ವರುಣನ ರೌದ್ರನರ್ತನಕ್ಕೆ ನಲುಗಿದ ಸಿಲಿಕಾನ್ ಸಿಟಿ: ಸುರಿಯುತ್ತಲೇ ಇದೆ ಭಾರಿ ಮಳೆ, ಜಲಾವೃತ ರಸ್ತೆಗಳು, ಸವಾರರಿಗೆ ಸಂಚಾರ ಪೊಲೀಸರ ತುರ್ತು ಸಲಹೆ.
ವರದಿಗಾರರು (Reporter)
Hemanth Rajashekar05:43 AM IST

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ಆರಂಭವಾದ ಭಾರಿ ಮಳೆಯ ಆರ್ಭಟ ವರದಿ ಪ್ರಕಟವಾಗುವವರೆಗೂ ವಿಶ್ರಾಂತಿ ಇಲ್ಲದೆ ಸುರಿಯುತ್ತಲೇ ಇದೆ. ಏಕಾಏಕಿ ಸುರಿದ ಈ ಧೋಫೋ ಮಳೆಯಿಂದಾಗಿ ನಗರದ ಪ್ರಮುಖ ಪಥಗಳು ಹಾಗೂ ರಸ್ತೆಗಳು ಮಳೆ ನೀರಿನಿಂದ ಸಂಪೂರ್ಣವಾಗಿ ಜಲಾವೃತಗೊಂಡಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಕಚೇರಿಗಳಿಂದ ಮನೆಗಳಿಗೆ ಹಿಂದಿರುಗುತ್ತಿದ್ದ ಉದ್ಯೋಗಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಮುಖ್ಯವಾಗಿ ನಗರದ ಐಟಿ ಕಾರಿಡಾರ್ ಪ್ರದೇಶಗಳಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿ, ವಾಹನಗಳು ಶಂಖದ ವೇಗದಲ್ಲಿ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಕಟಣೆ ವೇಳೆಯೂ ಸತತ ಮಳೆ: ಬೆಳ್ಳಂದೂರು, ಹೆಚ್‌ಎಎಲ್ ವ್ಯಾಪ್ತಿ ಜಲಮಯ
ಸುದ್ದಿ ಪ್ರಕಟವಾಗುವ ಸಮಯದಲ್ಲೂ ನಗರದಾದ್ಯಂತ ಮಳೆ ಸುರಿಯುತ್ತಲೇ ಇದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಮಳೆಯಿಂದಾಗಿ ನಗರದ ಬೆಳ್ಳಂದೂರು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳು ಹಾಗೂ ಹೆಚ್‌ಎಎಲ್ (HAL) ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಸ್ಪೈಸ್ ಗಾರ್ಡನ್, ಕಾರ್ತಿಕ್ ನಗರ, ದೇವರಬೀಸನಹಳ್ಳಿ ಮತ್ತು ಕಾಡುಬೀಸನಹಳ್ಳಿ ಭಾಗಗಳು ತೀವ್ರವಾಗಿ ಬಾಧಿತಗೊಂಡಿವೆ. ಈ ಭಾಗಗಳಲ್ಲಿ ಮೊಣಕಾಲುದ್ದಕ್ಕೂ ನೀರು ನಿಂತಿದ್ದರಿಂದ ವಾಹನ ಸಂಚಾರ ಸಂಪೂರ್ಣವಾಗಿ ಕಷ್ಟಕರವಾಗಿದೆ. ಸಾಲು ಸಾಲಾಗಿ ನಿಂತ ವಾಹನಗಳಿಂದಾಗಿ ಇಡೀ ರಸ್ತೆ ಮಾರ್ಗಗಳು ಬೃಹತ್ ಟ್ರಾಫಿಕ್ ಜ್ಯಾಮ್‌ನಿಂದ ಕಂಗಾಲಾಗಿವೆ.

ರಸ್ತೆಗೆಿಳಿದ ಟ್ರಾಫಿಕ್ ಸಿಬ್ಬಂದಿ: ಜಲಾವೃತ ಮಾರ್ಗಗಳಲ್ಲಿ ಹಗಲಿರುಳು ಸೇವೆ
ಸಂಕಷ್ಟದ ಪರಿಸ್ಥಿತಿಯಲ್ಲೂ ಬೆಂಗಳೂರು ಸಂಚಾರ ಪೊಲೀಸ್ ಸಿಬ್ಬಂದಿ ರಸ್ತೆಗೆಿಳಿದು ಧೈರ್ಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ನಿಂತ ನೀರಿನಲ್ಲೇ ಸಾಗಿ, ರಸ್ತೆ ಬದಿಯ ರಾಜಕಾಲುವೆ ಹಾಗೂ ಚರಂಡಿಗಳ ಜಾಲರಿಗಳಲ್ಲಿ ಸಿಲುಕಿಕೊಂಡಿದ್ದ ತ್ಯಾಜ್ಯವನ್ನು ಕೈಯಿಂದಲೇ ತೆರವುಗೊಳಿಸಿ ನೀರು ಸರಾಗವಾಗಿ ಹರಿದುಹೋಗಲು ಮಾರ್ಗ ಮಾಡಿಕೊಡುತ್ತಿದ್ದಾರೆ. ಅಲ್ಲದೆ, ನೀರಿನಲ್ಲಿ ಸಿಲುಕಿಕೊಂಡಿದ್ದ ವಾಹನ ಸವಾರರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಸಂಚಾರ ಸುಗಮಗೊಳಿಸಲು ಸತತವಾಗಿ ಶ್ರಮಿಸುತ್ತಿದ್ದಾರೆ.
ವಾಹನ ಸವಾರರಿಗೆ ಸಂಚಾರ ಪೊಲೀಸರ ಪ್ರಮುಖ ಸಲಹೆಗಳು
ರಸ್ತೆಗಳ ದುಸ್ಥಿತಿ, ಹವಾಮಾನ ವೈಪರೀತ್ಯ ಮತ್ತು ಅಪಘಾತಗಳ ಅಪಾಯವನ್ನು ಮನಗಂಡ ಸಂಚಾರ ಪೊಲೀಸರು ವಾಹನ ಸವಾರರಿಗೆ ತಕ್ಷಣದ ಜಾಗರೂಕತಾ ಸೂಚನೆಯನ್ನು (Traffic Advisory) ನೀಡಿದ್ದಾರೆ. ಪ್ರಯಾಣಿಕರು ರಸ್ತೆಯಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ:
- ವೇಗಕ್ಕೆ ಕಡಿವಾಣ ಹಾಕಿ: ಜಾರುವ ಮತ್ತು ತೇವಗೊಂಡ ರಸ್ತೆಗಳಲ್ಲಿ ವಾಹನಗಳ ವೇಗವನ್ನು ಕಡ್ಡಾಯವಾಗಿ ಹತೋಟಿಯಲ್ಲಿಡಬೇಕು.
- ಸುರಕ್ಷಿತ ಅಂತರ ಕಾಯ್ದುಕೊಳ್ಳಿ: ಮುಂದೆ ಸಾಗುವ ವಾಹನ ದಿಢೀರ್ ಬ್ರೇಕ್ ಹಾಕಿದರೆ ಅಪಘಾತವಾಗದಂತೆ ತಡೆಯಲು ಸೂಕ್ತ ಅಂತರವನ್ನು ನಿರ್ವಹಿಸುವುದು ಅಗತ್ಯ.
- ದಿಢೀರ್ ಬ್ರೇಕ್ ಹಾಕಬೇಡಿ: ನೀರಿನಿಂದ ಆವೃತವಾದ ರಸ್ತೆಗಳಲ್ಲಿ ದಿಢೀರ್ ಬ್ರೇಕ್ ಹಾಕುವುದರಿಂದ ವಾಹನಗಳು ಸ್ಕಿಡ್ ಆಗುವ ಅಪಾಯವಿರುವುದರಿಂದ ಅತ್ಯಂತ ಜಾಗರೂಕರಾಗಿರಿ.
- ಪರ್ಯಾಯ ಮಾರ್ಗ ಆಯ್ಕೆ ಮಾಡಿ: ತೀವ್ರವಾಗಿ ನೀರು ನಿಂತಿರುವ ರಸ್ತೆಗಳನ್ನು ಬಳಸುವ ಬದಲು ಸುರಕ್ಷಿತ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಸೂಕ್ತ.
- ತಾಳ್ಮೆಯಿಂದ ಪ್ರಯಾಣಿಸಿ: ರಸ್ತೆಗಳಲ್ಲಿ ಸುದೀರ್ಘ ವಿಳಂಬವಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ತಾಳ್ಮೆ ವಹಿಸಬೇಕು.
ನಗರದಲ್ಲಿ ಮಳೆ ಇನ್ನೂ ಮುಂದುವರಿಯುತ್ತಿರುವುದರಿಂದ ಸಾರ್ವಜನಿಕರು ಮತ್ತು ಪ್ರಯಾಣಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸಿ ಪೂರ್ಣ ಜಾಗರೂಕತೆಯಿಂದ ಇರಲು ಸೂಚಿಸಲಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಗಣೇಶೋತ್ಸವ ಅನ್ನದಾನದಲ್ಲಿ ನಿಂದನೆ ಆರೋಪ: ಶಾಸಕ ಮುನಿರತ್ನ ಮನೆ ಎದುರು ಭಾರಿ ಉದ್ವಿಗ್ನತೆ, ಕಾರು ತಡೆದು ಆಕ್ರೋಶ.