ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಒಟ್ಟಿಗೆ ಮುಂಬಡ್ತಿ ನೀಡಿದ ಸರ್ಕಾರ.
ವರದಿಗಾರರು (Reporter)
Hemanth Rajashekar01:32 AM IST

ರಾಜ್ಯದ ಆಡಳಿತ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ನಾಗರಿಕರಿಗೆ ತ್ವರಿತ ಸೇವೆ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದೆ. ಕಂದಾಯ ಇಲಾಖೆಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಬೇಡಿಕೆಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ತಹಶೀಲ್ದಾರ್ ಗ್ರೇಡ್-2 ವೃಂದದ 232 ಅಧಿಕಾರಿಗಳಿಗೆ ಏಕಕಾಲದಲ್ಲಿ ತಹಶೀಲ್ದಾರ್ ಗ್ರೇಡ್-1 ವೃಂದಕ್ಕೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಅದೇಶ ಹೊರಡಿಸಿದೆ.
ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಈ ಐತಿಹಾಸಿಕ ಮುಂಬಡ್ತಿ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿಸಿದ್ದು, ಸರಕಾರಿ ಅಧಿಕಾರಿಗಳ ವಲಯದಲ್ಲಿ ವ್ಯಾಪಕ ಹರ್ಷ ವ್ಯಕ್ತವಾಗಿದೆ.
2021 ರಿಂದ ನೆನೆಗುದಿಗೆ ಬಿದ್ದಿದ್ದ ಪ್ರಕ್ರಿಯೆಗೆ ಸಿಕ್ಕಿತು ಮುಕ್ತಿ
ರಾಜ್ಯದಲ್ಲಿ 2021 ರಿಂದಲೇ ತಹಶೀಲ್ದಾರ್ ಗ್ರೇಡ್-2 ವೃಂದದ ಅಧಿಕಾರಿಗಳಿಗೆ ಮುಂಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದಾಗಿ ಸಾಕಷ್ಟು ವಿಳಂಬ ಉಂಟಾಗಿತ್ತು. ಇದರಿಂದಾಗಿ ಹಿರಿಯ ಅಧಿಕಾರಿಗಳು ತಮಗೆ ಸಿಗಬೇಕಾದ ನ್ಯಾಯಬದ್ಧ ಬಡ್ತಿಗಾಗಿ ದೀರ್ಘಕಾಲದಿಂದ ಕಾಯುತ್ತಿದ್ದರು. ಪ್ರಸ್ತುತ ಸರ್ಕಾರವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕೇವಲ ಜೇಷ್ಠತೆಯನ್ನು (Seniority) ಮುಖ್ಯ ಆಧಾರವಾಗಿಟ್ಟುಕೊಂಡು ಯಾವುದೇ ತಾರತಮ್ಯವಿಲ್ಲದೆ ಪಾರದರ್ಶಕವಾಗಿ ಒಟ್ಟು 232 ಅಧಿಕಾರಿಗಳ ದೀರ್ಘಕಾಲದ ನಿರೀಕ್ಷೆಗೆ ಸ್ಪಂದಿಸಿದೆ.

ಆಡಳಿತ ಯಂತ್ರದ ಬಲವರ್ಧನೆಗೆ ಡಾ. ಜಿ. ಪರಮೇಶ್ವರ ಸಂಕಲ್ಪ
ಈ ಮಹತ್ವದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು,
“ಸರ್ಕಾರದ ಈ ಆದೇಶವು ಕೇವಲ ಒಂದು ಆಡಳಿತಾತ್ಮಕ ಪ್ರಕ್ರಿಯೆಯಲ್ಲ. ಇದು ನ್ಯಾಯಬದ್ಧ, ಪಾರದರ್ಶಕ ಹಾಗೂ ಸಮಯೋಚಿತ ಆಡಳಿತಕ್ಕೆ ನಮ್ಮ ಸರ್ಕಾರ ಹೊಂದಿರುವ ಬದ್ಧತೆಯ ಪ್ರತೀಕವಾಗಿದೆ. ವರ್ಷಗಳ ಕಾಲ ನಿರಂತರ ಪರಿಶ್ರಮ ಮತ್ತು ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದ ಕಂದಾಯ ಅಧಿಕಾರಿಗಳಲ್ಲಿ ವಿಶ್ವಾಸ ಮೂಡಿಸಲು ಏಕಕಾಲದಲ್ಲಿ ಈ ಮುಂಬಡ್ತಿ ನೀಡಲಾಗಿದೆ. ಬಲಿಷ್ಠ ಮತ್ತು ಸ್ಫೂರ್ತಿದಾಯಕ ಆಡಳಿತ ವ್ಯವಸ್ಥೆಯೇ ರಾಜ್ಯದ ಪ್ರಗತಿಯ ಮೂಲಾಧಾರ,” ಎಂದು ತಿಳಿಸಿದ್ದಾರೆ.

ಜನಕೇಂದ್ರಿತ ಸೇವೆಗೆ ಹೆಚ್ಚಿದ ಜವಾಬ್ದಾರಿ
ಕಂದಾಯ ಇಲಾಖೆಯು ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಿರುವ ಪ್ರಮುಖ ಇಲಾಖೆಯಾಗಿದೆ. ಈ ಬಡ್ತಿ ಪ್ರಕ್ರಿಯೆಯಿಂದಾಗಿ ತಹಶೀಲ್ದಾರ್ ದರ್ಜೆಯ ಹುದ್ದೆಗಳು ಭರ್ತಿಯಾಗಲಿದ್ದು, ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಸಾರ್ವಜನಿಕ ಕೆಲಸಗಳು ಇನ್ನು ಮುಂದೆ ಮತ್ತಷ್ಟು ವೇಗವಾಗಿ ನಡೆಯಲಿವೆ. ಮುಂಬಡ್ತಿ ಪಡೆದಿರುವ ಎಲ್ಲಾ ಅಧಿಕಾರಿಗಳು ಹೊಸ ಹುದ್ದೆಯೊಂದಿಗೆ ಬರುವ ಹೆಚ್ಚುವರಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ, ಸಾರ್ವಜನಿಕರಿಗೆ ಇನ್ನಷ್ಟು ದಕ್ಷತೆ, ಕಾಳಜಿ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು ಎಂದು ಸರ್ಕಾರ ಸೂಚಿಸಿದೆ.
ಹಲವು ವರ್ಷಗಳ ಕಾಯುವಿಕೆಯ ನಂತರ ಸಿಕ್ಕ ಈ ಬಡ್ತಿಯು ಕಂದಾಯ ಇಲಾಖೆಯ ನೌಕರರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದು, ಆಡಳಿತ ಯಂತ್ರಕ್ಕೆ ಮತ್ತಷ್ಟು ವೇಗ ಸಿಗುವುದು ನಿಶ್ಚಿತವಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಹಳಿಯಾಳದಲ್ಲಿ ರೌಡಿ ಅಟ್ಟಹಾಸ: ಪೊಲೀಸರ ಮೇಲೆಯೇ ಹಲ್ಲೆಯಾದರೂ ಸುಮ್ಮನಿದ್ದ ಎಸ್‌ಐ ಬಸವರಾಜ ಅಮಾನತು.