ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ರಾಜ್ಯದ 33 ಸ್ಥಳಗಳಲ್ಲಿ ಏಕಕಾಲಕ್ಕೆ ಬೃಹತ್ ದಾಳಿ, ₹25 ಕೋಟಿಗೂ ಅಧಿಕ ಅಕ್ರಮ ಆಸ್ತಿ ಪತ್ತೆ.
ವರದಿಗಾರರು (Reporter)
Hemanth Rajashekar07:55 AM IST

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಕರ್ನಾಟಕ ಲೋಕಾಯುಕ್ತ ಪೊಲೀಸರು ಮಂಗಳವಾರ ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ (ಡಿಎ) ಪ್ರಕರಣಗಳಿಗೆ ಸಂಬಂಧಿಸಿದಂತೆ ಎಂಟು ಮಂದಿ ಸರ್ಕಾರಿ ಅಧಿಕಾರಿಗಳಿಗೆ ಸೇರಿದ 33ಕ್ಕೂ ಹೆಚ್ಚು ಜಾಗಗಳ ಮೇಲೆ ಏಕಕಾಲದಲ್ಲಿ ಭರ್ಜರಿ ದಾಳಿ ನಡೆಸಲಾಗಿದೆ.
ಬೆಂಗಳೂರು, ಬೆಂಗಳೂರು ದಕ್ಷಿಣ, ಮಂಡ್ಯ, ಕಲಬುರಗಿ, ಕೊಡಗು, ಧಾರವಾಡ, ಚಿಕ್ಕಬಳ್ಳಾಪುರ ಹಾಗೂ ಬೀದರ್ ಜಿಲ್ಲೆಗಳಲ್ಲಿ ಜರುಗಿದ ಈ ವ್ಯಾಪಕ ಶೋಧ ಕಾರ್ಯದಲ್ಲಿ ಒಟ್ಟು ₹29.61 ಕೋಟಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಪಾಸ್ತಿಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಲೋಕಾಯುಕ್ತ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಶೋಧಕ್ಕೊಳಗಾದ ಅಧಿಕಾರಿಗಳ ಬಳಿ ₹17.98 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹11.63 ಕೋಟಿ ಮೌಲ್ಯದ ಚರಾಸ್ತಿಗಳು ಕಂಡುಬಂದಿವೆ.
ದಾಳಿಗೊಳಗಾದ 8 ಅಧಿಕಾರಿಗಳ ವಿವರ ಮತ್ತು ಆಸ್ತಿ ಪ್ರಮಾಣ:

- ಶ್ರೀದೇವಿ, ಜಿಲ್ಲಾ ನೋಂದಣಾಧಿಕಾರಿ, ಬಸವನಗುಡಿ (ಬೆಂಗಳೂರು ದಕ್ಷಿಣ): ದಾಳಿಗೊಳಗಾದ ಅಧಿಕಾರಿಗಳಲ್ಲಿ ಅತ್ಯಂತ ಹೆಚ್ಚಿನ ಅಕ್ರಮ ಆಸ್ತಿ ಹೊಂದಿರುವುದು ಶ್ರೀದೇವಿ ಅವರ ಬಳಿ ಪತ್ತೆಯಾಗಿದೆ. ಇವರಿಂದ ₹5.86 ಕೋಟಿ ಮೌಲ್ಯದ ಸ್ಥಿರಾಸ್ತಿ ಸಿಕ್ಕಿದ್ದು, ಇದರಲ್ಲಿ ಎರಡು ನಿವೇಶನಗಳು, ಎರಡು ಮನೆಗಳು, ₹2.5 ಕೋಟಿ ಮೌಲ್ಯದ ಕೃಷಿ ಭೂಮಿ ಮತ್ತು ₹2.3 ಕೋಟಿ ಮೌಲ್ಯದ ಗಾರ್ಮೆಂಟ್ಸ್ ಫ್ಯಾಕ್ಟರಿ ಸೇರಿವೆ. ಜೊತೆಗೆ ₹30.87 ಲಕ್ಷ ನಗದು, ₹35.58 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಹಾಗೂ ₹23.15 ಲಕ್ಷ ಮೌಲ್ಯದ ವಾಹನಗಳು ಸೇರಿದಂತೆ ಒಟ್ಟು ₹94.61 ಲಕ್ಷ ಚರಾಸ್ತಿ ಪತ್ತೆಯಾಗಿದೆ. ಇವರ ಒಟ್ಟು ಅಕ್ರಮ ಆಸ್ತಿ ಮೌಲ್ಯ ₹6.80 ಕೋಟಿ ಎಂದು ಅಂದಾಜಿಸಲಾಗಿದೆ.
- ಎಚ್. ಎಂ. ರಂಗನಾಥ್, ನಿವೃತ್ತ ಸಹಾಯಕ ಇಂಜಿನಿಯರ್, ಜಿಬಿಎ ಶಿವಾಜಿನಗರ (ಬೆಂಗಳೂರು ನಗರ): ಆಗಸ್ಟ್ 31, 2026 ರಂದು ನಿವೃತ್ತರಾಗಿದ್ದ ರಂಗನಾಥ್ ಅವರಿಗೆ ಸೇರಿದ ನಾಲ್ಕು ಸ್ಥಳಗಳಲ್ಲಿ ಪರಿಶೀಲನೆ ನಡೆಸಿದಾಗ ಒಟ್ಟು ₹5.69 ಕೋಟಿ ಮೌಲ್ಯದ ಸ್ವತ್ತುಗಳು ಬೆಳಕಿಗೆ ಬಂದಿವೆ. 2 ನಿವೇಶನ, 4 ಮನೆಗಳು ಮತ್ತು 9 ಎಕರೆ 35 ಗುಂಟೆ ಕೃಷಿ ಭೂಮಿ (₹1.74 ಕೋಟಿ) ಇವರ ಬಳಿಯಿದೆ. ಜೊತೆಗೆ ₹1.03 ಕೋಟಿ ನಗದು, ₹1.42 ಕೋಟಿ ಬ್ಯಾಂಕ್ ಡೆಪಾಸಿಟ್ ಹಾಗೂ ₹40 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ₹3.95 ಕೋಟಿ ಚರಾಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಇವರ ಅಕ್ರಮ ಆಸ್ತಿಯ ಮೌಲ್ಯ ₹3.84 ಕೋಟಿ.
- ಶಿವರಾಜು ಎಂ., ನಿಲಯ ಮೇಲ್ವಿಚಾರಕರು, ಬಿಸಿಎಂ ಇಲಾಖೆ, ಮದ್ದೂರು (ಮಂಡ್ಯ): ಎರಡು ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ ₹3.82 ಕೋಟಿ ಮೌಲ್ಯದ ಒಟ್ಟು ಆಸ್ತಿ ಪತ್ತೆಯಾಗಿದೆ. ಇದರಲ್ಲಿ 5 ನಿವೇಶನಗಳು, 5 ಮನೆಗಳು (ಎರಡು ವಾಣಿಜ್ಯ ಸಂಕೀರ್ಣ ಮತ್ತು ಫಾರ್ಮ್‌ಹೌಸ್ ಸೇರಿ) ಹಾಗೂ 6 ಎಕರೆ ಕೃಷಿ ಭೂಮಿ ಸೇರಿವೆ. ₹1.66 ಕೋಟಿ ಮೌಲ್ಯದ ಚರಾಸ್ತಿ ಪತ್ತೆಯಾಗಿದ್ದು, ಇವರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಮೌಲ್ಯ ₹2.71 ಕೋಟಿ ಎಂದು ಲೆಕ್ಕಹಾಕಲಾಗಿದೆ.
- ಮಾಣಿಕ್ ರಾವ್, ನಿವೃತ್ತ ಕೃಷಿ ಅಧಿಕಾರಿ (ಬೀದರ್): ಮೂರು ಕಡೆಗಳಲ್ಲಿ ಶೋಧ ನಡೆಸಿದಾಗ 6 ನಿವೇಶನ, 3 ಮನೆಗಳು ಹಾಗೂ 14 ಎಕರೆ 20 ಗುಂಟೆ ಜಮೀನು ಸೇರಿ ₹1.87 ಕೋಟಿ ಸ್ಥಿರಾಸ್ತಿ ಪತ್ತೆಯಾಗಿದೆ. ₹61.61 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳು ಸೇರಿದಂತೆ ₹1.03 ಕೋಟಿ ಚರಾಸ್ತಿ ಕಂಡುಬಂದಿದ್ದು, ಒಟ್ಟು ಅಕ್ರಮ ಆಸ್ತಿ ₹2.51 ಕೋಟಿ ಎಂದು ತಿಳಿಯಲಾಗಿದೆ.
- ಕಿರಣ್ ಬೈಂದೂರ್, ಎಎಸ್‌ಇ, ಹೆಸ್ಕಾಂ (ಧಾರವಾಡ): ಆರು ಸ್ಥಳಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಒಂದು ಮನೆ, ವಾಣಿಜ್ಯ ಮಳಿಗೆ ಹಾಗೂ 2 ಎಕರೆ ಜಮೀನು (₹1.87 ಕೋಟಿ) ಮತ್ತು ₹73.71 ಲಕ್ಷ ಮೌಲ್ಯದ ಆಭರಣಗಳು ಸೇರಿದಂತೆ ₹93.42 ಲಕ್ಷ ಚರಾಸ್ತಿ ಪತ್ತೆಯಾಗಿದೆ. ಇವರ ಒಟ್ಟು ಅಕ್ರಮ ಆಸ್ತಿ ಮೌಲ್ಯ ₹1.79 ಕೋಟಿ.
- ದರ್ಶನ್ ಗೌಡ ಜಿ., ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ), ಜಿಲ್ಲಾಧಿಕಾರಿ ಕಚೇರಿ (ಚಿಕ್ಕಬಳ್ಳಾಪುರ): ಎಂಟು ಪ್ರತ್ಯೇಕ ಸ್ಥಳಗಳ ಮೇಲೆ ನಡೆದ ದಾಳಿಯಲ್ಲಿ 3 ನಿವೇಶನಗಳು ಮತ್ತು 16 ಮನೆಗಳು (₹2.10 ಕೋಟಿ) ಪತ್ತೆಯಾಗಿವೆ. ಇದರೊಂದಿಗೆ ₹48.07 ಲಕ್ಷ ಚರಾಸ್ತಿ ಸಿಕ್ಕಿದ್ದು, ಅಕ್ರಮ ಆಸ್ತಿ ಮೌಲ್ಯ ₹1.86 ಕೋಟಿ ಎಂದು ಅಂದಾಜಿಸಲಾಗಿದೆ.
- ರಾಜೇಶ್ವರಿ ಬಾಬಳಾದ್, ಎಇಇ, ಜೆಸ್ಕಾಂ ಎಂಆರ್‌ಟಿ ಎಲ್‌ಡಿಸಿ ವಿಭಾಗ (ಕಲಬುರಗಿ): ಮೂರು ಸ್ಥಳಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ 5 ನಿವೇಶನ ಹಾಗೂ 2 ಮನೆಗಳು (₹1.36 ಕೋಟಿ) ಮತ್ತು ₹82.75 ಲಕ್ಷ ಮೌಲ್ಯದ ಚರಾಸ್ತಿ ಸೇರಿದಂತೆ ಒಟ್ಟು ₹2.19 ಕೋಟಿ ಆಸ್ತಿ ಪತ್ತೆಯಾಗಿದೆ. ಇವರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಮೌಲ್ಯ ₹1.91 ಕೋಟಿ.
- ಎಚ್. ಆರ್. ರಮೇಶ್, ಪೌರಾಯುಕ್ತರು (ಕೊಡಗು): ಮೂರು ಕಡೆಗಳಲ್ಲಿ ದಾಳಿ ನಡೆಸಿದಾಗ ಒಂದು ಮನೆ ಹಾಗೂ 3 ಎಕರೆ ಕೃಷಿ ಭೂಮಿ (₹1 ಕೋಟಿ) ಮತ್ತು ₹46.48 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಸೇರಿದಂತೆ ₹78.80 ಲಕ್ಷ ಚರಾಸ್ತಿ ಪತ್ತೆಯಾಗಿದೆ. ಇವರ ಅಕ್ರಮ ಆಸ್ತಿಯ ಮೌಲ್ಯ ₹1.78 ಕೋಟಿ.
ಪ್ರಸ್ತುತ ವಶಪಡಿಸಿಕೊಳ್ಳಲಾದ ಬ್ಯಾಂಕ್ ಖಾತೆಗಳು, ಪ್ರಮುಖ ದಾಖಲೆಗಳು ಹಾಗೂ ಆಸ್ತಿ ಪತ್ರಗಳ ಪರಿಶೀಲನೆ ಕಾರ್ಯ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಗತಿಯಲ್ಲಿದೆ ಎಂದು ಲೋಕಾಯುಕ್ತ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಭಾರತದಲ್ಲಿ ಕಳಪೆ ಸ್ಕ್ರೀನ್ ಗಾರ್ಡ್‌ಗಳ ಮಾರಾಟಕ್ಕೆ ನಿಷೇಧ: IS 19348:2025 ಹೊಸ ನಿಯಮಗಳ ವಿವರ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಗೋಲ್ಡನ್ ಗರ್ಲ್ಸ್: ಸತತ ಎರಡನೇ ಬಾರಿಗೆ ಕ್ರಿಕೆಟ್ ಚಾಂಪಿಯನ್ ಆದ ಭಾರತೀಯ ಮಹಿಳಾ ತಂಡ!