ನ್ಯಾಯಾಧೀಶರ ಕುರ್ಚಿಗೆ ಮಾಟಮಂತ್ರ! ಕೋರ್ಟ್ ಹಾಲ್‌ನಲ್ಲೇ ತಾಂತ್ರಿಕ ಆಟವಾಡಿದ 65 ವರ್ಷದ ವೃದ್ಧೆ ಅರೆಸ್ಟ್!
ವರದಿಗಾರರು (Reporter)
Hemanth Rajashekar12:57 AM IST

ಚಿಕ್ಕಬಳ್ಳಾಪುರ: ನ್ಯಾಯಾಲಯದ ಆವರಣದಲ್ಲೇ ವೃದ್ಧೆಯೊಬ್ಬಳು ನ್ಯಾಯಾಧೀಶರ ಕುರ್ಚಿಗೆ ಮಾಟಮಂತ್ರ ಮಾಡಲು ಹೋಗಿ ಜೈಲು ಪಾಲಾಗಿರುವ ಆಘಾತಕಾರಿ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ. ಸಿವಿಲ್ ಪ್ರಕರಣದ ತೀರ್ಪು ಅನುಕೂಲಕರವಾಗಿ ಬರಲಿ ಎಂಬ ಮೂಢನಂಬಿಕೆಯಿಂದ ವೃದ್ಧೆ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ತಾಂತ್ರಿಕ ಆಟ!
ಚಿಕ್ಕಬಳ್ಳಾಪುರದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಹಾಲ್‌ನಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಆರೋಪಿ ಮಂಜುಳಾ (65) ಎಂಬ ವೃದ್ಧೆ, ನ್ಯಾಯಾಲಯದ ಒಳಗೆ ಪ್ರವೇಶಿಸಿ ಜಡ್ಜ್ ಕುರ್ಚಿಯ ಮೇಲೆ ಮಂತ್ರಿಸಿದ ಬಿಳಿ ಸಾಸಿವೆಯನ್ನು ಸಿಂಪಡಿಸುತ್ತಿರುವುದು ಅಲ್ಲಿನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಬಳಿಕ ಕೋರ್ಟ್ ಸಿಬ್ಬಂದಿ ನ್ಯಾಯಾಧೀಶರ ಆಸನದ ಬಳಿ ಸಾಸಿವೆ ಬಿದ್ದಿರುವುದನ್ನು ಗಮನಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಪೊಲೀಸರ ಕಾರ್ಯಾಚರಣೆ; ಆರೋಪಿ ಅರೆಸ್ಟ್
ಈ ವಿಲಕ್ಷಣ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ (CAO) ನೇತ್ರಾ ಅವರು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತಕ್ಷಣವೇ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಗಳ ಜಾಡು ಹಿಡಿದು ಆರೋಪಿ ವೃದ್ಧೆ ಮಂಜುಳಾಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಠಿಣ ಕಾಯ್ದೆಯಡಿ ಕೇಸ್ ದಾಖಲು: ಮೂಢನಂಬಿಕೆ ಹಾಗೂ ಮಾಟಮಂತ್ರ ತಡೆಗಟ್ಟಲು ಜಾರಿಗೆ ತರಲಾಗಿರುವ ‘ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಮತ್ತು ಮಾಟಮಂತ್ರ ಪ್ರತಿಬಂಧಕ ಹಾಗೂ ನಿರ್ಮೂಲನಾ ಕಾಯ್ದೆ 2017’ ರ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗವು ಆಕೆಗೆ 14 ದಿನಗಳ ನ್ಯಾಯಾಂಗ ಬಂಧನ (Judicial Custody) ವಿಧಿಸಿ ಆದೇಶ ಹೊರಡಿಸಿದೆ. ಕೋರ್ಟ್ ತೀರ್ಪನ್ನು ಮಾಟಮಂತ್ರದ ಮೂಲಕ ಬದಲಾಯಿಸಬಹುದು ಎಂಬ ಮೂಢನಂಬಿಕೆಗೆ ಬಿದ್ದು ವೃದ್ಧೆ ಈಗ ಕಂಬಿ ಎಣಿಸುವಂತಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: