ನಕಲಿ ಸರ್ಟಿಫಿಕೇಟ್ ವಿವಾದ: ಕೇರಳ ಐಎಎಸ್ ಅಧಿಕಾರಿ ಆಸಿಫ್ ಯೂಸುಫ್ ಹುದ್ದೆಗೆ ಕುತ್ತು; ಕೇಂದ್ರದಿಂದ ತನಿಖೆಗೆ ಆದೇಶ.
ವರದಿಗಾರರು (Reporter)
Hemanth Rajashekar10:32 PM IST

ಕೇರಳ ಕೇಡರ್‌ನ ಐಎಎಸ್ ಅಧಿಕಾರಿ, ತಲಶ್ಶೇರಿ ಉಪ ಜಿಲ್ಲಾಧಿಕಾರಿ (ಸಬ್ ಕಲೆಕ್ಟರ್) ಆಸಿಫ್ ಕೆ. ಯೂಸುಫ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಕೇರಳ ಸರ್ಕಾರಕ್ಕೆ ತುರ್ತು ಪತ್ರ ಬರೆದಿದೆ. ಇತರೆ ಹಿಂದುಳಿದ ವರ್ಗಗಳ (OBC) ಅಡಿಯಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು ಆಸಿಫ್ ಅವರು ತಮ್ಮ ಪೋಷಕರ ನಕಲಿ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಿರುವುದು ತನಿಖೆಯಿಂದ ಸಾಬೀತಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ.
ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ, ಕಣಯನ್ನೂರು ತಾಲ್ಲೂಕು ಕಚೇರಿಯ ತಹಶೀಲ್ದಾರರು ಆಸಿಫ್ ಯೂಸುಫ್ ಅವರ ಪರವಾಗಿ ನೀಡಿರುವ ಒಬಿಸಿ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರಗಳು “ದೋಷಪೂರಿತ ಮತ್ತು ತಪ್ಪು ಮಾಹಿತಿಗಳಿಂದ ಕೂಡಿವೆ” ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಯ ಒಬಿಸಿ ಹಾಗೂ ಆದಾಯ ಪ್ರಮಾಣಪತ್ರಗಳನ್ನು ತಕ್ಷಣದಿಂದಲೇ ರದ್ದುಗೊಳಿಸಲಾಗಿದೆ.
ಕ್ರೀಮಿ ಲೇಯರ್ ನಿಯಮ ಉಲ್ಲಂಘನೆ
2016ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಆಸಿಫ್ ಯೂಸುಫ್, ಒಬಿಸಿ ಮೀಸಲಾತಿಯ ಲಾಭ ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಅಭ್ಯರ್ಥಿಗಳು ಮೀಸಲಾತಿ ಪಡೆಯಲು ಕ್ರೀಮಿ ಲೇಯರ್ ರಹಿತ (Non-Creamy Layer) ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ, ಒಬಿಸಿ ತರಗತಿಯಡಿ ಈ ಸೌಲಭ್ಯ ಪಡೆಯಬೇಕಾದರೆ ಅಭ್ಯರ್ಥಿಯ ಪೋಷಕರ ಸತತ ಮೂರು ವರ್ಷಗಳ ವಾರ್ಷಿಕ ಆದಾಯವು 6 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿರಬಾರದು.
ಆದರೆ, ಈ ಕುರಿತು ತನಿಖೆ ನಡೆಸಿದ ಎರ್ನಾಕುಲಂ ಜಿಲ್ಲಾಧಿಕಾರಿ ಎಸ್. ಸುಹಾಸ್ ಅವರು ಕೇರಳ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದು, ಆಸಿಫ್ ಅವರ ಪೋಷಕರ ಒಟ್ಟು ವಾರ್ಷಿಕ ಆದಾಯವು 6 ಲಕ್ಷ ರೂಪಾಯಿಗಳ ಮಿತಿಗಿಂತ ಹೆಚ್ಚಾಗಿತ್ತು ಎಂಬುದನ್ನು ಪತ್ತೆಹಚ್ಚಿದ್ದಾರೆ. ಆಸಿಫ್ ಮೀಸಲಾತಿ ಪಡೆಯುವ ಉದ್ದೇಶದಿಂದಲೇ ಉದ್ದೇಶಪೂರ್ವಕವಾಗಿ ಸುಳ್ಳು ದಾಖಲೆಗಳನ್ನು ಒದಗಿಸಿದ್ದರು ಎಂಬುದು ಜಿಲ್ಲಾಧಿಕಾರಿಗಳ ವರದಿಯಲ್ಲಿ ದೃಢಪಟ್ಟಿದೆ.
ತೂಗಾಡುತ್ತಿದೆ ಐಎಎಸ್ ಹುದ್ದೆ
ಆಸಿಫ್ ಯೂಸುಫ್ ಅವರ ವಿಜಿಲೆನ್ಸ್ ಕ್ಲಿಯರೆನ್ಸ್ (ಭ್ರಷ್ಟಾಚಾರ ನಿಗ್ರಹ ದಳದ ಒಪ್ಪಿಗೆ) ಪ್ರಕ್ರಿಯೆಯು ಕೇರಳ ಸರ್ಕಾರದಿಂದ ಇನ್ನು ಬಾಕಿ ಇರುವ ಕಾರಣ, ಅವರ ಐಎಎಸ್ ಹುದ್ದೆಯು ಇನ್ನೂ ಅಧಿಕೃತವಾಗಿ ಖಾಯಂಗೊಂಡಿಲ್ಲ. ಈ ಮಧ್ಯೆ ವಂಚನೆ ಪ್ರಕರಣ ಬೆಳಕಿಗೆ ಬಂದಿರುವುದರಿಂದ, ಭಾರತೀಯ ಆಡಳಿತ ಸೇವೆ (ಪ್ರೊಬೇಷನ್) ನಿಯಮಗಳು ಹಾಗೂ ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ಅಡಿಯಲ್ಲಿ ಅವರ ವಿರುದ್ಧ ತಕ್ಷಣದ ಕಾನೂನು ಕ್ರಮ ಕೈಗೊಳ್ಳುವಂತೆ ಕೇಂದ್ರ ಸೂಚಿಸಿದೆ.
ಆಸಿಫ್ ಯೂಸುಫ್ ಅವರು 2015ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 215ನೇ ರ್ಯಾಂಕ್ ಪಡೆದಿದ್ದರು. ಯುಪಿಎಸ್‌ಸಿ ನಿಯಮಗಳ ಪ್ರಕಾರ, ಕಡಿಮೆ ರ್ಯಾಂಕ್ ಬಂದಿದ್ದರೂ ಒಬಿಸಿ ಮೀಸಲಾತಿ ಪ್ರಮಾಣಪತ್ರದ ಸಹಾಯದಿಂದ ಉನ್ನತ ಶ್ರೇಣಿಯ ಸೇವೆಗಳಿಗೆ (ಐಎಎಸ್‌ನಂತಹ ಹುದ್ದೆಗಳಿಗೆ) ಮರುಹಂಚಿಕೆ ಪಡೆಯಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಆಸಿಫ್ ಈ ಅಡ್ಡದಾರಿ ಹಿಡಿದಿದ್ದರು ಎನ್ನಲಾಗಿದೆ.
ಈ ನಕಲಿ ದಾಖಲೆ ಹಗರಣದ ತನಿಖೆ ತೀವ್ರಗೊಂಡಿದ್ದು, ಆಸಿಫ್ ಅವರಿಗೆ ನಕಲಿ ಆದಾಯ ಪ್ರಮಾಣಪತ್ರ ವಿತರಿಸಿದ ಕಣಯನ್ನೂರು ತಹಶೀಲ್ದಾರ್ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ಹೂಡಿ ಸೂಕ್ತ ಕ್ರಮ ಜರುಗಿಸಲು ಸರ್ಕಾರ ಮುಂದಾಗಿದೆ. ಉನ್ನತ ಹುದ್ದೆಯಲ್ಲಿದ್ದುಕೊಂಡು ಮೀಸಲಾತಿ ದುರುಪಯೋಗಪಡಿಸಿಕೊಂಡ ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: