ಝೀರಂ ಘಾಟಿ ನರಮೇಧ ಪ್ರಕರಣ: 10 ಸಿಪಿಐ ಮಾವೋವಾದಿ ಉಗ್ರರಿಗೆ ಗಲ್ಲು ಶಿಕ್ಷೆ ವಿಧಿಸಿ ಎನ್‌ಐಎ ನ್ಯಾಯಾಲಯ.
ವರದಿಗಾರರು (Reporter)
Hemanth Rajashekar03:11 PM IST

ದೇಶವನ್ನು ನಡುಗಿಸಿದ್ದ ಭೀಕರ ಝೀರಂ ಘಾಟಿ ನಕ್ಸಲ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ (NIA) ವಿಶೇಷ ನ್ಯಾಯಾಲಯ ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ನಿಷೇಧಿತ ಸಿಪಿಐ (ಮಾವೋವಾದಿ) ಭಯೋತ್ಪಾದಕ ಸಂಘಟನೆಯ 10 ಸಶಸ್ತ್ರ ಕೆಡರ್‌ಗಳಿಗೆ ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಿ ಜಗದಾಲ್‌ಪುರದ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯ ದರ್ಭ ಪ್ರದೇಶದ ಝೀರಂ ಘಾಟಿಯಲ್ಲಿ ಎನ್‌ಹೆಚ್-221ರಲ್ಲಿ ನಡೆದ ಈ ರಕ್ತಸಿಕ್ತ ದಾಳಿ ಭಾರತೀಯ ರಾಜಕೀಯ ಮತ್ತು ಭದ್ರತಾ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿ ಉಳಿದಿತ್ತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಸೆಪ್ಟೆಂಬರ್ 5, 2026 ರಂದು ಈ 10 ಜನರನ್ನು ಅಪರಾಧಿಗಳು ಎಂದು ಎತ್ತಿಹಿಡಿದಿತ್ತು. ಇದೀಗ ಸೆಪ್ಟೆಂಬರ್ 16, 2026 ರಂದು ನ್ಯಾಯಾಲಯವು ಎಲ್ಲಾ 10 ಅಪರಾಧಿಗಳಿಗೆ ಗಲ್ಲು ಶಿಕ್ಷೆಯ ಅಂತಿಮ ತೀರ್ಪನ್ನು ನೀಡಿದೆ.
ಏನಿದು ಝೀರಂ ಘಾಟಿ ನರಮೇಧ ಘಟನೆ?
2013ರ ಮೇ 25 ರಂದು ಕಾಂಗ್ರೆಸ್ ಪಕ್ಷವು ಆಯೋಜಿಸಿದ್ದ “ಪರಿವರ್ತನ ಯಾತ್ರೆ”ಯ ಕಾನ್ವಾಯ್ ಗುರಿಯಾಗಿಸಿಕೊಂಡು ಮಾವೋವಾದಿಗಳು ಅತ್ಯಂತ ಭೀಕರ ದಾಳಿ ನಡೆಸಿದ್ದರು. ಆಯಕಟ್ಟಿನ ಜಾಗವಾಗಿದ್ದ ಝೀರಂ ಘಾಟಿಯಲ್ಲಿ ದಾರಿ ಕಾಯುತ್ತಿದ್ದ ಸಶಸ್ತ್ರ ಮಾವೋವಾದಿಗಳು ಐಇಡಿ (IED) ಸುಧಾರಿತ ಸ್ಪೋಟಕ ಸಾಧನಗಳನ್ನು ಬಳಸಿ ವಾಹನಗಳನ್ನು ಉಡಾಯಿಸಿದ್ದರು. ಇದರ ಜೊತೆಗೆ ಸುತ್ತುವರಿದು ಅತ್ಯಂತ ಕ್ರೂರವಾಗಿ ಮನಸೋಇಚ್ಛೆ ಗುಂಡಿನ ಚಕಮಕಿ ಮತ್ತು ಗ್ರೆನೇಡ್ ದಾಳಿ ನಡೆಸಿದ್ದರು.
ಈ ಭೀಕರ ದಾಳಿಯಲ್ಲಿ 24 ಮುಗ್ಧ ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿ ಸ್ಥಳದಲ್ಲೇ ದುರಂತವಾಗಿ ಪ್ರಾಣ ಕಳೆದುಕೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ 35ಕ್ಕೂ ಹೆಚ್ಚು ಜನರಲ್ಲಿ, ನಂತರದ ದಿನಗಳಲ್ಲಿ ಚಿಕಿತ್ಸೆ ಫಲಿಸದೇ ಮತ್ತಿಬ್ಬರು/ಮೂವರು ಮೃತಪಟ್ಟರು. ಅಷ್ಟೇ ಅಲ್ಲದೆ, ದಾಳಿ ನಡೆಸಿದ ಮಾವೋವಾದಿಗಳು ಮೃತಪಟ್ಟ ಮತ್ತು ಗಾಯಗೊಂಡ ಜನರಿಂದ ಶಸ್ತ್ರಾಸ್ತ್ರಗಳು, ವಾಕಿ-ಟಾಕಿ ಸೆಟ್‌ಗಳು, ಮೊಬೈಲ್ ಫೋನ್‌ಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.

ಎನ್‌ಐಎ ಸುದೀರ್ಘ ತನಿಖೆ ಮತ್ತು ಕಾನೂನು ಹೋರಾಟ
ಈ ಪ್ರಕರಣದ ತನಿಖೆಯನ್ನು ವಹಿಸಿಕೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವ್ಯಾಪಕ ಪರಿಶೀಲನೆ ನಡೆಸಿ 2014ರ ಸೆಪ್ಟೆಂಬರ್ 25 ರಂದು 9 ಆರೋಪಿಗಳ ವಿರುದ್ಧ ಮೊದಲ ಚಾರ್ಜ್‌ಶೀಟ್ ಸಲ್ಲಿಸಿತ್ತು. ತದನಂತರ 2015ರ ಸೆಪ್ಟೆಂಬರ್ 28 ರಂದು 30 ಹೆಚ್ಚುವರಿ ಆರೋಪಿಗಳ ವಿರುದ್ಧ ಪೂರಕ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ಒಟ್ಟಾರೆಯಾಗಿ 39 ಆರೋಪಿಗಳ ವಿರುದ್ಧ ಎನ್‌ಐಎ ತನಿಖೆ ನಡೆಸಿತ್ತು.
ವಿಚಾರಣೆ ವೇಳೆ ಒಟ್ಟು 101 ಪ್ರಾಸಿಕ್ಯೂಷನ್ ಸಾಕ್ಷಿಗಳ ಹೇಳಿಕೆಗಳನ್ನು ಮತ್ತು ಬಲವಾದ ಸಾಕ್ಷ್ಯಾಧಾರಗಳನ್ನು ದಾಖಲಿಸಿಕೊಳ್ಳಲಾಯಿತು. ವಿಚಾರಣೆ ಹಂತದಲ್ಲಿದ್ದಾಗಲೇ ಕಸ್ಟಡಿಯಲ್ಲಿದ್ದ ಒಬ್ಬ ಆರೋಪಿ ಮೃತಪಟ್ಟಿದ್ದನು.
ವಿಶೇಷ ನ್ಯಾಯಾಲಯ ವಿಧಿಸಿದ ಕಠಿಣ ವಿಭಾಗಗಳು
ಸ್ಥಳೀಯ ನಕ್ಸಲ್ ಕಮಿಟಿಗಳೊಂದಿಗೆ ಸೇರಿ ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಮತ್ತು ಭದ್ರತಾ ಸಿಬ್ಬಂದಿಯನ್ನು ಕೊಲ್ಲಲು ಮಾವೋವಾದಿಗಳು ನಡೆಸಿದ ದೊಡ್ಡ ಮಟ್ಟದ ಕ್ರಿಮಿನಲ್ ಸಂಚು (Tactical Counter Offensive Campaign – TCOC) ತನಿಖೆಯಲ್ಲಿ ಸಾಬೀತಾಗಿದೆ.
ನ್ಯಾಯಾಲಯವು ಅಪರಾಧಿಗಳಿಗೆ ಭಾರತೀಯ ದಂಡ ಸಂಹಿತೆ (IPC) ವಿಭಾಗಗಳಾದ 147, 148, 149, 121, 121(A), 122, 341, 302 (ಕೊಲೆ), 307 (ಕೊಲೆ ಯತ್ನ), 396, 397, 427, 120(B) ಜೊತೆಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ವಿಭಾಗಗಳಾದ 16, 18, 20, 38, 39, 40, ಶಸ್ತ್ರಾಸ್ತ್ರ ಕಾಯ್ದೆಯ 25, 27 ಹಾಗೂ ಸ್ಪೋಟಕ ವಸ್ತುಗಳ ಕಾಯ್ದೆಯಡಿ ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಿದೆ.
ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ದೇಶದ ನ್ಯಾಯಾಂಗ ವ್ಯವಸ್ಥೆ ನೀಡಿರುವ ಈ ಕಠಿಣ ತೀರ್ಪು ಸಂತ್ರಸ್ತರ ಕುಟುಂಬಗಳಿಗೆ ಕೊನೆಗೂ ನ್ಯಾಯ ತಂದೊದಗಿಸಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
CBFC ಗೆ 18 ಹೊಸ ಸದಸ್ಯರ ನೇಮಕ! ಸುನಿಲ್ ಶೆಟ್ಟಿ, ಪ್ರೀತಿ ಜಿಂಟಾ, ಪಂಕಜ್ ತ್ರಿಪಾಠಿ, ರಿಕ್ಕಿ ಕೇಜ್‌ಗೆ ಮಹತ್ವದ ಹೊಣೆ.
₹50 ಲಕ್ಷ ನಗದು ಹಣ ಪಡೆಯುವಾಗ ತಹಶೀಲ್ದಾರ್ ರೆಡ್‌ಹ್ಯಾಂಡ್ ಬಂಧನ! ಧಾರವಾಡದಲ್ಲಿ ಬೃಹತ್ ಲೋಕಾಯುಕ್ತ ದಾಳಿ!