ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ: ಸಾಲ ತೀರಿಸಿಲ್ಲವೆಂದು ಮಹಿಳೆಯ ಅಪಹರಣ; ಬೆತ್ತಲೆಗೊಳಿಸಿ ವೀಡಿಯೋ-ಮಾರಣಾಂತಿಕ ಹಲ್ಲೆ.
ವರದಿಗಾರರು (Reporter)
Hemanth Rajashekar07:24 AM IST

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಾನವೀಯತೆಯನ್ನೇ ಮರೆಸುವಂತಹ ಅತ್ಯಂತ ಆಘಾರ್ಥಕಾರಿ ಮತ್ತು ಭೀಕರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕೇವಲ ಹಣದ ವಿವಾದಕ್ಕಾಗಿ 30 ವರ್ಷದ ಗೃಹ ಕಾರ್ಮಿಕೆಯೊಬ್ಬಳನ್ನು ಅಪಹರಿಸಿ, ಕಾನೂನುಬಾಹಿರವಾಗಿ ಬಂಧನದಲ್ಲಿಟ್ಟು, ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ನಗ್ನಗೊಳಿಸಿ ವೀಡಿಯೋ ಚಿತ್ರೀಕರಿಸಿದ ಕ್ರೂರ ಘಟನೆ ನಗರದ ಚಂದ್ರ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಸಾಲದ ಬಡ್ಡಿ ಸೇರಿ ಲಕ್ಷಾಂತರ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಘಟನೆಯ ಹಿನ್ನೆಲೆ ಮತ್ತು ಸಾಲದ ಸುಳಿ:
ಸಂತ್ರಸ್ತ ಮಹಿಳೆಯು ತನ್ನ ಕುಟುಂಬದ ನಿರ್ವಹಣೆಗಾಗಿ ಹಾಗೂ ಆರ್ಥಿಕ ಸಂಕಷ್ಟದ ಕಾರಣಕ್ಕಾಗಿ ನಜಾತ್ ಎಂಬಾಕೆಯಿಂದ 50,000 ರೂಪಾಯಿ ಮತ್ತು ರೇಷ್ಮಾ ಎಂಬಾಕೆಯಿಂದ 1 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ಆದರೆ, ಕೌಟುಂಬಿಕ ಹಾಗೂ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಮಹಿಳೆಗೆ ಸಮಯಕ್ಕೆ ಸರಿಯಾಗಿ ಸಾಲದ ಕಂತುಗಳನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಇದರಿಂದ ಆಕ್ರೋಶಗೊಂಡ ಸಾಲ ನೀಡಿದವರು ಮಹಿಳೆಗೆ ನಿರಂತರವಾಗಿ ಜೀವ ಬೆದರಿಕೆ ಹಾಗೂ ಕಿರುಕುಳ ನೀಡಲು ಪ್ರಾರಂಭಿಸಿದರು. ಆರೋಪಿಗಳ ಭೀತಿಯಿಂದಾಗಿ ಮಹಿಳೆಯು ತನ್ನ ವಾಸಸ್ಥಳವನ್ನೂ ಬದಲಾಯಿಸಬೇಕಾಯಿತು.

ಸಂಚು ರೂಪಿಸಿ ಅಪಹರಣ, ಹಲ್ಲೆ:
ಆಗಸ್ಟ್ 27 ರಂದು ಸಂತ್ರಸ್ತೆಗೆ ಫೋನ್ ಮಾಡಿದ ನಜಾತ್, ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ನಂಬಿಸಿ ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಮಹಿಳೆ ಅಲ್ಲಿಗೆ ತಲುಪುತ್ತಿದ್ದಂತೆಯೇ, ಮುಂಚಿತವಾಗಿಯೇ ಸಂಚು ರೂಪಿಸಿದ್ದ ರೇಷ್ಮಾ, ಆಕೆಯ ಪತಿ ಸುಹೇಲ್ ಹಾಗೂ ಇತರ ಸಹಚರರು ಏಕಾಏಕಿ ಮನೆಗೆ ನುಗ್ಗಿದ್ದಾರೆ. ಸಂತ್ರಸ್ತೆ ಹಾಗೂ ಆಕೆಯ ಸಣ್ಣ ಮಗನ ಮೇಲೆ ಕಠಾರಿ (ಚಾಕು) ಮತ್ತು ಮರದ ಕೋಲುಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಆಕೆಯ ಮೊಬೈಲ್ ಫೋನ್ ಅನ್ನು ನೆಲಕ್ಕೆ ಅಪ್ಪಳಿಸಿ ಪುಡಿಪುಡಿ ಮಾಡಿದ್ದಾರೆ.
ಬಳಿಕ, ತಾಯಿ ಮತ್ತು ಮಗನನ್ನು ಬಲವಂತವಾಗಿ ಆಟೋರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಕುಂಬಳಗೋಡಿನಲ್ಲಿರುವ ರೇಷ್ಮಾಳ ಮನೆಗೆ ಅಪಹರಿಸಿಕೊಂಡು ಹೋಗಿದ್ದಾರೆ.
ನಗ್ನಗೊಳಿಸಿ ವೀಡಿಯೋ ಚಿತ್ರೀಕರಣ – ರೂ. 11 ಲಕ್ಷಕ್ಕೆ ಬೇಡಿಕೆ:
ಮರುದಿನ (ಆಗಸ್ಟ್ 28) ಆರೋಪಿ ಸುಹೇಲ್, ಮಹಿಳೆಯ ಸಣ್ಣ ಮಗನನ್ನು ಕರೆದೊಯ್ದು ಆಕೆಯ ತಾಯಿಯ ಮನೆಯ ಹತ್ತಿರ ಬಿಟ್ಟು ಬಂದಿದ್ದಾನೆ. ಆದರೆ, ಸಂತ್ರಸ್ತೆಯನ್ನು ಕುಂಬಳಗೋಡಿನ ಮನೆಯಲ್ಲಿಯೇ ಅಕ್ರಮವಾಗಿ ಬಂಧನದಲ್ಲಿಡಲಾಗಿತ್ತು. ಬಂಧನದಲ್ಲಿದ್ದ ಮಹಿಳೆಯ ಮೇಲೆ ಆರೋಪಿಗಳು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಆಕೆಯ ಬಟ್ಟೆಗಳನ್ನು ಬಲವಂತವಾಗಿ ಬಿಚ್ಚಿಸಿ, ನಗ್ನಗೊಳಿಸಿ ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ.
ಅಸಲು ಮತ್ತು ಬಡ್ಡಿ ಸೇರಿ ಒಟ್ಟು 11 ಲಕ್ಷ ರೂಪಾಯಿಗಳನ್ನು ತಕ್ಷಣವೇ ನೀಡಬೇಕು. ಇಲ್ಲದಿದ್ದರೆ ಈ ನಗ್ನ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಅಷ್ಟೇ ಅಲ್ಲದೆ, ವಕೀಲರೊಬ್ಬರ ಬಳಿ ಕರೆದೊಯ್ದು ಆಕೆಯಿಂದ ಬಲವಂತವಾಗಿ ಕೆಲವು ಖಾಲಿ ಹಾಗೂ ಆಸ್ತಿ ಪತ್ರಗಳ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ.
ಪೊಲೀಸರ ಮಿಂಚಿನ ಕಾರ್ಯಾಚರಣೆ ಮತ್ತು ಆರೋಪಿಗಳ ಬಂಧನ:
ಹಲವು ದಿನಗಳ ಕಾಲ ಆರೋಪಿಗಳ ವಶದಲ್ಲಿದ್ದು ನಿರಂತರ ಕಿರುಕುಳ ಅನುಭವಿಸುತ್ತಿದ್ದ ಸಂತ್ರಸ್ತ ಮಹಿಳೆಯು, ಆಗಸ್ಟ್ 31 ರಂದು ಯುಕ್ತಿ ಬಳಸಿ ಪೊಲೀಸರಿಗೆ ಮಾಹಿತಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಕುಂಬಳಗೋಡಿನ ಮನೆಗೆ ದಾಳಿ ನಡೆಸಿ, ಸಂತ್ರಸ್ತೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ನಜಾತ್ (A1), ರೇಷ್ಮಾ (A2), ಸುಹೇಲ್ (A3) ಮತ್ತು ಸೈಫ್ (A4) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಭಾರತಿಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ:
ಈ ಭೀಕರ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ವಿರುದ್ಧ ಹೊಸ ಕಾನೂನಾದ ಭಾರತೀಯ ನ್ಯಾಯ ಸಂಹಿತೆ (BNS), 2023 ರ ವಿವಿಧ ಕಠಿಣ ಸೆಕ್ಷನ್‌ಗಳಾದ 140(2), 127(3), 74, 76, 137(1), 118(1), 324(4), 352, 351(2), 351(3), ಮತ್ತು 190 ಅಡಿಯಲ್ಲಿ ಮೊಕದ್ದಮೆ ಹೂಡಿದ್ದಾರೆ. ಇದರೊಂದಿಗೆ ಮಹಿಳೆಯ ಖಾಸಗಿತನಕ್ಕೆ ಧಕ್ಕೆ ತಂದು ನಗ್ನ ವೀಡಿಯೋ ಮಾಡಿದ ಕಾರಣಕ್ಕಾಗಿ ಮಾಹಿತಿ ತಂತ್ರಜ್ಞಾನ (IT) ಕಾಯ್ದೆ 2000ರ ಸೆಕ್ಷನ್ 66(E) ಅಡಿಯಲ್ಲೂ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: