ಕ್ರೀಡಾಪಟುಗಳಿಗೆ 2.52 ಕೋಟಿ ರೂ. ಮೌಲ್ಯದ ರೇಸಿಂಗ್ ಸೈಕಲ್ ವಿತರಿಸಿದ ಡಿಸಿಎಂ ಪರಮೇಶ್ವರ್.
ವರದಿಗಾರರು (Reporter)
Hemanth Rajashekar12:03 AM IST

ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿಯ (SC) ಪ್ರತಿಭಾವಂತ ಕ್ರೀಡಾಪಟುಗಳ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಕನಸುಗಳಿಗೆ ರೆಕ್ಕೆ ನೀಡಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು 2025-26ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ (SCSP) ಅಡಿಯಲ್ಲಿ ಕ್ರೀಡಾಪಟುಗಳಿಗೆ ಬರೋಬ್ಬರಿ 2.52 ಕೋಟಿ ರೂಪಾಯಿ ಮೌಲ್ಯದ ಹೈಟೆಕ್ ರೇಸಿಂಗ್ ಮತ್ತು ತರಬೇತಿ ಸೈಕಲ್‌ಗಳನ್ನು ವಿತರಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಕ್ರೀಡಾ ನಿಲಯಗಳಲ್ಲಿ ತರಬೇತಿ ಪಡೆಯುತ್ತಿರುವ ಒಟ್ಟು 36 ಜನ ಪರಿಶಿಷ್ಟ ಜಾತಿಯ ಸೈಕ್ಲಿಂಗ್ ಪಟುಗಳಿಗೆ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಹೊಂದಿರುವ ಸೈಕಲ್‌ಗಳು ಹಾಗೂ ಬಿಡಿಭಾಗಗಳನ್ನು ಹಸ್ತಾಂತರಿಸಲಾಯಿತು.
ವಿಜಯಪುರ, ಗದಗ ಮತ್ತು ಬಾಗಲಕೋಟೆ ಕ್ರೀಡಾಪಟುಗಳಿಗೆ ಬಂಪರ್
ಉತ್ತರ ಕರ್ನಾಟಕ ಭಾಗದಲ್ಲಿ ಸೈಕ್ಲಿಂಗ್ ಕ್ರೀಡೆಗೆ ಇರುವ ಅಪಾರ ಕ್ರೇಜ್ ಹಾಗೂ ಕ್ರೀಡಾಪಟುಗಳ ಸಾಧನೆಯನ್ನು ಗುರುತಿಸಿರುವ ಸರ್ಕಾರ, ಈ ದುಬಾರಿ ಸೈಕಲ್‌ಗಳನ್ನು ಪ್ರಮುಖವಾಗಿ ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಸೈಕ್ಲಿಂಗ್ ಕೇಂದ್ರಗಳಿಗೆ ಹಂಚಿಕೆ ಮಾಡಿದೆ. ಕ್ರೀಡಾ ವಸತಿ ನಿಲಯಗಳಲ್ಲಿ ಕಠಿಣ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳಿಗೆ ಈ ಅತ್ಯಾಧುನಿಕ ಸೈಕಲ್‌ಗಳು ಸಿಕ್ಕಿರುವುದು ಅವರ ಕ್ರೀಡಾ ಸ್ಫೂರ್ತಿಯನ್ನು ದುಪ್ಪಟ್ಟುಗೊಳಿಸಿದೆ.

ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್ ಗುರಿ
ದೇಶ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಲು ನೆರವಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅರ್ಹ ಫಲಾನುಭವಿಗಳ ಪೈಕಿ 21 ಅಥ್ಲೀಟ್‌ಗಳಿಗೆ ಕಾಂಪಿಟಿಷನ್ (ಸ್ಪರ್ಧಾತ್ಮಕ) ರೇಸಿಂಗ್ ಸೈಕಲ್‌ಗಳನ್ನು ನೀಡಲಾಗಿದ್ದರೆ, ಇನ್ನುಳಿದ 15 ಅಥ್ಲೀಟ್‌ಗಳಿಗೆ ಸುಧಾರಿತ ತರಬೇತಿ ಸೈಕಲ್‌ಗಳು ಹಾಗೂ ಅಗತ್ಯ ಸುರಕ್ಷತಾ ಉಪಕರಣಗಳನ್ನು ವಿತರಿಸಲಾಗಿದೆ.
ಬರೋಬ್ಬರಿ 14 ಲಕ್ಷ ರೂ. ಮೌಲ್ಯದ ಟ್ರ್ಯಾಕ್ ಸೈಕಲ್‌ಗಳು
ಈ ಯೋಜನೆಯ ಅಡಿಯಲ್ಲಿ ವಿತರಿಸಲಾದ ಸೈಕಲ್‌ಗಳು ಸಾಮಾನ್ಯ ಸೈಕಲ್‌ಗಳಲ್ಲ. ಇವು ಕ್ರೀಡಾಪಟುಗಳು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಸ್ಪರ್ಧಿಸಲು ಬಳಸುವ ವಿಶ್ವದರ್ಜೆಯ ರೇಸಿಂಗ್ ಸೈಕಲ್‌ಗಳಾಗಿವೆ. ಇಲ್ಲಿ ನೀಡಲಾಗಿರುವ ಒಂದೊಂದು ಟ್ರ್ಯಾಕ್ ಸೈಕಲ್‌ನ ಬೆಲೆ ಸುಮಾರು 14 ಲಕ್ಷ ರೂಪಾಯಿಗಳಷ್ಟಿದೆ. ಇಷ್ಟು ದೊಡ್ಡ ಮೊತ್ತದ ದುಬಾರಿ ಕ್ರೀಡಾ ಪರಿಕರಗಳನ್ನು ಸರ್ಕಾರವೇ ಉಚಿತವಾಗಿ ಒದಗಿಸಿರುವುದು ಬಡ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳ ಕ್ರೀಡಾ ಭವಿಷ್ಯಕ್ಕೆ ದೊಡ್ಡ ಆಸರೆಯಾಗಿದೆ.
ಕ್ರೀಡಾಪಟುಗಳು ಯಾವುದೇ ಆರ್ಥಿಕ ಮುಗ್ಗಟ್ಟಿಲ್ಲದೆ ಕೇವಲ ತಮ್ಮ ಸಾಧನೆಯತ್ತ ಗಮನ ಹರಿಸಲಿ ಎಂಬ ಉದ್ದೇಶದಿಂದ ವಿಶೇಷ ಘಟಕ ಯೋಜನೆಯಡಿ ಈ ಅನುದಾನ ಬಳಸಿಕೊಳ್ಳಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಮುಂಬರುವ ಒಲಿಂಪಿಕ್ಸ್ ಹಾಗೂ ಏಷ್ಯನ್ ಗೇಮ್ಸ್‌ನಂತಹ ಜಾಗತಿಕ ವೇದಿಕೆಗಳಲ್ಲಿ ಕರ್ನಾಟಕದ ಸೈಕ್ಲಿಸ್ಟ್‌ಗಳು ಪದಕ ಬೇಟೆಯಾಡುವುದು ನಿಶ್ಚಿತ ಎನ್ನಲಾಗುತ್ತಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಕರ್ನಾಟಕ ಮತದಾರರ SIR: 2026ರ ಹೊಸ ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ.