ಎಥನಾಲ್ ಬ್ಲೆಂಡಿಂಗ್‌ಗೆ ಮೋದಿ ಸರ್ಕಾರದ ಬಿಗ್ ಬೂಸ್ಟರ್ ಡೋಸ್. ಪೆಟ್ರೋಲ್ ಬೆಲೆಯಲ್ಲಿ ಭಾರಿ ಇಳಿಕೆ ಸಾಧ್ಯತೆ!
ವರದಿಗಾರರು (Reporter)
Hemanth Rajashekar12:58 AM IST

ವಿಶ್ವದಲ್ಲೇ ಮೂರನೇ ಅತಿ ದೊಡ್ಡ ತೈಲ ಆಮದುದಾರ ಮತ್ತು ಬಳಕೆದಾರ ರಾಷ್ಟ್ರವಾಗಿರುವ ಭಾರತ, ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ದೇಶೀಯವಾಗಿ ಜೈವಿಕ ಇಂಧನ (Biofuel) ಬಳಕೆಯನ್ನು ಉತ್ತೇಜಿಸುವ ಹಾಗೂ ವಿದೇಶಿ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ತಗ್ಗಿಸುವ ಸಲುವಾಗಿ ಕೇಂದ್ರ ಸರ್ಕಾರವು ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು (Excise Duty) ಸಂಪೂರ್ಣವಾಗಿ ಮನ್ನಾ ಮಾಡಿದೆ.
ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿರುವ ಹೊಸ ಅಧಿಸೂಚನೆಯ ಪ್ರಕಾರ, ಶೇಕಡಾ 20 ಕ್ಕಿಂತ ಹೆಚ್ಚು ಎಥನಾಲ್ ಹೊಂದಿರುವ E22, E25, E27 ಮತ್ತು E30 ಇಂಧನ ಮಿಶ್ರಣಗಳಿಗೆ ಈ ಅಬಕಾರಿ ಸುಂಕ ವಿನಾಯಿತಿ ಅನ್ವಯಿಸಲಿದೆ. ಸರ್ಕಾರದ ಈ ಮಾಸ್ಟರ್ ಪ್ಲಾನ್ ಇಂಧನ ಮಾರುಕಟ್ಟೆ ಮತ್ತು ದೇಶದ ಆರ್ಥಿಕತೆಯ ಮೇಲೆ ಭಾರಿ ಧನಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ.

ಡಬಲ್ ಟ್ಯಾಕ್ಸೇಷನ್ ತಡೆಗೆ ಸರ್ಕಾರದ ಮಹತ್ವದ ನಡೆ
ಪೆಟ್ರೋಲ್ ಮತ್ತು ಎಥನಾಲ್ ಮಿಶ್ರಣ ಮಾಡುವ ಪ್ರಕ್ರಿಯೆಯನ್ನು ಅಬಕಾರಿ ಕಾಯ್ದೆಯಡಿ ಮರು-ಉತ್ಪಾದನೆ ಎಂದು ಪರಿಗಣಿಸಿ ಮತ್ತೊಮ್ಮೆ ತೆರಿಗೆ ವಿಧಿಸುವ ಸಾಧ್ಯತೆ ಇತ್ತು. ಈಗಾಗಲೇ ಪೆಟ್ರೋಲ್‌ಗೆ ಅಬಕಾರಿ ಸುಂಕ ಮತ್ತು ಎಥನಾಲ್‌ಗೆ ಜಿಎಸ್‌ಟಿ ಪಾವತಿಸಲಾಗುತ್ತಿರುವುದರಿಂದ, ಮಿಶ್ರಿತ ಇಂಧನದ ಮೇಲೆ ಮತ್ತೊಮ್ಮೆ ತೆರಿಗೆ ಬೀಳದಂತೆ (ಡಬಲ್ ಟ್ಯಾಕ್ಸೇಷನ್) ತಡೆಯಲು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ಈ ಕ್ರಮ ಕೈಗೊಂಡಿದೆ. ಇದು ಪ್ರಸ್ತುತ ಚಾಲ್ತಿಯಲ್ಲಿರುವ E20 ಇಂಧನಕ್ಕೆ ಸಿಗುತ್ತಿರುವ ತೆರಿಗೆ ವಿನಾಯಿತಿಯ ಮುಂದುವರಿದ ಭಾಗವಾಗಿದೆ.
ಗ್ರಾಹಕರಿಗೆ ಸಿಗಲಿದೆಯೇ ಬಂಪರ್ ರಿಯಾಯಿತಿ?
ಶೇಕಡಾ 30 ರಷ್ಟು ಎಥನಾಲ್ ಹೊಂದಿರುವ E30 ಇಂಧನ ಮಾರುಕಟ್ಟೆಗೆ ಲಗ್ಗೆ ಇಟ್ಟಾಗ, ತೈಲ ಮಾರಾಟ ಕಂಪನಿಗಳು (OMCs) ಈ ತೆರಿಗೆ ವಿನಾಯಿತಿಯ ಲಾಭವನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಿದರೆ, ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ಬರೋಬ್ಬರಿ ₹11.90 ರವರೆಗೆ ಕಡಿತವಾಗುವ ಸಾಧ್ಯತೆಯಿದೆ. ಇದು ಹಣದುಬ್ಬರ ಹಾಗೂ ಜಾಗತಿಕ ಇಂಧನ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸಾರ್ವಜನಿಕರಿಗೆ ದೊಡ್ಡ ಮಟ್ಟದ ನಿರಾಳತೆ ನೀಡಬಲ್ಲದು.
ಈ ಪಾಲಿಸಿಯ ಪ್ರಮುಖ ನಾಲ್ಕು ಉದ್ದೇಶಗಳು:
- ಆಮದು ವೆಚ್ಚ ಕಡಿತ: ಭಾರತವು ತನ್ನ ಕಚ್ಚಾ ತೈಲದ ಅಗತ್ಯತೆಯ ಶೇಕಡಾ 80 ಕ್ಕಿಂತ ಹೆಚ್ಚಿನ ಪಾಲನ್ನು ಆಮದು ಮಾಡಿಕೊಳ್ಳುತ್ತದೆ. ಎಥನಾಲ್ ಮಿಶ್ರಣ ಹೆಚ್ಚಾದಷ್ಟೂ ವಿದೇಶಗಳಿಗೆ ಹರಿಯುವ ಭಾರತದ ಕೋಟ್ಯಂತರ ರೂಪಾಯಿ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ.
- ರೈತರ ಕೈಗೆ ಹೆಚ್ಚಿನ ಹಣ: ಎಥನಾಲ್ ಅನ್ನು ಪ್ರಮುಖವಾಗಿ ಕಬ್ಬು, ಹಾಳಾದ ಧಾನ್ಯಗಳು ಮತ್ತು ಕೃಷಿ ತ್ಯಾಜ್ಯಗಳಿಂದ ಉತ್ಪಾದಿಸಲಾಗುತ್ತದೆ. ಎಥನಾಲ್ ಬೇಡಿಕೆ ಹೆಚ್ಚಾದಂತೆ ದೇಶದ ಅನ್ನದಾತರಿಗೆ ಹೆಚ್ಚುವರಿ ಆದಾಯದ ಮೂಲ ಸೃಷ್ಟಿಯಾಗಲಿದೆ.
- ಮಾಲಿನ್ಯ ನಿಯಂತ್ರಣ: ಸಾಂಪ್ರದಾಯಿಕ ಪೆಟ್ರೋಲ್‌ಗೆ ಹೋಲಿಸಿದರೆ ಎಥನಾಲ್ ಮಿಶ್ರಿತ ಇಂಧನವು ಅತ್ಯಂತ ಕಡಿಮೆ ಇಂಗಾಲದ ಡೈಆಕ್ಸೈಡ್ (Carbon Emissions) ಹೊರಸೂಸುತ್ತದೆ. ಇದು ಪರಿಸರ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
- ಭವಿಷ್ಯದ ಸಿದ್ಧತೆ: ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಇತ್ತೀಚೆಗಷ್ಟೇ E22 ನಿಂದ E30 ಇಂಧನಗಳ ಗುಣಮಟ್ಟದ ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಸರ್ಕಾರದ ಈ ತೆರಿಗೆ ವಿನಾಯಿತಿಯು ಮುಂದಿನ ದಿನಗಳಲ್ಲಿ ದೇಶಾದ್ಯಂತ ಈ ಹೆಚ್ಚಿನ ಮಿಶ್ರಣದ ಇಂಧನಗಳನ್ನು ವಾಣಿಜ್ಯಿಕವಾಗಿ ಬಿಡುಗಡೆ ಮಾಡಲು ಭದ್ರ ಬುನಾದಿ ಹಾಕಿದೆ.
ಈಗ E22 ನಿಂದ E30 ವರೆಗಿನ ಇಂಧನಗಳಿಗೆ ನೀಡಿರುವ ಈ ವಿನಾಯಿತಿಯು ಭಾರತದ ಹಸಿರು ಇಂಧನ ಕ್ರಾಂತಿಗೆ (Green Fuel Revolution) ಮತ್ತಷ್ಟು ವೇಗ ನೀಡಲಿದ್ದು, ಇದರಲ್ಲಿ ಯಾವುದೇ ಸಂಶಯವಿಲ್ಲ. ಭವಿಷ್ಯದಲ್ಲಿ ವಾಹನ ತಯಾರಕ ಕಂಪನಿಗಳು ಸಹ ಈ ಹೆಚ್ಚಿನ ಇಂಧನ ಮಿಶ್ರಣಕ್ಕೆ ಸಪೋರ್ಟ್ ಮಾಡುವ ಎಂಜಿನ್‌ಗಳನ್ನು ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಗೆ ತರಲು ಈ ಪಾಲಿಸಿ ಪ್ರೇರೇಪಿಸಲಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಜೂನ್ 30 ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ. 5 ಭರ್ಜರಿ ರಿಯಾಯಿತಿ! ಸರ್ಕಾರದ ಡೆಡ್‌ಲೈನ್ ಮಿಸ್ ಮಾಡ್ಕೋಬೇಡಿ.