ಮಾಸ್ಕ್ ಧರಿಸಿ BMTC ಬಸ್‌ಗಳಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ರಿಯಾಲಿಟಿ ಚೆಕ್: ಕಂಡಕ್ಟರ್ ಸಸ್ಪೆಂಡ್! ಆಟೋ ಚಾಲಕನಿಗೂ ತರಾಟೆ.
ವರದಿಗಾರರು (Reporter)
Hemanth Rajashekar12:35 AM IST

ಬೆಂಗಳೂರು: ರಾಜಧಾನಿಯ ಜನಸಾಮಾನ್ಯರು ಪ್ರತಿದಿನ ಬಿಎಂಟಿಸಿ (BMTC) ಬಸ್‌ಗಳಲ್ಲಿ ಎದುರಿಸುವ ಕಷ್ಟಗಳು ಹಾಗೂ ಸಾರಿಗೆ ಸಂಸ್ಥೆಯ ನೈಜ ಸ್ಥಿತಿಯನ್ನು ಅರಿಯಲು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಯಾವುದೇ ಅಧಿಕೃತ ಪ್ರೋಟೋಕಾಲ್ ಅಥವಾ ಭದ್ರತಾ ಸಿಬ್ಬಂದಿ ಇಲ್ಲದೆ, ಮುಖಕ್ಕೆ ಕಪ್ಪು ಮಾಸ್ಕ್ ಧರಿಸಿ ಸಚಿವರು ಸಾಮಾನ್ಯ ಪ್ರಯಾಣಿಕರಂತೆ ಬೆಂಗಳೂರಿನಾದ್ಯಂತ ಸಂಚರಿಸಿದ್ದಾರೆ.
ರಾತ್ರಿ 7:10 ರಿಂದ 9:10 ರವರೆಗೆ ಸುಮಾರು 2 ಗಂಟೆಗಳ ಕಾಲ ನಡೆದ ಈ ಹಠಾತ್ ಜಿಟಿ ರೌಂಡ್ಸ್‌ನಲ್ಲಿ ಸಚಿವರು 10ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿ ದೂರುಗಳನ್ನು ಖುದ್ದಾಗಿ ಪರಿಶೀಲಿಸಿದ್ದಾರೆ. ಈ ವೇಳೆ ಕರ್ತವ್ಯ ಲೋಪ ಎಸಗಿದ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಸಚಿವರಿಗೇ ಶಾಕ್ ನೀಡಿದ ಮತ್ತೊಬ್ಬ ಕಂಡಕ್ಟರ್ ಕೂಡ ಸಸ್ಪೆಂಡ್ ಆಗಿದ್ದಾನೆ.
ಪ್ರಯಾಣಿಕರಿಗೆ ಬಸ್ ನಿಲ್ಲಿಸದ ಚಾಲಕ, ನಿರ್ವಾಹಕ ಅಮಾನತು!
ಸಚಿವರ ರಿಯಾಲಿಟಿ ಚೆಕ್ ವೇಳೆ ಜಯಮಹಲ್‌ನಿಂದ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ (KA-57 F-3372) ಫನ್ ವರ್ಲ್ಡ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕೈ ತೋರಿಸಿದರೂ ನಿಲ್ಲಿಸದೇ ಮುಂದೆ ಹೋಗಿರುವುದು ಸಚಿವರ ಗಮನಕ್ಕೆ ಬಂದಿದೆ. ಸಾರ್ವಜನಿಕರ ಇಂತಹ ಬೇಜವಾಬ್ದಾರಿತನದ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಸದರಿ ಬಸ್‌ನ ಚಾಲಕ ಮುಸ್ತಾಕ್ ಮತ್ತು ನಿರ್ವಾಹಕ ದಯಾನಂದ್ ಅವರನ್ನು ಅಮಾನತುಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಸಚಿವರಿಗೇ ಎದುರಾಯ್ತು ಚಿಲ್ಲರೆ ಸಮಸ್ಯೆ: ಬಸ್‌ನಿಂದ ಇಳಿಸಿದ ಕಂಡಕ್ಟರ್!
ಇನ್ನೊಂದು ಘಟನೆಯಲ್ಲಿ ಸಚಿವ ಬೈರತಿ ಸುರೇಶ್ ಅವರು ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್‌ನಲ್ಲಿ ಸಾಮಾನ್ಯ ಪ್ರಯಾಣಿಕರು ಪ್ರತಿದಿನ ಅನುಭವಿಸುವ ಚಿಲ್ಲರೆ ಸಮಸ್ಯೆಯನ್ನು ಸ್ವತಃ ಎದುರಿಸಿದರು. ಸಚಿವರು ಎರಡು ಟಿಕೆಟ್‌ಗಳಿಗಾಗಿ ಕಂಡಕ್ಟರ್‌ಗೆ 100 ರೂಪಾಯಿ ನೋಟು ನೀಡಿದ್ದಾರೆ. ಆದರೆ ಕಂಡಕ್ಟರ್ ಚಿಲ್ಲರೆ ಇಲ್ಲ ಎಂದು ಹೇಳಿ, “ನಿಮ್ಮ ಬಳಿ ಚಿಲ್ಲರೆ ಇಲ್ಲದಿದ್ದರೆ ಬಸ್‌ನಿಂದ ಕೆಳಗಿಳಿಯಿರಿ” ಎಂದು ಸಚಿವರಿಗೇ ಆಜ್ಞಾಪಿಸಿದ್ದಾನೆ.
ಸಚಿವರು ಮಾಸ್ಕ್ ಧರಿಸಿದ್ದರಿಂದ ಆ ಕಂಡಕ್ಟರ್‌ಗೆ ತಾನು ಮಾತನಾಡುತ್ತಿರುವುದು ಸಾರಿಗೆ ಸಚಿವರ ಜೊತೆ ಎಂಬ ಕನಿಷ್ಠ ಕಲ್ಪನೆಯೂ ಇರಲಿಲ್ಲ. ಸಚಿವರು ಯಾವುದೇ ವಾದಕ್ಕೆ ಇಳಿಯದೆ ಸುಮ್ಮನೆ ಬಸ್‌ನಿಂದ ಕೆಳಗಿಳಿದಿದ್ದಾರೆ. ಈ ಗಂಭೀರ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬಿಎಂಟಿಸಿ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು ಸದರಿ ಕಂಡಕ್ಟರ್ ಟಿ.ಜಿ. ರಾಮಕೃಷ್ಣ ಎಂಬಾತನನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೆ ಬಸ್‌ಗಳಲ್ಲಿ ಯುಪಿಐ (UPI) ಪಾವತಿ ವ್ಯವಸ್ಥೆ ಇದ್ದರೂ ಪ್ರಯಾಣಿಕರನ್ನು ಬಸ್‌ನಿಂದ ಇಳಿಸುವುದು ಸಹಿಸುವುದಿಲ್ಲ ಎಂದು ಬಿಎಂಟಿಸಿ ಎಂಡಿ ಎಚ್ಚರಿಕೆ ನೀಡಿದ್ದಾರೆ.
ಮೀಟರ್‌ಗಿಂತ ಹೆಚ್ಚು ಹಣ ಕೇಳಿದ ಆಟೋ ಚಾಲಕನಿಗೆ ಕ್ಲಾಸ್!
ಬಸ್ ಪರಿಶೀಲನೆ ಮುಗಿಸಿ ನಾಗಶೆಟ್ಟಿಹಳ್ಳಿಯಲ್ಲಿ ಸಚಿವರು ಸುಮಾರು ಒಂದು ಕಿಲೋಮೀಟರ್ ದೂರ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ್ದಾರೆ. ಪ್ರಯಾಣದ ಕೊನೆಯಲ್ಲಿ ಆಟೋ ಮೀಟರ್‌ನಲ್ಲಿ ಕೇವಲ 30 ರೂಪಾಯಿ ತೋರಿಸುತ್ತಿದ್ದರೂ ಆಟೋ ಚಾಲಕ ಮಾತ್ರ ಸಚಿವರಿಂದ 36 ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ಹೆಚ್ಚುವರಿ ಹಣ ಕೇಳಿದಕ್ಕೆ ಮೀಟರ್ ಸರಿಯಿಲ್ಲ ಎಂದು ಚಾಲಕ ಸಮರ್ಥಿಸಿಕೊಂಡಿದ್ದಾನೆ. ತಕ್ಷಣವೇ ಆಟೋ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಮೀಟರ್ ಪ್ರಕಾರವೇ ದರ ವಸೂಲಿ ಮಾಡಬೇಕು ಎಂದು ಎಚ್ಚರಿಕೆ ನೀಡಿ, ಕೊನೆಗೆ 40 ರೂಪಾಯಿ ನೀಡಿ ಅಲ್ಲಿಂದ ತೆರಳಿದ್ದಾರೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಮತ್ತು ಸಿಬ್ಬಂದಿಗಳಲ್ಲಿ ಶಿಸ್ತು ಮೂಡಿಸಲು ಇಂತಹ ದಿಢೀರ್ ಮತ್ತು ರಹಸ್ಯ ಪರಿಶೀಲನೆಗಳು ಮುಂದಿನ ದಿನಗಳಲ್ಲೂ ನಗರದ ವಿವಿಧ ಭಾಗಗಳಲ್ಲಿ ಮುಂದುವರಿಯಲಿವೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಅಯೋಧ್ಯೆ ರಾಮಮಂದಿರಕ್ಕೆ ಸಿಇಒ ನೇಮಕ: ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನಾಂಕ.