KPSC: ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ; ರಾಜ್ಯಾದ್ಯಂತ 21 ಕಡೆ ಇಡಿ ಸೈಲೆಂಟ್ ರೇಡ್!
ವರದಿಗಾರರು (Reporter)
Hemanth Rajashekar05:45 AM IST

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಸಮರ ಸಾರಿದೆ. ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಕಚೇರಿಯ ಅಧಿಕಾರಿಗಳು ಮಂಗಳವಾರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಸೆಕ್ಷನ್ 17ರ ಅಡಿಯಲ್ಲಿ ರಾಜ್ಯದಾದ್ಯಂತ ಹಾಗೂ ಗುಜರಾತ್‌ನ ಅಹಮದಾಬಾದ್‌ನಲ್ಲಿ ಒಟ್ಟು 21 ಪ್ರಮುಖ ಸ್ಥಳಗಳ ಮೇಲೆ ಏಕಕಾಲಕ್ಕೆ ಬೃಹತ್ ಶೋಧ ಕಾರ್ಯಚರಣೆ ನಡೆಸಿದ್ದಾರೆ.
ಈ ದಿಕ್ಸೂಚಿ ದಾಳಿಯು ರಾಜ್ಯ ಸರ್ಕಾರಿ ಉದ್ಯೋಗಾಕಾಂಕ್ಷಿಗಳಲ್ಲಿ ಮತ್ತು ಆಡಳಿತ ಯಂತ್ರದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಯಾರ್ಯಾರ ಮೇಲಿದೆ ಇಡಿ ಕಣ್ಣು?
ಇಡಿ ಅಧಿಕಾರಿಗಳು ಕೆಪಿಎಸ್‌ಸಿ ಕೇಂದ್ರ ಕಚೇರಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಶೋಧಕ್ಕೊಳಗಾದ ಪ್ರಮುಖ ಸ್ಥಳಗಳು ಹಾಗೂ ವ್ಯಕ್ತಿಗಳ ವಿವರ ಹೀಗಿದೆ:
- ಕೆಪಿಎಸ್‌ಸಿ ಕಚೇರಿ: ಬೆಂಗಳೂರಿನಲ್ಲಿರುವ ಕೆಪಿಎಸ್‌ಸಿ ಪ್ರಧಾನ ಕಚೇರಿ.
- ಅಮಾನತುಗೊಂಡ ಅಧ್ಯಕ್ಷ ಹಾಗೂ ಸದಸ್ಯರು: ಕೆಪಿಎಸ್‌ಸಿ ಅಮಾನತುಗೊಂಡ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಹಾಗೂ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರ ನಿವಾಸಗಳು.
- ಮೌಲ್ಯಮಾಪನ ಸಂಸ್ಥೆ: ಡಿಜಿಟಲ್ ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನದ ಹೊಣೆ ಹೊತ್ತಿದ್ದ ‘M/s. ಎಡುಟೆಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ (Edutest Solutions Pvt. Ltd.) ಕಚೇರಿಗಳು.
- ಮಧ್ಯವರ್ತಿಗಳು ಹಾಗೂ ಅಭ್ಯರ್ಥಿಗಳು: ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹಲವು ಮಧ್ಯವರ್ತಿಗಳು ಹಾಗೂ ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದ ಕೆಲವು ಅಭ್ಯರ್ಥಿಗಳ ನಿವಾಸಗಳು.
8 ಜಿಲ್ಲೆಗಳು ಮತ್ತು ಅಹಮದಾಬಾದ್‌ನಲ್ಲಿ ಕಾರ್ಯಾಚರಣೆ
ಈ ಕಾರ್ಯಾಚರಣೆಯು ಕೇವಲ ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿರದೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಹರಡಿಕೊಂಡಿದೆ. ಬೆಂಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಾರವಾರ, ಕಲಬುರಗಿ, ಬೆಳಗಾವಿ ಸೇರಿದಂತೆ ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಇಡಿ ತಂಡಗಳು ಏಕಕಾಲದಲ್ಲಿ ಪರಿಶೀಲನೆ ನಡೆಸಿವೆ.
₹70 ರಿಂದ ₹80 ಲಕ್ಷ ಲಂಚದ ಡಿಮ್ಯಾಂಡ್!
ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 4 ಪ್ರತ್ಯೇಕ ಎಫ್‌ಐಆರ್‌ಗಳ (FIR) ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಈ ತನಿಖೆಯನ್ನು ಕೈಗೆತ್ತಿಕೊಂಡಿದೆ. ಪಶುವೈದ್ಯಾಧಿಕಾರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯಲ್ಲಿ ಹೆಸರಿಸಲು ಅಭ್ಯರ್ಥಿಗಳಿಂದ ಮಧ್ಯವರ್ತಿಗಳು ತಲಾ ₹70 ಲಕ್ಷದಿಂದ ₹80 ಲಕ್ಷದವರೆಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ದೂರುಗಳಲ್ಲಿ ಗಂಭೀರವಾಗಿ ಆರೋಪಿಸಲಾಗಿದೆ.
ಹಣಕ್ಕೆ ಬೇಡಿಕೆಯಿಟ್ಟಿದ್ದ ಮಧ್ಯವರ್ತಿಗಳ ಆಡಿಯೋ ರೆಕಾರ್ಡಿಂಗ್‌ಗಳನ್ನು ದೂರುದಾರರು ಈಗಾಗಲೇ ತನಿಖಾ ಸಂಸ್ಥೆಗಳಿಗೆ ಸಾಕ್ಷಿಯಾಗಿ ಹಸ್ತಾಂತರಿಸಿದ್ದಾರೆ.
OMR ಶೀಟ್ ತಿದ್ದುಪಡಿ ಹಾಗೂ ಪ್ರಶ್ನೆಪತ್ರಿಕೆ ಲೀಕ್
ಕೇವಲ ಹಣದ ಬೇಡಿಕೆ ಮಾತ್ರವಲ್ಲದೆ, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ:
- ಪ್ರಶ್ನೆಪತ್ರಿಕೆ ಸೋರಿಕೆ (Paper Leakage): ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ.
- OMR ಶೀಟ್ ಟ್ಯಾಂಪರಿಂಗ್: ಒಎಂಆರ್ ಉತ್ತರ ಪತ್ರಿಕೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಲಾಗಿದೆ.
- ಸ್ವಜನಪಕ್ಷಪಾತ: ಕೆಪಿಎಸ್‌ಸಿ ಉನ್ನತ ಅಧಿಕಾರಿಗಳ ಸಂಬಂಧಿಕರಿಗೆ ಆದ್ಯತೆ ನೀಡಿ ಆಯ್ಕೆ ಪಟ್ಟಿಯಲ್ಲಿ ಅಕ್ರಮ ಎಸಗಲಾಗಿದೆ.
ಪ್ರಸ್ತುತ ಇಡಿ ಅಧಿಕಾರಿಗಳು ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಖಾಸಗಿ ಡಿಜಿಟಲ್ ಸಂಸ್ಥೆಯ ನಡುವಿನ ಅಕ್ರಮ ಹಣಕಾಸಿನ ವ್ಯವಹಾರ ಹಾಗೂ ಪತ್ರ ವ್ಯವಹಾರಗಳನ್ನು ತೀವ್ರವಾಗಿ ಜಾಲಾಡುತ್ತಿದ್ದಾರೆ. ಈ ಮಹಾಹಗರಣದಲ್ಲಿ ಇನ್ನಷ್ಟು ಪ್ರಭಾವಿಗಳ ಹೆಸರುಗಳು ಹೊರಬರುವ ಸಾಧ್ಯತೆಯಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: