ಗೃಹ ಜ್ಯೋತಿ ಎಫೆಕ್ಟ್: ಜುಲೈನಲ್ಲಿ ಮನೆ ಮನೆ ಮೀಟರ್ ರೀಡಿಂಗ್ ಸಂಪೂರ್ಣ ಬಂದ್! ಈ ತಿಂಗಳ ಕರೆಂಟ್ ಬಿಲ್ ಹೇಗೆ ಬರುತ್ತೆ ಗೊತ್ತಾ? ಇಲ್ಲಿದೆ ಬೆಸ್ಕಾಂ ಬಿಗ್ ಅಪ್ಡೇಟ್.
ವರದಿಗಾರರು (Reporter)
Hemanth Rajashekar02:46 AM IST

ಬೆಂಗಳೂರು: ಸಿಲಿಕಾನ್ ಸಿಟಿಯ ಜನರೇ ಗಮನಿಸಿ, ಜುಲೈ ತಿಂಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಬಂದು ವಿದ್ಯುತ್ ಮೀಟರ್ ರೀಡಿಂಗ್ ಮಾಡುವ ಪ್ರಕ್ರಿಯೆಗೆ ಬ್ರೇಕ್ ಬೀಳಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಜುಲೈ ತಿಂಗಳ ಅವಧಿಗೆ ನಿಯಮಿತ ಮೀಟರ್ ರೀಡಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಯೋಜನೆಯ ಫಲಾನುಭವಿಗಳ ಮನೆ ಮನೆ ಪರಿಶೀಲನಾ ಕಾರ್ಯಕ್ಕಾಗಿ ಬೆಸ್ಕಾಂ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿರುವುದರಿಂದ ಈ ತಾತ್ಕಾಲಿಕ ನಿರ್ಧಾರ ಕೈಗೊಳ್ಳಲಾಗಿದೆ. ಹಾಗಾದರೆ ಈ ತಿಂಗಳು ಬಿಲ್ ಹೇಗೆ ಬರಲಿದೆ? ಯಾರಿಗೆಲ್ಲಾ ಈ ವಿನಾಯಿತಿ ಅನ್ವಯಿಸುವುದಿಲ್ಲ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿದ್ಯುತ್ ಬಿಲ್ ಲೆಕ್ಕಾಚಾರ ಹೇಗೆ?
ನಿಯಮಿತ ಮೀಟರ್ ರೀಡಿಂಗ್ ಇಲ್ಲದ ಕಾರಣ ಗ್ರಾಹಕರಿಗೆ ಬಿಲ್ ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಬೆಸ್ಕಾಂ ಪರ್ಯಾಯ ವ್ಯವಸ್ಥೆ ಮಾಡಿದೆ.
- ಸರಾಸರಿ ಬಿಲ್ಲಿಂಗ್ ವಿಧಾನ: ಜುಲೈ ತಿಂಗಳಿನಲ್ಲಿ ಗ್ರಾಹಕರ ಕಳೆದ 3 ತಿಂಗಳ ಸರಾಸರಿ ವಿದ್ಯುತ್ ಬಳಕೆಯನ್ನು (Average Consumption) ಆಧಾರವಾಗಿಟ್ಟುಕೊಂಡು ವಿದ್ಯುತ್ ಬಿಲ್ ಸಿದ್ಧಪಡಿಸಿ ವಿತರಿಸಲಾಗುತ್ತದೆ.

ಈ ನಿಯಮ ಯಾರಿಗೆ ಅನ್ವಯಿಸುವುದಿಲ್ಲ?
ಎಲ್ಲಾ ಸಾಮಾನ್ಯ ಗೃಹ ಬಳಕೆಯ ಗ್ರಾಹಕರಿಗೆ ಮೀಟರ್ ರೀಡಿಂಗ್ ಇರುವುದಿಲ್ಲವಾದರೂ, ಕೆಲವು ನಿರ್ದಿಷ್ಟ ವರ್ಗದ ಗ್ರಾಹಕರಿಗೆ ಎಂದಿನಂತೆ ಭೌತಿಕ ಮೀಟರ್ ರೀಡಿಂಗ್ ಪ್ರಕ್ರಿಯೆ ಮುಂದುವರಿಯಲಿದೆ. ಈ ಕೆಳಗಿನ ಗ್ರಾಹಕರಿಗೆ ಹಳೆಯ ನಿಯಮವೇ ಇರಲಿದೆ:
- ಹೈ ಟೆನ್ಷನ್ (HT) ಗ್ರಾಹಕರು.
- 40 HP ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಲೋಡ್ ಹೊಂದಿರುವ ಲೋ ಟೆನ್ಷನ್ (LT) ಗ್ರಾಹಕರು.
- ಸೋಲಾರ್ ರೂಫ್‌ಟಾಪ್ (SRTPV) ಅಳವಡಿಸಿಕೊಂಡಿರುವ ಗ್ರಾಹಕರು.
- ತಾತ್ಕಾಲಿಕ ವಿದ್ಯುತ್ ಸಂಪರ್ಕ (Temporary Connections) ಹೊಂದಿರುವವರು.
ಗೃಹ ಜ್ಯೋತಿ ಯೋಜನೆಯ ಅರ್ಹ ಫಲಾನುಭವಿಗಳ ದೃಢೀಕರಣ ಮತ್ತು ದತ್ತಾಂಶದ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಬೆಸ್ಕಾಂ ಈ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಗ್ರಾಹಕರು ಹೆಚ್ಚಿನ ಮಾಹಿತಿ ಹಾಗೂ ಅಪ್ಡೇಟ್‌ಗಳಿಗಾಗಿ ಬೆಸ್ಕಾಂನ ಅಧಿಕೃತ ವೆಬ್‌ಸೈಟ್ ಅಥವಾ ಅವರ ಅಧಿಕೃತ ಸಾಮಾಜಿಕ ಜಾಲತಾಣಗಳ @NammaBESCOM ಮತ್ತು bescomblr ಖಾತೆಗಳನ್ನು ಪರಿಶೀಲಿಸಬಹುದಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ರಾಮನಗರದಲ್ಲಿ ಜವರಾಯನ ಅಟ್ಟಹಾಸ: ಕಾವೇರಿ ಕ್ರಷರ್ಸ್ ಕ್ವಾರಿ ಕುಸಿತಕ್ಕೆ 7 ಕಾರ್ಮಿಕರು ಬಲಿ, ಐವರ ಸ್ಥಿತಿ ಗಂಭೀರ.