ಕರ್ನಾಟಕ ಸುದ್ದಿ

ಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್: ಪಾಕಿಸ್ತಾನ್ ಹಾಡು ವೈರಲ್ ಮಾಡಿದ 23 ವರ್ಷದ ರೋಷನ್ ಬಂಧನ.

Hemanth Rajashekar

ವರದಿಗಾರರು (Reporter)

Hemanth Rajashekar

05:54 AM IST

ಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್: ಪಾಕಿಸ್ತಾನ್ ಹಾಡು ವೈರಲ್ ಮಾಡಿದ 23 ವರ್ಷದ ರೋಷನ್ ಬಂಧನ.

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಿರ್ಮಿಸಲಾದ ಕಟೌಟ್ ಒಂದರ, ಪಾಕಿಸ್ತಾನ್ ಬೆಂಬಲಿತ ಹಾಡನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಪ್ರಕರಣ ಸಂಬಂಧ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದು, 23 ವರ್ಷದ ಯುವಕನೊಬ್ಬನನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ ಈದ್ ಮಿಲಾದ್ ಆಚರಣೆಯ ಭಾಗವಾಗಿ ಸುಮಾರು 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಾಕಲಾಗಿತ್ತು. ಆದರೆ, ಈ ಕಟೌಟ್ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಹಾಗೂ ಮುಜಾಹಿದಿನ್ ಕುರಿತಾದ ಪ್ರಚೋದನಕಾರಿ ಹಾಡನ್ನು ಜೋಡಿಸಿ (Reels) ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿತ್ತು.

ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ರಾಜ್ಯದಲ್ಲಿ ಸದಾ ಆರ್‌ಎಸ್‌ಎಸ್ ಬೈಯುವುದರಲ್ಲೇ ಕಾಲ ಕಳೆಯುವ ಗೃಹ ಸಚಿವರು ಮತ್ತು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕಾರಣವನ್ನು ಬದಿಗಿಟ್ಟು, ದೇಶವಿರೋಧಿ ಪ್ರಚೋದನೆ ನೀಡುತ್ತಿರುವ ಕಿಡಿಗೇಡಿಗಳ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳ ನಾಯಕರು ಆಗ್ರಹಿಸಿದರು.

ಪೊಲೀಸ್ ಸೂಪರಿಂಟೆಂಡೆಂಟ್ (SP) ಜಿತೇಂದ್ರ ಕುಮಾರ್ ದಯಾಮಾ ಅವರ ಸ್ಪಷ್ಟನೆ:

ಈ ಪ್ರಕರಣದ ಕುರಿತು ಮಾಧ್ಯಮಗಳಿಗೆ ಸಂಪೂರ್ಣ ವಿವರಣೆ ನೀಡಿದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಿತೇಂದ್ರ ಕುಮಾರ್ ದಯಾಮಾ ಅವರು, “ಇದು ಮೂಲತಃ ಟಿಪ್ಪು ಸುಲ್ತಾನ್ ಅಥವಾ ಚಿಕ್ಕಮಗಳೂರಿನ ಸೌಹಾರ್ದತೆಗೆ ಸಂಬಂಧಿಸಿದ ದೊಡ್ಡ ಸಮಸ್ಯೆಯಲ್ಲ” ಎಂದಿದ್ದಾರೆ.

ಅವರು ಮುಂದುವರಿದು ಮಾತನಾಡಿ, “ಹಬ್ಬದ ಆಚರಣೆಗೂ ಮುನ್ನವೇ ನಾವು ಎಲ್ಲಾ ಸಂಘಟನಾಕಾರರೊಂದಿಗೆ ಶಾಂತಿ ಸಭೆ ನಡೆಸಿ ಸ್ಪಷ್ಟ ಸೂಚನೆಗಳನ್ನು ನೀಡಿದ್ದೆವು. ಕಳೆದ 5 ರಿಂದ 10 ವರ್ಷಗಳಿಂದ ಸಾಂಪ್ರದಾಯಿಕವಾಗಿ ಏನು ಆಚರಿಸಿಕೊಂಡು ಬರಲಾಗುತ್ತಿತ್ತೋ ಅದನ್ನು ಮಾತ್ರ ಮುಂದುವರಿಸಲು ಅವಕಾಶ ನೀಡಲಾಗಿದೆ. ಯಾವುದೇ ಹೊಸ ಕಟೌಟ್ ಅಥವಾ ಹೊಸ ರೀತಿಯ ಅಲಂಕಾರಗಳಿಗೆ ನಾವು ಅನುಮತಿ ನೀಡಿಲ್ಲ. ಕಳೆದ 5 ವರ್ಷಗಳಿಂದ ಟಿಪ್ಪು ನಗರದ ನಿರ್ದಿಷ್ಟ ಸ್ಥಳದಲ್ಲಿ ಒಂದೇ ರೀತಿಯ ಕಟೌಟ್ ಹಾಕುವ ಅಭ್ಯಾಸವಿತ್ತು.”

“ಆದರೆ, ಈ ಬಾರಿ ಯಾರೋ ಒಬ್ಬ ಕಿಡಿಗೇಡಿ ಆ ಕಟೌಟ್ ಹಿನ್ನೆಲೆಯಲ್ಲಿ ‘ಪಾಕಿಸ್ತಾನ್’ ಎಂಬ ಪದವಿರುವ ಹಾಡನ್ನು ಬಳಸಿ ವಿಡಿಯೋ ತಯಾರಿಸಿದ್ದಾನೆ. ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ವೈರಲ್ ಆಗಿದೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196 ಮತ್ತು 299 ರ ಅಡಿಯಲ್ಲಿ ಪ್ರಕರಣ (FIR) ದಾಖಲಿಸಿಕೊಳ್ಳಲಾಗಿದೆ.”

“ವಿಡಿಯೋ ಹರಿಬಿಟ್ಟ ಖಾತೆಯನ್ನು ನಾವು ಪತ್ತೆ ಹಚ್ಚಿದ್ದು, ಪ್ರಥಮ ಬಾರಿಗೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಟಿಪ್ಪು ನಗರದ 23 ವರ್ಷದ ರೋಷನ್ ಬಂಧಿಸಲಾಗಿದೆ. ಆತನನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುತ್ತಿದೆ. ನಮ್ಮ ಜಿಲ್ಲಾ ಮಟ್ಟದ ಹಾಗೂ ಠಾಣಾ ಮಟ್ಟದ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ತಂಡಗಳು ಸಂಪೂರ್ಣ ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಶಾಂತಿ ಕದಡಲು ಯತ್ನಿಸುವ ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಎಸ್ಪಿ ಸ್ಪಷ್ಟಪಡಿಸಿದರು.

ಸೌಹಾರ್ದತೆ ಕಾಯ್ದುಕೊಳ್ಳಲು ಪೋಲಿಸ್ ಇಲಾಖೆ ಮನವಿ:

ಹಬ್ಬಗಳ ಸಂದರ್ಭದಲ್ಲಿ ವದಂತಿಗಳಿಗೆ ಕಿವಿಗೊಡದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಅಥವಾ ದೇಶವಿರೋಧಿ ವಿಷಯಗಳನ್ನು ಹಂಚಿಕೊಳ್ಳದೆ ಸಾರ್ವಜನಿಕರು ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಕೋರಿದೆ.

ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

ಅಮೆಜಾನ್, ಸ್ವಿಗ್ಗಿ, ಬಿಗ್‌ಬಾಸ್ಕೆಟ್‌ಗೆ ಬಿಗ್ ಶಾಕ್: ವಿಷಕಾರಿ ಉಮ್ಮತ್ತಿ (Datura) ಮಾರಾಟ ಹಿನ್ನೆಲೆ ಆಹಾರ ಪರವಾನಗಿ ಅಮಾನತು!

ಭಾರತದ ‘ಆಪರೇಷನ್ ಸಿಂಧೂರ್’ ದಾಳಿಗೆ ಧ್ವಂಸಗೊಂಡಿದ್ದ ಜೈಶ್ ಉಗ್ರ ಅಡ್ಡಾವನ್ನು ಮತ್ತೆ ಕಟ್ಟಿದ ಪಾಕಿಸ್ತಾನ.

ಇನ್ಫ್ಲುಯೆಂಜಾ A (H1N1): ಯಾವುದೇ ಹೊಸ ವೈರಸ್ ಪತ್ತೆಯಾಗಿಲ್ಲ, ಆತಂಕ ಪಡುವ ಅಗತ್ಯವಿಲ್ಲ ಎಂದ ICMR ವಿಜ್ಞಾನಿಗಳು.

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ