚಿತವಾಗಿ ವಿತರಿಸಲಾಗಿತ್ತು. ಆದರೆ ಸರ್ಕಾರದ ವತಿಯಿಂದ ಮಕ್ಕಳಿಗೆ ಉಚಿತವಾಗಿ ನೀಡಲಾಗಿರುವ ಪಾದರಕ್ಷೆಗಳು ಗುಣಮಟ್ಟದ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂದೂ, ಪಾದರಕ್ಷೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ಮಕ್ಕಳ ಬಳಕೆಗೆ ಯೋಗ್ಯವಾಗಿಲ್ಲ ಎಂದು ಪಾಲಕರು ಮತ್ತು ಎಸ್‌ಡಿಎಂಸಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ, ಅನೇಕ ವಿದ್ಯಾರ್ಥಿಗಳು ಈ ಪಾದರಕ್ಷೆಗಳನ್ನು ಧರಿಸಲು ನಿರಾಕರಿಸಿ ತಿರಸ್ಕರಿಸಿದ್ದಾರೆ.
SDMC ಸದಸ್ಯರು ಹಾಗೂ ವಿದ್ಯಾರ್ಥಿಗಳು ಕಳಪೆ ಪಾದರಕ್ಷೆಗಳಆಕ್ರೋಶ ಪ್ರದರ್ಶಿಸಿದ್ದಾರೆ.
ಶಾಲಾ ಆವರಣದಲ್ಲಿ ಸೇರಿದ್ದ ಪೋಷಕರು, SDMC ಸದಸ್ಯರು ಹಾಗೂ ವಿದ್ಯಾರ್ಥಿಗಳು ಕಳಪೆ ಪಾದರಕ್ಷೆಗಳನ್ನು ಶಾಲೆಯ ಎದುರೇ ರಸ್ತೆಗೆ ಎಸೆದು ತಮ್ಮ ಆಕ್ರೋಶ ಪ್ರದರ್ಶಿಸಿದ್ದಾರೆ. ಶಾಲೆಯ ಆವರಣದಲ್ಲಿ ನಡೆದ ಸಭೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪಾಲಕರು-ಪೋಷಕರು ಈ ಕುರಿತು ಚರ್ಚಿಸಿ, ಮಕ್ಕಳಿಗೆ ಗುಣಮಟ್ಟದ ಪಾದರಕ್ಷೆಗಳನ್ನೇ ಪೂರೈಸಬೇಕು ಎಂದು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸದಿದ್ದರೆ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುವ ನಿರ್ಧಾರವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ
ಇದೇ ವೇಳೆ, ಈ ಪ್ರಕರಣ ಕೇವಲ ಮುಂಡಗೋಡಕ್ಕೆ ಸೀಮಿತವಾಗಿಲ್ಲ ಎಂಬುದು ಗಮನಾರ್ಹ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾದ ಪಾದರಕ್ಷೆಗಳ ಬಗ್ಗೆ ಇದೇ ರೀತಿಯ ದೂರುಗಳು ಹಲವೆಡೆಯಿಂದ ಕೇಳಿಬಂದಿವೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾದ ಶೂಗಳು ಕೇವಲ ಒಂದೇ ವಾರದಲ್ಲಿ ಹರಿದುಹೋಗಿರುವ ಬಗ್ಗೆ ಮತ್ತು ಧರಿಸಿದ ಕೆಲವೇ ನಿಮಿಷಗಳಲ್ಲಿ ಹೊಲಿಗೆ ಬಿಟ್ಟುಕೊಂಡಿರುವ ಬಗ್ಗೆ ವ್ಯಾಪಕವಾಗಿ ಮಾಧ್ಯಮದ ವರದಿಗಳಲ್ಲಿ ಪ್ರಕಟವಾಗಿದ್ದವು. ಇದರ ಪರಿಣಾಮವಾಗಿ, ಹಿಂದಿನ ವರ್ಷಗಳ ಪೂರೈಕೆಗೆ ಹೋಲಿಸಿದರೆ ಈ ಬಾರಿ ಖರೀದಿಸಲಾದ ಪಾದರಕ್ಷೆಗಳು ಕಳಪೆಯಾಗಿದ್ದು, ಖರೀದಿ ಪ್ರಕ್ರಿಯೆ ಹಾಗೂ ಮೇಲ್ವಿಚಾರಣೆಯಲ್ಲಿ ವ್ಯವಸ್ಥಿತ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಈ ಬಗ್ಗೆ ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶಿಸಿರುವುದಾಗಿಯೂ ವರದಿಯಾಗಿದೆ.
ಸಾರ್ವಜನಿಕ ಹಣದಲ್ಲಿ ಖರೀದಿಸಲಾಗುವ ಸಾಮಗ್ರಿಗಳ ಗುಣಮಟ್ಟ ಪರಿಶೀಲನೆ
ಈ ಹಿನ್ನೆಲೆಯಲ್ಲಿ, ಮುಂಡಗೋಡದ ಘಟನೆ ರಾಜ್ಯಾದ್ಯಂತ ಚರ್ಚೆಯಾಗುತ್ತಿರುವ ಪಾದರಕ್ಷೆ ಖರೀದಿ ಹಗರಣದ ಒಂದು ಸ್ಪಷ್ಟ ನಿದರ್ಶನವಾಗಿ ಗಮನ ಸೆಳೆದಿದೆ. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಪೂರೈಸಬೇಕಾದ ವಸ್ತುಗಳಲ್ಲಿ ಇಂತಹ ನಿರ್ಲಕ್ಷ್ಯ ಸಲ್ಲದು ಎಂದು ಪೋಷಕರು ಆಗ್ರಹಿಸಿದ್ದಾರೆ. ಸಾರ್ವಜನಿಕ ಹಣದಲ್ಲಿ ಖರೀದಿಸಲಾಗುವ ಸಾಮಗ್ರಿಗಳ ಗುಣಮಟ್ಟ ಪರಿಶೀಲನೆ ಇಲ್ಲದೆಯೇ ಪೂರೈಕೆಯಾಗುತ್ತಿರುವುದು, ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ಇರುವ ಸಾಧ್ಯತೆಯ ಬಗ್ಗೆ ಅನುಮಾನ ಮೂಡಿಸಿದೆ.
ಸ್ಥಳೀಯ ಪೋಷಕರು ಮತ್ತು SDMC ಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಕಳಪೆ ಪಾದರಕ್ಷೆ ಪೂರೈಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಲೋಕಾಯುಕ್ತಕ್ಕೆ ಔಪಚಾರಿಕ ದೂರು ಸಲ್ಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣ ಮುಂದೆ ಯಾವ ತಿರುವು ಪಡೆಯುತ್ತದೆ, ಶಿಕ್ಷಣ ಇಲಾಖೆ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಮಂಗಳೂರು: ಕಿರಿಯ ವಿದ್ಯಾರ್ಥಿಗಳಿಗೆ ಬರ್ಬರ ಹಲ್ಲೆ, 9 ಹಿರಿಯ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ.
ಚಿಕ್ಕಬಳ್ಳಾಪುರ: ಟೆಲಿಗ್ರಾಂ ಗುಂಪಿನಲ್ಲಿ ಭಯೋತ್ಪಾದನಾ ಸಂಚು, ಇಬ್ಬರ ಬಂಧನ.