ಜನಶಕ್ತಿಗೆ ಒಲಿದ ಐತಿಹಾಸಿಕ ಜಯ: ‘ಕರ್ನಾಟಕ ಉದ್ಯಾನವನ ತಿದ್ದುಪಡಿ ವಿಧೇಯಕ-2026’ ಹಿಂಪಡೆಯಲು ಸಚಿವ ಸಂಪುಟ ನಿರ್ಧಾರ.
ವರದಿಗಾರರು (Reporter)
Hemanth Rajashekar06:05 AM IST

ಬೆಂಗಳೂರು: ಪಕ್ಷಾತೀತವಾಗಿ ಹೋರಾಡಿದ ಉದ್ಯಾನನಗರಿಯ ನಾಗರಿಕರಿಗೆ ಮತ್ತು ಪರಿಸರ ಪ್ರೇಮಿಗಳಿಗೆ ಕೊನೆಗೂ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ತೀವ್ರ ಸಾರ್ವಜನಿಕ ಆಕ್ರೋಶ ಹಾಗೂ ವ್ಯಾಪಕ ಪ್ರತಿಭಟನೆಗಳಿಗೆ ಮಣಿದಿರುವ ಕರ್ನಾಟಕ ಸರ್ಕಾರ, ಅತ್ಯಂತ ವಿವಾದಾತ್ಮಕವಾಗಿದ್ದ ‘ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ, 2026’ ಅನ್ನು ಹಿಂಪಡೆಯಲು ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕ ತೀರ್ಮಾನ ಕೈಗೊಂಡಿದೆ.
ಅಲ್ಲದೆ, ಮುಂದಿನ ಶಾಸನಸಭೆಯ ಅಧಿವೇಶನದಲ್ಲಿ ಸಾರ್ವಜನಿಕ ವಲಯ ಹಾಗೂ ಸದನದಲ್ಲಿ ವ್ಯಾಪಕ ಚರ್ಚೆ ಮತ್ತು ಸಮಾಲೋಚನೆ ನಡೆಸಿದ ಬಳಿಕವೇ ಅಗತ್ಯ ತಿದ್ದುಪಡಿಗಳೊಂದಿಗೆ ವಿಧೇಯಕವನ್ನು ಮರುಮಂಡನೆ ಮಾಡಲು ಸರ್ಕಾರ ನಿರ್ಧರಿಸಿದೆ.
ವಿವಾದಕ್ಕೆ ಕಾರಣವಾಗಿದ್ದ 5% ಜಾಗದ ನಿಯಮ
ರಾಜ್ಯ ಸರ್ಕಾರದ ಈ ಹಿಂದಿನ ತಿದ್ದುಪಡಿ ವಿಧೇಯಕವು ಬೆಂಗಳೂರು ಸೇರಿದಂತೆ ರಾಜ್ಯದ ಸಾರ್ವಜನಿಕ ಉದ್ಯಾನವನಗಳ ಶೇಕಡಾ 5 ರಷ್ಟು ಭೂಮಿಯನ್ನು ಸಾರ್ವಜನಿಕ ಉದ್ದೇಶ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಲು ಅವಕಾಶ ನೀಡುತ್ತಿತ್ತು.
ಸರ್ಕಾರದ ಈ ನಿರ್ಧಾರವು ಲಾಲ್‌ಬಾಗ್, ಕಬ್ಬನ್ ಪಾರ್ಕ್ ನಂತಹ ಐತಿಹಾಸಿಕ ಹಸಿರು ತಾಣಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಪರಿಸರಾಸಕ್ತರು ಹಾಗೂ ನಾಗರಿಕರು ಆತಂಕ ವ್ಯಕ್ತಪಡಿಸಿದ್ದರು. “ನಮ್ಮ ಉದ್ಯಾನವನಗಳನ್ನು ಉಳಿಸಿ” ಎಂಬ ಬ್ಯಾನರ್ ಅಡಿಯಲ್ಲಿ ಬೆಂಗಳೂರಿನ ಸಾವಿರಾರು ನಾಗರಿಕರು, ಹಿರಿಯ ನಾಗರಿಕರು ಮತ್ತು ವಿವಿಧ ರಂಗಗಳ ಪ್ರಮುಖರು ಪಕ್ಷಾತೀತವಾಗಿ ರಸ್ತೆಗಿಳಿದು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು.
“ಜನರ ಭಾವನೆಗಳಿಗೆ ನಮ್ಮ ಗೌರವ” – ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಸಚಿವ ಸಂಪುಟದ ಈ ನಿರ್ಧಾರದ ಕುರಿತು ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರದ ಬದ್ಧತೆಯನ್ನು ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ:
“ನಮ್ಮ ಸರ್ಕಾರವು ಯಾವಾಗಲೂ ಕರ್ನಾಟಕದ ಜನರ ಭಾವನೆಗಳನ್ನು ಗೌರವಿಸುತ್ತಾ ಬಂದಿದೆ. ಕರ್ನಾಟಕ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯುವ ಸಚಿವ ಸಂಪುಟದ ನಿರ್ಧಾರವೂ ಸಹ ಜನರಿಗೆ ನಾವು ನೀಡಿರುವ ಈ ಬದ್ಧತೆಯ ಪ್ರತಿಫಲವಾಗಿದೆ.”
ಮುಂದುವರಿದು ಮಾತನಾಡಿದ ಅವರು, ಸಾರ್ವಜನಿಕ ಅಭಿಪ್ರಾಯ ಮತ್ತು ಕಳಜಿಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು:
“ಸಾರ್ವಜನಿಕರ ಅಭಿಪ್ರಾಯ, ಕಳಕಳಿ ಮತ್ತು ಭಾವನೆಗಳನ್ನು ಪರಿಗಣನೆಗೆ ತೆಗೆದುಕೊಂಡು, ಸರ್ಕಾರವು ತನ್ನ ಉದ್ದೇಶಗಳನ್ನು ಜನರ ಮುಂದೆ ಇನ್ನಷ್ಟು ಸ್ಪಷ್ಟವಾಗಿ ಇಡಲು ಹಾಗೂ ಅಗತ್ಯ ತಿದ್ದುಪಡಿಗಳೊಂದಿಗೆ ವಿಧೇಯಕವನ್ನು ಮರುಮಂಡಿಸಲು ತೀರ್ಮಾನಿಸಿದೆ. ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ ನ್ಯಾಯಾಧೀಶರು. ಸಾರ್ವಜನಿಕ ಅಭಿಪ್ರಾಯದ ನ್ಯಾಯಾಲಯದ ಮುಂದೆ ನಮ್ಮ ಉದ್ದೇಶಗಳನ್ನು ಪ್ರಾಮಾಣಿಕವಾಗಿ ಇಟ್ಟು, ಜನರ ನಂಬಿಕೆಯೊಂದಿಗೆ ಮುನ್ನಡೆಯುವುದು ನಮ್ಮ ಸರ್ಕಾರದ ದೃಢ ಸಂಕಲ್ಪವಾಗಿದೆ.”
ಮುಕ್ತ ಚರ್ಚೆಗೆ ವೇದಿಕೆ ಸಿದ್ಧ
ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ವಿಧೇಯಕವನ್ನು ಹಿಂಪಡೆಯುವ ಬಗ್ಗೆ ರಾಜ್ಯಪಾಲರಿಗೆ ಅಧಿಕೃತವಾಗಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಈ ವಿಧೇಯಕದ ಕರಡನ್ನು ಸಾರ್ವಜನಿಕ ವಲಯದಲ್ಲಿ ಮುಕ್ತ ಚರ್ಚೆಗೆ ಇಡಲಾಗುವುದು. ನಾಗರಿಕರಿಂದ, ತಜ್ಞರಿಂದ ಹಾಗೂ ವಿರೋಧ ಪಕ್ಷಗಳಿಂದ ಬರುವ ಸಲಹೆ-ಸೂಚನೆಗಳನ್ನು ಕ್ರೋಢೀಕರಿಸಿ, ಅಗತ್ಯ ಬದಲಾವಣೆಗಳೊಂದಿಗೆ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

“ಪ್ರಜಾಪ್ರಭುತ್ವದ ವಿಜಯ, ಆದರೆ ಹೋರಾಟ ಇನ್ನೂ ಮುಗಿದಿಲ್ಲ” – ಎಂಪಿ ತೇಜಸ್ವಿ ಸೂರ್ಯ
ಸಚಿವ ಸಂಪುಟದ ನಿರ್ಧಾರವನ್ನು ಸ್ವಾಗತಿಸಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಸರ್ಕಾರದ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದ್ದು, ಹೋರಾಟದ ಮುಂದಿನ ಹಂತದ ಕುರಿತು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ:
“ಜನರು ತಮ್ಮ ಧ್ವನಿಯನ್ನು ಎತ್ತಿದರು, ಸರ್ಕಾರ ಅದಕ್ಕೆ ಸ್ಪಂದಿಸಿತು. ಪ್ರಜಾಪ್ರಭುತ್ವ ಎಂದರೆ ಹೀಗೆಯೇ ಕಾರ್ಯನಿರ್ವಹಿಸಬೇಕು. 5% ಉದ್ಯಾನವನ ಭೂಮಿ ವಿಲೇವಾರಿ ಕಾಯ್ದೆಯನ್ನು ವಿರೋಧಿಸಿ 91 ವರ್ಷದ ಹಿರಿಯ ಪರಿಸರವಾದಿ ವೈ. ಯಲ್ಲಪ್ಪ ರೆಡ್ಡಿ ಅವರ ನೇತೃತ್ವದಲ್ಲಿ ಲಾಲ್‌ಬಾಗ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ನಾಗರಿಕನಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಹಾಗೆಯೇ ಸಾರ್ವಜನಿಕ ಅಭಿಪ್ರಾಯವನ್ನು ಗೌರವಿಸಿ ಈ ಕರಾಳ ಶಾಸನವನ್ನು ಹಿಂಪಡೆಯಲು ನಿರ್ಧರಿಸಿದ ಮುಖ್ಯಮಂತ್ರಿಯವರನ್ನು ಅಭಿನಂದಿಸುತ್ತೇನೆ.”
ತೇಜಸ್ವಿ ಸೂರ್ಯ ಅವರು ಉದ್ಯಾನವನ ತಿದ್ದುಪಡಿ ವಿಧೇಯಕ ಹಿಂಪಡೆತವನ್ನು ಸ್ವಾಗತಿಸಿದರೂ, ಬೆಂಗಳೂರಿನ ಪರಿಸರ ಸಂರಕ್ಷಣೆಯ ಹೋರಾಟ ಇಲ್ಲಿಗೆ ಮುಗಿದಿಲ್ಲ ಎಂದು ಎಚ್ಚರಿಸಿದ್ದಾರೆ:
“ಆದರೆ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ಅವೈಜ್ಞಾನಿಕವಾದ ‘ಟನಲ್ ರಸ್ತೆ (Tunnel Road)’ ಯೋಜನೆಯನ್ನು ಅಧಿಕೃತವಾಗಿ ಕೈಬಿಡುವವರೆಗೆ ಲಾಲ್‌ಬಾಗ್ ಆಗಲಿ ಅಥವಾ ಕೋಟ್ಯಂತರ ವರ್ಷಗಳ ಐತಿಹಾಸಿಕ ‘ಪೆನಿನ್ಸುಲರ್ ಗ್ನಿಸ್ ಬಂಡೆ (Peninsular Gneiss Rock)’ ಆಗಲಿ ಸುರಕ್ಷಿತವಾಗಿರುವುದಿಲ್ಲ. ಇಂದು ನಾನು ಮಾನ್ಯ ಉಚ್ಚ ನ್ಯಾಯಾಲಯದ ಮುಂದೆ ಟನಲ್ ರಸ್ತೆ ಯೋಜನೆಯನ್ನು ವಿರೋಧಿಸಿ ವಾದ ಮಂಡಿಸಿದ್ದೇನೆ. ಹೈಕೋರ್ಟ್ ಈ ಕುರಿತು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ವರದಿಯನ್ನು ತನಗೆ ಸಲ್ಲಿಸುವಂತೆ ನಿರ್ದೇಶಿಸಿದ್ದು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 10 ಕ್ಕೆ ನಿಗದಿಪಡಿಸಿದೆ.”
ಹೆಬ್ಬಾಳ ಕೆರೆಯ ಬಫರ್ ಝೋನ್ ವಿಚಾರವಾಗಿಯೂ ಧ್ವನಿ ಎತ್ತಿರುವ ಅವರು:
“ಸರ್ಕಾರವು ಹೆಬ್ಬಾಳ ಕೆರೆಯಲ್ಲಿ ಶಾರ್ಟ್ ಟನಲ್ ಯೋಜನೆಗಾಗಿ ಕರ್ನಾಟಕ ಕೆರೆ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದು, ಬಫರ್ ಝೋನ್ ಅನ್ನು 30 ಮೀಟರ್‌ನಿಂದ ಕೇವಲ 3 ಮೀಟರ್‌ಗೆ ಇಳಿಸಿದೆ. ಈ ತಿದ್ದುಪಡಿಯನ್ನು ಸಹ ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ಬೆಂಗಳೂರಿನ ಕೆರೆಗಳು, ಉದ್ಯಾನವನಗಳು ಮತ್ತು ಹಸಿರು ತಾಣಗಳನ್ನು ರಕ್ಷಿಸಲು ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ. ಧನ್ಯವಾದಗಳು ಬೆಂಗಳೂರು, ನಿಮ್ಮ ನಗರಕ್ಕಾಗಿ ಧ್ವನಿಯೆತ್ತಿದ್ದಕ್ಕಾಗಿ!” ಎಂದು ಹೇಳಿದ್ದಾರೆ.
ಬೆಂಗಳೂರಿನ ನಾಗರಿಕರಲ್ಲಿ ಸಂಭ್ರಮ
ಸರ್ಕಾರದ ಈ ತೀರ್ಮಾನವನ್ನು ಬೆಂಗಳೂರಿನ ವಿವಿಧ ನಾಗರಿಕ ವೇದಿಕೆಗಳು, ಪರಿಸರ ಸಂಸ್ಥೆಗಳು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWA) ಹರ್ಷದಿಂದ ಸ್ವಾಗತಿಸಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕರ ಧ್ವನಿಗೆ ಬೆಲೆ ಸಿಕ್ಕಿದೆ ಎಂಬುದಕ್ಕೆ ಈ ನಿರ್ಧಾರವೇ ಸಾಕ್ಷಿ ಎಂದು ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಹಸಿರು ಹೊದಿಕೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ನೀಡಿರುವುದು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಶುಕ್ರವಾರ ನಗರದಾದ್ಯಂತ ಮಾಂಸ ಮಾರಾಟ ಸಂಪೂರ್ಣ ನಿಷೇಧ! ಜನ್ಮಾಷ್ಟಮಿ ಹಿನ್ನೆಲೆಯಲ್ಲಿ GBA ಆದೇಶ.