ಕ್ರೈಂ

ಜಾಮ್‌ನಗರ ಹತ್ಯೆ ಪ್ರಕರಣ: ಪತಿಯನ್ನು ಕೊಂದು 12 ಅಡಿ ಆಳದ ಕಾಂಕ್ರೀಟ್ ನೆಲದಲ್ಲಿ ಹೂತಿಟ್ಟ ಪತ್ನಿ ಬಂಧನ!

Hemanth Rajashekar

ವರದಿಗಾರರು (Reporter)

Hemanth Rajashekar

06:40 AM IST

ಜಾಮ್‌ನಗರ ಹತ್ಯೆ ಪ್ರಕರಣ: ಪತಿಯನ್ನು ಕೊಂದು 12 ಅಡಿ ಆಳದ ಕಾಂಕ್ರೀಟ್ ನೆಲದಲ್ಲಿ ಹೂತಿಟ್ಟ ಪತ್ನಿ ಬಂಧನ!

ಮನೆಯಲ್ಲಿಯೇ ಪತಿಯನ್ನು ಕೊಲೆ ಮಾಡಿ, ಶವವನ್ನು 12 ಅಡಿ ಆಳದಲ್ಲಿ ಹೂತುಹಾಕಿ ಕಾಂಕ್ರೀಟ್ ಮರೆಮಾಚಿ, ಕಳೆದ ಎರಡು ವರ್ಷಗಳಿಂದ “ಗಂಡ ಆಸ್ಟ್ರೇಲಿಯಾದಲ್ಲಿದ್ದಾನೆ” ಎಂದು ಇಡೀ ಕುಟುಂಬವನ್ನೇ ನಂಬಿಸಿದ್ದ ಭೀಕರ ಹತ್ಯೆ ಪ್ರಕರಣವೊಂದನ್ನು ಗುಜರಾತ್‌ನ ಜಾಮ್‌ನಗರ ಪೊಲೀಸರು ಭೇದಿಸಿದ್ದಾರೆ.

ಈ ಸಿನೆಮಾ ಶೈಲಿಯ ಕೃತ್ಯಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಪೃಥ್ವಿ ಮಾವಡಿಯಾ ಮತ್ತು ಆಕೆಯ ಪ್ರಿಯಕರ ನಿಲೇಶ್ ಕಚಟಿಯಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಸುಖಾಸುಮ್ಮನೆ ಹೆಣೆದ ಆಸ್ಟ್ರೇಲಿಯಾ ಡ್ರಾಮಾ!

ವಿವರಗಳ ಪ್ರಕಾರ, 2024 ರ ಮೇ 31 ರಂದು ಪ್ರಿಥ್ವಿ ಮತ್ತು ನಿಲೇಶ್ ಸೇರಿ ಜಾಮ್‌ನಗರದ ಬಿಸಿನೆಸ್‌ಮ್ಯಾನ್ ಜಿಗ್ನೇಶ್ ಮಾವಡಿಯಾಗೆ ಮದ್ಯದಲ್ಲಿ ಸೈನೈಡ್ (cyanide) ಬೆರೆಸಿ ಕೊಲೆ ಮಾಡಿದ್ದರು. ಬಳಿಕ ಹತ್ಯೆಯ ಸುಳಿವು ಸಿಗದಂತೆ ದಾರೇಡ್ ಜಿಐಡಿಸಿ (Dared GIDC) ಪ್ರದೇಶದಲ್ಲಿದ್ದ ಒಂದು ಫ್ಯಾಕ್ಟರಿಯ ನೆಲ ಅಂತಸ್ತಿನಲ್ಲಿ 12 ಅಡಿ ಆಳದ ಗುಂಡಿ ತೋಡಿ ಮೃತದೇಹವನ್ನು ಹೂತುಹಾಕಿ, ಅದರ ಮೇಲೆ ಒಂದು ಅಡಿ ದಪ್ಪದ ಕಾಂಕ್ರೀಟ್ ಹಾಕಿ ಸೀಲ್ ಮಾಡಿದ್ದರು.

ಕೊಲೆಯ ನಂತರ ಕುಟುಂಬಸ್ಥರಿಗೆ ಅನುಮಾನ ಬಾರದಂತೆ ನಡೆದ ಪತ್ನಿ ಪೃಥ್ವಿ, “ಜಿಗ್ನೇಶ್ ಕೆಲಸದ ನಿಮಿತ್ತ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಅಲ್ಲಿನ ಕಂಪನಿಯ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಅವರಿಗೆ ಫೋನ್ ಬಳಸಲು ಅಥವಾ ಕರೆ ಮಾಡಲು ಅನುಮತಿ ಇಲ್ಲ. ಪಿಆರ್ (Permanent Residency) ಸಿಕ್ಕ ನಂತರವೇ ಅವರು ಭಾರತಕ್ಕೆ ಹಿಂತಿರುಗುತ್ತಾರೆ” ಎಂದು ಸತತ ಎರಡು ವರ್ಷಗಳ ಕಾಲ ಕಥೆ ಕಟ್ಟಿ ಎಲ್ಲರನ್ನೂ ನಂಬಿಸಿದ್ದಳು.

ಸತ್ಯ ಹೊರಬಂದಿದ್ದು ಹೇಗೆ?

ಇತ್ತೀಚೆಗೆ ಕುಟುಂಬದ ಸಂಬಂಧಿಕರೊಬ್ಬರು ಕೆಲಸದ ನಿಮಿತ್ತ ಆಸ್ಟ್ರೇಲಿಯಾಗೆ ತೆರಳಲು ಯೋಜಿಸಿದ್ದರು. ಈ ವೇಳೆ ಅವರು ಆಸ್ಟ್ರೇಲಿಯಾದಲ್ಲಿ ಜಿಗ್ನೇಶ್ ಇರುವ ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ನೀಡುವಂತೆ ಪೃಥ್ವಿಯನ್ನು ಪಟ್ಟು ಹಿಡಿದು ಕೇಳಿದ್ದಾರೆ. ಇದರಿಂದ ಗಾಬರಿಗೊಂಡ ಪೃಥ್ವಿ ಸರಿಯಾದ ವಿವರ ನೀಡಲು ವಿಫಲಳಾಗಿದ್ದಾಳೆ.

ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಪೊಲೀಸ್ ದೂರು ನೀಡಲು ಮುಂದಾದಾಗ ಈಕೆಯ ಸುಳ್ಳು ಬಯಲಾಗಿದೆ. ಅಂತಿಮವಾಗಿ ಜಿಗ್ನೇಶ್ ಅವರ ಸಹೋದರ ಅಶೋಕ್ ಮಾವಡಿಯಾ ಅವರು ಜುಲೈ 26, 2026 ರಂದು ಸಿಟಿ ‘ಬಿ’ ಡಿವಿಷನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

12 ಅಡಿ ಆಳದಿಂದ ಅಸ್ಥಿಪಂಜರ ಹೊರಕ್ಕೆ!

ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಪೃಥ್ವಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆಕೆ ತನ್ನ ಪ್ರಿಯಕರನೊಂದಿಗೆ ಸೇರಿ ಮಾಡಿದ ಭೀಕರ ಕೊಲೆಯ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಫೊರೆನ್ಸಿಕ್ ತಜ್ಞರ ತಂಡವು ದಾರೇಡ್ ಜಿಐಡಿಸಿ ಶೆಡ್‌ಗೆ ಭೇಟಿ ನೀಡಿ, ಪವರ್ ಟೂಲ್ಸ್ ಬಳಸಿ ಕಾಂಕ್ರೀಟ್ ನೆಲವನ್ನು ಒಡೆದು 12 ಅಡಿ ಆಳಕ್ಕೆ ಅಗೆದಿದ್ದಾರೆ. ಅಲ್ಲಿ ಸಿಕ್ಕ ಜಿಗ್ನೇಶ್ ಅವರ ಅಸ್ಥಿಪಂಜರದ ಅವಶೇಷಗಳನ್ನು ವಶಕ್ಕೆ ಪಡೆದು, ಡಿಎನ್‌ಎ (DNA) ಮತ್ತು ವೈಜ್ಞಾನಿಕ ತನಿಖೆಗಾಗಿ ಫೊರೆನ್ಸಿಕ್ ಲ್ಯಾಬ್‌ಗೆ ರವಾನಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ (BNS) ಸೂಕ್ತ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಜಾಮ್‌ನಗರ ಪೊಲೀಸರು, ಆರೋಪಿಗಳಾದ ಪೃಥ್ವಿ ಮತ್ತು ನಿಲೇಶ್‌ನನ್ನು ಬಂಧಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

ಡಿ.ಜೆ ಹಳ್ಳಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣಾಧಿಕಾರಿ ಮೇಲೆಯೇ ಹಲ್ಲೆ; ನಾಲ್ವರ ವಿರುದ್ಧ BNS ಅಡಿ ಎಫ್‌ಐಆರ್!

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ