ಕರ್ನಾಟಕ ಸುದ್ದಿ

ಸರ್ಕಾರಿ ಮಹಿಳಾ ನೌಕರರಿಗೆ ಋತುಚಕ್ರ ರಜೆ: ಇನ್ನು ಅನುಮತಿ ಬೇಕಿಲ್ಲ

Thrishika Arun

ವರದಿಗಾರರು (Reporter)

Thrishika Arun

10:33 AM IST

ಸರ್ಕಾರಿ ಮಹಿಳಾ ನೌಕರರಿಗೆ ಋತುಚಕ್ರ ರಜೆ: ಇನ್ನು ಅನುಮತಿ ಬೇಕಿಲ್ಲ

ಕರ್ನಾಟಕದ ಮಹಿಳಾ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಋತುಚಕ್ರ ರಜೆ ಪಡೆಯಲು ಇನ್ನು ಮುಂದೆ ಮೇಲಧಿಕಾರಿಗಳ ಅನುಮತಿಗಾಗಿ ಕಾಯಬೇಕಿಲ್ಲ. ‘ಕರ್ತವ್ಯ’ ಆ್ಯಪ್‌ನಲ್ಲಿ ರಜೆಗೆ ಅರ್ಜಿ ಸಲ್ಲಿಸಿದ ತಕ್ಷಣವೇ ಅದು ಸ್ವಯಂಚಾಲಿತವಾಗಿ ಮಂಜೂರಾಗುವಂತೆ ರಾಜ್ಯ ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ತಂದಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಅ.5, 2026ರಂದು ಸುತ್ತೋಲೆ ಹೊರಡಿಸಿದ್ದಾರೆ.

ಈ ಹಿಂದೆ ಕೆಲವು ಕಚೇರಿಗಳಲ್ಲಿ ಮಹಿಳಾ ನೌಕರರ ಋತುಚಕ್ರ ರಜೆ ಅರ್ಜಿಗಳನ್ನು ತಡೆಹಿಡಿಯುವುದು, ಪ್ರಶ್ನಿಸುವುದು ಅಥವಾ ನಿರಾಕರಿಸುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ರಜೆ ಮಂಜೂರಾತಿಯಲ್ಲಿ ವಿಳಂಬವಾಗದಂತೆ ‘ಕರ್ತವ್ಯ’ ಆ್ಯಪ್‌ನಲ್ಲೇ ಸ್ವಯಂಚಾಲಿತ ಅನುಮೋದನೆ ವ್ಯವಸ್ಥೆ ಮಾಡಲಾಗಿದೆ.

ಋತುಚಕ್ರ ರಜೆಗೆ ಇನ್ನು ಮೇಲಧಿಕಾರಿ ಅನುಮತಿ ಇಲ್ಲ

ಹೊಸ ನಿಯಮದಂತೆ ಅರ್ಹ ಮಹಿಳಾ ಸರ್ಕಾರಿ ನೌಕರರು ‘ಕರ್ತವ್ಯ’ ಆ್ಯಪ್ ಮೂಲಕ ಋತುಚಕ್ರ ರಜೆಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಕೂಡಲೇ ರಜೆ ಸ್ವಯಂಚಾಲಿತವಾಗಿ ಮಂಜೂರಾಗಲಿದ್ದು, ಅದನ್ನು ಯಾವುದೇ ಮಂಜೂರಾತಿ ಅಧಿಕಾರಿ ತಡೆಹಿಡಿಯಲು, ಪ್ರಶ್ನಿಸಲು ಅಥವಾ ರದ್ದುಪಡಿಸಲು ಅವಕಾಶವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ರಜೆಗೆ ವೈದ್ಯಕೀಯ ಪ್ರಮಾಣಪತ್ರ ನೀಡುವ ಅಗತ್ಯವೂ ಇಲ್ಲ. ರಜೆ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ ಮಹಿಳಾ ನೌಕರರಿಗೆ ಎದುರಾಗುತ್ತಿದ್ದ ಅನಗತ್ಯ ವಿಳಂಬ ಮತ್ತು ತೊಂದರೆ ತಪ್ಪಿಸುವುದು ಹೊಸ ವ್ಯವಸ್ಥೆಯ ಉದ್ದೇಶವಾಗಿದೆ.

ಯಾರಿಗೆ ಎಷ್ಟು ದಿನ ಋತುಚಕ್ರ ರಜೆ?

18ರಿಂದ 52 ವರ್ಷದೊಳಗಿನ ಮಹಿಳಾ ಸರ್ಕಾರಿ ನೌಕರರು ಈ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಪ್ರತಿ ಕ್ಯಾಲೆಂಡರ್ ತಿಂಗಳಲ್ಲಿ ಗರಿಷ್ಠ ಒಂದು ದಿನ ಋತುಚಕ್ರ ರಜೆ ಪಡೆಯಬಹುದು.

ರಜೆಯನ್ನು ಮುಂದಿನ ತಿಂಗಳಿಗೆ ಕೊಂಡೊಯ್ಯಲು ಅಥವಾ ಸಂಗ್ರಹಿಸಿಡಲು ಅವಕಾಶವಿಲ್ಲ. ಅಲ್ಲದೆ, ಋತುಚಕ್ರ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸೇರಿಸಿ ಪಡೆಯುವಂತಿಲ್ಲ ಎಂದು ನಿಯಮದಲ್ಲಿ ತಿಳಿಸಲಾಗಿದೆ.

‘ಕರ್ತವ್ಯ’ ಆ್ಯಪ್ ಮೂಲಕವೇ ಅರ್ಜಿ

ರಾಜ್ಯದ ಎಲ್ಲ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಹೊಸ ನಿಯಮವನ್ನು ತಮ್ಮ ವ್ಯಾಪ್ತಿಯ ಕಚೇರಿಗಳಲ್ಲಿರುವ ಮಹಿಳಾ ನೌಕರರು ಮತ್ತು ರಜೆ ಮಂಜೂರಾತಿ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸರ್ಕಾರ ಸೂಚಿಸಿದೆ. ಮಹಿಳಾ ನೌಕರರು ಋತುಚಕ್ರ ರಜೆಗಾಗಿ ‘ಕರ್ತವ್ಯ’ ಆ್ಯಪ್ ಮೂಲಕವೇ ಅರ್ಜಿ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಆ್ಯಪ್ ಮೂಲಕ ಸ್ವಯಂಚಾಲಿತವಾಗಿ ಮಂಜೂರಾದ ರಜೆಯನ್ನು ಅಧಿಕಾರಿಗಳು ತಡೆಹಿಡಿಯದಂತೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿರುವುದರಿಂದ, ಹೊಸ ವ್ಯವಸ್ಥೆ ಜಾರಿಗೆ ಬಂದ ಬಳಿಕ ರಜೆ ಪಡೆಯುವ ಪ್ರಕ್ರಿಯೆ ಮತ್ತಷ್ಟು ಸರಳವಾಗುವ ನಿರೀಕ್ಷೆಯಿದೆ.

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ