ಪಹಲ್ಗಾಮ್ ಉಗ್ರರ ದಾಳಿ: ಸಂತ್ರಸ್ತನ ಪುತ್ರಿ ವಿರುದ್ಧ ದ್ವೇಷದ ಕಾಮೆಂಟ್! ಸೌದಿಯಿಂದ ಮರಳಿದ ಮಲಪ್ಪುರಂ ಯುವಕನಿಗೆ ವಿಮಾನ ನಿಲ್ದಾಣದಲ್ಲಿ UAPA ಬೇಡಿ.
ವರದಿಗಾರರು (Reporter)
Hemanth Rajashekar01:12 AM IST

ಕೇರಳದ ಕೋಝಿಕ್ಕೋಡ್‌ನ ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಂಸ್ಥೆಗಳು ಮತ್ತು ಪೊಲೀಸರು ಜಂಟಿಯಾಗಿ ಭಾರಿ ಕಾರ್ಯಾಚರಣೆ ನಡೆಸಿದ್ದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಮಲಪ್ಪುರಂ ಜಿಲ್ಲೆಯ ಐಕ್ಕರಪ್ಪಾಡಿ ನಿವಾಸಿ, 26 ವರ್ಷದ ಮುಹಮ್ಮದ್ ಸನೂಫ್ ಎಂಬಾತನೇ ಬಂಧಿತ ಯುವಕನಾಗಿದ್ದು, ಆತನ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಸೌದಿ ಅರೇಬಿಯಾದಿಂದ ಭಾರತಕ್ಕೆ ಮರಳುತ್ತಿದ್ದ ಸನೂಫ್ ವಿರುದ್ಧ ಈಗಾಗಲೇ ಪೊಲೀಸರು ಲುಕೌಟ್ ನೋಟಿಸ್ ಹೊರಡಿಸಿದ್ದರು. ಆತ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಕರಿಪುರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
2025ರ ಏಪ್ರಿಲ್ ತಿಂಗಳಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭೀಕರ ಉಗ್ರರ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಒಟ್ಟು 26 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಮೃತರ ಪೈಕಿ ಎರ್ನಾಕುಲಂ ಮೂಲದ ವ್ಯಕ್ತಿಯೂ ಸೇರಿದ್ದರು. ಈ ಉಗ್ರರ ದಾಳಿಯ ಬೆನ್ನಲ್ಲೇ, ಮೃತ ವ್ಯಕ್ತಿಯ ಪುತ್ರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿಡಿಯೋ ಒಂದರ ಅಡಿಯಲ್ಲಿ ಮುಹಮ್ಮದ್ ಸನೂಫ್ ಅತ್ಯಂತ ಆಕ್ಷೇಪಾರ್ಹ, ಅವಹೇಳನಕಾರಿ ಮತ್ತು ದ್ವೇಷಪೂರಿತ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದ ಎನ್ನಲಾಗಿದೆ.
ಪೊಲೀಸ್ ತನಿಖೆಯ ಪ್ರಕಾರ, ಸನೂಫ್ ಮಾಡಿದ್ದ ಕಾಮೆಂಟ್‌ಗಳು ಕೇವಲ ವೈಯಕ್ತಿಕ ನಿಂದನೆಯಾಗಿರದೆ, 26 ಜನರ ಬಲಿಪಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಸಮರ್ಥಿಸುವ ಮತ್ತು ಅದನ್ನು ಸಂಭ್ರಮಿಸುವ ಉದ್ದೇಶವನ್ನು ಹೊಂದಿದ್ದವು ಎಂಬುದು ಸಾಬೀತಾಗಿದೆ.

ಕಠಿಣ ಯುಎಪಿಎ ಕಾಯ್ದೆಯಡಿ ಕಾನೂನು ಕ್ರಮ
ಈ ಘಟನೆಗೆ ಸಂಬಂಧಿಸಿದಂತೆ 2025 ರಲ್ಲೇ ಇಡುಕ್ಕಿ ಜಿಲ್ಲೆಯ ಮುಟ್ಟಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನಿಂದ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಪೊಲೀಸರು ತಲಾಶ್ ನಡೆಸುತ್ತಿದ್ದರು. ಇದೀಗ ಕರಿಪುರ ವಿಮಾನ ನಿಲ್ದಾಣದಲ್ಲಿ ಆತನನ್ನು ತಡೆದ ಅಧಿಕಾರಿಗಳು, ಸಮಾಜದಲ್ಲಿ ಧರ್ಮ ಅಥವಾ ಗುಂಪುಗಳ ನಡುವೆ ದ್ವೇಷವನ್ನು ಬಿತ್ತುವ ಹಾಗೂ ಶಾಂತಿ ಕದಡುವ ಯತ್ನದ ಹಿನ್ನೆಲೆಯಲ್ಲಿ ಕಠಿಣ ಯುಎಪಿಎ (UAPA) ಸೆಕ್ಷನ್‌ಗಳನ್ನು ಜಾರಿಗೊಳಿಸಿದ್ದಾರೆ.
ಬಂಧಿತ ಮುಹಮ್ಮದ್ ಸನೂಫ್‌ನನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಮುಂದಿನ ತನಿಖೆ, ಡಿಜಿಟಲ್ ಸಾಕ್ಷ್ಯಗಳ ಕ್ರೋಡೀಕರಣ ಹಾಗೂ ತೀವ್ರ ವಿಚಾರಣೆಗಾಗಿ ಇಡುಕ್ಕಿ ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶವಿರೋಧಿ ಹಾಗೂ ಉಗ್ರವಾದವನ್ನು ಬೆಂಬಲಿಸುವ ಚಟುವಟಿಕೆಗಳ ವಿರುದ್ಧ ಕೇರಳ ಪೊಲೀಸರು ಕೈಗೊಂಡಿರುವ ಈ ಕಠಿಣ ಕ್ರಮ ಸದ್ಯ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಇನ್ನೂ ಜೇಬಲ್ಲೇ ಇದೆಯಾ ₹2000 ನೋಟು? ತಲೆ ಕೆಡಿಸಿಕೊಳ್ಳಬೇಡಿ, ಹಣ ಬದಲಾಯಿಸಲು ಆರ್‌ಬಿಐ ನೀಡಿದೆ ಆಫರ್.